ಜಗತ್ತಿನ ಗಣ್ಯರ ಮುಖವಾಡ ಕಳಚಿದ 'ಎಪ್ಸ್ಟೀನ್ ಫೈಲ್ಸ್': ಕರಾಳ ಲೋಕದ ಸ್ಫೋಟಕ ಸತ್ಯಗಳು!
ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣದ 30 ಲಕ್ಷ ಪುಟಗಳ ಕಡತಗಳು ಈಗ ಬಹಿರಂಗಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಅನಿಲ್ ಅಂಬಾನಿ, ಅನುರಾಗ್ ಕಶ್ಯಪ್ ಸೇರಿದಂತೆ ಪ್ರಮುಖರ ಹೆಸರಿರುವ ಈ ಹಗರಣದ ಅಸಲಿ ಸತ್ಯ ಇಲ್ಲಿದೆ.

ಎಪ್ಸ್ಟೀನ್ ಫೈಲ್ಸ್… ಸದ್ಯ ಜಗತ್ತಿನ ಗಣ್ಯಾತಿಗಣ್ಯರ ನಿದ್ದೆಗೆಡಿಸುತ್ತಿರುವ ಪ್ರಕರಣ. ಅದೆಷ್ಟೋ ಜಗತ್ತಿನ ಅತಿ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಮತ್ತು ಪ್ರಭಾವಿ ಗಣ್ಯರ ಮುಖವಾಡವನ್ನು ಕಳಚುತ್ತಿರುವು ಆ 'ಕರಾಳ ರಹಸ್ಯ' ಈಗ ಅಧಿಕೃತವಾಗಿ ಹೊರಬಂದಿದೆ. ಇದೊಂದು ಕೇವಲ ಲೈಂಗಿಕ ಹಗರಣವಷ್ಟೇ ಅಲ್ಲ, ಜಗತ್ತಿನ ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿ ಹೊಂದಿದ್ದ ವ್ಯಕ್ತಿಗಳ ಮುಖವಾಡ ಕಳಚಿಬಿದ್ದಿದೆ. 30 ಲಕ್ಷಕ್ಕೂ ಹೆಚ್ಚು ಪುಟಗಳು, ಸಾವಿರಾರು ವಿಡಿಯೋಗಳು… ಪ್ರಕರಣದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತಿದೆ. ಅಧಿಕಾರ, ಹಣ ಮತ್ತು ಅಪರಾಧದ ಒಂದು ಭೀಕರ ಜಾಲ ಈಗ ಜಗತ್ತಿನ ಕಣ್ಣೆದುರು ಬಿಚ್ಚಿಕೊಂಡಿದೆ. ಅಮೆರಿಕದ ಮಾಜಿ, ಹಾಲಿ ಅಧ್ಯಕ್ಷರಿಂದ ಹಿಡಿದು ಜಾಗತಿಕ ಉದ್ಯಮಿಗಳವರೆಗೆ ಎಲ್ಲರ ಹೆಸರೂ ಈ ಹಗರಣದಲ್ಲಿ ಕೇಳಿಬರುತ್ತಿದೆ. ಈ ಕರಾಳ ಜಗತ್ತಿನ ಅಸಲಿ ಆಟದಲ್ಲಿ ಭಾರತದ ಹೆಸರೂ ತಳುಕು ಹಾಕಿಕೊಂಡಿರುವುದು ಆಘಾತಕಾರಿ ಸಂಗತಿಯಾಗಿದೆ. ಹಾಗಿದ್ದರೆ ಈ 'ಎಪ್ಸ್ಟೀನ್ ಫೈಲ್ಸ್'ನಲ್ಲಿ ಅಡಗಿರುವ ಆ ಸ್ಫೋಟಕ ಸತ್ಯಗಳೇನು? ನಿಗೂಢ ದ್ವೀಪದಲ್ಲಿ ನಡೆಯುತ್ತಿದ್ದ ಆ 'ಸೀಕ್ರೆಟ್ ಪಾರ್ಟಿ'ಗಳ ರಹಸ್ಯವೇನು? ಇತ್ತೀಚೆಗೆ ಬಿಡುಗಡೆಯಾದ ಎಪ್ಸ್ಟೀನ್ ಫೈಲ್ಸ್ ಇಡೀ ಜಗತ್ತನ್ನೇ ಯಾಕೆ ಬೆಚ್ಚಿಬೀಳಿಸುತ್ತಿವೆ? ಇಲ್ಲಿದೆ ಮಾಹಿತಿ
ಏನಿದು 'ಎಪ್ಸ್ಟೀನ್ ಫೈಲ್ಸ್'?
