
ತಮ್ಮ ವೃತ್ತಿಜೀವನದ ಬಹುಪಾಲು ಸಮಯ ಕೊಹ್ಲಿ ಟೀಮ್ ಇಂಡಿಯಾದ 'ಆಂಕರ್' ಆಗಿದ್ದರು.
ಬದಲಾದ ಕೊಹ್ಲಿ ಆಟ: ಮೈಲಿಗಲ್ಲುಗಳ ಹಂಗಿಲ್ಲ, ಕೇವಲ ಅಬ್ಬರಕ್ಕಷ್ಟೇ ಆದ್ಯತೆ
ಸನ್ನಿವೇಶಗಳು ಬೇರೆ ಇರಬಹುದು; ಆದರೆ ಕೊಹ್ಲಿಯ ಉದ್ದೇಶ ಮಾತ್ರ ಒಂದೇ ಆಗಿತ್ತು- "ಕ್ರಿಸ್‌ನಲ್ಲಿ ಸೆಟ್ ಆಗಲು ಸಮಯ ವ್ಯರ್ಥ ಮಾಡುವುದಿಲ್ಲ, ಬಂದ ಕೂಡಲೇ ಅಬ್ಬರಿಸುತ್ತೇನೆ...
ವಿರಾಟ್ ಕೊಹ್ಲಿ ಎಂದರೆ ನೆನಪಾಗುವುದು ಜವಾಬ್ದಾರಿಯುತ ಆಟ, ಇನ್ನಿಂಗ್ಸ್ ಕಟ್ಟುವ ಚಾಕಚಕ್ಯತೆ ಮತ್ತು ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಪಂದ್ಯ ಗೆಲ್ಲಿಸುವ ಛಲ. ಆದರೆ, 2026ರ ಆರಂಭದಲ್ಲಿ ನಾವು ನೋಡುತ್ತಿರುವುದು ಹಳೆಯ ಕೊಹ್ಲಿಯನ್ನಲ್ಲ. ಮೈಲಿಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳದ, ನಿರೀಕ್ಷೆಗಳ ಭಾರವಿಲ್ಲದ, ಕೇವಲ ಅಂತಃಪ್ರಜ್ಞೆ ಮತ್ತು ಆಕ್ರಮಣಕಾರಿ ಉದ್ದೇಶದೊಂದಿಗೆ ಬ್ಯಾಟ್ ಬೀಸುವ 'ನೂತನ ವಿರಾಟ್' ಅವರನ್ನು ನಾವೀಗ ನೋಡುತ್ತಿದ್ದೇವೆ.
ವಡೋದರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಮ್ಮ ಮೊದಲ ಬೌಂಡರಿ ಬಾರಿಸಲು ತೆಗೆದುಕೊಂಡಿದ್ದು ಕೇವಲ ಮೂರು ಎಸೆತಗಳನ್ನು ಮಾತ್ರ. ಇದಕ್ಕೂ ಮುನ್ನ ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸರ್ ಮೂಲಕ ಖಾತೆ ತೆರೆದಿದ್ದರೆ, ರಾಂಚಿಯಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ್ದರು. ಮೈದಾನಗಳು ಬೇರೆ, ಬೌಲರ್‌ಗಳು ಬೇರೆ, ಸನ್ನಿವೇಶಗಳು ಬೇರೆ ಇರಬಹುದು; ಆದರೆ ಕೊಹ್ಲಿಯ ಉದ್ದೇಶ ಮಾತ್ರ ಒಂದೇ ಆಗಿತ್ತು- "ಕ್ರಿಸ್‌ನಲ್ಲಿ ಸೆಟ್ ಆಗಲು ಸಮಯ ವ್ಯರ್ಥ ಮಾಡುವುದಿಲ್ಲ, ಬಂದ ಕೂಡಲೇ ಅಬ್ಬರಿಸುತ್ತೇನೆ".
ಈಗೇನಿದ್ದರೂ ‘ಕೌಂಟರ್ ಅಟ್ಯಾಕ್’
ತಮ್ಮ ವೃತ್ತಿಜೀವನದ ಬಹುಪಾಲು ಸಮಯ ಕೊಹ್ಲಿ ಟೀಮ್ ಇಂಡಿಯಾದ 'ಆಂಕರ್' ಆಗಿದ್ದರು. ವಿಕೆಟ್ ಬಿದ್ದರೆ ಕುಸಿತ ತಡೆಯುವುದು, ರನ್ ರೇಟ್ ನಿಯಂತ್ರಿಸುವುದು ಅವರ ಜವಾಬ್ದಾರಿಯಾಗಿತ್ತು. ಆದರೆ ಈಗ ಸೀಮಿತ ಓವರ್‌ಗಳ ಕ್ರಿಕೆಟ್ ಬದಲಾಗಿದೆ, ಅದರಂತೆ ಕೊಹ್ಲಿಯೂ ಬದಲಾಗಿದ್ದಾರೆ.
