
ನಿವೃತ್ತ ಶಿಕ್ಷಕಿ ಎಚ್.ಬಿ. ಕರಿಬಸಮ್ಮ
ದಯಾಮರಣ ಮಾರ್ಗಸೂಚಿ ಪ್ರಕಟಿಸದ ಸರ್ಕಾರ, ಅಮರಣಾಂತ ಉಪವಾಸಕ್ಕೆ ಅಣಿಯಾದ ಮಹಿಳೆ
ಸಮಾಜದಲ್ಲಿ ಎಷ್ಟೋ ಜನರು ಹೇಳಿಕೊಳ್ಳಲಾಗದ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಆದರೆ ಅವರಿಗೆ ಗೌರವಯುತವಾಗಿ ಮರಣಹೊಂದಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ಸರ್ಕಾರ ಶೀಘ್ರವೇ ನಿಯಮಾವಳಿ ರೂಪಿಸಬೇಕು ಎಂದು ಹೆಚ್.ಬಿ. ಕರಿಬಸಮ್ಮ ಆಗ್ರಹಿಸಿದ್ದಾರೆ.
ದಯಾಮರಣಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಏಪ್ರಿಲ್ 22ರವರೆಗೂ ಸಮಯ ನಿಗದಿಪಡಿಸಿದ್ದು, ಸರ್ಕಾರ ನಿಯಮಗಳನ್ನು ರೂಪಿಸದಿದ್ದರೆ ಅಮರಣಾಂತ ಉಪವಾಸ ಮಾಡುವುದಾಗಿ ದಯಾಮರಣ ಹೋರಾಟಗಾರ್ತಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ವೃತ್ತಿಯಲ್ಲಿ ಶಿಕ್ಷಕಿಯಾಗಿ ಸ್ವಯಂ ನಿವೃತ್ತಿ ಪಡೆದಿರುವ ದಾವಣಗೆರೆಯ ಹೆಚ್.ಬಿ. ಕರಿಬಸಮ್ಮ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಕಳೆದ 24 ವರ್ಷಗಳಿಂದ ದಯಾಮರಣಕ್ಕೆ ಕಾನೂನು ಚೌಕಟ್ಟು ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ನಾಮಕಾವಸ್ತೆಗೆ ಸರ್ಕಾರ ಸಮಿತಿ ರಚಿಸಿದ್ದು, ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಈಗಾಗಲೇ ಹಲವು ಬಾರಿ ಮನವಿ ನೀಡಲಾಗಿದೆ. ಸರ್ಕಾರ ಶೀಘ್ರ ಮಾರ್ಗಸೂಚಿ ಹೊರಡಿಸಿಬೇಕು ಇಲ್ಲದಿದ್ದರೆ ಅಮರಣಾಂತ ಉಪವಾಸ ಮಾಡಲಾಗುವುದು. ನನ್ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ಸರ್ಕಾರವೇ ಹೊಣೆ" ಎಂದು ತಿಳಿಸಿದರು.
ವಾಸಿಯಾಗದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಗೌರವಯವಾಗಿ ಮುಕ್ತಿ ನೀಡುವ ದಯಾಮರಣಕ್ಕೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕ ರಾಜ್ಯ ಸರ್ಕಾರ ವೈದ್ಯಕೀಯ ಸಲಹಾ ಮಂಡಳಿಯನ್ನು 2025, ಜ.30 ರಂದು ರಚಿಸಿತ್ತು. ಆದರೆ ಈ ಮಂಡಳಿ ಇದುವರೆಗೂ ಯಾವುದೇ ಸಲಹೆ ಹಾಗೂ ನಿಯಮಗಳನ್ನು ಸೂಚಿಸಿಲ್ಲ ಎಂದು ಆರೋಪ ಮಾಡಿದ್ದಾರೆ.
ನಿರಂತರವಾಗಿ ಕೋಮದಲ್ಲಿರುವವರಿಗೆ ಹಾಗೂ ಚೇತರಿಕೆಯನ್ನೇ ಕಾಣದ ರೋಗಿಗಳಿಗೆ ಅನುಕೂಲವಾಗಲು ಸರ್ಕಾರ ಎರಡು ಸಲಹಾ ಮಂಡಳಿಗಳನ್ನು ರಚಿಸಿತ್ತು. ಆದರೆ ಇದುವರೆಗೂ ರಾಜ್ಯದಲ್ಲಿ ಹಲವರು ದಯಾಮರಣಕ್ಕೆ ಯಾರಿಗೆ ಅರ್ಜಿ ಸಲ್ಲಿಸಬೇಕು ? ಯಾವ ನಿಯಮಗಳಿವೆ ಎಂದು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಎಡತಾಕುತ್ತಿದ್ದಾರೆ.
