ಪಿಟಿ ಉಷಾ, ಮೇರಿ ಕೋಮ್ ವಿರುದ್ಧ ಸಾಕ್ಷಿ ಮಲಿಕ್ ವಾಗ್ದಾಳಿ
ಪಿಟಿ ಉಷಾ ಮತ್ತು ಮೇರಿ ಕೋಮ್ ವಿರುದ್ಧ ಭಾರತದ ನಿವೃತ್ತ ಕುಸ್ತಿಪಟು ಸಾಕ್ಷಿ ಮಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ
ತಿರುವನಂತಪುರಂ: ಭಾರತ ಕುಸ್ತಿ ಒಕ್ಕೂಟದ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ಕುಸ್ತಿಪಟುಗಳು ನಡೆಸಿದ ಸಾರ್ವಜನಿಕ ಪ್ರತಿಭಟನೆಗೆ ಬೆಂಬಲ ನೀಡದಿದ್ದಕ್ಕಾಗಿ ಕ್ರೀಡಾಪಟುಗಳಾದ ಪಿಟಿ ಉಷಾ ಮತ್ತು ಮೇರಿ ಕೋಮ್ ವಿರುದ್ಧ ಭಾರತದ ನಿವೃತ್ತ ಕುಸ್ತಿಪಟು ಸಾಕ್ಷಿ ಮಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಷಾ ಮತ್ತು ಮೇರಿ ಕೋಮ್ ಅವರನ್ನು ಕ್ರೀಡಾಪಟುಗಳು "ಸ್ಫೂರ್ತಿ" ಎಂದು ಭಾವಿಸುತ್ತಾರೆ. ಆದರೂ ನೊಂದ ಮಹಿಳಾ ಕುಸ್ತಿಪಟುಗಳ ಕಥೆಯನ್ನು ಕೇಳಿದರೂ ಅವರ ಪರವಾಗಿ ಮಾತನಾಡಲಿಲ್ಲ ಎಂದು ಮಲಿಕ್ ಹೇಳಿದರು.
ಇಲ್ಲಿನ ಕನಕಕ್ಕುನ್ನುನಲ್ಲಿ ನಡೆಯುತ್ತಿರುವ ಮಾತೃಭೂಮಿ ಇಂಟರ್ನ್ಯಾಶನಲ್ ಫೆಸ್ಟಿವಲ್ ಆಫ್ ಲೆಟರ್ಸ್ (ಎಂಬಿಐಎಫ್ಎಲ್) 2024 ರ ಅಂಗವಾಗಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಒಲಿಂಪಿಕ್ ಪದಕ ವಿಜೇತರು ಮಾತನಾಡಿದರು.
ತಮ್ಮ ಆಂದೋಲನದ ಬಗ್ಗೆ ಕ್ರೀಡಾ ತಾರೆಯರ ಪ್ರತಿಕ್ರಿಯೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ ಅವರು, ಇಬ್ಬರೂ ಕುಸ್ತಿಪಟುಗಳಿಗೆ ಎಲ್ಲಾ ಬೆಂಬಲವನ್ನು ಭರವಸೆ ನೀಡಿದ್ದಾರೆ ಆದರೆ ಯಾವುದೇ ಪರಿಹಾರವನ್ನು ಕಂಡುಹಿಡಿಯಲು ಏನನ್ನೂ ಮಾಡಲಿಲ್ಲ ಎಂದು ಹೇಳಿದರು.
"ಪಿಟಿ ಉಷಾ ಮೇಡಂ ನಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ನಾವು ಅವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ವಿವರವಾಗಿ ಹೇಳಿದ್ದೇವೆ, ಅವರು ನಮಗೆ ಬೆಂಬಲ ನೀಡಬಹುದಿತ್ತು, ಆದರೆ ಅವರು ನಮ್ಮೊಂದಿಗೆ ನಿಲ್ಲುತ್ತಾರೆ ಮತ್ತು ಎಲ್ಲಾ ಸಹಾಯವನ್ನು ನೀಡುತ್ತಾರೆ ಎಂದು ಭರವಸೆ ನೀಡಿದರೂ ಅವರು ಮೌನವಾಗಿದ್ದಾರೆ ಎಂದು ಮಲಿಕ್ ಹೇಳಿದರು.
ಇನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ತನಿಖೆ ಮತ್ತು ವರದಿಯನ್ನು ಸಲ್ಲಿಸಲು ರಚಿಸಲಾದ ಮೇಲ್ವಿಚಾರಣಾ ಸಮಿತಿಯಲ್ಲಿ ಕೋಮ್ ಸದಸ್ಯರಾಗಿದ್ದರು. ದೂರುದಾರರು ಆಘಾತಕಾರಿ ವಿವರಗಳನ್ನು ಹೇಳಿದಾಗ ಬಾಕ್ಸಿಂಗ್ ಐಕಾನ್ ತುಂಬಾ ಭಾವನಾತ್ಮಕ ವಾಗಿದ್ದರು ಎಂದು ಮಲಿಕ್ ನೆನಪಿಸಿಕೊಂಡರು. ಆದರೆ ತಿಂಗಳು ಕಳೆದರೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ಮಹಿಳಾ ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಳಿಕ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರಂತಹ ಕುಸ್ತಿ ಕ್ರೀಡಾಪಟುಗಳು ಹೊಸದಿಲ್ಲಿಯಲ್ಲಿ ಧರಣಿ, ಪ್ರತಿಭಟನೆ ನಡೆಸಿದ್ದರು.
ಭೂಷಣ್ ಅವರ ಸಹಾಯಕ ಸಂಜಯ್ ಸಿಂಗ್ ಅವರನ್ನು ಡಬ್ಲ್ಯುಎಫ್ಐ ಮುಖ್ಯಸ್ಥರಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಪುನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಮಲಿಕ್ ಕೂಡ ಇದೇ ಕಾರಣಕ್ಕೆ ಕುಸ್ತಿಯನ್ನು ತೊರೆದಿದ್ದರು.