'ಎಪ್ಸ್ಟೀನ್ ಫೈಲ್ಸ್' ಎಂದರೆ ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನಡೆಸುತ್ತಿದ್ದ ಮಾನವ ಸಾಗಣೆ ಮತ್ತು ಲೈಂಗಿಕ ಹಗರಣಗಳಿಗೆ ಸಂಬಂಧಿಸಿದ ತನಿಖಾ ದಾಖಲೆಗಳ ಬೃಹತ್ ಸಂಗ್ರಹ. 2026ರ ಆರಂಭದಲ್ಲಿ ಈ ಕಡತಗಳು ಬಿಡುಗಡೆಯಾಗಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದಕ್ಕೂ ಮುನ್ನ ಒಬ್ಬ ಸಾಮಾನ್ಯ ಗಣಿತ ಶಿಕ್ಷಕನಾಗಿದ್ದ ಜೆಫ್ರಿ ಇಡೀ ಅಮೆರಿಕ ಅಧ್ಯಕ್ಷರಿಂದ ಹಿಡಿದು ಜಗತ್ತಿನ ಘಟಾನುಘಟಿ ನಾಯಕರನ್ನು ತನ್ನ ಬೆರಳ ತುದಿಯನ್ನು ಕುಣಿಸುವಷ್ಟು ಪ್ರಬಲನಾಗಿ ಬೆಳೆದದ್ದು ಹೇಗೆ ಎಂಬುದನ್ನು ನೋಡಲೇ ಬೇಕು.
ಅಷ್ಟಕ್ಕೂ ಯಾರು ಈ ಶಿಶುಕಾಮಿ ಜೆಫ್ರಿ?
ನ್ಯೂಯಾರ್ಕ್‌ನಲ್ಲಿ ಹುಟ್ಟಿ ಬೆಳೆದ ಜೆಫ್ರಿ ಎಪ್ಸ್ಟೀನ್, 1970ರ ದಶಕದ ಮಧ್ಯಭಾಗದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಶಿಕ್ಷಕನಾಗಿ ವೃತ್ತಿ ಆರಂಭಿಸಿದನು. ವಿಶೇಷವೆಂದರೆ, ಆತ ಪದವಿ ಶಿಕ್ಷಣವನ್ನೂ ಪೂರ್ಣಗೊಳಿಸಿರಲಿಲ್ಲ. ಆದರೆ, ತನ್ನ ಪ್ರತಿಭೆಯಿಂದ ಒಬ್ಬ ವಿದ್ಯಾರ್ಥಿಯ ತಂದೆಯನ್ನು ಮೆಚ್ಚಿಸಿ, ವಾಲ್ ಸ್ಟ್ರೀಟ್‌ನ ಹೂಡಿಕೆ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡನು. ನಾಲ್ಕೇ ವರ್ಷಗಳಲ್ಲಿ ಅಲ್ಲಿ ಪಾಲುದಾರನಾಗಿ ಬೆಳೆದ ಆತ, 1982ರಲ್ಲಿ ತನ್ನದೇ ಆದ ಸ್ವಂತ ಕಂಪನಿಯನ್ನು ಸ್ಥಾಪಿಸಿದನು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಜೆಫ್ರಿ
ಸಂಪತ್ತು ಮತ್ತು ಐಷಾರಾಮಿ ಜೀವನ
ಅಲ್ಪಕಾಲದಲ್ಲೇ ಕೋಟ್ಯಂತರ ಡಾಲರ್ ಮೌಲ್ಯದ ಆಸ್ತಿ ನಿರ್ವಹಣೆ ಮಾಡುತ್ತಾ ದೊಡ್ಡ ಯಶಸ್ಸು ಕಂಡ ಎಪ್ಸ್ಟೀನ್, ಫ್ಲೋರಿಡಾದಲ್ಲಿ ಬೃಹತ್ ಬಂಗಲೆ, ನ್ಯೂ ಮೆಕ್ಸಿಕೋದಲ್ಲಿ ಫಾರ್ಮ್ ಹೌಸ್ ಮತ್ತು ನ್ಯೂಯಾರ್ಕ್‌ನಲ್ಲಿ ಅತಿದೊಡ್ಡ ಖಾಸಗಿ ಮನೆಯನ್ನು ಖರೀದಿಸಿದನು. ಈ ಹಂತದಲ್ಲಿ ಸೆಲೆಬ್ರಿಟಿಗಳು, ಕಲಾವಿದರು ಮತ್ತು ರಾಜಕಾರಣಿಗಳೊಂದಿಗೆ ಆತನ ಒಡನಾಟ ಶುರುವಾಯಿತು.