ಸಲಹಾ ಮಂಡಳಿ ಸ್ವರೂಪವೇನು ?
ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ವೈದ್ಯರ ತಂಡ ದಯಾಮರಣ ಹಕ್ಕು ಪರಿಶೀಲಿಸಲು ಪ್ರಾಥಮಿಕ ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಬೋರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಹಾಗೂ ಸೆಕೆಂಡರಿ ಬೋರ್ಡ್‌ನಲ್ಲಿ ತಲಾ ಮೂವರು ವೈದ್ಯರು ಇರಲಿದ್ದು, ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರು ಇರಲಿದ್ದಾರೆ.
ದಯಾಮರಣ ಕೋರುವ ರೋಗಿಯ ಕುಟುಂಬದ ಮನವಿಯನ್ನು ಮೊದಲಿಗೆ ಪ್ರಾಥಮಿಕ ಬೋರ್ಡ್ ಪರಿಶೀಲಿಸಿ ವರದಿ ನೀಡಲಿದೆ. ನಂತರ ಆ ವರದಿಯನ್ನು ಸೆಕೆಂಡರಿ ಬೋರ್ಡ್ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿಯ ನೀಡಲಿದೆ. ನ್ಯಾಯಾಲಯ ಅನುಮತಿ ನೀಡಿದ ಬಳಿಕ ರೋಗಿಗೆ ಅಳವಡಿಸಿರುವ ಕೃತಕ ಉಸಿರಾಟ ವ್ಯವಸ್ಥೆಯನ್ನು ವೈದ್ಯರು ತೆಗೆಯಬಹುದಾಗಿದೆ.
ಮನುಷ್ಯ ತಾನು ಎಷ್ಟೇ ಯಶಸ್ಸು ಸಾಧಿಸಿದರೂ ಗೌರವಯುತವಾಗಿ ಮರಣಹೊಂದಬೇಕು ಎಂಬ ಆಸೆ ಹೊಂದಿರುತ್ತಾನೆ. ಅರುಣಾ ಶಾನುಭೋಗ ಪ್ರಕರಣ ಸೇರಿದಂತೆ ಹಲವು ದಶಕಗಳಿಂದ ಭಾರತದಲ್ಲಿ ದಯಾಮರಣಕ್ಕಾಗಿ ಕಾನೂನು ರೂಪಿಸುವಂತೆ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ರೂಪಿಸಲು ಹಿಂದೇಟು ಹಾಕುತ್ತಿವೆ.
ರಾಜ್ಯದಲ್ಲಿಯೂ ದಯಾಮರಣಕ್ಕೆ ನೂತನ ನಿಯಮಗಳನ್ನು ರೂಪಿಸಬೇಕು ಎಂದು ದಾವಣಗೆರೆಯ ನಿವೃತ್ತ ಶಿಕ್ಷಕಿಯೊಬ್ಬರು ಕಳೆದ 24 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪ್ರಾರಂಬವಾಗಿ ಸಿಎಂ ಸಿದ್ದರಾಮಯ್ಯನವರಿಗೂ ಪತ್ರ ಬರೆದರೂ ಸರ್ಕಾರ ಉತ್ತರವನ್ನೂ ಬರೆದಿಲ್ಲ. ನಿಯಮಗಳನ್ನು ರೂಪಿಸಲು ಮುಂದಾಗಿಲ್ಲ.
ದಯಾಮರಣಕ್ಕೆ ಹೋರಾಟ ಏಕೆ ?
