
Government Jobs|ನೇಮಕಾತಿಗೆ ಗ್ರೀನ್ ಸಿಗ್ನಲ್: ಆದರೂ ಆಕಾಂಕ್ಷಿಗಳ ಮುಗಿಯದ ಗೊಂದಲ
ಒಳ ಮೀಸಲಾತಿ ಜಾರಿಗಾಗಿ ದಶಕಗಳಿಂದ ರಸ್ತೆಗಿಳಿದು ಹೋರಾಟ ಮಾಡುತ್ತಿರುವ ದಲಿತ ಸಮುದಾಯಗಳು ಶೇ.50 ಮೀಸಲಿನಡಿ ನೇಮಕ ಮಾಡುವ ಸರ್ಕಾರದ ನಡೆಯನ್ನು ಸುಲಭವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಯುವಜನತೆಯ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,432 ಹುದ್ದೆಗಳನ್ನು ತಕ್ಷಣದಿಂದಲೇ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ಇಲ್ಲಿಗೆ ಎಲ್ಲ ಸಮಸ್ಯೆ ಪರಿಹಾರವಾಗಿಲ್ಲ. ಬದಲಾಗಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಲಿದ್ದು, ನೇಮಕದ ಗೊಂದಲ ಮುಂದುವರಿಯಲಿವೆ.
ಕೇವಲ ಎರಡು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಬೃಹತ್ ಮಟ್ಟದಲ್ಲಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಖುದ್ದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು, ಇದೀಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಆದರೆ, ಮೇಲ್ನೋಟಕ್ಕೆ ಇದೊಂದು ಬಂಪರ್ ಕೊಡುಗೆಯಂತೆ ಕಂಡರೂ, ಈ ನೇಮಕಾತಿ ಪ್ರಕ್ರಿಯೆಯ ಹಾದಿ ಅಂದುಕೊಂಡಷ್ಟು ಸುಗಮವಾಗಿಲ್ಲ. ಮೀಸಲಾತಿ ಹಾಗೂ ರೋಸ್ಟರ್ ಕುರಿತಾದ ಕಾನೂನಾತ್ಮಕ ಗೊಂದಲಗಳು ಈ ಬೃಹತ್ ನೇಮಕಾತಿಗೆ ಹೊಸ ಕಂಟಕ ತಂದೊಡ್ಡಲಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಶೇ. 50ರತ್ತ ಮರಳಿದ ಸರ್ಕಾರ
ರಾಜ್ಯದಲ್ಲಿ ಮೀಸಲಾತಿ ಹೆಚ್ಚಳದ ವಿಚಾರ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದೆ. 2022ರಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರ, ಪರಿಶಿಷ್ಟ ಜಾತಿಯ (ಎಸ್‌ಸಿ) ಮೀಸಲಾತಿಯ ಪ್ರಮಾಣವನ್ನು ಶೇಕಡಾ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿಯನ್ನು ಶೇಕಡಾ 3ರಿಂದ 7ಕ್ಕೆ ಏರಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಈ ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆ ನೀಡುವ ಉದ್ದೇಶದಿಂದ 'ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022' ಅನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಮೀಸಲಾತಿ ಮಿತಿ ಶೇಕಡಾ 56ಕ್ಕೆ ಏರಿಕೆಯಾಗಿತ್ತು.
ಈ ಮೀಸಲಾತಿ ಮಿತಿ ಹೆಚ್ಚಳವನ್ನು ಪ್ರಶ್ನಿಸಿ ಹಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಶೇಕಡಾ 56ರ ಮೀಸಲಾತಿ ಜಾರಿಗೆ ಮಧ್ಯಂತರ ತಡೆ ನೀಡಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪಿನ ಅನ್ವಯ, ಶೇಕಡಾ 50ರ ಮೀಸಲಾತಿಯ ಮಿತಿಯೊಳಗೇ (ಎಸ್‌ಸಿ- 15%, ಎಸ್‌ಟಿ- 3%) ಸರ್ಕಾರಿ ನೇಮಕಾತಿಗಳನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದೀಗ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಕಾಯುತ್ತಾ ಕೂತರೆ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ, ಸರ್ಕಾರ ಅನಿವಾರ್ಯವಾಗಿ ಹಳೆಯ ಶೇಕಡಾ 50ರ ಮೀಸಲಾತಿಯಡಿಯಲ್ಲೇ ಈ 56,432 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ.