ಡೊನಾಲ್ಡ್ ಟ್ರಂಪ್ ಜೊತೆ ಎಪ್ಸ್ಟೀನ್ ಸಂಬಂಧ
2002ರಲ್ಲಿ ನ್ಯೂಯಾರ್ಕ್ ಮ್ಯಾಗಜೀನ್‌ನೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, "ನನಗೆ ಜೆಫ್ 15 ವರ್ಷಗಳಿಂದ ಗೊತ್ತು. ಆತ ಒಬ್ಬ ಅದ್ಭುತ ವ್ಯಕ್ತಿ. ಆತನ ಜೊತೆ ಇರುವುದು ತುಂಬಾ ಮಜಾ ನೀಡುತ್ತದೆ. ನನಗಿಂತ ಹೆಚ್ಚಾಗಿ ಆತ ಸುಂದರ ಮಹಿಳೆಯರನ್ನು ಇಷ್ಟಪಡುತ್ತಾನೆ, ಅವರಲ್ಲಿ ಹಲವರು ಚಿಕ್ಕ ವಯಸ್ಸಿನವರು," ಎಂದು ಹೇಳಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ತನ್ನ ಮಾರ್-ಎ-ಲಾಗೊ ಕ್ಲಬ್‌ನ ಉದ್ಯೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಎಪ್ಸ್ಟೀನ್‌ನನ್ನು ಕ್ಲಬ್‌ನಿಂದ ಹೊರಹಾಕಿದ್ದಾಗಿ ಶ್ವೇತಭವನ ತಿಳಿಸಿತ್ತು.
ಇತರ ಪ್ರಭಾವಿ ಸ್ನೇಹಿತರು ಮತ್ತು ಹಗರಣಗಳು
ಎಪ್ಸ್ಟೀನ್ ಅನೇಕ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದನು (ಇದು ಆ ವ್ಯಕ್ತಿಗಳು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಪುರಾವೆಯಲ್. 2002ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ನಟ ಕೆವಿನ್ ಸ್ಪೇಸಿ ಅವರನ್ನು ಎಪ್ಸ್ಟೀನ್ ತನ್ನ ಖಾಸಗಿ ವಿಮಾನದಲ್ಲಿ ಆಫ್ರಿಕಾಕ್ಕೆ ಕರೆದೊಯ್ದಿದ್ದನು. 2003ರಲ್ಲಿ ಕುಖ್ಯಾತ ಚಿತ್ರ ನಿರ್ಮಾಪಕ ಹಾರ್ವೆ ವೇನ್‌ಸ್ಟೈನ್ ಜೊತೆ ಸೇರಿ ನ್ಯೂಯಾರ್ಕ್ ಮ್ಯಾಗಜೀನ್ ಖರೀದಿಸಲು ಎಪ್ಸ್ಟೀನ್ ಪ್ರಯತ್ನಿಸಿದ್ದನು. ಅಷ್ಟೇ ಅಲ್ಲದೇ ಮೈಕ್ರೋ ಸಾಫ್ಟ್ ಸಂಸ್ಥೆ ಸ್ಥಾಪಕ ಬಿಲ್ ಗೇಟ್ಸ್, ಪಾಪ್ ತಾರೆ ಮೈಕೆಲ್ ಜಾಕ್ಸನ್, ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ, ದಲೈ ಲಾಮ ಸೇರಿದಂತೆ ಅನೇಕರ ಉಲ್ಲೇಖಗಳು ಕಡತದಲ್ಲಿವೆ. ಅವರಿಗೆ ಸಂಬಂಧಿಸಿದ ಫೋಟೋಗಳೂ ಇವೆ.