ತಮ್ಮ 93 ರನ್‌ಗಳ ಪಂದ್ಯಶ್ರೇಷ್ಠ ಪ್ರದರ್ಶನದ ಬಳಿಕ ಮಾತನಾಡಿದ ಕೊಹ್ಲಿ, "ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೇನೆ. ಪರಿಸ್ಥಿತಿ ಕ್ಲಿಷ್ಟಕರವಾಗಿದ್ದಾಗ ರಕ್ಷಣಾತ್ಮಕ ಆಟವಾಡುವ ಬದಲು, ಎದುರಾಳಿಗಳ ಮೇಲೆ ಪ್ರತಿದಾಳಿ ನಡೆಸುವುದೇ ನನ್ನ ಹೊಸ ತಂತ್ರ. ಒಂದಲ್ಲ ಒಂದು ಎಸೆತದಲ್ಲಿ ವಿಕೆಟ್ ಬಿದ್ದೇ ಬೀಳುತ್ತದೆ, ಅದಕ್ಕಾಗಿ ಕಾಯುವುದರಲ್ಲಿ ಅರ್ಥವಿಲ್ಲ. ಬೌಲರ್‌ಗಳ ಮೇಲೆ ಒತ್ತಡ ಹೇರುವುದೇ ನನ್ನ ಗುರಿ," ಎಂದು ತಮ್ಮ ಬದಲಾದ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅಂಕಿಅಂಶಗಳೇ ಸತ್ಯ
ಕಳೆದ ಅಕ್ಟೋಬರ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ನಂತರ ಕೊಹ್ಲಿ ಆಡಿದ ರೀತಿ ಅಚ್ಚರಿ ಮೂಡಿಸುವಂತಿದೆ.
ಹೊಸ ಸ್ಟ್ರೈಕ್ ರೇಟ್: ಕಳೆದ 7 ಪಂದ್ಯಗಳಲ್ಲಿ ಕೊಹ್ಲಿ 469 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ ಬರೋಬ್ಬರಿ 106.1.
ಹಳೆಯ ಸ್ಟ್ರೈಕ್ ರೇಟ್: ಅವರ ಒಟ್ಟಾರೆ ವೃತ್ತಿಜೀವನದ ಸ್ಟ್ರೈಕ್ ರೇಟ್ 93.7.
ಈ ಅಂಕಿಅಂಶಗಳು ಕೊಹ್ಲಿ ಎಷ್ಟು ವೇಗವಾಗಿ ಮತ್ತು ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆರ್. ಅಶ್ವಿನ್ ಅವರ ಪ್ರಕಾರ, ಕೊಹ್ಲಿ ಈಗ ಯಾವುದೇ ಒತ್ತಡವಿಲ್ಲದೆ, ಕೇವಲ ಆಟದ ಮೇಲಿನ ಪ್ರೀತಿಗಾಗಿ ಆಡುತ್ತಿದ್ದಾರೆ.
ರೋಹಿತ್ ಶರ್ಮಾ ಹಾದಿಯಲ್ಲಿ ವಿರಾಟ್?
2023ರ ಏಕದಿನ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ಅಬ್ಬರಿಸಿ ಎದುರಾಳಿಗಳನ್ನು ಕಂಗೆಡಿಸುತ್ತಿದ್ದರು. ಅವರ ಆಟದಲ್ಲಿ ವೈಯಕ್ತಿಕ ರನ್‌ಗಳಿಗಿಂತ ತಂಡದ ಮೇಲುಗೈ ಸಾಧಿಸುವ ಉದ್ದೇಶವಿತ್ತು. ಈಗ ಕೊಹ್ಲಿ ಕೂಡ ಅದೇ ಹಾದಿಯಲ್ಲಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಚೆಂಡು ಹೊಸದಿರುತ್ತದೆ. ಇದನ್ನು ರಕ್ಷಣಾತ್ಮಕವಾಗಿ ಆಡುವ ಬದಲು, ಅವಕಾಶವನ್ನಾಗಿ ಪರಿವರ್ತಿಸಿ ಬೌಲರ್‌ಗಳ ಲಯ ತಪ್ಪಿಸುವುದು ಕೊಹ್ಲಿಯ ಹೊಸ ರಣತಂತ್ರವಾಗಿದೆ.
ಸಾಬೀತುಪಡಿಸಲು ಇನ್ನೇನೂ ಉಳಿದಿಲ್ಲ
"ನನ್ನ ಕ್ರಿಕೆಟ್ ಪ್ರಯಾಣ ಒಂದು ಕನಸಿನಂತೆ. ದೇವರು ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚನ್ನೇ ನೀಡಿದ್ದಾನೆ. ನನಗೆ ಕೃತಜ್ಞತೆ ಇದೆಯೇ ಹೊರತು, ಇನ್ಯಾವುದೇ ಹಪಹಪಿ ಇಲ್ಲ," ಎಂಬ ಕೊಹ್ಲಿಯ ಮಾತುಗಳು ಅವರು ಎಷ್ಟು ನಿರಾಳವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರಿಗೆ ಈಗ ಜಗತ್ತಿಗೆ ಅಥವಾ ಟೀಕಾಕಾರರಿಗೆ ಸಾಬೀತುಪಡಿಸಲು ಏನೂ ಉಳಿದಿಲ್ಲ. ಹೀಗಾಗಿ, ಅವರು ಮೈಲಿಗಲ್ಲುಗಳ ಲೆಕ್ಕಾಚಾರ ಬಿಟ್ಟು, ಮುಕ್ತ ಮನಸ್ಸಿನಿಂದ ಕ್ರಿಕೆಟ್ ಆನಂದಿಸುತ್ತಿದ್ದಾರೆ. ವಡೋದರದಲ್ಲಿ ಕಂಡದ್ದು ಕೇವಲ ರನ್‌ಗಳಲ್ಲ, ಅದು ವಿರಾಟ್ ಅವರ 'ಫಿಯರ್‌ಲೆಸ್' (ನಿರ್ಭೀತ) ಆಟದ ಮುನ್ನುಡಿ.

