ಬಿಸಿಲ ನಗರಿ ಚೆನ್ನೈ ಈಗ ಊಟಿಯಂತೆ ಕೂಲ್ ಕೂಲ್!
ಈ ಜನವರಿಯಲ್ಲಿ ಚೆನ್ನೈನಲ್ಲಿ ಚಳಿ ದಿನಗಳು, ಬಲವಾದ ಗಾಳಿ, ವಿಸ್ತೃತ ಮೋಡ ಕವಿದ ವಾತಾವರಣ ಏಕೆ ಇತ್ತು ಮತ್ತು ಇದು ಬೇಸಿಗೆಯ ಉಷ್ಣತೆಯನ್ನು ಸೂಚಿಸುತ್ತದೆಯೇ ಎಂದು ಮಾಜಿ IMD ಅಧಿಕಾರಿ ಬಾಲಚಂದ್ರನ್ ವಿವರಿಸಿದ್ದಾರೆ.

ಚೆನ್ನೈ ಎಂದರೆ ಎಲ್ಲರಿಗೂ ಚೆನ್ನಾಗಿ ಗೊತ್ತು! ಚೆನ್ನೈಗೆ ತೆರಳಿದರೆ ಸಾಕು, ಸುಡುವ ಸೂರ್ಯ ಬಿರುಬಿಸಿಗೆ ಮೈಯ್ಯೆಲ್ಲಾ ಬೆವರಮಳೆ ಸಹಜ. ಪ್ರವಾಸಿಗರಂತೂ ಮುಂಜಾವ ಅಥವಾ ಸಾಯಂಕಾಲ ಚೆನ್ನೈ ತಟದಲ್ಲಿರುವ ಮರೀನಾ ಬೀಚ್‌ಗೆ ತೆರಳುವಾಗಲೂ ಮೈ ಸುಡುತ್ತಲೇ ಇರುತ್ತದೆ.
ಸೂರ್ಯಸ್ನಾನ ಮಾಡುವವರಿಗೆ ಖುಷಿ. ಆದರೆ, ಉಳಿದವರಿಗೆಲ್ಲಾ ಸುಡುವ ಬಿಸಿ. ಅಂತಹ ಚೆನ್ನೈ ನಗರ ಒಂದು ಶೀತಲನಗರಿಯಾದರೆ ಹೇಗೆ? ಅಥವಾ ಯಾವುದೋ ಗಿರಿಧಾಮದಂತೆ ಚಳಿಚಳಿ.. ವಿದೇಶೀ ಪ್ರವಾಸಿಗಳಿಗೆ, ಪ್ರೇಮಿಗಳಿಗೆ ಈಗ ʼಸನ್‌ಬಾತ್ʼಗಿಂತ ಚಳಿಯೇ ಆನಂದದಾಯಕ! ನಿಮಗೆ ಅಚ್ಚರಿಯಾಗಿದೆಯೇ? ಹೌದು. ಇದು ಕನಸಲ್ಲ ಮಹಾರಾಯರೇ.. ನಿಜ. ಚೆನ್ನೈ ಈಗ ಚುಮುಚುಮು ಚಳಿಯ ಚಂದದ ನಗರಿಯಾಗಿಬಿಟ್ಟಿದೆ! ಈ ಬಾರಿ ಚೆನ್ನೈ ಜನತೆಗೆ ಜನವರಿಯೆಂದರೆ ಕೇವಲ ಹೊಸ ವರ್ಷದ ಆರಂಭವಲ್ಲ, ಬದಲಿಗೆ ಅಚ್ಚರಿಯ ಚಳಿಗಾಲದ ಅನುಭವ...