ಪಾಪ್ ತಾರೆ ಮೈಕೆಲ್ ಜಾಕ್ಸನ್ ಜೊತೆ ಜೆಫ್ರಿ ಫೋಟೋ
ಈತನ ಅಸಲಿ ಮುಖ ಬಯಲಾಗಿದ್ದು ಹೇಗೆ?
2005ರಲ್ಲಿ 14 ವರ್ಷದ ಬಾಲಕಿಯ ಪೋಷಕರು ಫ್ಲೋರಿಡಾ ಪೊಲೀಸರಿಗೆ ನೀಡಿದ ದೂರಿನಿಂದ ಎಪ್ಸ್ಟೀನ್‌ನ ಕರಾಳ ಮುಖ ಬಯಲಿಗೆ ಬಂದಿತು. ಪೊಲೀಸರು ಆತನ ಪಾಮ್ ಬೀಚ್ ನಿವಾಸದ ಮೇಲೆ ದಾಳಿ ನಡೆಸಿದಾಗ, ಮನೆಯಾದ್ಯಂತ ಅಪ್ರಾಪ್ತ ಬಾಲಕಿಯರ ಫೋಟೋಗಳು ಪತ್ತೆಯಾದವು.
ಕೇವಲ ಒಬ್ಬ ಬಾಲಕಿಯಲ್ಲ, ಸುಮಾರು 50ಕ್ಕೂ ಹೆಚ್ಚು ಹುಡುಗಿಯರು ಎಪ್ಸ್ಟೀನ್ ವಿರುದ್ಧ ಒಂದೇ ರೀತಿಯ ಲೈಂಗಿಕ ದೌರ್ಜನ್ಯದ ದೂರುಗಳನ್ನು ನೀಡಿದ್ದರು. ಪಾಮ್ ಬೀಚ್ ಪೊಲೀಸ್ ಮುಖ್ಯಸ್ಥ ಮೈಕೆಲ್ ರೈಟರ್ ಅವರ ಪ್ರಕಾರ, "ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಬ್ಬ ಹುಡುಗಿಯ ನಡುವಿನ ವಿವಾದವಾಗಿರಲಿಲ್ಲ. ಇಲ್ಲಿ 50ಕ್ಕೂ ಹೆಚ್ಚು ಸಂತ್ರಸ್ತೆಯರಿದ್ದರು ಮತ್ತು ಎಲ್ಲರೂ ಒಂದೇ ರೀತಿಯ ಕರಾಳ ಕಥೆಯನ್ನು ವಿವರಿಸಿದ್ದರು."
ಎಪ್ಸ್ಟೀನ್ ತನ್ನ ಈ ವಿಕೃತ ಮನಸ್ಥಿತಿಯನ್ನು ಎಂದೂ ಮರೆಮಾಚಿರಲಿಲ್ಲ. ಅಂಕಣಕಾರ ಮೈಕೆಲ್ ವುಲ್ಫ್ ಪ್ರಕಾರ, ಎಪ್ಸ್ಟೀನ್ ಒಮ್ಮೆ ಮುಕ್ತವಾಗಿ, "ನಾನು ಏನು ಹೇಳಲಿ, ನನಗೆ ಚಿಕ್ಕ ಹುಡುಗಿಯರೆಂದರೆ ಇಷ್ಟ" ಎಂದು ಒಪ್ಪಿಕೊಂಡಿದ್ದನು.
2008ರಲ್ಲಿ ಫ್ಲೋರಿಡಾದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಪ್ಸ್ಟೀನ್ ಮೊದಲು ಸಿಕ್ಕಿಬಿದ್ದಿದ್ದ. ಆಗ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಕೇವಲ 13 ತಿಂಗಳ ಸಾಧಾರಣ ಶಿಕ್ಷೆಯೊಂದಿಗೆ ಪಾರಾಗಿದ್ದ. ಅಪ್ರಾಪ್ತ ಬಾಲಕಿಯರ ಲೈಂಗಿಕ ಸಾಗಣೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ 2019ರಲ್ಲಿ ಮತ್ತೆ ಬಂಧಿಸಲಾಯಿತು. ಆದರೆ ವಿಚಾರಣೆ ನಡೆಯುವ ಮೊದಲೇ ಜೈಲಿನಲ್ಲಿ ಆತ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡನು.