ಸ್ವಾಭಿಮಾನಿ ಮಾದಿಗ ಸಂಘಟನೆಗಳ ಒಕ್ಕೂಟದ ಸಂಚಾಲಕ ಕೇಶವ ಮೂರ್ತಿ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿ, "ರಾಜ್ಯ ಸರ್ಕಾರದ ನಿರ್ಧಾರವು ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹಳೆಯ ಸ್ಥಿತಿಗೆ ದೂಡಿದಂತಿದೆ. ಇದೊಂದು ಅಪೂರ್ಣ ಮೀಸಲಾತಿಯಾಗಿದ್ದು, ಶಿಕ್ಷಣ, ಉದ್ಯೋಗ, ಮುಂಬಡ್ತಿ ಹಾಗೂ ನೇರ ನೇಮಕಾತಿಗೂ ತೊಂದರೆಯಾಗಲಿದೆ. ಒಳ ಮೀಸಲಾತಿಯ ವರ್ಗೀಕರಣವನ್ನು ಗಮನಿಸಿದರೆ, ಇದು ಸದಾಶಿವ ಆಯೋಗದ ವರದಿಯಂತಿದ್ದರೂ ಜಾತಿಗಳನ್ನು ಆ ಕಡೆ, ಈ ಕಡೆ ಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗಿದೆ. ಇದು ಪರಿಶಿಷ್ಟರಿಗೆ ಮಾಡಿದ ಅನ್ಯಾಯ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸ ರೋಸ್ಟರ್; ಮತ್ತೆ ವಿಳಂಬ?
ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ, ಇಲಾಖೆಗಳ ಮುಂದಿರುವ ಅತಿ ದೊಡ್ಡ ಮತ್ತು ಸಂಕೀರ್ಣ ಸವಾಲೆಂದರೆ 'ರೋಸ್ಟರ್' ನಿಗದಿ. ತಿಂಗಳುಗಳ ಹಿಂದೆ ರಾಜ್ಯದಲ್ಲಿ ಶೇಕಡಾ 56ರ ಮೀಸಲಾತಿ ಆಧಾರದ ಮೇಲೆ ಹಾಗೂ ಒಳ ಮೀಸಲಾತಿಯ ನಿರೀಕ್ಷೆಯಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳು ತಮ್ಮ ಹುದ್ದೆಗಳಿಗೆ ಹೊಸ ರೋಸ್ಟರ್ ಅನ್ನು ಸಿದ್ಧಪಡಿಸಿಟ್ಟುಕೊಂಡಿದ್ದವು.
ಈಗ ನ್ಯಾಯಾಲಯದ ಸೂಚನೆಯಂತೆ ದಿಢೀರನೆ ಶೇಕಡಾ 50ರ ಮೀಸಲಾತಿಯಡಿ ನೇಮಕಾತಿ ನಡೆಯುವುದರಿಂದ, ಈ ಹಳೆಯ ರೋಸ್ಟರ್ ಆಧಾರದ ಮೇಲೆ ನೇಮಕಾತಿ ಅಧಿಸೂಚನೆ ಹೊರಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಪ್ರತಿಯೊಂದು ಇಲಾಖೆಯು ಮತ್ತೆ ಮೊದಲಿನಿಂದ ಶೇಕಡಾ 50ರ ಮೀಸಲಾತಿ ಮಿತಿಗೆ (ಎಸ್‌ಸಿ-15%) ಅನುಗುಣವಾಗಿ ಪರಿಷ್ಕೃತ ರೋಸ್ಟರ್ ಅನ್ನು ಹೊಸದಾಗಿ ಸಿದ್ಧಪಡಿಸಬೇಕಿದೆ.
56 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಈ ಬೃಹತ್ ಕಸರತ್ತು ನಡೆಸಿ, ತಾಂತ್ರಿಕ ದೋಷಗಳಿಲ್ಲದಂತೆ ಹೊಸ ರೋಸ್ಟರ್ ಸಿದ್ಧಪಡಿಸಿ, ಮತ್ತೆ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಅಂತಿಮ ಅಧಿಸೂಚನೆ ಹೊರಡಿಸಲು ಇಲಾಖೆಗಳಿಗೆ ಸಾಕಷ್ಟು ಸಮಯ ಹಿಡಿಯುವ ಸಾಧ್ಯತೆಯಿದೆ. ಇದು ಉದ್ಯೋಗಾಕಾಂಕ್ಷಿಗಳ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸಬಹುದು.
ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ?
ಈ 56,432 ಹುದ್ದೆಗಳ ನೇಮಕಾತಿಯಲ್ಲಿ ಸದ್ಯಕ್ಕೆ ಯಾವುದೇ ರೀತಿಯ 'ಒಳ ಮೀಸಲಾತಿ' ಜಾರಿ ಇರುವುದಿಲ್ಲ ಎಂದು ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಒಳ ಮೀಸಲಾತಿ ಜಾರಿಗೆ ತರಲು ಮತ್ತಷ್ಟು ಕಾಲಾವಕಾಶ ಹಾಗೂ ಕಾನೂನು ಪ್ರಕ್ರಿಯೆಗಳ ಅಗತ್ಯವಿರುವುದರಿಂದ, ಈ ನೇಮಕಾತಿಯನ್ನು ಹಳೆಯ ಪದ್ಧತಿಯಂತೆಯೇ ನಡೆಸಲು ನಿರ್ಧರಿಸಲಾಗಿದೆ.