"ಸುಮಾರು ಎರಡು ದಶಕಗಳಿಂದ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಹಲವು ವಯೋವೃದ್ಧರು ವೃದ್ದಾಶ್ರಮದಲ್ಲಿ ವಾಸಿಸುತ್ತಿರುತ್ತಾರೆ. ಹೇಳಿಕೊಳ್ಳಲು ಸಾಧ್ಯವಾಗದಂತಹ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಅವರೆಲ್ಲರೂ ಗೌರವಯುತವಾಗಿ ಸಾವನ್ನಪ್ಪಲು ಸರ್ಕಾರ ಆದಷ್ಟು ಶೀಘ್ರವಾಗಿ ನಿಯಮಾವಳಿಗಳನ್ನು ರೂಪಿಸಿ ದಯಾಮರಣಕ್ಕೆ ಅನುಮತಿ ನೀಡಬೇಕು" ಎಂದು ಹೆಚ್.ಬಿ. ಕರಿಬಸಮ್ಮ ಆಗ್ರಹಿಸಿದ್ದಾರೆ.
ಗೌರವಯುತ ಮರಣಕ್ಕಾಗಿ ಅರ್ಜಿ
ರಾಜ್ಯದಲ್ಲಿ ಹಲವಾರು ವಯೋವೃದ್ದರು ವೃದ್ಧಾಶ್ರಮದಲ್ಲಿ ವಾಸಿಸುತ್ತಿರುತ್ತಾರೆ. ಕೆಲವರಿಗೆ ಕುಟುಂಬಗಳಿದ್ದರೆ ಮತ್ತಷ್ಟು ಜನಕ್ಕೆ ಕುಟುಂಬಗಳೇ ಇರುವುದಿಲ್ಲ. ಅಂತಹವರಲ್ಲಿ ಹಲವಾರು ಮಂದಿಗೆ ಹೇಳಿಕೊಳ್ಳಲಾಗದ ಖಾಯಿಲೆ ಇರುತ್ತವೆ. ಸಮಾಜದಲ್ಲಿ ಗೌರಯುತವಾಗಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಇದುವರೆಗೂ ಸುಮಾರು ನಾಲ್ಕು ಜನರು ದಯಾಮರಣ ಬೇಕು ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ಸರ್ಕಾರ ಆದಷ್ಟು ಬೇಗ ನಮ್ಮ ಕೂಗಿಗೆ ಧ್ವನಿಯಾಗಬೇಕು ಎಂದರು.
ಹೋರಾಟ ರೂಪುಗೊಂಡಿದ್ದು ಹೇಗೆ ?
ಹಲವಾರು ವರ್ಷಗಳ ಹಿಂದೆ ಸಿಪಿಎಂ ನಾಯಕರೊಬ್ಬರಿಗೆ ಕರಳು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರ ಮಲ ವಿಸರ್ಜನೆಗೆ ಒಂದು ಬ್ಯಾಗ್ ಅಳವಡಿಸಲಾಗಿತ್ತು. ಆದರೆ ಸಮಾಜದಲ್ಲಿ ಗೌರವಯುತವಾಗಿ ಕಾರ್ಯಕರ್ತರೊಂದಿಗೆ ಸದಾ ಇರುತ್ತಿದ್ದ ನಾಯಕನ ಬಳಿ ಜನರೇ ಬರದಂತಾಯಿತು. ಇದರಿಂದ ಆತ್ಮಖಿನ್ನತೆಗೆ ಒಳಗಾದ ಅವರು ನೋವಿನಿಂದಲೇ ಪ್ರಾಣ ಬಿಟ್ಟರು. ಅದೇ ರೀತಿಯಾಗಿ ಸಮಾಜದಲ್ಲಿ ಎಷ್ಟೋ ಜನರಿಗೆ ಹೇಳಿಕೊಳ್ಳಲಾಗದ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಆದರೆ ಅವರಿಗೆ ಗೌರವಯುತವಾಗಿ ಮರಣಹೊಂದಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ಸರ್ಕಾರ ಶೀಘ್ರವೇ ನಿಯಮಾವಳಿ ರೂಪಿಸಬೇಕು ಎಂದು ತಿಳಿಸಿದರು.
