
ಉತ್ತೇಜಕಗಳಿಗೆ ಜಗ್ಗದ ಕಾರ್ಪೊರೇಟ್ ವಲಯ: ಅಧಿಕ ಬಂಡವಾಳದ ಹರಿವಿಗೆ ಟಾನಿಕ್ ನೀಡಬಲ್ಲುದೇ ಬಜೆಟ್?
ಕಾರ್ಪೊರೇಟ್ ಕಂಪನಿಗಳು ದಾಖಲೆ ಮಟ್ಟದ ಲಾಭ ಗಳಿಸುತ್ತಿದ್ದರೂ ಹಲವು ವರ್ಷಗಳ ಉತ್ತೇಜಕಗಳ ಹೊರತಾಗಿಯೂ ಹೂಡಿಕೆಗಳು ಕುಂಠಿತವಾಗಿವೆ. ಇದಕ್ಕಿರುವ ನೈಜ ಕಾರಣವಾದರೂ ಎನು ಎಂಬುದರ ಪತ್ತೆಗೆ ಇದು ಸಕಾಲ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಭಾನುವಾರ ಒಂಭತ್ತನೇ ಬಾರಿಗೆ ಕೇಂದ್ರ ಮುಂಗಡ ಪತ್ರವನ್ನು ಮಂಡನೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಲಿದ್ದಾರೆ. ಇದರೊಂದಿಗೆ ಅವರು ವಿವಿಧ ಆರ್ಥಿಕ ಮಾರ್ಗಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಲಿದ್ದಾರೆ.
ಖಾಸಗಿ ಅಂತಿಮ ಬಳಕೆ ವೆಚ್ಚದಿಂದ ಅಳೆಯಲಾಗುವ ಬಳಕೆ ವೆಚ್ಚವು ಭಾರತದ ಅರ್ಥ ವ್ಯವಸ್ಥೆಯ ಪ್ರಾಥಮಿಕ ಬೆಳವಣಿಗೆಯ ಎಂಜಿನ್ ಆಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ. ಇದಾದ ಬಳಿಕ ಒಟ್ಟು ಸ್ಥಿರ ಬಂಡವಾಳ ರಚನೆಯಲ್ಲಿ ಪ್ರತಿಫಲಿಸುವ ಬಂಡವಾಳ ವೆಚ್ಚದ (Capex) ಮೂಲಕ ಹೂಡಿಕೆ-ಆಧಾರಿತ ಬೆಳವಣಿಗೆಯು ಎರಡನೇ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದರೆ ರಫ್ತು ವಲಯ ಮೂರನೇ ಸ್ಥಾನದಲ್ಲಿದೆ.
ಹಣಕಾಸು ವರ್ಷ 2012ರಿಂದ 2026ರ ವರೆಗಿನ ಅವಧಿಯಲ್ಲಿ (ಮುಂಗಡ ಅಂದಾಜು ಪ್ರಕಾರ) ಬಂಡವಾಳ ವೆಚ್ಚವು ಜಿಡಿಪಿಗೆ (ಸದ್ಯದ ದರದಲ್ಲಿ) ನೀಡಿರುವ ಸರಾಸರಿ ಕೊಡುಗೆ ಶೇ.40ರಷ್ಟು. ಕೇಂದ್ರ ಸರ್ಕಾರ ಒಂದು ದಶಕಕ್ಕೂ ಅಧಿಕ ಕಾಲದಿಂದ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರೂ ಅದರಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ದಕ್ಕಿಲ್ಲ.
ಕ್ಯಾಪೆಕ್ಸ್ ಅಥವಾ ಬಂಡವಾಳ ವೆಚ್ಚ ಎಂದರೆ ಏನು?
