
Amir Hamza | ಬೆಂಗಳೂರಿನ ಸರಣಿ ಸ್ಫೋಟದಿಂದ ಚಿನ್ನಸ್ವಾಮಿ ಸ್ಟೇಡಿಯಂ ಬ್ಲಾಸ್ಟ್‌ವರೆಗೆ … ರಿಯಾಜ್ ಭಟ್ಕಳ್‌ನ ಸಹಚರ ಜೀವನ್ಮರಣ ಹೋರಾಟದಲ್ಲಿ
ಬೆಂಗಳೂರು ಐಐಎಸ್ಸಿ (IISc) ದಾಳಿ ಮತ್ತು ಸರಣಿ ಸ್ಫೋಟಗಳ ರೂವಾರಿ, ಲಷ್ಕರ್-ಎ-ತೈಬಾ ಸಹ-ಸ್ಥಾಪಕ ಅಮೀರ್ ಹಮ್ಜಾ ಮೇಲೆ ಲಾಹೋರ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಹಲವು ಭೀಕರ ಭಯೋತ್ಪಾದನಾ ದಾಳಿಗಳ ಹಿಂದೆ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದ, ಲಷ್ಕರ್-ಎ-ತೈಬಾ (LeT) ಸಂಘಟನೆಯ ಸಹ-ಸ್ಥಾಪಕ ಅಮೀರ್ ಹಮ್ಜಾ ಮೇಲೆ ಪಾಕಿಸ್ತಾನದ ಲಾಹೋರ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಅಪರಿಚಿತ ಬಂದೂಕುಧಾರಿಗಳು ನಡೆಸಿದ ಈ ದಾಳಿಯಲ್ಲಿ 66 ವರ್ಷದ ಈ ಜಾಗತಿಕ ಉಗ್ರ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಪಾಕಿಸ್ತಾನದ ಬಿಗಿ ಭದ್ರತೆಯ ನಡುವೆಯೇ ಕಳೆದ ಒಂದು ವರ್ಷದ ಅವಧಿಯಲ್ಲಿ ಈತನ ಮೇಲೆ ನಡೆದ ಎರಡನೇ ಹತ್ಯೆ ಯತ್ನ ಇದಾಗಿದ್ದು, ಭಾರತ ವಿರೋಧಿ ಉಗ್ರ ಪಾಳಯದಲ್ಲಿ ಭೀತಿ ಸೃಷ್ಟಿಸಿದೆ.
ಒಂದು ವರ್ಷದಲ್ಲಿ ಎರಡನೇ ದಾಳಿ
ಗುರುವಾರ ಲಾಹೋರ್‌ನ "24 ನ್ಯೂಸ್ ಎಚ್‌ಡಿ" ಸುದ್ದಿವಾಹಿನಿಯ ಕಚೇರಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಹಮ್ಜಾ ತನ್ನ ಸಹಚರರೊಂದಿಗೆ ಹೊರಬರುತ್ತಿದ್ದಾಗ ಹೊಂಚು ಹಾಕಿದ್ದ ಅಪರಿಚಿತ ದುಷ್ಕರ್ಮಿಗಳು ಆತನನ್ನು ಗುರಿಯಾಗಿಸಿ ಮನಬಂದಂತೆ ಗುಂಡು ಹಾರಿಸಿದ್ದಾರೆ.
ವಿಶೇಷವೆಂದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಹಮ್ಜಾ ಮೇಲೆ ನಡೆದ ಎರಡನೇ ಹತ್ಯೆ ಯತ್ನ ಇದಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಈತನ ಮನೆಯ ಹೊರಗಡೆಯೇ ಗುಂಡಿನ ದಾಳಿ ನಡೆದಿತ್ತು. ಅಂದು ಗಾಯಗೊಂಡಿದ್ದ ಹಮ್ಜಾಗೆ ಪಾಕಿಸ್ತಾನ ಸರ್ಕಾರವು ಹೆಚ್ಚಿನ ಭದ್ರತೆ ಒದಗಿಸಿತ್ತು. ಆದರೂ ಇಷ್ಟು ಬಿಗಿ ಭದ್ರತೆಯ ನಡುವೆ ಈ ದಾಳಿ ನಡೆದಿರುವುದು ಪಾಕ್ ಗುಪ್ತಚರ ಸಂಸ್ಥೆಗಳಿಗೆ ಆಘಾತ ತಂದಿದೆ.