ವೃದ್ಧಾಶ್ರಮದಲ್ಲಿದ್ದೇ ಹೋರಾಟ
ನಿವೃತ್ತ ಶಿಕ್ಷಕಿ ಎಚ್.ಬಿ. ಕರಿಬಸಮ್ಮ ಅವರು ದಯಾಮರಣಕ್ಕೆ ಹೋರಾಟ ಆರಂಭಿಸಿದ ನಂತರ ಸಾರ್ವಜನಿಕರು ಮನೆಗೆ ಬಂದು ಹೋರಾಟ ಯಾಕಾಗಿ ಮಾಡುತ್ತಿದ್ದೀರಾ ? ನಿಮಗೆಲ್ಲಾ ಇದು ಬೇಕೆ ಎಂದು ಪ್ರಶ್ನಿಸಲು ಆರಂಭಿಸಿದರು. ಇದರಿಂದ ಸಹೋದರಿಯರ ಮನೆಯಲ್ಲಿ ಆಶ್ರಯ ಪಡೆದಿದ್ದ ಕರಿಬಸಮ್ಮನವರನ್ನು ಮನೆಯಿಂದ ಹೊರಗೆ ಕಳುಹಿಸಲಾಯಿತು.
ನಂತರ ವೃದ್ಧಾಶ್ರಮಕ್ಕೆ ಸೇರಿಕೊಂಡ ಅವರು, ಸರ್ಕಾರದಿಂದ ತಮಗೆ ದೊರಕುತ್ತಿರುವ ಪಿಂಚಣಿ ಹಣದಿಂದಲೇ ಜೀವನ ನಡೆಸುತ್ತಿದ್ದು, ದಯಾಮರಣಕ್ಕೆ ಶೀಘ್ರ ನಿಯಮ ರೂಪಿಸಬೇಕು ಎಂದು ಅಧಿಕಾರಿಗಳು ಹಾಗೂ ಸರ್ಕಾರದ ಗಮಕ್ಕೆ ತಂದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏನಿದು ಅರುಣಾ ಶಾನಭೋಗ್ ಪ್ರಕರಣ ?
ದೇಶದಲ್ಲಿ ದಯಾಮರಣದ ಕುರಿತಾದ ಚರ್ಚೆಗಳಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದುದ್ದು ಅರುಣಾ ಶಾನಭಾಗ್ ಪ್ರಕರಣ. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೋರಾಟ. ನರ್ಸ್ ಆಗಿದ್ದ ಅರುಣಾ ಶಾನಭಾಗ್ ಅವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ 42 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರ ಪರವಾಗಿ ಪಿಂಕಿ ವಿರಾನಿ ಎಂಬುವವರು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. 2011ರಲ್ಲಿ ಸುಪ್ರೀಂ ಕೋರ್ಟ್ ಅರುಣಾ ಅವರ ದಯಾಮರಣ ಅರ್ಜಿಯನ್ನು ತಿರಸ್ಕರಿಸಿದರೂ, ದೇಶದಲ್ಲಿ 'ಪರೋಕ್ಷ ದಯಾಮರಣ'ಕ್ಕೆ ಮೊದಲ ಬಾರಿಗೆ ಮಾನ್ಯತೆ ನೀಡಿತು.
ಕಾಮನ್ ಕಾಸ್ ಪ್ರಕರಣ
2018ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು "ಘನತೆಯಿಂದ ಸಾಯುವುದು ಕೂಡ ಸಂವಿಧಾನದ 21ನೇ ವಿಧಿಯಡಿ ಪ್ರಜೆಯ ಮೂಲಭೂತ ಹಕ್ಕು" ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನ ಮೂಲಕ 'ಮರಣ ಇಚ್ಛೆಯ ಉಯಿಲು' ಬರೆಯಲು ಅವಕಾಶ ಕಲ್ಪಿಸಲಾಯಿತು.
ಪರಿಷ್ಕೃತ ನಿಯಮಗಳೇನು ?
ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ನಿಯಮಗಳು ಬಹಳ ಕಠಿಣವಾಗಿದ್ದವು. ಆದ್ದರಿಂದ 2023ರಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಇವುಗಳನ್ನು ಸರಳಗೊಳಿಸಿತ್ತು. ಪ್ರತಿಯೊಬ್ಬ ವ್ಯಕ್ತಿಯೂ ತಾನು ಭವಿಷ್ಯದಲ್ಲಿ ಗುಣಪಡಿಸಲಾಗದ ಕಾಯಿಲೆಗೆ ತುತ್ತಾಗಿ, ಪ್ರಜ್ಞಾಹೀನ ಸ್ಥಿತಿಗೆ ಹೋದರೆ ತನಗೆ ಕೃತಕ ಜೀವ ರಕ್ಷಕ ವ್ಯವಸ್ಥೆ ಬೇಡ ಎಂದು ಮೊದಲೇ ʼಮರಣ ಇಚ್ಛೆಯ ಉಯಿಲುʼ ಅಥವಾ 'ಬಾಂಡ್' ಬರೆದಿಡಬಹುದು. ಈ ಉಯಿಲಿಗೆ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯ ಮುಂದೆ ಸಹಿ ಮಾಡಬೇಕು. ಈ ಮೊದಲು ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕಿತ್ತು. ರೋಗಿಯ ಸ್ಥಿತಿಯನ್ನು ಪರಿಶೀಲಿಸಲು ಆಸ್ಪತ್ರೆಯು ಒಂದು ಪ್ರಾಥಮಿಕ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು. ನಂತರ ಮತ್ತೊಂದು ಸ್ವತಂತ್ರ ವೈದ್ಯಕೀಯ ಮಂಡಳಿಯು ಇದನ್ನು ದೃಢಪಡಿಸಬೇಕು. ವೈದ್ಯಕೀಯ ಮಂಡಳಿಗಳು 48 ಗಂಟೆಗಳ ಒಳಗೆ ತಮ್ಮ ನಿರ್ಧಾರವನ್ನು ತಿಳಿಸಬೇಕು. ಒಂದು ವೇಳೆ ವೈದ್ಯಕೀಯ ಮಂಡಳಿಗಳು ದಯಾಮರಣಕ್ಕೆ ಅನುಮತಿ ನಿರಾಕರಿಸಿದರೆ, ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ತಿಳಿಸಿದೆ.
ದುರುಪಯೋಗವೇ ಹೆಚ್ಚು
ಹೈಕೋರ್ಟ್ ವಕೀಲರಾದ ಲೋಹಿತ್ ಹನುಮಾಪುರ ಮಾತನಾಡಿ, ಸಂವಿಧಾನ 21ನೇ ವಿಧಿ ಪ್ರಕಾರ ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ದಯಾಮರಣದ ಬಗ್ಗೆ ಸುಪ್ರೀ ಕೋರ್ಟ್ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದು, ನಿಯಮಗಳನ್ನ ರೂಪಿಸುವಂತೆ ತಿಳಿಸಿದೆ. ಆದರೆ ಇದುವರಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಕೆಲವೊಮ್ಮೆ ಈ ನಿಯಮಗಳು ದುರುಪಯೋಗವಾಗುವ ಸಾಧ್ಯತೆಯೂ ಹೆಚ್ಚಿದೆ. ಆದ್ದರಿಂದ ಸರ್ಕಾರ ಶೀಘ್ರವೇ ಕಠಿಣ ನಿಯಮಗಳನ್ನು ರೂಪಿಸಿ, ತೀರಾ ಅನಿವಾರ್ವಾಗಿರುವವರಿಗೆ ಮಾತ್ರ ದಯಾಮಾರಣಕ್ಕೆ ಅನುಮತಿ ನೀಡುವ ಕಾನೂನು ರೂಪಿಸಬೇಕು. ವಿವಿಧ ಕಾರಣಗಳಿಂದ ಕೇವಲ ಪ್ರಚಾರಕ್ಕಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸುವವರಿಗೆ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕು ಎಂದು ತಿಳಿಸಿದರು.
ದಯಾಮರಣ ಅಗತ್ಯವಿಲ್ಲ
ವಾಯುಪಡೆಯ ನಿವೃತ್ತ ವೈದ್ಯರಾದ ಡಾ.ದಿನೇಶ್ ಎ.ಎಸ್. ಪ್ರತಿಕ್ರಿಯಿಸಿ, "ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದರೆ ಯಾರಿಗೂ ದಯಾಮರಣ ನೀಡುವ ಅಗತ್ಯವೇ ಇರುವುದಿಲ್ಲ. ಸಮಾಜದಲ್ಲಿ ಈಗ ಆರೋಗ್ಯ ಸೇವೆ ಉದ್ಯಮವಾಗಿ ಬದಲಾಗಿದೆ. ಕಡಿಮೆ ಹಣಕ್ಕೆ ಸಿಗಬೇಕಾ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾಮಾನ್ಯ ಚಿಕಿತ್ಸೆ ನೀಡಬೇಕಾಗಿದ್ದರೂ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ರೋಗಿಗಳಲ್ಲಿ ಭಯ ತುಂಬುತ್ತಿದ್ದಾರೆ. ಅತೀ ತುರ್ತಾದ ಹಾಗೂ ಜೀವರಕ್ಷಕ ಬಳಸಿದರೂ ಬದುಕುಳಿಯುವುದಿಲ್ಲ ಎನ್ನುವವರಿಗೆ ಮಾತ್ರ ದಯಾಮರಣ ನೀಡಬಹುದು," ಎಂದರು.