ಬಂಡವಾಳ ವೆಚ್ಚ ಅಥವಾ Capex ಎಂದರೆ ಒಂದು ಕಂಪನಿಯು ತನ್ನ ಸಾಮರ್ಥ್ಯ ಅಥವಾ ದಕ್ಷತೆಯನ್ನು ಹೆಚ್ಚಿಸಲು ಭೌತಿಕ ಮತ್ತು ದೀರ್ಘಕಾಲೀನ ಆಸ್ತಿಗಳನ್ನು ಖರೀದಿಸಲು, ಮೇಲ್ದರ್ಜೆಗೆ ಏರಿಸಲು ಅಥವಾ ನಿರ್ವಹಣೆ ಮಾಡಲು ಬಳಸುವ ಹಣ. ಇದು ಸಾಮಾನ್ಯವಾಗಿ ಆಸ್ತಿ, ಕಟ್ಟಡಗಳು, ತಂತ್ರಜ್ಞಾನ, ಉಪಕರಣಗಳು ಮತ್ತು ಮುಂತಾದವುಗಳ ಮೇಲೆ ಮಾಡಲಾಗುವ ಹೂಡಿಕೆಯನ್ನು ಒಳಗೊಂಡಿರುತ್ತದೆ.
ತಯಾರಿಕಾ ವಲಯಕ್ಕೆ ಉತ್ತೇಜನವನ್ನು ನೀಡಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ; 2019ರಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಘೋಷಿಸಲಾದ ಭಾರೀ ಕಡಿತ, 2018ರಲ್ಲಿ ಪ್ರಕಟಿಸಿದ ಪ್ರಧಾನಮಂತ್ರಿ ರೋಜ್ಗಾರ್ ಪ್ರೋತ್ಸಾಹ ಯೋಜನೆ, 2020ರಲ್ಲಿ ಆತ್ಮ ನಿರ್ಭರ ಭಾರತ್ ರೋಜ್ಗಾರ್ ಯೋಜನೆ, 2020ರ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಮತ್ತು ವಿನ್ಯಾಸ ಆಧಾರಿತ ಪ್ರೋತ್ಸಾಹಕ ಯೋಜನೆಗಳು, 2024ರಲ್ಲಿ ಪ್ರಧಾನಮಂತ್ರಿ ಇಂಟರ್ನ್-ಶೀಪ್ ಯೋಜನೆ, 2025ರ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆ ಸೇರಿದಂತೆ ಸರ್ಕಾರ ಸರಣಿ ರೂಪದಲ್ಲಿ ಸಹಾಯಧನಗಳನ್ನು ಕಲ್ಪಿಸಿದೆ.
ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಸರ್ಕಾರವು ೨೦೨೩ರಿಂದ ತನ್ನ ಬಂಡವಾಳ ವೆಚ್ಚವನ್ನು ಹೆಚ್ಚಿಸಿದೆ. ಆದರೆ ಸರ್ಕಾರಿ ವೆಚ್ಚವನ್ನು ಹೊರತುಪಡಿಸಿ ಉಳಿದೆಲ್ಲ ಘಟಕಗಳು ಕುಸಿತದ ಹಾದಿಯಲ್ಲಿವೆ ಹಾಗೂ ಹಣಕಾಸು ವರ್ಷ 2012ರ ಮಟ್ಟಕ್ಕಿಂತ ಕೆಳಕ್ಕೆ ಕುಸಿದಿದೆ.
ಭಾರತದ ಜಿಡಿಪಿ ಬೆಳವಣಿಗೆಯು ʼಗ್ಯಾಂಗ್-ಬಸ್ಟರ್ʼ (ಭಾರತದ ಜಿಡಿಪಿ ಸಂಖ್ಯೆಗಳನ್ನು ವಿವರಿಸಲು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅವರು ಈ ಪದ ಬಳಸಿದ್ದರು) ಆಗಿರುವಾಗ ಮತ್ತು 2015ರಿಂದ ಭಾರತವು ವಿಶ್ವದ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆಯಾಗಿದ್ದರೂ ಈ ಕುಸಿತ ಅನಿರೀಕ್ಷಿತ ಮತ್ತು ಪರಸ್ಪರ ವ್ಯತಿರಿಕ್ತವಾಗಿ ಕಾಣಿಸುತ್ತಿಲ್ಲವೇ?
ಈ ಸಂಬಂಧ ಮೊದಲು ಕೆಲವು ಕಳವಳಕಾರಿ ಸಂಗತಿಗಳ ಕಡೆಗೆ ಗಮನ ಹರಿಸೋಣ...
