Paris Olympics 2024| ವಿನೇಶ್ ಫೋಗಟ್ ಅನರ್ಹತೆ: ನಿಯಮ ಏನು ಹೇಳುತ್ತದೆ?


ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಫೈನಲ್‌ನಲ್ಲಿ ಸ್ಪರ್ಧಿಸಲು 100 ಗ್ರಾಂ ಅಧಿಕ ತೂಕದ ಕಾರಣದಿಂದ ಬುಧವಾರ (ಆಗಸ್ಟ್ 7) ಅನರ್ಹಗೊಂಡಿದ್ದಾರೆ.

50 ಕೆಜಿ ಮಹಿಳೆಯರ ಫೈನಲ್ ತಲುಪಿದ್ದ ಪೋಗಟ್‌, ಬುಧವಾರ ಸಂಜೆ ಚಿನ್ನದ ಪದಕಕ್ಕೆ ಸ್ಪರ್ಧಿಸಬೇಕಿತ್ತು.ಅವರ ಎದುರಾಳಿ ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ), ಸಂಘಟಕರ ತೀರ್ಪನ್ನು ಒಪ್ಪಿಕೊಂಡಿದೆ ಮತ್ತು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ಪ್ರತಿಯೊಬ್ಬರನ್ನು ಕೇಳಿಕೊಂಡಿದೆ. ʻಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡ ವಿಷಾದದಿಂದ ಹಂಚಿಕೊಳ್ಳುತ್ತದೆ. ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂ ಅಧಿಕ ತೂಕ ಹೊಂದಿದ್ದರು. ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ಕೋರುತ್ತೇವೆ. ನಡೆಯಬೇಕಿರುವ ಸ್ಪರ್ಧೆಗಳ ಮೇಲೆ ಲಕ್ಷ್ಯ ಹರಿಸಲು ಬಯಸುತ್ತದೆ,ʼ ಎಂದು ಐಒಎ ಹೇಳಿದೆ.

ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ನಿಯಮಗಳು ಅಧಿಕ ತೂಕದ ಬಗ್ಗೆ ಏನು ಹೇಳುತ್ತದೆ?: ಅಧ್ಯಾಯ 3ರ 'ಸ್ಪರ್ಧೆ ಪ್ರಕ್ರಿಯೆ' ಅಡಿಯಲ್ಲಿ ತೂಕ ಕುರಿತು ವಿಭಾಗ 11 ಇದೆ.

ಅಧ್ಯಾಯ 3ರ 'ಸ್ಪರ್ಧೆ ಪ್ರಕ್ರಿಯೆ' ಅಡಿಯಲ್ಲಿ ತೂಕ ಕುರಿತು ವಿಭಾಗ 11ರ ಪ್ರಕಾರ.,

ಸ್ಪರ್ಧೆ ನಡೆಯಬೇಕಿರುವ ದಿನದ ಬೆಳಗ್ಗೆ ತೂಕವನ್ನು ಅಳೆಯ ಲಾಗುತ್ತದೆ. ತೂಕ ಮತ್ತು ವೈದ್ಯಕೀಯ ನಿಯಂತ್ರಣ 30 ನಿಮಿಷ ಇರುತ್ತದೆ.

ಸಂಬಂಧಿಸಿದ ತೂಕ ವಿಭಾಗದ ಎರಡನೇ ಬೆಳಗ್ಗೆ ಫೈನಲ್‌ನಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ತೂಕಕ್ಕೆ ಬರಬೇಕು. ಇದು 15 ನಿಮಿಷ ಇರುತ್ತದೆ.

ಮೊದಲ ದಿನ ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಗಾಗದವರ ತೂಕ ಮಾಡಲಾಗುವುದಿಲ್ಲ.ಕುಸ್ತಿಪಟುಗಳು ತಮ್ಮ ಪರವಾನಗಿ ಮತ್ತು ಮಾನ್ಯತೆ ಯೊಂದಿಗೆ ವೈದ್ಯಕೀಯ ಪರೀಕ್ಷೆ ಮತ್ತು ತೂಕ ಲೆಕ್ಕಾಚಾರದಲ್ಲಿ ಕಾಣಿಸಿಕೊಳ್ಳಬೇಕು.