ಸಾಮಾನ್ಯವಾಗಿ ಈಶಾನ್ಯ ಮುಂಗಾರು ಮಳೆ ಮುಗಿದ ಮೇಲೆ ನಗರದಲ್ಲಿ ತಿಳಿ ಆಕಾಶ ಮತ್ತು ಹಿತವಾದ ಹವಾಮಾನ ಇರುತ್ತಿತ್ತು. ಆದರೆ ಈ ವರ್ಷ ಮಾತ್ರ ಜನವರಿ ತಿಂಗಳು ಅನಿರೀಕ್ಷಿತವಾಗಿ ಮೋಡ ಕವಿದ ವಾತಾವರಣ ಹಾಗೂ ಮೈ ನಡುಗಿಸುವ ಚಳಿಯಿಂದ ಕೂಡಿದೆ.
ಚೆನ್ನೈ- ʼಚಳಿʼನಗರಿಯಾಗಲು ಕಾರಣವೇನು?
ಈ ಹವಾಮಾನ ವೈಪರೀತ್ಯದ ಕುರಿತು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಮಾಜಿ ಹೆಚ್ಚುವರಿ ಮಹಾನಿರ್ದೇಶಕ ಎಸ್. ಬಾಲಚಂದ್ರನ್ ಅವರು 'ದ ಫೆಡರಲ್' ಸಂಸ್ಥೆಯೊಂದಿಗೆ ಮಾತನಾಡುತ್ತಾ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂಗಾರು ಮಳೆಯ ನಿರ್ಗಮನದಲ್ಲಿ ಉಂಟಾದ ವಿಳಂಬ, ಶ್ರೀಲಂಕಾ ತೀರದ ಬಳಿ ಸೃಷ್ಟಿಯಾದ ವಾಯುಭಾರ ಕುಸಿತ ಮತ್ತು ಉತ್ತರದ ದಿಕ್ಕಿನಿಂದ ಬೀಸುತ್ತಿರುವ ಶೀತಗಾಳಿ ಇವೆಲ್ಲವೂ ಒಟ್ಟಾಗಿ ಈ ಬಾರಿಯ ಜನವರಿಯನ್ನು ಎಂದಿಗೂ ಕಾಣದಷ್ಟು ತಂಪಾಗಿಸಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಕರಾವಳಿ ತಮಿಳುನಾಡಿನಲ್ಲಿ ಜನವರಿ ತಿಂಗಳ ಹವಾಮಾನವು ಸಾಮಾನ್ಯವಾಗಿ ಸಮುದ್ರದಿಂದ ನಿಯಂತ್ರಿಸಲ್ಪಡುತ್ತದೆ. ಸಮುದ್ರವು ಒಂದು ದೊಡ್ಡ ಶಾಖದ ಮೂಲವಾಗಿ ಕಾರ್ಯನಿರ್ವಹಿಸುವುದರಿಂದ, ಉಷ್ಣತೆಯು ಅತಿಯಾಗಿ ಕುಸಿಯದಂತೆ ತಡೆಯುತ್ತದೆ. ಆದರೆ ಈ ವರ್ಷ, ಹವಾಮಾನದ ಹಲವು ವಿದ್ಯಮಾನಗಳು ಏಕಕಾಲಕ್ಕೆ ಸಂಭವಿಸಿದ್ದರಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇದರೊಂದಿಗೆ ಬಿಟ್ಟು ಬಿಟ್ಟು ಬಂದ ಮಳೆ ಮತ್ತು ಶೀತಗಾಳಿಯ ಪ್ರಭಾವದಿಂದಾಗಿ ಸ್ಥಳೀಯ ನಿವಾಸಿಗಳಿಗೆ ಹಲವು ಬಾರಿ ʻಊಟಿಯ ಹವಾಮಾನದಂತೆʼ ಭಾಸವಾಗಿದೆ.
ಬೇಸಿಗೆಯು ಅಷ್ಟೇ ತೀವ್ರವಾಗಿರುತ್ತದೆಯೇ?
ಅಲ್ಲದೆ, ಜನವರಿಯಲ್ಲಿ ಚಳಿ ಹೆಚ್ಚಿದ್ದರೆ ಬೇಸಿಗೆಯು ಅಷ್ಟೇ ತೀವ್ರವಾಗಿರುತ್ತದೆಯೇ? ಎನ್ನುವ ಸಾರ್ವಜನಿಕರ ಆತಂಕಕ್ಕೆ ಉತ್ತರ ನೀಡಿದ ಅವರು, ಇಂತಹ ಹಠಾತ್ ಹವಾಮಾನ ಬದಲಾವಣೆಗಳಿಗೆ ನೇರವಾಗಿ ಹವಾಮಾನ ಬದಲಾವಣೆಯೇ ಕಾರಣವೇ ಎಂಬ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ.