ತುಳುಕಾಡುತ್ತಿರುವ ನಗದು
ಬಂಡವಾಳ ವೆಚ್ಚದ ಬೆಳವಣಿಗೆಗೆ ಯಾವತ್ತೂ ಬೇಕಾಗಿರುವುದು ಖಾಸಗಿ ಕಾರ್ಪೊರೇಟ್ ವಲಯದ ಸಹಕಾರ. ಈ ವಲಯಕ್ಕೆ ತೆರಿಗೆ ಕಡಿತ ಮತ್ತು ಸಬ್ಸಿಡಿಗಳ ಮೂಲಕ ಅತಿಯಾದ ರಿಯಾಯಿತಿಗಳನ್ನು ನೀಡಲಾಗಿದೆ. ಆದರೂ ಅದು ಬಂಡವಾಳ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದು ಗಮನಾರ್ಹ.
ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು ತಮ್ಮ 2023-24ರ ಆರ್ಥಿಕ ಸಮೀಕ್ಷೆಯಲ್ಲಿ, ಭಾರತದ ಕಾರ್ಪೊರೇಟ್ ಕಂಪನಿಗಳು ಅತಿಯಾದ ಲಾಭದಲ್ಲಿ ತೇಲುತ್ತಿದ್ದರೂ (ಹ,ವ, ೨೪ರಲ್ಲಿ ಕಾರ್ಪೊರೇಟ್ ಲಾಭ ಮತ್ತು ಜಿಡಿಪಿ ಅನುಪಾತವು 15 ವರ್ಷಗಳಷ್ಟು ಗರಿಷ್ಠ ಮಟ್ಟದಲ್ಲಿತ್ತು) ಕೂಡ ಹೂಡಿಕೆ ಮಾತ್ರ ಮಾಡುತ್ತಿಲ್ಲ. ಉದ್ಯೋಗವನ್ನೂ ಸೃಷ್ಟಿಸುತ್ತಿಲ್ಲ ಅಥವಾ ವೇತನ ಏರಿಕೆಯನ್ನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಖಾಸಗಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯು ಹ,ವ. 2008ರಲ್ಲಿ ಶೇ.16.8ರಷ್ಟಿದ್ದದ್ದು ಹ.ವ. 2024ರಲ್ಲಿ ಶೇ.10ಕ್ಕೆ ಕುಸಿದಿದೆ.
2025ರ ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಖಾಸಗಿ ವಲಯವು ಸತತ ನಾಲ್ಕನೇ ಬಾರಿಗೆ ಯೋಜನೆಗಳಿಂದ ಹಿಂದೆ ಸರಿದಿದೆ ಎಂದು ಕಳೆದ ನವೆಂಬರ್ನಲ್ಲಿ, ಖಾಸಗಿ ವ್ಯಾಪಾರ ಮಾಹಿತಿ ಸಂಸ್ಥೆಯಾದ CMIE ವರದಿ ಮಾಡಿತ್ತು. ಇದು ಮಾರ್ಚ್ 2009ರ ತ್ರೈಮಾಸಿಕದಲ್ಲಿದ್ದ ರೂ. 13.4 ಲಕ್ಷ ಕೋಟಿಯ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿ, ಸೆಪ್ಟೆಂಬರ್ 2025ರ ವೇಳೆಗೆ ರೂ. 14.3೩ ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಹಿಂತೆಗೆತಕ್ಕೆ ಸಾಕ್ಷಿಯಾಗಿದೆ.