ಯಾರು ಈ ಅಮೀರ್ ಹಮ್ಜಾ? ಲಷ್ಕರ್‌ನಲ್ಲಿ ಈತನ ಸ್ಥಾನವೇನು?
1959ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾದಲ್ಲಿ ಜನಿಸಿದ ಅಮೀರ್ ಹಮ್ಜಾ, ಲಷ್ಕರ್ ಸಂಘಟನೆಯಲ್ಲಿ ಹಫೀಜ್ ಸಯೀದ್ ನಂತರದ ಅತ್ಯಂತ ಪ್ರಮುಖ ನಾಯಕ. 1985-86ರ ಸುಮಾರಿಗೆ ಹಫೀಜ್ ಸಯೀದ್ ಜೊತೆಗೂಡಿ ಈತ ಲಷ್ಕರ್-ಎ-ತೈಬಾ ಎಂಬ ಉಗ್ರ ಸಂಘಟನೆಯನ್ನು ಕಟ್ಟಿದ. ಅಫ್ಘಾನ್ ಜಿಹಾದ್‌ನಲ್ಲಿ ಪಾಲ್ಗೊಂಡಿದ್ದ ಈತ, ಸಂಘಟನೆಯ ಸಿದ್ಧಾಂತ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಬೆಂಗಳೂರಿನ ದಾಳಿಗಳಲ್ಲಿ ಹಮ್ಜಾನೇ ರೂವಾರಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹಲವು ಭಯೋತ್ಪಾದಕಾ ದಾಳಿಯ ಹಿಂದೆ ಅಮೀರ್ ಹಮ್ಜಾ ಕೈವಾಡ ಇತ್ತು.
ಬೆಂಗಳೂರು IISc ದಾಳಿ (2005): ಭಾರತದ ಇತಿಹಾಸದಲ್ಲಿ ಈತನ ಹೆಸರು ಕರಾಳವಾಗಿ ದಾಖಲಾಗಿರುವುದು 2005ರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮೇಲಿನ ದಾಳಿಯಿಂದ. ಇದು ಕಾಶ್ಮೀರದ ಹೊರಗೆ ಲಷ್ಕರ್ ನಡೆಸಿದ ಮೊದಲ ಅತಿದೊಡ್ಡ ದಾಳಿಯಾಗಿದ್ದು, ಈ ಸಂಚಿನ ರೂವಾರಿ ಹಮ್ಜಾ ಎಂದು ನಂಬಲಾಗಿದೆ. ಈ ದಾಳಿಯ ಸಂಪೂರ್ಣ ಸಂಚನ್ನು ರೂಪಿಸಿದ್ದು ಅಮೀರ್ ಹಮ್ಜಾ. ಈತ ಲಷ್ಕರ್-ಎ-ತೈಬಾ (LeT) ಸಂಘಟನೆಯಲ್ಲಿ 'ಭಾರತ ತಜ್ಞ' (India Expert) ಎಂದು ಗುರುತಿಸಿಕೊಂಡಿದ್ದನು. ಕಾಶ್ಮೀರದ ಹೊರಗೆ ಲಷ್ಕರ್ ಸಂಘಟನೆಯು ದಕ್ಷಿಣ ಭಾರತದತ್ತ ತನ್ನ ನೆಟ್ವರ್ಕ್ ವಿಸ್ತರಿಸಲು ಈ ದಾಳಿಯನ್ನು ದಾಳವಾಗಿ ಬಳಸಿಕೊಂಡಿತ್ತು. ಈ ದಾಳಿಯಲ್ಲಿ ಐಐಟಿ ದೆಹಲಿಯ ನಿವೃತ್ತ ಗಣಿತ ಪ್ರಾಧ್ಯಾಪಕ ಮುನೀಶ್ ಚಂದ್ರ ಪುರಿ ಅವರು ಸಾವನ್ನಪ್ಪಿದ್ದರು.
