
ನ್ಯೂಜಿಲೆಂಡ್ ಸರಣಿಗೂ ಮುನ್ನ ಅಬ್ಬರಿಸಿದ ಅಯ್ಯರ್; ವಿಜಯ್ ಹಜಾರೆ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್!
ಕಿವಿ ಪಡೆಯ ವಿರುದ್ಧದ ಸರಣಿಗೂ ಮುನ್ನ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ.
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ದೇಶಿಯ ಏಕದಿನ ಟೂರ್ನಿ ವಿಜಯ ಹಜಾರೆಯಲ್ಲಿ ಹಿಮಾಚಲ ಪ್ರದೇಶ ವಿರುದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ನ್ಯೂಜಿಲೆಂಡ್ ವಿರುದ್ಧ ಜ.11ರಿಂದ ನಡೆಯುವ ಏಕದಿನ ಸರಣಿಗೆ ಸಂಪೂರ್ಣ ಫಿಟ್ ಆಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿಯವ ಮೂಲಕ ಔಟ್ ಮಾಡಿದ್ದರು. ಆದರೆ ಈ ವೇಳೆ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬುಗಳಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅಲ್ಲೇ ಕುಸಿದು ಬಿದ್ದಿದ್ದ ಅವರನ್ನು ಮೈದಾನದಿಂದ ನೇರವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಅವರ ಗುಲ್ಮದಲ್ಲಿ ಗಾಯಗಳಾಗಿರುವುದು ವೈದ್ಯಕೀಯ ತಪಾಸಣೆಯಿಂದ ಪತ್ತೆಯಾಗಿತ್ತು. ನಂತರ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದ ಅವರನ್ನು ಷರತ್ತಿನ ಮೇರೆಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ವಿಜಯ್ ಹಜಾರೆಯಲ್ಲಿ ಉತ್ತಮ ಬ್ಯಾಟಿಂಗ್
ಭಾರತ ಏಕದಿನ ಮಾದರಿಯ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ದಾಖಲೆ ಹೊಂದಿರುವ ಶ್ರೇಯಸ್ ಅಯ್ಯರ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿನ ವೈದ್ಯರಿಂದ ಫಿಟ್‌ನೆಸ್ ಪ್ರಮಾಣ ಪತ್ರ ಪಡೆಯಬೇಕು ಎಂಬ ಷರತ್ತಿನೊಂದಿಗೆ ಏಕದಿನ ತಂಡಕ್ಕೆ ಉಪನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂಬೈ ತಂಡದ ನಾಯಕನಾಗಿ ಕೇವಲ 53 ಎಸೆತದಲ್ಲಿ ಹತ್ತು ಫೋರ್ ಹಾಗೂ ಮೂರು ಸಿಕ್ಸರ್ ನೆರವಿನಿಂದ 82 ರನ್ ಸಿಡಿಸಿರುವುದು ಭಾರತ ತಂಡಕ್ಕೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಏಕದಿನದಲ್ಲಿ 47 ಸರಾಸರಿ
ಇತ್ತೀಚಿನ ವರ್ಷದಲ್ಲಿ ಭಾರತ ಏಕದಿನ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಅಯ್ಯರ್ 73 ಏಕದಿನ ಪಂದ್ಯದಲ್ಲಿ 47.82 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು, 2,917 ರನ್ ಕಲೆಹಾಕಿದ್ದು, ಹಲವು ಪಂದ್ಯಗಳಲ್ಲಿ ಕೊನೆವರೆಗೂ ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ.