ಬದಲಾಗುತ್ತಿರುವ ಜನವರಿ
ಸಾಮಾನ್ಯವಾಗಿ ಚೆನ್ನೈನಲ್ಲಿ ಜನವರಿ ತಿಂಗಳ ಹವಾಮಾನವು ತಿಳಿಯಾದ ಆಕಾಶ, ಶಾಂತ ಗಾಳಿ ಮತ್ತು ಈಶಾನ್ಯ ಮಾನ್ಸೂನ್ ಮಳೆಯ ನಿರ್ಗಮನದ ನಂತರ ಹಂತ ಹಂತವಾಗಿ ಏರುವ ಹಗಲಿನ ತಾಪಮಾನವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಜನವರಿಯಲ್ಲಿ ಇಂತಹ ವಾತಾವರಣವೇ ಕಂಡುಬರುತ್ತದೆ ಎಂಬುದು ಅವರ ಅಭಿಪ್ರಾಯ.
ಆದರೆ, ಇತ್ತೀಚಿನ ದಿನಗಳಲ್ಲಿ ಮಾನ್ಸೂನ್ ಮಳೆಯು ಜನವರಿ ತಿಂಗಳವರೆಗೂ ಮುಂದುವರಿಯುತ್ತಿರುವುದು ಈಶಾನ್ಯ ಮಾನ್ಸೂನ್ ಅವಧಿಯನ್ನು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಎಂದು ಲೆಕ್ಕ ಹಾಕಲಾಗುತ್ತದೆಯಾದರೂ, ಮಳೆ ಮಾರುತಗಳ ನಿರ್ಗಮನವು ಆಗಾಗ್ಗೆ ವಿಳಂಬವಾಗುತ್ತಿದೆ. ಕೆಲವು ವೇಳೆ ಇದು ಜನವರಿ ಮಧ್ಯಭಾಗದವರೆಗೆ ಅಥವಾ ಅಂತ್ಯದವರೆಗೂ ವಿಸ್ತರಿಸುತ್ತಿದೆ. ಇದಕ್ಕೆ ಪೂರಕವಾಗಿ ಅವರು ಹಿಂದಿನ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ.
ಹವಾಮಾನ ವಿಜ್ಞಾನಿಗಳ ವಿಶ್ಲೇಷಣೆಯ ಪ್ರಕಾರ, ಈಶಾನ್ಯ ಮಾನ್ಸೂನ್ ಮಾರುತಗಳು ನಿರ್ಗಮಿಸುವ ಕಾಲಾವಧಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಸಾಗಿದೆ. ಈ ಹಿಂದೆ 2014 ಮತ್ತು 2016ರಲ್ಲಿ ಜನವರಿ 4ರಂದೇ ಮಾನ್ಸೂನ್ ಮಾರುತಗಳು ವಿದಾಯ ಹೇಳಿದ್ದರೆ, 2015ರಲ್ಲಿ ಜನವರಿ 7ರಂದು ನಿರ್ಗಮಿಸಿದ್ದವು. ಮತ್ತೆ ಕೆಲವು ವರ್ಷಗಳಲ್ಲಿ ಈ ಪ್ರಕ್ರಿಯೆಯು ಜನವರಿ 10 ಅಥವಾ ಜನವರಿ 20 ರಿಂದ 22ರವರೆಗೆ ವಿಳಂಬವಾಗಿತ್ತು.