ಬೆಂಗಳೂರು ಸರಣಿ ಬಾಂಬ್ ಸ್ಫೋಟ: ಬೆಂಗಳೂರಿನಲ್ಲಿ ಜುಲೈ 25, 2008 ರಂದು ನಡೆದ ಭೀಕರ ಸರಣಿ ಬಾಂಬ್ ಸ್ಫೋಟವು ನಗರವನ್ನು ಬೆಚ್ಚಿಬೀಳಿಸಿತ್ತು; ಮಡಿವಾಳ, ಮೈಸೂರು ರಸ್ತೆ ಮತ್ತು ರಿಚ್‌ಮಂಡ್ ಸರ್ಕಲ್ ಸೇರಿದಂತೆ ನಗರದ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಕೇವಲ 45 ನಿಮಿಷಗಳ ಅಂತರದಲ್ಲಿ ಒಂಬತ್ತು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಈ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಯೋಜಿತ ಕೃತ್ಯದ ಹಿಂದೆ ಲಷ್ಕರ್-ಎ-ತೈಬಾ (LeT) ಅಥವಾ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಸಂಘಟನೆಗಳ ಕೈವಾಡವಿರುವ ಶಂಕೆಯಿದ್ದು, ಇದು ಐಟಿ ರಾಜಧಾನಿಯ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಈ ದಾಳಿಯ ಹಿಂದೆಯೂ ಅಮೀರ್ ಹಮ್ಜಾನೇ ಮಾಸ್ಟರ್ ಮೈಂಡ್ ಆಗಿದ್ದ ಎನ್ನಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಉಗ್ರನ ಹಣೆಪಟ್ಟಿ
ಅಮೆರಿಕದ ಟ್ರೆಜರಿ ಇಲಾಖೆಯು ಅಮೀರ್ ಹಮ್ಜನನ್ನು 'ಸ್ಯಾಂಕ್ಷನ್ಡ್ ಟೆರರಿಸ್ಟ್' (ನಿರ್ಬಂಧಿತ ಉಗ್ರ) ಎಂದು ಘೋಷಿಸಿದೆ. 2012ರ ವರದಿಯ ಪ್ರಕಾರ, ಹಮ್ಜಾ ಲಷ್ಕರ್‌ನ ಕೇಂದ್ರ ಸಲಹಾ ಸಮಿತಿಯ ಸದಸ್ಯನಾಗಿ ಉಗ್ರ ಸಂಘಟನೆಯ ಹಣಕಾಸು ಮತ್ತು ವಿದೇಶಿ ಸಂಬಂಧಗಳನ್ನು ನೋಡಿಕೊಳ್ಳುತ್ತಿದ್ದ.
2018ರಲ್ಲಿ ಪಾಕಿಸ್ತಾನ ಸರ್ಕಾರವು 'ಜಮಾತ್-ಉದ್-ದಾವಾ' (JuD) ಸಂಘಟನೆಯನ್ನು ನಿಷೇಧಿಸಿದ ನಂತರ, ಅಮೀರ್ ಹಮ್ಜಾ 'ಜೈಶ್-ಎ-ಮಂಖಾಫಾ' ಎಂಬ ಹೊಸ ಉಗ್ರ ಸಂಘಟನೆಯನ್ನು ಸ್ಥಾಪಿಸಿದನು. ಪ್ರಸ್ತುತ ಈ ಹೊಸ ಸಂಘಟನೆಯು ಪ್ರಮುಖವಾಗಿ ಕಾಶ್ಮೀರದ ಮೇಲೆ ಕೇಂದ್ರೀಕರಿಸಿದ್ದು, ಸೀಮಿತ ಮಟ್ಟದಲ್ಲಿ ನಿಧಿ ಸಂಗ್ರಹಣೆ ಮತ್ತು ಉಗ್ರವಾದದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಹಫೀಜ್ ಸಯೀದ್ ನಡೆಸುತ್ತಿದ್ದ 'ಜಮಾತ್-ಉದ್-ದಾವಾ' ಮತ್ತು ಇತರ ಚಾರಿಟೇಬಲ್ ಟ್ರಸ್ಟ್‌ಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದ ಈತ, ಸಮಾಜಸೇವೆಯ ಹೆಸರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ.
