Paris Olympics 2024 | ಕುಸ್ತಿಪಟು ಅಮನ್ ಸೆಹ್ರಾವತ್‌ಗೆ ಕಂಚು
x

Paris Olympics 2024 | ಕುಸ್ತಿಪಟು ಅಮನ್ ಸೆಹ್ರಾವತ್‌ಗೆ ಕಂಚು


57 ಕೆಜಿ ಫ್ರೀ ಸ್ಟೈಲ್ ವಿಭಾಗದ ಕಂಚಿನ ಪದಕವನ್ನು ಗೆದ್ದಿರುವ ಅಮನ್ ಸೆಹ್ರಾವತ್, ದೇಶದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಜುಲೈ 16 ರಂದು 21 ನೇ ವರ್ಷಕ್ಕೆ ಕಾಲಿಟ್ಟ ಸೆಹ್ರಾವತ್, ಮೂರನೇ ಸ್ಥಾನದ ಸ್ಪರ್ಧೆಯಲ್ಲಿ ಪೋರ್ಟೊರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದ ಗೆಲುವು ಸಾಧಿಸಿದರು. ಅವರಿಗಿಂತ ಮೊದಲು ಪಿ.ವಿ. ಸಿಂಧು ಅವರು 21 ವರ್ಷ, ಒಂದು ತಿಂಗಳು ಮತ್ತು 14 ದಿನಗಳ ವಯಸ್ಸಿನಲ್ಲಿ 2016 ರ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದರು.

ಚಿನ್ನದ ಮೇಲೆ ಕಣ್ಣು: ಸೆಹ್ರಾವತ್ ಮೂಲಕ ಭಾರತ ತನ್ನ ಆರನೇ ಪದಕವನ್ನು ಗೆದ್ದುಕೊಂಡಿತು. ತಂಡ ಟೋಕಿಯೊ ಕ್ರೀಡಾಕೂಟದಲ್ಲಿ ಏಳು ಪದಕ ಗಳಿಸಿತ್ತು. ಈವರೆಗೆ ಒಂದು ಬೆಳ್ಳಿ ಮತ್ತು ಐದು ಕಂಚು ಲಭಿಸಿದೆ.

ʻನಾನು ದೇಶಕ್ಕಾಗಿ ಒಂದು ಪದಕ ಗೆದ್ದು ಬಹಳ ಸಮಯವಾಗಿತ್ತು. 2028 ರಲ್ಲಿ ನಾನು ಖಂಡಿತವಾಗಿಯೂ ನಿಮಗಾಗಿ ಚಿನ್ನವನ್ನು ಗೆಲ್ಲುತ್ತೇನೆ ಎಂದು ನಾನು ದೇಶದ ಜನರಿಗೆ ಹೇಳಲು ಬಯಸುತ್ತೇನೆ,ʼ ಎಂದು ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಆನಂತರ ಅಜ್ಜ ಬೆಳೆಸಿದ ಅಮನ್‌ ಹೇಳಿದರು. ʻಚಿನ್ನ ನನ್ನ ಗುರಿಯಾಗಿತ್ತು. ಆದರೆ, ಈ ಬಾರಿ ಕಂಚಿಗೆ ತೃಪ್ತಿಪಡಬೇಕಾಯಿತು. ಸುಶೀಲ್ ಅವರು ಎರಡು ಪದಕ ಗೆದ್ದಿದ್ದಾರೆ. ನಾನು 2028 ಮತ್ತು 2032 ರಲ್ಲಿ ಗೆಲ್ಲುತ್ತೇನೆ,ʼ ಎಂದು ಹೇಳಿದರು.