ಗಾಳಿ ಮತ್ತು ಚಳಿ
ಸಾಮಾನ್ಯವಾಗಿ ಚಳಿಗಾಲವು ಪ್ರತಿ-ಚಂಡಮಾರುತದ ಮಾದರಿಯನ್ನು ಹೊಂದಿರುತ್ತದೆ. ಇದು ತಿಳಿಯಾದ ಆಕಾಶ ಮತ್ತು ಶಾಂತ ವಾತಾವರಣಕ್ಕೆ ಪೂರಕವಾಗಿರುತ್ತದೆ. ಆದರೆ ಚಂಡಮಾರುತದ ವ್ಯವಸ್ಥೆಗಳು ಮೋಡ ಮತ್ತು ಮಳೆಯನ್ನು ಹೊತ್ತುತರುತ್ತವೆ ಎಂದು ಬಾಲಚಂದ್ರನ್ ವಿವರಿಸಿದ್ದಾರೆ. ಈ ಜನವರಿಯಲ್ಲಿ ಶ್ರೀಲಂಕಾ ಕರಾವಳಿಯ ಅತ್ಯಂತ ಕೆಳ ಅಕ್ಷಾಂಶದಲ್ಲಿ ಉಂಟಾದ ಲಘು ವಾಯುಭಾರ ಕುಸಿತದಿಂದಾಗಿ ಮೋಡ ಮತ್ತು ಗಾಳಿಯ ಮಾದರಿಗಳಲ್ಲಿ ಬದಲಾವಣೆಯಾಗಿದೆ.
ಇಂತಹ ವ್ಯವಸ್ಥೆಗಳು ದಕ್ಷಿಣದ ದೂರದ ಭಾಗದಲ್ಲಿ ರೂಪಗೊಂಡರೂ ಸಹ, ತಮಿಳುನಾಡಿನ ಮೇಲೆ ಬೀಸುವ ಉತ್ತರದ ಗಾಳಿಯ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಅವರು ತಿಳಿಸಿದ್ದಾರೆ. ಗಾಳಿಯು ಉತ್ತರದ ದಿಕ್ಕಿನಿಂದ ಹೆಚ್ಚು ಪ್ರಬಲವಾಗಿ ಬೀಸಿದಾಗ ಚಳಿಯ ತೀವ್ರತೆ ಹೆಚ್ಚಾಗುತ್ತದೆ. ಗಾಳಿಯ ಚಲನೆಯಿಂದಾಗಿ ʻಅನುಭವಕ್ಕೆ ಬರುವ ತಾಪಮಾನವುʼ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಅನುಭವಕ್ಕೆ ಬರುವ ಚಳಿಯನ್ನು ವಿವರಿಸಲು ಅವರು ಒಂದು ಉದಾಹರಣೆ ನೀಡಿದ್ದಾರೆ. ಸ್ಥಿರವಾಗಿರುವ ತಾಪಮಾನ ಒಂದೇ ಆಗಿದ್ದರೂ ಸಹ, ವೇಗವಾಗಿ ಚಲಿಸುವ ವಾಹನದಲ್ಲಿ ಅಥವಾ ಫ್ಯಾನ್ ಕೆಳಗೆ ಕುಳಿತಾಗ ನಮಗೆ ಹೇಗೆ ಹೆಚ್ಚಿನ ಚಳಿಯ ಅನುಭವವಾಗುತ್ತದೆಯೋ, ಅದೇ ರೀತಿ ಈಗಿನ ಗಾಳಿಯು ಚಳಿಯನ್ನು ಹೆಚ್ಚು ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೋಡ ಕವಿದ ವಾತಾವರಣ ಮತ್ತು ಕನಿಷ್ಠ ತಾಪಮಾನದ ವ್ಯತ್ಯಾಸ