ತೂಕ‌ ಮಾಡುವಾಗ ಬಿಗಿ ಕವಚ(ಸಿಂಗ್ಲೆಟ್) ಮಾತ್ರ ಅನುಮತಿಸಿದ ದಿರಿಸಾಗಿರುತ್ತದೆ. ವೈದ್ಯರು ಸಾಂಕ್ರಾಮಿಕ ರೋಗ ಇಲ್ಲ ಎಂದು ಖಾತ್ರಿಪಡಿಸಿದ ಬಳಿಕವಷ್ಟೇ ಆಟಗಾರನನ್ನು ತೂಕ ಮಾಡಲಾಗುತ್ತದೆ.

ಸ್ಪರ್ಧಿಗಳು ಪರಿಪೂರ್ಣ ದೈಹಿಕ ಸ್ಥಿತಿಯಲ್ಲಿರಬೇಕು; ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಬೇಕು. ಆಟಗಾರರು ಬಯಸಿದಷ್ಟು ಬಾರಿ ತೂಕ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.

ತೂಕಕ್ಕೆ ಜವಾಬ್ದಾರರಾಗಿರುವ ರೆಫರಿಗಳು, ಕುಸ್ತಿಪಟುಗಳು ಅವರು ಸ್ಪರ್ಧೆಗೆ ಪ್ರವೇಶಿಸಿದ ವಿಭಾಗಕ್ಕೆ ಅನುಗುಣವಾದ ತೂಕವನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಬೇಕು. ಆರ್ಟಿಕಲ್ 5 ರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾರೆಯೇ ಎಂದು ಪರಿಶೀಲಿಸಬೇಕು ಮತ್ತು ತಪ್ಪಾದ ಉಡುಪಿನಲ್ಲಿ ಆಗಮಿಸಿದರೆ ಆಗುವ ಅಪಾಯದ ಬಗ್ಗೆ ಕುಸ್ತಿಪಟುವಿಗೆ ತಿಳಿಸಬೇಕು. ಸಮರ್ಪಕ ಉಡುಪು ಧರಿಸದ ಕುಸ್ತಿಪಟುವಿನ ತೂಕ ಮಾಡಲು ರೆಫರಿಗಳು ನಿರಾಕರಿಸಬಹುದು.

ತೂಕ ಮಾಡುವ ಜವಾಬ್ದಾರಿ ಹೊತ್ತಿರುವ ತೀರ್ಪುಗಾರರು, ಸ್ಪರ್ಧೆಯ ಮಾಹಿತಿ ಪಡೆದುಕೊಂಡು, ಪಟ್ಟಿಯಲ್ಲಿರುವ ಕ್ರೀಡಾಪಟುಗಳ ತೂಕವನ್ನು ಮಾತ್ರ ಮಾಡುತ್ತಾರೆ.

ಅಥ್ಲೀಟ್ ತೂಕಕ್ಕೆ ಹಾಜರಾಗದಿದ್ದರೆ ಅಥವಾ ಸರಿಯಾದ ತೂಕ ಇರದಿದ್ದರೆ (1ನೇ ಅಥವಾ 2ನೇ ತೂಕದಲ್ಲಿ), ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾನೆ; ಶ್ರೇಯಾಂಕವಿಲ್ಲದೆ ಕೊನೆಯ ಸ್ಥಾನದಲ್ಲಿರುತ್ತಾನೆ.

ಒಬ್ಬ (ಅಥವಾ ಹೆಚ್ಚು) ಅಥ್ಲೀಟ್‌ಗಳು ತೂಕದಲ್ಲಿ ವಿಫಲರಾದರೆ, ಎರಡನೇ ಬಾರಿ ತೂಕದಲ್ಲಿ ಯಶಸ್ವಿಯಾದವರು ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ.

ಒಂದುವೇಳೆ ಎಲ್ಲಾ ಅಥ್ಲೀಟ್‌ಗಳು ಎರಡನೇ ತೂಕಕ್ಕೆ ಹಾಜರಾಗದಿದ್ದರೆ ಅಥವಾ ವಿಫಲವಾದರೆ, ವೈಯಕ್ತಿಕ ಶ್ರೇಯಾಂಕದ ಮಾನದಂಡದ ಅನ್ವಯ ಶ್ರೇಯಾಂಕವನ್ನು ಮಾಡಲಾಗುತ್ತದೆ.

Read More
Next Story