ಸರ್ಕಾರದ ಈ ನಿರ್ಧಾರವೇ ಹೊಸ ಕಾನೂನು ಸಮರಕ್ಕೆ ನಾಂದಿ ಹಾಡುವ ಅಪಾಯವಿದೆ. ಒಳ ಮೀಸಲಾತಿ ಜಾರಿಗಾಗಿ ದಶಕಗಳಿಂದ ರಸ್ತೆಗಿಳಿದು ಹೋರಾಟ ಮಾಡುತ್ತಿರುವ ದಲಿತ ಸಮುದಾಯಗಳು ಸರ್ಕಾರದ ಈ ನಡೆಯನ್ನು ಸುಲಭವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಅಲ್ಲದೆ, 2022ರಲ್ಲಿ ತಮಗೆ ನೀಡಲಾಗಿದ್ದ ಶೇಕಡಾ 17ರ ಮೀಸಲಾತಿ ಕೈಬಿಟ್ಟು, ಮತ್ತೆ ಹಳೆಯ ಶೇಕಡಾ 15ರ ಮೀಸಲಾತಿಯಡಿಯೇ ಲಕ್ಷಾಂತರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದರೆ, ದಲಿತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಲಿವೆ.
ಅಧಿಸೂಚನೆ ಪ್ರಕಟಗೊಂಡ ತಕ್ಷಣವೇ ಮೀಸಲಾತಿ ಕಡಿತ ಹಾಗೂ ಒಳ ಮೀಸಲಾತಿ ಜಾರಿಯಾಗದ ವಿಚಾರ ಮುಂದಿಟ್ಟುಕೊಂಡು ಈ ಸಂಘಟನೆಗಳು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳೇ ಹೆಚ್ಚು. ಒಂದು ವೇಳೆ ಈ ನೇಮಕಾತಿ ಪ್ರಕ್ರಿಯೆ ವಿರುದ್ಧ ಯಾರಾದರೂ ತಡೆಯಾಜ್ಞೆ ತಂದರೆ, ಈ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಮತ್ತೆ ತ್ರಿಶಂಕು ಸ್ಥಿತಿಗೆ ತಲುಪಿ, ವರ್ಷಗಳ ಕಾಲ ನನೆಗುದಿಗೆ ಬೀಳುವ ಭೀತಿ ಎದುರಾಗಿದೆ.
ಷರತ್ತುಬದ್ಧ ನೇಮಕ?
ಸದ್ಯ ಹೈಕೋರ್ಟ್‌ನಲ್ಲಿ ಮೀಸಲಾತಿ ಮಿತಿ ಹೆಚ್ಚಳ ಹಾಗೂ ಒಳ ಮೀಸಲಾತಿಯ ವಿಚಾರಗಳೆರಡೂ ವಿಚಾರಣಾ ಹಂತದಲ್ಲಿವೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕೆಂದು ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರದಿಂದ ಇದುವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.
ಸದ್ಯಕ್ಕೆ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಅಸ್ತಿತ್ವದಲ್ಲಿರುವ ಕಾನೂನಿನಂತೆಯೇ ಷರತ್ತುಬದ್ಧವಾಗಿ ನೇಮಕಾತಿ ಶುರು ಮಾಡಲು ಸರ್ಕಾರ ಮುಂದಾಗಿದೆ. ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಈ ವಿಚಾರ ಅಂತಿಮವಾಗಿ ಇತ್ಯರ್ಥವಾದ ಸಂದರ್ಭದಲ್ಲಿ, ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಷರತ್ತನ್ನು ಈ ನೇಮಕಾತಿಗೆ ವಿಧಿಸಲಾಗಿದೆ. ಒಟ್ಟಾರೆಯಾಗಿ, ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಜನತೆಗೆ ನೇಮಕಾತಿಯ ಬಾಗಿಲು ತೆರೆದಿದೆಯಾದರೂ, ಮೀಸಲಾತಿಯ ಈ ಕಾನೂನು ಕಗ್ಗಂಟುಗಳು ಅವರ ಭವಿಷ್ಯದ ಹಾದಿಗೆ ಅಡ್ಡ ಬರಲಿವೆಯೇ ಎಂಬ ಪ್ರಶ್ನೆ ಎದುರಾಗಿದೆ.