ಈ ಜನವರಿಯ ಪ್ರಮುಖ ಲಕ್ಷಣವೆಂದರೆ ದಿನದ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳ ನಡುವಿನ ವ್ಯತ್ಯಾಸ (ಡಿ.ಟಿ.ಆರ್) ಕಡಿಮೆಯಾಗಿರುವುದು ಎಂದು ಅವರು ತಿಳಿಸಿದರು. ಜನವರಿ 12 ರಂದು ಈ ವ್ಯತ್ಯಾಸವು ಕೇವಲ 2.3°C ಆಗಿತ್ತು ಮತ್ತು ಜನವರಿ 25 ರ ಸುಮಾರಿಗೆ ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಇದು ಮತ್ತೆ 3.6°C ಗೆ ಕುಸಿಯಿತು ಎಂದು ಬಾಲಚಂದ್ರನ್ ತಿಳಿಸಿದ್ದಾರೆ. ಮೋಡಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಬರುತ್ತಿದ್ದಾಗ ಹಗಲಿನ ತಾಪಮಾನವು ಹೆಚ್ಚು ಏರುವುದಿಲ್ಲ ಮತ್ತು ರಾತ್ರಿಯ ತಾಪಮಾನವು ತೀವ್ರವಾಗಿ ಕುಸಿಯುವುದಿಲ್ಲ. ಇದರಿಂದ ತಾಪಮಾನದ ವ್ಯಾಪ್ತಿ ಕಡಿಮೆಯಾಗಿ ಸತತವಾದ ತಂಪಾದ ಅನುಭವ ಉಂಟಾಗುತ್ತದೆ. ಜನವರಿ 15 ರಿಂದ 17 ರ ಸುಮಾರಿಗೆ ಗರಿಷ್ಠ ತಾಪಮಾನವು ಮತ್ತೆ ಏರಿಕೆಯಾಗಿ ಸುಮಾರು 30°C ತಲುಪಿತ್ತು, ಆದರೆ ನಂತರ ಈಸ್ಟರ್ಲಿ ವೇವ್ ಪ್ರಭಾವದಿಂದಾಗಿ ಪರಿಸ್ಥಿತಿ ಮತ್ತೆ ಬದಲಾಯಿತು ಎಂದು ಅವರು ತಿಳಿಸಿದರು.
ಈ ಶೀತದ ಅಲೆಗೆ ಕಾರಣವೇನು?
ಇದಕ್ಕೆ ಯಾವುದೇ ಒಂದು ನಿರ್ದಿಷ್ಟ ಕಾರಣವಿಲ್ಲ ಎಂದು ಹವಾಮಾನ ತಜ್ಞ ಬಾಲಚಂದ್ರನ್ ಅವರು ಸರಳವಾಗಿ ವಿವರಿಸಿದ್ದಾರೆ. ಚೆನ್ನೈನ ಕರಾವಳಿ ಹವಾಮಾನವು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರಿಂದಲೂ ಸಮತೋಲನಗೊಳ್ಳುತ್ತದೆ ಹಾಗೂ ಈ ಪ್ರದೇಶವು ಸಮಭಾಜಕ ವೃತ್ತಕ್ಕೆ ಹತ್ತಿರವಿರುವುದರಿಂದ ಉತ್ತರ ಭಾರತದ ಚಳಿಗಾಲದ ಮಾದರಿಗಿಂತ ಬಹಳ ಭಿನ್ನವಾಗಿರುತ್ತದೆ.
ಈ ಬಾರಿ ಎರಡು ಮುಖ್ಯ ಅಂಶಗಳು ಪ್ರಮುಖ ಪಾತ್ರ ವಹಿಸಿವೆ. ಮೊದಲನೆಯದಾಗಿ ಕಡಿಮೆ ಅಕ್ಷಾಂಶಗಳಲ್ಲಿ ಚಲಿಸುತ್ತಿರುವ ಪೂರ್ವದ ಮಾರುತಗಳು ಮತ್ತು ಎರಡನೆಯದಾಗಿ ಶ್ರೀಲಂಕಾದ ಸಮೀಪವಿರುವ ವಾಯುಭಾರ ಕುಸಿತವು ಉತ್ತರದ ಗಾಳಿಯ ಪ್ರಭಾವವನ್ನು ಹೆಚ್ಚಿಸಿದೆ.