ಲೇಖನಗಳ ಮೂಲಕ ಪ್ರಚಾರ
ಹಮ್ಜಾ ಕೇವಲ ಶಸ್ತ್ರಾಸ್ತ್ರಗಳ ಮೇಲೆ ನಂಬಿಕೆ ಇಟ್ಟವನಲ್ಲ, ಬದಲಿಗೆ ತನ್ನ ಲೇಖನಗಳು ಮತ್ತು ಭಾಷಣಗಳ ಮೂಲಕ ಉಗ್ರವಾದವನ್ನು ಹರಡುವಲ್ಲಿ ಪರಿಣಿತನಾಗಿದ್ದ. ಈತ ಲಷ್ಕರ್‌ನ ವಾರಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಮತ್ತು 2022ರಲ್ಲಿ "ಖಾಫಿಲಾ ದಾವತ್ ಔರ್ ಶಹಾದತ್" ಎಂಬ ಪುಸ್ತಕವನ್ನೂ ಬರೆದಿದ್ದ.
2018ರಲ್ಲಿ ಲಷ್ಕರ್ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾದಾಗ, ಈತ 'ಜೈಶ್-ಎ-ಮಂಖಾಫಾ' ಎಂಬ ಹೊಸ ಗುಂಪನ್ನು ರಚಿಸಿಕೊಂಡು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಎನ್ನಲಾಗಿದೆ.
ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಹೇಳೋದೇನು?
ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮತ್ತು ಅಮೆರಿಕದ CIA ನಡುವಿನ ಡಬಲ್ ಏಜೆಂಟ್ ಡೇವಿಡ್ ಕೋಲ್ಮನ್ ಹೆಡ್ಲಿ, ಅಮೀರ್ ಹಮ್ಜಾನನ್ನು "ತನ್ನ ಬಗ್ಗೆ ತಾನೇ ಹೆಚ್ಚು ಪ್ರಚಾರ ಮಾಡಿಕೊಳ್ಳುವ ಲಷ್ಕರ್-ಎ-ತೈಬಾ (LeT) ಕಮಾಂಡರ್" ಎಂದು ಕರೆದಿದ್ದ. 2008ರ ಮುಂಬೈ ದಾಳಿಯ ಡೇವಿಡ್ ಹೆಡ್ಲಿಯ ವಿಚಾರಣೆಯ ವೇಳೆ ಹಲವು ಸ್ಪೋಟಕ ಮಾಹಿತಿ ಹೊರಬಿದ್ದಿದೆ. 2008ರ ಮುಂಬೈ ದಾಳಿಯ ಸಮಯದಲ್ಲಿ ಕರಾಚಿಯಲ್ಲಿ ಸ್ಥಾಪಿಸಲಾಗಿದ್ದ ಕಂಟ್ರೋಲ್ ರೂಮ್‌ನಲ್ಲಿ ಹಮ್ಜಾ ಇದ್ದ. ಅಲ್ಲಿಂದಲೇ ಹತ್ತು ಮಂದಿ ಉಗ್ರರಿಗೆ ಮಾರ್ಗದರ್ಶನ ನೀಡಲಾಗುತ್ತಿತ್ತು.
ಮೊದಲು ಉಗ್ರರು ಮುಂಬೈನಿಂದ ರೈಲಿನ ಮೂಲಕ ಕಾಶ್ಮೀರಕ್ಕೆ ತೆರಳಿ ಅಲ್ಲಿ ಅಡಗಿಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಅದನ್ನು "ಆತ್ಮಾಹುತಿ ಮಿಷನ್" ಆಗಿ ಬದಲಾಯಿಸಲಾಯಿತು. ಮುಂಬೈ ತೀರಕ್ಕೆ ತಲುಪಲು ಉಗ್ರರು 'ಎಂವಿ ಕುಬೇರ್' ಬೋಟ್‌ಗೆ ಸ್ಥಳಾಂತರಗೊಳ್ಳುವಾಗ ಹಮ್ಜಾ ಕೂಡ ಮತ್ತೊಂದು ಬೋಟ್‌ನಲ್ಲಿ ಅವರ ಜೊತೆಗಿದ್ದನು.
ಪಾಕ್ ಸಚಿವರ ಸುದ್ದಿವಾಹಿನಿಯ ಕನೆಕ್ಷನ್
ವಿಶೇಷವೆಂದರೆ, ಹಮ್ಜಾ ಭೇಟಿ ನೀಡಿದ್ದ "24 ನ್ಯೂಸ್ ಎಚ್‌ಡಿ" ವಾಹಿನಿಯು ಪಾಕಿಸ್ತಾನದ ಪ್ರಸ್ತುತ ಗೃಹ ಸಚಿವ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಒಡೆತನಕ್ಕೆ ಸೇರಿದ್ದಾಗಿದೆ. ನಖ್ವಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ.