ಫೆಬ್ರುವರಿ 2025ರಲ್ಲಿ ರಾಷ್ಟ್ರೀಯ ದಿನಪತ್ರಿಕೆಯೊಂದು ಅಂದಾಜು ಮಾಡಿದಂತೆ ಆರ್ಥಿಕತೆಯು ಬಸವಳಿಯುತ್ತಿರುವುದಕ್ಕೆ ಇತರ ಸೂಚನೆಗಳೆಂದರೆ, ನಿಫ್ಟಿ-500 ಕಂಪನಿಗಳ ಒಟ್ಟು ನಗದು ಮತ್ತು ನಗದು ಸಮಾನ ಬಾಕಿ ಹಣವು ಎರಡು ವರ್ಷಗಳಲ್ಲಿ ಶೇ.35 ರಷ್ಟು ವೃದ್ಧಿಯಾಗಿದೆ. ಇದು ಸೆಪ್ಟೆಂಬರ್ 2022ರಲ್ಲಿ ರೂ. 10.6 ಲಕ್ಷ ಕೋಟಿಯಷ್ಟಿತ್ತು. ಸೆಪ್ಟೆಂಬರ್ 2024ರ ವೇಳೆಗೆ ಅದು ರೂ. 14.3 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಅಲ್ಲದೆ, ಕಳೆದ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಮತ್ತೊಂದು ವರದಿಯ ಪ್ರಕಾರ, ವಿದೇಶಿ ಕಂಪನಿಗಳು ಹ.ವ. 26ರ ಮೊದಲ ತ್ರೈಮಾಸಿಕದಲ್ಲಿ ರೂ. 2 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಹಿಂತೆಗೆದುಕೊಂಡಿವೆ. ಇದು ಹ.ವ.25 ಇದೇ ಅವಧಿಗೆ ಹೋಲಿಸಿದರೆ ಶೇಕಡಾ 1,200ಕ್ಕಿಂತ ಹೆಚ್ಚು. ಇದಕ್ಕೆ ಅಮೆರಿಕದ ಸುಂಕಗಳ ಹೆಚ್ಚಳವೇ ಕಾರಣ ಎಂದು ಹೇಳಲಾಗಿದೆ.
ಹನುಮನ ಹಾರುವ ಸಾಮರ್ಥ್ಯ
ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಪಿ.ಎಲ್.ಐ ಯೋಜನೆಗಳ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಿದ ನಂತರ, ಸೀತಾರಾಮನ್ ಅವರು 2022ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಉದ್ಯಮ ವಲಯಕ್ಕೆ ಉತ್ಸಾಹ ತುಂಬುವ ಮಾತುಗಳನ್ನು ಆಡಿದ್ದರು. ಹನುಮಂತನಿಗೆ ಆತನ ಹಾರುವ ಅಸಾಧಾರಣ ಸಾಮರ್ಥ್ಯವನ್ನು ಹೇಗೆ ನೆನಪಿಸಬೇಕಾಯಿತೋ, ಅದೇ ರೀತಿ ನಿಮಗೂ ನಿಮ್ಮ ಸಾಮರ್ಥ್ಯದ ಅರಿವಾಗಬೇಕು ಎಂದು ಅವರು ಮಾರ್ಮಿಕವಾಗಿ ನುಡಿದಿದ್ದರು. ಆ ಮೂಲಕ ಅವರು ತಮ್ಮ ಬಂಡವಾಳ ವೆಚ್ಚವನ್ನು ವಿಸ್ತರಿಸುವಂತೆ ಕಂಪನಿಗಳಿಗೆ ಪ್ರೇರೇಪಣೆ ನೀಡಿದ್ದರು.
ಇವೆಲ್ಲವೂ ಮತ್ತೊಮ್ಮೆ ವಿಫಲವಾದ ನಂತರ, 2023ರ ಬಜೆಟ್ನಲ್ಲಿ ಅವರು ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರಿ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದರು. ಅದೂ ಕೂಡ ಯಶಸ್ವಿಯಾಗಲಿಲ್ಲ. ಕಳೆದ ಜುಲೈನಲ್ಲಿ, ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾದ ಮಹೇಂದ್ರ ದೇವ್ ಅವರು ಕಂಪನಿಗಳು ನಗದನ್ನು ರಾಶಿ ಹಾಕಿಕೊಳ್ಳದೆ ಹೂಡಿಕೆ ಮಾಡುವಂತೆ ಒತ್ತಾಯಿಸಿದರು.
ಈ ಪ್ರತಿರೋಧಕ್ಕೇನು ಕಾರಣ?