ಸಾಮಾನ್ಯವಾಗಿ ಮಾರುತಗಳು ಉತ್ತರ ಮತ್ತು ಪೂರ್ವದ ದಿಕ್ಕುಗಳ ಮಿಶ್ರಣವಾಗಿರುತ್ತವೆ ಹಾಗೂ ಈ ಮಾರುತಗಳ ಸಮತೋಲನವೇ ಚೆನ್ನೈನಲ್ಲಿ ಸಮುದ್ರದ ಹದವಾದ ಗಾಳಿ ಇರಬೇಕೇ ಅಥವಾ ಉತ್ತರದ ಚಳಿ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ. ಯಾವಾಗ ಗಾಳಿಯು ಹೆಚ್ಚಾಗಿ ಪೂರ್ವ ದಿಕ್ಕಿನಿಂದ ಮತ್ತು ಸಮುದ್ರದ ಕಡೆಯಿಂದ ಬರುತ್ತದೆಯೋ ಆಗ ಉಷ್ಣಾಂಶವು ಹದವಾಗಿರುತ್ತದೆ ಆದರೆ ಉತ್ತರದ ಗಾಳಿಯ ಪ್ರಭಾವ ಹೆಚ್ಚಾದಾಗ ಅದರಲ್ಲೂ ವಿಶೇಷವಾಗಿ ಮಳೆ ಮತ್ತು ಮೋಡ ಕವಿದ ವಾತಾವರಣವಿದ್ದಾಗ ಚಳಿಯ ತೀವ್ರತೆ ಜಾಸ್ತಿಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ಹವಾಮಾನ ಎಷ್ಟು ಅಸಾಮಾನ್ಯವಾಗಿತ್ತು?
ಬಾಲಚಂದ್ರನ್ ಅವರು ಹೇಳುವಂತೆ ಚೆನ್ನೈನಲ್ಲಿ ಜನವರಿ ತಿಂಗಳ ಸಾಮಾನ್ಯ ಗರಿಷ್ಠ ತಾಪಮಾನವು ಸುಮಾರು 29-30°C ಇರುತ್ತದೆ ಮತ್ತು ಕನಿಷ್ಠ ತಾಪಮಾನವು ಸುಮಾರು 21°C ಇರುತ್ತದೆ. ಆದರೆ ಈ ಅವಧಿಯಲ್ಲಿ ಗರಿಷ್ಠ ತಾಪಮಾನ 26.8°C ಮತ್ತು ಕನಿಷ್ಠ ತಾಪಮಾನ 22.6°C ದಾಖಲಾಗಿತ್ತು. ಕೇವಲ ಒಂದು ಅಂಕಿ ಅಂಶಕ್ಕಿಂತ ಹೆಚ್ಚಾಗಿ ದಿನದ ತಾಪಮಾನದ ವ್ಯತ್ಯಾಸ ಮತ್ತು ಗಾಳಿಯ ದಿಕ್ಕು ಜನರು ಹವಾಮಾನವನ್ನು ಅನುಭವಿಸುವ ರೀತಿಯನ್ನು ನಿರ್ಧರಿಸುತ್ತದೆ. ಜನವರಿ 12-13 ರ ಸುಮಾರಿಗೆ ಕರಾವಳಿಯುದ್ದಕ್ಕೂ ಬಲವಾದ ಉತ್ತರ ಮಾರುತಗಳು ಬೀಸಿದ್ದರಿಂದ ಚಳಿಯ ಅನುಭವವು ಹೆಚ್ಚಾಗಿ ದಾಖಲಾಗಿತ್ತು ಎಂದು ಅವರು ತಿಳಿಸಿದರು.