ಫೈಲ್‌ಗಳ ಸಂಗ್ರಹ ಎಪ್ಸ್ಟೀನ್‌ನ ದ್ವೀಪ ಮತ್ತು ನಿವಾಸಗಳ ಮೇಲೆ ನಡೆದ ದಾಳಿಯ ವೇಳೆ ಎಫ್‌ಬಿಐ (FBI) ಸುಮಾರು 300 ಜಿಬಿಗೂ ಹೆಚ್ಚು ಡೇಟಾ, ಹಾರ್ಡ್ ಡ್ರೈವ್‌ಗಳು ಮತ್ತು ಸಾವಿರಾರು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದನ್ನೇ ಈಗ 'ಎಪ್ಸ್ಟೀನ್ ಫೈಲ್ಸ್' ಎನ್ನಲಾಗುತ್ತಿದೆ.
ಕಳೆದ ವಾರ ಸ್ಫೋಟಕ ಕಡತ ರಿಲೀಸ್
ಅಮೆರಿಕದ ಕಾಂಗ್ರೆಸ್ 2025ರಲ್ಲಿ 'ಎಪ್ಸ್ಟೀನ್ ಫೈಲ್ಸ್ ಟ್ರಾನ್ಸ್‌ಪರೆನ್ಸಿ ಆಕ್ಟ್' ಎಂಬ ಕಾನೂನು ಜಾರಿಗೆ ತಂದಿತು. ಇದರ ಅಡಿಯಲ್ಲಿ ಫೆಬ್ರವರಿ 2026ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಲಕ್ಷಾಂತರ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಪುಟಗಳು, 2,000 ವಿಡಿಯೋಗಳು ಮತ್ತು 1.8 ಲಕ್ಷ ಚಿತ್ರಗಳು ದಾಖಲೆಯಲ್ಲಿದೆ
ಈ ಫೈಲ್‌ಗಳಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್, ಬಿಲ್ ಗೇಟ್ಸ್, ಎಲಾನ್ ಮಸ್ಕ್ ಮತ್ತು ಬ್ರಿಟನ್‌ನ ಪ್ರಿನ್ಸ್ ಆಂಡ್ರ್ಯೂ ಅವರಂತಹ ಗಣ್ಯರ ಹೆಸರುಗಳು ವಿವಿಧ ಸಂದರ್ಭಗಳಲ್ಲಿ ಉಲ್ಲೇಖವಾಗಿವೆ.
ಈ ಫೈಲ್‌ಗಳಲ್ಲಿ ಏನಿವೆ?
ಸಾಕ್ಷ್ಯಗಳು: ಸಂತ್ರಸ್ತ ಬಾಲಕಿಯರ ಹೇಳಿಕೆಗಳು ಮತ್ತು ಸಾಕ್ಷಿಗಳ ಸಂದರ್ಶನಗಳ ಪ್ರತಿಗಳು.
ಸಂಪರ್ಕ ಪಟ್ಟಿ: ಎಪ್ಸ್ಟೀನ್‌ನ ಪ್ರಭಾವಿ ಸ್ನೇಹಿತರ ಇಮೇಲ್‌ಗಳು, ಫೋನ್ ನಂಬರ್‌ಗಳು ಮತ್ತು ಫ್ಲೈಟ್ ಲಾಗ್‌ಗಳು (ಆತನ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದವರ ವಿವರ).
ದೃಶ್ಯಾವಳಿಗಳು: ಎಪ್ಸ್ಟೀನ್‌ನ ದ್ವೀಪ ಮತ್ತು ಪಾರ್ಟಿಗಳಲ್ಲಿ ತೆಗೆದ ಫೋಟೋಗಳು ಹಾಗೂ ವಿಡಿಯೋಗಳು.