ಖಾಸಗಿ ಕಾರ್ಪೊರೇಟ್ ವಲಯವು ತಮ್ಮ ವಿನಂತಿಗಳಿಗೆ ಏಕೆ ಸ್ಪಂದಿಸುತ್ತಿಲ್ಲ ಎಂಬುದು ಸೀತಾರಾಮನ್ ಮತ್ತು ದೇವ್ ಇಬ್ಬರಿಗೂ ಚೆನ್ನಾಗಿ ತಿಳಿದಿದೆ, ಆದರೆ ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಆ ವಿಷಯವನ್ನು ಸ್ಪಷ್ಟಪಡಿಸುವ ಕೆಲವು ಸತ್ಯಗಳು ಯಾವುವು ಎಂಬುದನ್ನು ನೋಡೋಣ:
1. ತಯಾರಿಕಾ ವಲಯದಲ್ಲಿನ ಸಾಮರ್ಥ್ಯದ ಬಳಕೆ ಸುಮಾರು ಶೇ.75ರಷ್ಟಿದೆ- ಹೊಸದಾಗಿ ಬಂಡವಾಳ ಹೂಡಿಕೆ ಮಾಡಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಾಕಾಗದು.
2. ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ತೀರಾ ಕುಸಿದು ಹೋಗಿದೆ ಮತ್ತು ಇನ್ನಷ್ಟು ಕುಸಿಯುತ್ತಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಬೆಳವಣಿಗೆಯು ಹಣಕಾಸು ವರ್ಷ 13ರಿಂದ ಹ.ವ. 2025ರ ಅವಧಿಯಲ್ಲಿ ಸರಾಸರಿ ಶೇ.3.4ರಷ್ಟಿತ್ತು. ಅದು 2025ರ ಏಪ್ರಿಲ್-ನವೆಂಬರ್ ಹೊತ್ತಿಗೆ ಶೇ.3.3ಕ್ಕೆ ಕುಸಿದಿದೆ. ಇದು ಹ.ವ. 2006 ಹ.ವ.2011ರ ಅವಧಿಯಲ್ಲಿದ್ದ ಶೇ.8.4ಕ್ಕಿಂತ ಅತ್ಯಂತ ಕೆಳಮಟ್ಟದಲ್ಲಿದೆ.
ಈ ಎರಡೂ ಅಂಶಗಳು ಕಡಿಮೆ ಬಳಕೆ ಬೇಡಿಕೆಯನ್ನು ಪ್ರತಿಫಲಿಸುತ್ತವೆ. ಇದೇ ಕಾರಣಕ್ಕೆ ಹಣಕಾಸು ಸಚಿವರು 2025ರ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿ ಮತ್ತು 2025 ಸೆಪ್ಟೆಂಬರ್ ತಿಂಗಳಿನಿಂದ ಜಿಎಸ್ಟಿ ದರ ಕಡಿತಗಳನ್ನು ಘೋಷಣೆ ಮಾಡಿದ್ದಾರೆ.
ಇ) ಸಿಂಗರಿಸಿದ ಬೆಳವಣಿಗೆಯ ಅಂಕಿಅಂಶಗಳು ("ಗ್ಯಾಂಗ್ಬಸ್ಟರ್" ಬೆಳವಣಿಗೆ) ಯಾರನ್ನೂ ಮರುಳು ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ, ನಿವ್ವಳ ಎಫ್ಡಿಐ ಒಳಹರಿವು ಕುಸಿಯುತ್ತಿದೆ; ಲಾಭವನ್ನು ಹಿಂಪಡೆಯುವುದು ಮತ್ತು ಬಂಡವಾಳ ಹಿಂತೆಗೆತದ ಪ್ರಮಾಣ ಹೆಚ್ಚುತ್ತಿದೆ. ಇದರೊಂದಿಗೆ ಭಾರತೀಯ ಕಂಪನಿಗಳು ವಿದೇಶಗಳಲ್ಲಿ ಮಾಡುವ ಹೂಡಿಕೆಯೂ ಹೆಚ್ಚಾಗುತ್ತಿದೆ. ಇಲ್ಲಿ ನೀಡಲಾದ ಗ್ರಾಫ್ಗಳು ಈ ಪ್ರವೃತ್ತಿಗಳ ಕಡೆಗೆ ಬೊಟ್ಟು ಮಾಡುತ್ತವೆ.