ಮಿದುಳು ನಿಷ್ಕ್ರಿಯ ಹೊಂದಿದವರ ಪೋಷಕ ಅನುಮತಿ ಪಡೆದು ಅವರಿಗೂ ಮುಕ್ತಿ ನೀಡಬಹುದು. ಉತ್ತಮ ಚಿಕಿತ್ಸೆ ದೊರೆತರೆ ಯಾರಿಗೂ ದಯಾಮರಣ ನೀಡುವ ಅಗತ್ಯವೇ ಇರುವುದಿಲ್ಲ. ಸರ್ಕಾರ ಕಾನೂನ ರೂಪಿಸಿದರೂ ದುರುಪಯೋಗವಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಯಾರಿಗೂ ದಯಾಮರಣ ನೀಡಬಾರದು ಎಂದರು.
ದೇಶದಲ್ಲಿನ ಇತರೆ ದಯಾಮರಣ ಪ್ರಕಣಗಳು
ಹರೀಶ್ ರಾಣಾ ಪ್ರಕರಣ
ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿರುವ ಹರೀಶ್ ರಾಣಾ ಅವರ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ದಯಾಮರಣಕ್ಕೆ 2024ರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಏಮ್ಸ್ (AIIMS) ವೈದ್ಯರ ಮಂಡಳಿಯಿಂದ ವರದಿ ಕೇಳಿದೆ.
30 ವರ್ಷದ ಯುವಕನ ಪ್ರಕರಣ
11 ವರ್ಷಗಳಿಂದ ಹಾಸಿಗೆ ಹಿಡಿದಿದ್ದ 30 ವರ್ಷದ ಮಗನ ಆಸ್ಪತ್ರೆ ವೆಚ್ಚ ಭರಿಸಲಾಗದೆ ತಂದೆ ಹಾಗೂ ತಾಯಿ ಅರ್ಜಿ ಸಲ್ಲಿಸಿದ್ದರು. ಆದರೆ ಆತ ಕೃತಕ ಜೀವ ರಕ್ಷಕ ವ್ಯವಸ್ಥೆಯಲ್ಲಿಲ್ಲದ ಕಾರಣ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇತ್ತೀಚೆಗೆ ತಿರಸ್ಕರಿಸಿದೆ.
ವಿಶ್ವದ ಪ್ರಮುಖ ದೇಶಗಳಲ್ಲಿನ ನಿಯಮಗಳು
* ನೆದರ್ಲೆಂಡ್ಸ್: 2002ರಲ್ಲಿಯೇ ದಯಾಮರಣವನ್ನು ಮೊದಲು ಕಾನೂನುಬದ್ಧಗೊಳಿಸಿದ ದೇಶವಾಗಿದೆ. ಇಲ್ಲಿ ಸಕ್ರಿಯ ದಯಾಮರಣ ಮತ್ತು ವೈದ್ಯಕೀಯ ನೆರವಿನ ಆತ್ಮಹತ್ಯೆ ಎರಡಕ್ಕೂ ಅವಕಾಶವಿದೆ. ಪ್ರಮುಖವಾಗಿ ರೋಗಿಯು ತಡೆದುಕೊಳ್ಳಲಾಗದ ನೋವಿನಿಂದ ಬಳಲುತ್ತಿರಬೇಕು ಮತ್ತು ಗುಣಮುಖರಾಗುವ ಯಾವುದೇ ಭರವಸೆ ಇರಬಾರದು. ರೋಗಿಯು ಪೂರ್ಣ ಪ್ರಜ್ಞಾವಸ್ಥೆಯಲ್ಲಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದರೆ ದಯಾಮರಣ ನೀಡಬಹುದಾಗಿದೆ.