ಎಪ್ಸ್ಟೀನ್ ಫೈಲ್ಸ್‌ನಲ್ಲಿರುವ ಭಾರತೀಯರ ಹೆಸರು
ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಕೆಲವು ಪ್ರಮುಖ ವ್ಯಕ್ತಿಗಳ ಹೆಸರುಗಳು ಉಲ್ಲೇಖವಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ, ಕಡತಗಳಲ್ಲಿ ಹೆಸರು ಬಂದಿದೆ . ಆದರೆ ಅವರು ಅಪರಾಧದಲ್ಲಿ ಭಾಗಿಯಾಗಿರುವುದಕ್ಕೂ ಯಾವುದೇ ಸಾಕ್ಷ್ಯಗಳಿಲ್ಲ.
ಎಪ್ಸ್ಟೀನ್ ಫೈಲ್ಸ್‌ನಲ್ಲಿ ಪ್ರಧಾನಿ ಮೋದಿಯವರ ಹೆಸರು ಪ್ರಸ್ತಾಪವಾಗಿದೆ. ದಾಖಲೆಗಳ ಪ್ರಕಾರ, 2017 ರಿಂದ 2019 ರ ಅವಧಿಯಲ್ಲಿ ಅನಿಲ್ ಅಂಬಾನಿ ಅವರು ಭಾರತ-ಅಮೆರಿಕ ಸಂಬಂಧ ಮತ್ತು ರಕ್ಷಣಾ ಸಹಕಾರದ ಕುರಿತು ಚರ್ಚಿಸಲು ಎಪ್ಸ್ಟೀನ್ ಮೂಲಕ ಶ್ವೇತಭವನದ ಅಧಿಕಾರಿಗಳನ್ನು ಭೇಟಿಯಾಗಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
'ಸಲಾಂ ಬಾಂಬೆ' ಖ್ಯಾತಿಯ ವಿಶ್ವಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರು 2009ರ ಡಿಸೆಂಬರ್ 21ರಂದು ಎಪ್ಸ್ಟೀನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬ ಉಲ್ಲೇಖವಿದೆ.
ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಇಮೇಲ್‌ಗಳಲ್ಲಿ ಅನುರಾಗ್ ಕಶ್ಯಪ್ ಅವರನ್ನು "ಬಾಲಿವುಡ್ ಗೈ" ಎಂದು ಸಂಬೋಧಿಸಲಾಗಿದೆ. ಎಪ್ಸ್ಟೀನ್ ಮತ್ತು ಇತರ ಕೆಲವು ವ್ಯಕ್ತಿಗಳ ನಡುವೆ ನಡೆದ ಇಮೇಲ್ ಸಂಭಾಷಣೆಗಳಲ್ಲಿ ಇವರ ಹೆಸರು ಬಂದಿದೆ.
ನಟಿ ಮತ್ತು ನಿರ್ದೇಶಕಿ ನಂದಿತಾ ದಾಸ್ ಅವರ ಹೆಸರು 2015ರ ಕಡತವೊಂದರಲ್ಲಿ ಕಂಡುಬಂದಿದೆ. ಯುಕೆನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಜೆಮ್ ಬೆಂಡೆಲ್ ಎಂಬುವವರು ಎಪ್ಸ್ಟೀನ್‌ನನ್ನು ಆಹ್ವಾನಿಸುವಾಗ ಕಳುಹಿಸಿದ್ದ ಇಮೇಲ್‌ನಲ್ಲಿ ನಂದಿತಾ ದಾಸ್ ಅವರನ್ನು ಭಾಷಣಕಾರರ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.
ಖ್ಯಾತ ಆಧ್ಯಾತ್ಮಿಕ ಗುರು ದೀಪಕ್ ಚೋಪ್ರಾ ಅವರು 2016ರಲ್ಲಿ ಎಪ್ಸ್ಟೀನ್ ಜೊತೆ ಇಮೇಲ್ ಸಂಭಾಷಣೆ ನಡೆಸಿದ್ದರು. ಇದರಲ್ಲಿ ಅವರು ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಮಾರ್ಲಾ ಮೇಪಲ್ಸ್ ಬಗ್ಗೆ ವಿಚಾರಿಸಿದ್ದರು. ಈ ಬಗ್ಗೆ ಕಡತದಲ್ಲಿದೆ.
ಉದ್ಯಮಿ ಅನಿಲ್ ಅಂಬಾನಿ ಅವರು 2017 ಮತ್ತು 2019ರ ನಡುವೆ ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದರು ಎಂದು ದಾಖಲೆಗಳು ಹೇಳುತ್ತವೆ.