(ಎಫ್.ಡಿ.ಐ ಮತ್ತು ಓಎಫ್.ಡಿ.ಐ ಹರಿವು- ಅಮೆರಿಕ ಡಾಲರ್-ನಲ್ಲಿ)
1) ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು ಕೂಡ ನಿರ್ಗಮನದ ಹಾದಿಯಲ್ಲಿದ್ದಾರೆ. ಅವರು 2025ರ ಕ್ಯಾಲೆಂಡರ್ ವರ್ಷದಲ್ಲಿ 12 ಶತಕೋಟಿ ಡಾಲರ್ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ ಮತ್ತು ಈ ತಿಂಗಳ ಮೊದಲ 16 ದಿನಗಳಲ್ಲಿಯೇ ಇನ್ನೂ 2 ಶತಕೋಟಿ ಡಾಲರ್ ಹಣವನ್ನು ಮರಳಿ ಪಡೆದಿದ್ದಾರೆ.
2) ಇನ್ನೂ ಕಳವಳಕಾರಿ ಸಂಗತಿ ಎಂದರೆ ಗೃಹ ವಲಯದ ಬಂಡವಾಳ ಹೂಡಿಕೆಯಲ್ಲಿನ ತೀವ್ರ ಕುಸಿತ. ಇದು ಬಂಡವಾಳ ವೆಚ್ಚದ ಅತಿದೊಡ್ಡ ಭಾಗವಾಗಿದ್ದು, ಹ.ವ.2012ರಿಂದ ಹ.ವ. 2024ರ ಅವಧಿಯಲ್ಲಿ ಸರಾಸರಿ ಶೇ.40 ರಷ್ಟಿದೆ. ಇದಕ್ಕೆ ಹೋಲಿಸಿದರೆ, ಖಾಸಗಿ ಕಾರ್ಪೊರೇಟ್ ವಲಯದ ಪಾಲು ಕೇವಲ ಶೇ 36.3 ರಷ್ಟಿದೆ. ಗೃಹ ವಲಯವು ಸಾಮಾನ್ಯವಾಗಿ ವಸತಿ, ಕೃಷಿ ಭೂಮಿ ಮತ್ತು ಪರಿಕರಗಳು, ಜಾನುವಾರು, ಮೀನುಗಾರಿಕೆ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತವೆ.
ದಶಕಗಳಿಂದ, ವಾರ್ಷಿಕ ಆರ್ಥಿಕ ಸಮೀಕ್ಷೆಗಳು ಖಾಸಗಿ ಕಾರ್ಪೊರೇಟ್ ವಲಯದ ಬಂಡವಾಳ ಹೂಡಿಕೆಯನ್ನು ಗೃಹ ವಲಯದೊಂದಿಗೆ ಸೇರಿಸಿ 'ಖಾಸಗಿ ವಲಯದ ಬಂಡವಾಳ ವೆಚ್ಚ' ಎಂದು ತೋರಿಸುತ್ತಿದ್ದವು. ಇದು ಕಾರ್ಪೊರೇಟ್ ವಲಯದ ಕಡಿಮೆ ಹೂಡಿಕೆಯ ಅಂಕಿಅಂಶಗಳನ್ನು ಮರೆಮಾಚಲು ಸಹಕಾರಿಯಾಗಿತ್ತು.
ಬಜೆಟ್ ಏನು ಮಾಡಬಲ್ಲದು?
ವಾಸ್ತವವಾಗಿ, ಬಜೆಟ್ ಮೂಲಕ ಬಹಳಷ್ಟು ಕೆಲಸಗಳನ್ನು ಮಾಡಬಹುದು.
1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್ ಅವರು, ಒಂದು ಬಜೆಟ್ ಇಡೀ ಅರ್ಥ ವ್ಯವಸ್ಥೆಯನ್ನು ಹೇಗೆ ಬದಲಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದರು. ರಾಜಕೀಯ ಮತ್ತು ವ್ಯಾಪಾರ ವಲಯದ ನಡುವಿನ ಅನೈತಿಕ ಸಂಬಂಧವು ತೀವ್ರಗೊಂಡು, ಸಂಪತ್ತನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪರಸ್ಪರ ಪೂರಕವಾಗಿ ಕೆಲಸ ಮಾಡುವಾಗ ಅಂತಹ ಬದಲಾವಣೆಯನ್ನು ಆಲೋಚಿಸುವುದು ಕಷ್ಟ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅದು ಸಾಧ್ಯ.