* ಬೆಲ್ಜಿಯಂ: 2014ರಲ್ಲಿ ಬೆಲ್ಜಿಯಂ ಮಕ್ಕಳಿಗೂ ದಯಾಮರಣ ಪಡೆಯಲು ಅವಕಾಶ ನೀಡಿದ ವಿಶ್ವದ ಮೊದಲ ದೇಶವಾಯಿತು. ಆದರೆ ಇದಕ್ಕಾಗಿ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಇದೂ ಸಹ ನೆದರ್ಲೆಂಡ್ಸ್ ರೀತಿಯೇ ಕಠಿಣ ನಿಯಮಗಳನ್ನು ಅನುಸರಿಸುತ್ತಿದೆ.
* ಸ್ವಿಜರ್ಲ್ಯಾಂಡ್: ಇಲ್ಲಿ 'ಸಕ್ರಿಯ ದಯಾಮರಣ'ಕ್ಕೆ ಅವಕಾಶವಿಲ್ಲ, ಆದರೆ 'ವೈದ್ಯಕೀಯ ನೆರವಿನ ಆತ್ಮಹತ್ಯೆ' ಕಾನೂನುಬದ್ಧವಾಗಿದೆ. ವೈದ್ಯರು ರೋಗಿಯ ಸಾವಿಗೆ ಬೇಕಾದ ಔಷಧವನ್ನು ಸಿದ್ಧಪಡಿಸಿ ಕೊಡುತ್ತಾರೆ. ಆದರೆ ಅದನ್ನು ರೋಗಿಯೇ ಸೇವಿಸಬೇಕು. ದಯಾಮರಣ ಪಡೆಯಲು ವಿದೇಶಿಯರಿಗೂ ಅವಕಾಶವಿರುವುದರಿಂದ, ಇದನ್ನು 'ಸಾವಿನ ಪ್ರವಾಸೋದ್ಯಮ' ಎಂದು ಕರೆಯಲಾಗುತ್ತದೆ.
* ಕೆನಡಾ: ದಯಾಮರಣ 2016ರಿಂದ ಜಾರಿಯಲ್ಲಿದ್ದು, ಗಂಭೀರ ಮತ್ತು ಗುಣಪಡಿಸಲಾಗದ ಕಾಯಿಲೆ ಇರುವವರಿಗೆ ಮಾತ್ರ ಅವಕಾಶವಿದೆ. ಇತ್ತೀಚೆಗೆ ಮಾನಸಿಕ ಕಾಯಿಲೆ ಇರುವವರಿಗೂ ಇದನ್ನು ಅನ್ವಯಿಸುವ ಬಗ್ಗೆ ಅಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.
* ಅಮೇರಿಕಾ: ಅಮೇರಿಕಾದಲ್ಲಿ ಇಡೀ ದೇಶಕ್ಕೆ ಅನ್ವಯಿಸುವ ಒಂದೇ ನಿಯಮವಿಲ್ಲ. ಒರೆಗಾನ್, ವಾಷಿಂಗ್ಟನ್, ಕ್ಯಾಲಿಫೋರ್ನಿಯಾ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ವೈದ್ಯಕೀಯ ನೆರವಿನ ಆತ್ಮಹತ್ಯೆಗೆ ಅವಕಾಶವಿದೆ. ಆದರೆ ಸಕ್ರಿಯ ದಯಾಮರಣಕ್ಕೆ ಹೆಚ್ಚಿನ ರಾಜ್ಯಗಳಲ್ಲಿ ಅವಕಾಶವಿಲ್ಲ.
* ಇಂಗ್ಲೆಂಡ್ : ಇಲ್ಲಿ ದಯಾಮರಣ ಮತ್ತು ವೈದ್ಯಕೀಯ ನೆರವಿನ ಆತ್ಮಹತ್ಯೆ ಎರಡೂ ಕಾನೂನುಬಾಹಿರ. ಇದಕ್ಕೆ ನೆರವು ನೀಡುವವರಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಆದರೆ ಪ್ರಸ್ತುತ ಬ್ರಿಟನ್ ಸಂಸತ್ತಿನಲ್ಲಿ ಇದರ ಬಗ್ಗೆ ಹೊಸ ಕಾನೂನು ತರುವ ಚರ್ಚೆಗಳೂ ನಡೆಯುತ್ತಿವೆ.