ಜೆಫ್ರಿ ಜೊತೆ ಪ್ರಿನ್ಸ್ ಆಂಡ್ರ್ಯೂ
ಎಸ್ಪ್ಟೀನ್ ದ್ವೀಪದಲ್ಲಿ ನಡೆಯುತ್ತಿತ್ತಾ ನರಭಕ್ಷಣೆ?
ಇನ್ನು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಆಘಾತಕಾರಿ ಸಂಗತಿಗಳು ಹರಿದಾಡುತ್ತಿವೆ. ಎಫ್ಸ್ಟೀನ್‌ನ ದ್ವೀಪದಲ್ಲಿ ಶಿಶುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸಗಳನ್ನು ಸೇವಿಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ 'ನರಮಾಂಸ ಸೇವನೆ' ಮತ್ತು 'ವಿಕೃತ ಆಚರಣೆಗಳ' ಕುರಿತಾದ ದೂರುಗಳು ದಾಖಲಾಗಿರುವುದು ನಿಜವಾದರೂ, ಅವುಗಳ ಸತ್ಯಾಸತ್ಯತೆ ಈವರೆಗೆ ದೃಢಪಟ್ಟಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 'ಕ್ರೀಮ್ ಚೀಸ್' ಮತ್ತು 'ಶಿಶುಗಳ' ಕುರಿತಾದ ಇಮೇಲ್ ಸಂಭಾಷಣೆಗಳು ಅನುಮಾನ ಮೂಡಿಸಿವೆ ಹಾಗೂ ಸ್ನೋಪ್ಸ್ (Snopes) ಫ್ಯಾಕ್ಟ್-ಚೆಕ್ ಪ್ರಕಾರ, 2019ರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಎಫ್‌ಬಿಐಗೆ ನೀಡಿದ ದೂರಿನಲ್ಲಿ ಎಪ್ಸ್ಟೀನ್ ಹಡಗಿನಲ್ಲಿ ಹಸುಗೂಸುಗಳ ಅಂಗಾಂಗಗಳನ್ನು ಕತ್ತರಿಸಿ ಸೇವಿಸಲಾಗುತ್ತಿತ್ತು ಎಂಬ ಭೀಕರ ಆರೋಪಗಳನ್ನು ಮಾಡಿದ್ದನು. ಈ 'ನರಭಕ್ಷಕ' ಪದಗಳು ಕಡತಗಳಲ್ಲಿ 50ಕ್ಕೂ ಹೆಚ್ಚು ಬಾರಿ ಕಂಡುಬಂದಿದ್ದರೂ, ಇವು ಕೇವಲ ಒಬ್ಬ ವ್ಯಕ್ತಿಯ ಹೇಳಿಕೆಗಳಾಗಿದ್ದು, ಇವುಗಳಿಗೆ ಯಾವುದೇ ಭೌತಿಕ ಪುರಾವೆ ಅಥವಾ ನ್ಯಾಯಾಂಗ ದೃಢೀಕರಣ ಲಭ್ಯವಿಲ್ಲದ ಕಾರಣ ಇವುಗಳನ್ನು ಕೇವಲ ದೃಢೀಕರಿಸದ ವದಂತಿಗಳೆಂದು ಪರಿಗಣಿಸಲಾಗಿದೆ. ಅದಾಗ್ಯೂ 2009ರಲ್ಲಿ ಮೆಕ್ಸಿಕೋದ ಮಾಡೆಲ್ ಒಬ್ಬಳು ರಸ್ತೆಯಲ್ಲಿ ಕಿರುಚುತ್ತಾ, "ಜಗತ್ತಿನ ಗಣ್ಯರು ಮನುಷ್ಯರನ್ನು ತಿನ್ನುತ್ತಾರೆ, ಬಲಿ ಕೊಡುತ್ತಾರೆ" ಎಂದು ಹೇಳುತ್ತಿರುವ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ವಿಕಿಲೀಕ್ಸ್ ಫೈಲ್ಸ್ ನೆನಪಿಸುವ ಎಪ್ಸ್ಟೀನ್ ಕಡತಗಳು