ಆರ್ಥಿಕತೆಯನ್ನು ಮತ್ತು ಬಂಡವಾಳ ಹೂಡಿಕೆಗೆ ವೇಗ ತುಂಬಲು ಇರುವ ಕೆಲವು ಪರಿವರ್ತನಾ ನೀತಿ ಆಯ್ಕೆಗಳು ಇಲ್ಲಿವೆ:
1) ನೈಜ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಿ: ಯಾವಾಗ ನೈಜವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತದೆಯೋ, ಆಗ ಖಾಸಗಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯು ಅನಪೇಕ್ಷಿತವಾಗಿ ಹರಿಯುತ್ತದೆ.
2) ಗುಣಮಟ್ಟದ ಉದ್ಯೋಗಗಳು ಮತ್ತು ಪ್ರೋತ್ಸಾಹಕಗಳ ಮೂಲಕ ಕುಟುಂಬದ ಆದಾಯ ಮತ್ತು ಉಳಿತಾಯವನ್ನು ಹೆಚ್ಚಿಸಿ: ಇದರಿಂದ ಗೃಹ ವಲಯದ ಬಂಡವಾಳ ಹೂಡಿಕೆ ಪುನರುಜ್ಜೀವನಕ್ಕೆ ದಾರಿಯಾಗುತ್ತದೆ ಮತ್ತು ಕುಟುಂಬಗಳ ಉಳಿತಾಯವು ದೀರ್ಘಕಾಲೀನ ಹೂಡಿಕೆಗಳಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸುತ್ತದೆ.
3) ವಿಶ್ವಾಸವನ್ನು ಗೆಲ್ಲಲು ಮತ್ತು ಹೊಸ ಹೂಡಿಕೆಗಳಿಗೆ ಅವಕಾಶವನ್ನು ನೀಡಲು ಮುಕ್ತ ಮತ್ತು ನ್ಯಾಯಸಮ್ಮತ ಪೈಪೋಟಿ ನೀಡುವಂತೆ ನೀತಿಗಳನ್ನು ಮರುರೂಪಿಸಿ: ಅತಿರೇಕದ ಸ್ವಜಪಕ್ಷಪಾತದಿಂದ ಕೂಡಿದ ಬಂಡವಾಳಶಾಹಿಯು ಸ್ಪರ್ಧೆಯನ್ನು ಕೊಲ್ಲುತ್ತದೆ, ಹಾಗಾಗಿ ಇದನ್ನು ಮೊದಲ ಅವಕಾಶದಲ್ಲೇ ಕೈಬಿಡಬೇಕು.
4) ಕೆಲವು ವ್ಯವಹಾರಗಳು ಬೆಳೆಯಲು ಅಥವಾ ಜಾಗತಿಕವಾಗಿ ಸ್ಪರ್ಧಿಸಲು ಹಣಕಾಸಿನ ಪ್ರೋತ್ಸಾಹಕಗಳ ಅಗತ್ಯವಿರಬಹುದು, ಆದರೆ ಇವುಗಳು ಕಟ್ಟುನಿಟ್ಟಾದ ಷರತ್ತುಗಳಿಗೆ ಒಳಪಟ್ಟಿರಬೇಕು ಮತ್ತು ಫಲಿತಾಂಶಗಳ ಜೊತೆಗೆ ಜೋಡಿಸಿರಬೇಕು: ದಕ್ಷಿಣ ಕೊರಿಯಾದ ಅರ್ಥಶಾಸ್ತ್ರಜ್ಞ ಹಾ-ಜೂನ್ ಚಾಂಗ್ ಅವರು 2025ರ ನವೆಂಬರ್ ತಿಂಗಳಲ್ಲಿ ವಿವರಿಸಿದಂತೆ, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಯಶಸ್ವಿಯಾದರೂ ಭಾರತವು ಈ ವಿಷಯದಲ್ಲಿ ವಿಫಲವಾಯಿತು. ಉದಾಹರಣೆಗೆ: 2021ರ ಬಜೆಟ್ನಲ್ಲಿ ರೂ. 1,97 ಲಕ್ಷ ಕೋಟಿ ವೆಚ್ಚದ ಸ್ವರೂಪದೊಂದಿಗೆ ಪಿ.ಎಲ್.ಐ ಯೋಜನೆಗಳನ್ನು ಪ್ರಾರಂಭ ಮಾಡಲಾಯಿತು, ಆದರೆ ಐದು ವರ್ಷಗಳು ಕಳೆದು ಹೋದರೂ ಉದ್ದೇಶಿತ 'ಮೇಲ್ವಿಚಾರಣಾ ಡ್ಯಾಶ್ಬೋರ್ಡ್' ಬಗ್ಗೆ ಯಾವುದೇ ಸುಳಿವು ಇಲ್ಲ.