ಮುರಿಯದ ಸಂಪ್ರದಾಯ: 23 ವರ್ಷದೊಳಗಿನ ವಿಶ್ವ ಚಾಂಪಿಯನ್, ಪ್ಯಾರಿಸ್ ಗೇಮ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಪುರುಷ ಕುಸ್ತಿಪಟು ಆಗಿದ್ದರು. ದೇಶ 2008 ರಿಂದ ಒಲಿಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಪದಕ ಗಳಿಸುತ್ತ ಮುನ್ನಡೆದಿದೆ. ಬೀಜಿಂಗ್‌ನಲ್ಲಿ (2008) ಕಂಚು ಗೆಲ್ಲುವ ಮೂಲಕ ಸುಶೀಲ್ ಕುಮಾರ್ ಅವರು ಈ ಓಟವನ್ನು ಆರಂಭಿಸಿದರು. ಆನಂತರ, ಯೋಗೇಶ್ವರ್ ದತ್ (2012), ಸಾಕ್ಷಿ ಮಲಿಕ್ (2016), ರವಿ ದಹಿಯಾ ಮತ್ತು ಬಜರಂಗ್ ಪುನಿಯಾ (2021) ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ಸೆಹ್ರಾವತ್ ಅವರ ತೂಕದ ಮೇಲೆ ನಿಗಾ ಇಡಲು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೇವೆ ಎಂದು ಕೋಚ್ ಜಗಮೇಂದ್ರ ಸಿಂಗ್ ಮತ್ತು ವೀರೇಂದ್ರ ದಹಿಯಾ ಹೇಳಿದ್ದಾರೆ. ʻನಾವು ಅಮನ್‌ ಅವರ ತೂಕವನ್ನು ಕಡಿಮೆ ಮಾಡಲು ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಪ್ರತಿ ಗಂಟೆಗೊಮ್ಮೆ ಅವರ ತೂಕವನ್ನು ಪರಿಶೀಲಿಸುತ್ತೇವೆ. ನಾವು ಇಡೀ ರಾತ್ರಿ ನಿದ್ದೆ ಮಾಡಲಿಲ್ಲ,ʼ ಎಂದು ದಹಿಯಾ ಹೇಳಿದರು.

ಆಕ್ರಮಣಕಾರಿ ಚಲನೆ: ವೇಗದ ಪಂದ್ಯದಲ್ಲಿ ಸೆಹ್ರಾವತ್ ತನ್ನ ಎದುರಾಳಿಯ ನಡೆಗಳನ್ನು ಗ್ರಹಿಸಿದ ಬಳಿಕ, ಪೋರ್ಟೊ ರಿಕನ್‌ಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಮೊದಲ ಅವಧಿಯ ಅಂತ್ಯದ ವೇಳೆಗೆ 6-3 ಮುನ್ನಡೆ ಗಳಿಸಿದರು.ಅಮನ್‌, ವ್ಲಾಡಿಮಿರ್ ಎಗೊರೊವ್ ಮತ್ತು ಝೆಲಿಮ್ಖಾನ್ ಅಬಕರೋವ್ ವಿರುದ್ಧ ಒಂದೇ ಒಂದು ಅಂಕವನ್ನು ಬಿಟ್ಟುಕೊಡದೆ ಸೆಮಿಫೈನಲ್‌ಗೆ ಪ್ರವೇಶಿಸಿದರು ಆದರೆ, ಸೆಮಿಫೈನಲ್‌ನಲ್ಲಿ ಜಪಾನ್‌ನ ರೇ ಹಿಗುಚಿಗೆ ಮಣಿದರು.

ಕಠಿಣ ಆರಂಭ: 12 ನೇ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಅಮನ್‌, ತಂದೆ 2013 ರಲ್ಲಿ ದಾಖಲಿಸಿದ್ದ ಪ್ರಸಿದ್ಧ ಛತ್ರಸಲ್ ಕ್ರೀಡಾಂಗಣ ಅವರ ಎರಡನೇ ಮನೆಯಾಯಿತು. ಭಾರತಕ್ಕೆ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಮೂಲಕ ನಾಲ್ಕು ಒಲಿಂಪಿಕ್ ಪದಕಗಳನ್ನುಈ ಕ್ರೀಡಾಂಗಣ ಕೊಟ್ಟಿದೆ.

ರೀತಿಕಾ ಹೂಡಾ (76ಕೆಜಿ) ಶನಿವಾರದಂದು ಅಂಕಣಕ್ಕಿಳಿಯಲಿದ್ದು, ಅವರು ಪದಕ ಗೆದ್ದರೆ ದೇಶ ತನ್ನ ಟೋಕಿಯೊ ದಾಖಲೆಯನ್ನು ಸರಿಗಟ್ಟಲಿದೆ.

Read More
Next Story