ಇನ್ನು ಎಪ್ಸ್ಟೀನ್ ಹಗರಣದ ಕಡತಗಳು ಸುಮಾರು ಎರಡು ದಶಕಗಳ ಹಿಂದೆ ಭಾರತ ಸೇರಿದಂತೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ವಿಕಿಲೀಕ್ಸ್ ಫೈಲ್ಸ್ ಅನ್ನು ನೆನಪಿಸುತ್ತದೆ. ವಿಕಿಲೀಕ್ಸ್ ಅನೇಕ ರಹಸ್ಯ ದಾಖಲೆಗಳನ್ನು ಮತ್ತು ರಾಜತಾಂತ್ರಿಕ ಸಂದೇಶಗಳನ್ನು ಬಹಿರಂಗಪಡಿಸಿ ಭಾರತೀಯ ರಾಜಕೀಯದಲ್ಲಿ ಭಾರಿ ಚಟುವಟಿಕೆಗೆ ಕಾರಣವಾಗಿತ್ತು
2008ರಲ್ಲಿ ಅಮೆರಿಕದೊಂದಿಗೆ ಭಾರತ ಮಾಡಿಕೊಂಡ ಪರಮಾಣು ಒಪ್ಪಂದದ ವೇಳೆ ಯುಪಿಎ (UPA) ಸರ್ಕಾರವನ್ನು ಉಳಿಸಿಕೊಳ್ಳಲು ಸಂಸದರಿಗೆ ಲಂಚ ನೀಡಲಾಗಿತ್ತು ಎಂಬ ವಿಷಯ ಅಮೆರಿಕದ ರಾಜತಾಂತ್ರಿಕ ಕಡತಗಳಲ್ಲಿ ಉಲ್ಲೇಖವಾಗಿತ್ತು. ಇದು ಅಂದಿನ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.
ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ಭಾರತದ ವಿವಿಧ ನಾಯಕರ ಬಗ್ಗೆ ತಮ್ಮ ದೇಶಕ್ಕೆ ಕಳುಹಿಸಿದ ರಹಸ್ಯ ವರದಿಗಳು ಬಹಿರಂಗವಾಗಿದ್ದವು: 2009ರಲ್ಲಿ ರಾಹುಲ್ ಗಾಂಧಿ ಅವರು ಅಮೆರಿಕದ ರಾಯಭಾರಿಯೊಂದಿಗೆ ಮಾತನಾಡುತ್ತಾ, "ಭಾರತಕ್ಕೆ ಲಷ್ಕರ್-ಎ-ತೊಯ್ಬಾಗಿಂತಲೂ ಸ್ಥಳೀಯ ಹಿಂದೂ ತೀವ್ರಗಾಮಿ ಗುಂಪುಗಳಿಂದ ಹೆಚ್ಚಿನ ಅಪಾಯವಿದೆ" ಎಂದು ಹೇಳಿದ್ದರು ಎಂಬ ಮಾಹಿತಿ ಹೊರಬಂದು ಭಾರಿ ವಿವಾದ ಸೃಷ್ಟಿಸಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 'ಎಪ್ಸ್ಟೀನ್ ಫೈಲ್ಸ್' ಕೇವಲ ಒಬ್ಬ ವ್ಯಕ್ತಿಯ ಲೈಂಗಿಕ ಹಗರಣವಾಗಿ ಉಳಿದಿಲ್ಲ; ಬದಲಾಗಿ ಇದು ಜಾಗತಿಕ ಅಧಿಕಾರಶಾಹಿ, ಸಂಪತ್ತು ಮತ್ತು ಅಪರಾಧದ ನಡುವಿನ ಅಪವಿತ್ರ ನಂಟನ್ನು ಜಗತ್ತಿನ ಕಣ್ಣೆದುರು ಬಿಚ್ಚಿಟ್ಟಿದೆ. ವಿಕಿಲೀಕ್ಸ್ ಹೇಗೆ ಸರ್ಕಾರದ ರಹಸ್ಯಗಳನ್ನು ಬಯಲು ಮಾಡಿತ್ತೋ, ಹಾಗೆಯೇ ಈ ಕಡತಗಳು ಸಮಾಜದ ಉನ್ನತ ಸ್ತರದಲ್ಲಿರುವವರ ನೈತಿಕ ಪತನವನ್ನು ಎತ್ತಿ ತೋರಿಸುತ್ತಿವೆ.