5) ನೀತಿ ಮತ್ತು ಆಚರಣೆಗಳಲ್ಲಿ 'ಪ್ರತಿಫಲದ ನಿರೀಕ್ಷೆಯ' ಶಂಕೆ: 2024ರ ಮಾರ್ಚ್ ತಿಂಗಳಲ್ಲಿ ಚುನಾವಣಾ ಬಾಂಡ್ಗಳ ವಿವರಗಳು ಹೊರಬಂದಾಗ ಮತ್ತು ೨೪ರಲ್ಲಿ ಹಲವು ಸೆಮಿಕಂಡಕ್ಟರ್ ಯೋಜನೆಗಳಿಗೆ ಸಬ್ಸಿಡಿ ಅನುಮೋದನೆ ಮಾಡಿದಾಗ ಇಂತಹ ಶಂಕೆಗಳು ವ್ಯಕ್ತವಾಗಿದ್ದವು. ಇದು ನಿಶ್ಚಿತವಾಗಿ ಹೊಸ ಹೂಡಿಕೆಗೆ ಅಡ್ಡಿಯಾಗುತ್ತದೆ. ರಾಜಕೀಯ ಪಕ್ಷಗಳಿಗೆ ನೇರ ಕಾರ್ಪೊರೇಟ್ ಧನಸಹಾಯ ನೀಡುವುದನ್ನು ಕೈಬಿಡಬೇಕು, ಏಕೆಂದರೆ ಇದು ಜಾಗತಿಕ ಮಾನದಂಡವೂ ಅಲ್ಲ ಮತ್ತು ಉತ್ತಮ ಪದ್ಧತಿಯೂ ಅಲ್ಲ. ಸ್ವೀಡನ್ ಮೂಲದ 'ಇಂಟರ್ನ್ಯಾಷನಲ್ ಐಡಿಯಾ' ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 181 ದೇಶಗಳಲ್ಲಿ 124 ದೇಶಗಳು ವಿವಿಧ ರೂಪಗಳಲ್ಲಿ ಸಾರ್ವಜನಿಕ ಧನಸಹಾಯವನ್ನು ಅವಲಂಬಿಸಿವೆ. ಭಾರತವು ತನ್ನ ಪರಿಸ್ಥಿತಿಗೆ ಸೂಕ್ತವಾದ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬಹುದು.
6) ನಿಯಂತ್ರಕ ಅಸಮರ್ಥತೆಗಳನ್ನು ಸರಿಪಡಿಸಿ: ಮೂಲಸೌಕರ್ಯ ಯೋಜನೆಗಳ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಶೇಕಡಾ 51ರಷ್ಟು ಯೋಜನೆಗಳು ಆರಂಭವಾಗದೇ ಇರಲು ಆಡಳಿತಾತ್ಮಕ ವಿಳಂಬಗಳೇ ಕಾರಣ. ಇದು ಹೂಡಿಕೆಗೆ ದೊಡ್ಡ ಅಡಚಣೆಯಾಗಿದೆ.
ವಾಸ್ತವ ಸಂಗತಿಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇಡೀ ಅಧಿಕೃತ ದತ್ತಾಂಶ ವ್ಯವಸ್ಥೆಯನ್ನು ಮರುರೂಪಿಸಬೇಕು. ವಿಶ್ವಾಸಾರ್ಹವಲ್ಲದ ಅಂಕಿಅಂಶಗಳು ಯಾವತ್ತೂ ಪ್ರಾಮಾಣಿಕ ಹೂಡಿಕೆಗೆ ಅಡ್ಡಿಯಾಗುತ್ತವೆ.