ಮಾಲಿನ್ಯ ಮತ್ತು ಚಳಿಗಾಲದ ಹವಾಮಾನ
ಚಳಿಗಾಲದ ಹವಾಮಾನ ಮತ್ತು ವಾಯು ಮಾಲಿನ್ಯದ ಕುರಿತು ಮಾತನಾಡಿದ ಬಾಲಚಂದ್ರನ್ ಅವರು, ಗಾಳಿಯ ವೇಗ ಕಡಿಮೆಯಾದಾಗ ಮತ್ತು ವಾತಾವರಣದ ಮಿಶ್ರಣ ಪ್ರಕ್ರಿಯೆಯು ದುರ್ಬಲಗೊಂಡಾಗ ಮಾಲಿನ್ಯಕಾರಕಗಳು ಒಂದೆಡೆ ಶೇಖರಗೊಳ್ಳುವ ಸಾಧ್ಯತೆ ಹೆಚ್ಚು. ಚೆನ್ನೈನ ಪರಿಸ್ಥಿತಿಯು ಉತ್ತರ ಭಾರತದ ರಾಜ್ಯಗಳಿಗಿಂತ ಭಿನ್ನವಾಗಿದ್ದು, ಇಲ್ಲಿನ ಮಳೆ ಮತ್ತು ಗಾಳಿಯು ವಾಯು ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಕರಿಸುತ್ತವೆ ಎಂದು ಅವರು ತಿಳಿಸಿದರು.
ಮಾಲಿನ್ಯಕಾರಕಗಳ ಹರಡುವಿಕೆಯು ಗಾಳಿ, ಪ್ರಸರಣ, ತೇವಾಂಶ ಮತ್ತು ಸೂರ್ಯನ ಬೆಳಕಿನಿಂದ ಉಂಟಾಗುವ ಸಂವಹನ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತದೆ. ಗಾಳಿಯ ಚಲನೆ ಮತ್ತು ಸೂರ್ಯನ ಬೆಳಕು ಸೀಮಿತವಾಗಿದ್ದಾಗ, ವಾತಾವರಣದ ಲಂಬ ಮಿಶ್ರಣವು ಕಡಿಮೆಯಾಗಿ ಮಾಲಿನ್ಯಕಾರಕಗಳು ನೆಲದ ಸಮೀಪದಲ್ಲೇ ಸಂಗ್ರಹಗೊಳ್ಳುತ್ತವೆ.
ಉತ್ತರ ಭಾರತಕ್ಕೆ ಹೋಲಿಸಿದರೆ ಚೆನ್ನೈನಲ್ಲಿ ಚಳಿಗಾಲದ ಮಾಲಿನ್ಯದ ತೀವ್ರತೆ ಅಷ್ಟಾಗಿ ಕಂಡುಬರದಿದ್ದರೂ, ಸ್ಥಳೀಯ ಚಟುವಟಿಕೆಗಳು ಮತ್ತು ಹವಾಮಾನ ವೈಪರೀತ್ಯಗಳಿಗೆ ಅನುಗುಣವಾಗಿ ಅಲ್ಪಾವಧಿಯವರೆಗೆ ಮಾಲಿನ್ಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.
ಹವಾಮಾನ ಬದಲಾವಣೆಯ ಸಂಕೇತಗಳು
ಹವಾಮಾನ ಬದಲಾವಣೆಯ ಸಂಕೇತಗಳ ಕುರಿತು ಮಾತನಾಡುತ್ತಾ, ಜನವರಿ ತಿಂಗಳಿನಲ್ಲಿ ಕಂಡುಬಂದ ಈ ಹಠಾತ್ ಬದಲಾವಣೆಯನ್ನು ನೇರವಾಗಿ ಹವಾಮಾನ ಬದಲಾವಣೆಗೆ ಆರೋಪಿಸುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಬಾಲಚಂದ್ರನ್ ಅವರು ತಿಳಿಸಿದರು. ಯಾವುದೇ ಒಂದು ನಿರ್ದಿಷ್ಟ ಘಟನೆಯನ್ನು ಹವಾಮಾನ ಬದಲಾವಣೆ ಎಂದು ಕರೆಯುವ ಬದಲು, ಕನಿಷ್ಠ ಮೂವತ್ತು ವರ್ಷಗಳ ಅವಧಿಯ ಸರಾಸರಿ ಹವಾಮಾನ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಮಾತ್ರ ಹವಾಮಾನ ಬದಲಾವಣೆ ಎಂದು ಗುರುತಿಸಲಾಗುತ್ತದೆ ಎಂದು ಅವರು ವಿವರಿಸಿದರು.

