ಭಾರತದ ಖ್ಯಾತ ಹಾಕಿ ಆಟಗಾರನ ಮೇಲೆ ಪೋಕ್ಸೋ ಪ್ರಕರಣ ದಾಖಲು
ಅಪ್ರಾಪ್ತ ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪದಡಿ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ವಿರುದ್ಧ ಪೋಕ್ಸೋ ಕಾಯಿದೆ ದಾಖಲಾಗಿದೆ.
ಬೆಂಗಳೂರು: ಅರ್ಜುನ ಪ್ರಶಸ್ತಿ ವಿಜೇತ ಭಾರತದ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ಅವರ ಮೇಲೆ ಪೋಕ್ಸೋ ಕಾಯಿದೆಯಡಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅಪ್ರಾಪ್ತ ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ವಂಚನೆ ಮಾಡಿದ ಆರೋಪದಡಿ ಎಫ್ ಐ ಆರ್ ದಾಖಲಾಗಿದ್ದು, 2019ರಲ್ಲಿ ಸಂತ್ರಸ್ತ ಯುವತಿಗೆ 17 ವರ್ಷ ಇರುವಾಗಲೇ ಆರೋಪಿ ವರುಣ್ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
ನಾನು ಕುಮಾರ್ ಅವರನ್ನು ಭೇಟಿಯಾದಾಗ ಅವರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು. ಡಿನ್ನರ್ ನೆಪದಲ್ಲಿ ಜಯನಗರದ ಹೊಟೇಲ್‌ಗೆ ಕರೆದುಕೊಂಡು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದರು. ಬಳಿಕ ವರುಣ್ ಕುಮಾರ್ ಮದುವೆಯ ನೆಪದಲ್ಲೇ ಕಳೆದ ಐದು ವರ್ಷಗಳಿಂದ ಹಲವಾರು ಸಂದರ್ಭಗಳಲ್ಲಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ. ಆದರೆ ನನ್ನ ತಂದೆಯ ಮರಣದ ನಂತರ ಕೆಲ ತಿಂಗಳಿನಿಂದ ವರಣ್ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಈಗ ನನ್ನ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ನಾವು ಹಾಕಿ ಆಟಗಾರನ ವಿರುದ್ಧ ಭಾರತೀಯ ದಂಡ ಸಂಹಿತೆ ಸೂಕ್ತ ಸೆಕ್ಷನ್ ಅಡಿಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಮತ್ತು ಸೆಕ್ಷನ್ 376 (ಅತ್ಯಾಚಾರ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲತಃ ಹಿಮಾಚಲ ಪ್ರದೇಶದವರಾದ ವರುಣ್ ಕುಮಾರ್ ಅವರು 2017 ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಪುರುಷರ ಹಾಕಿ ತಂಡದಲ್ಲಿದ್ದರು. ಆಗ ಹಿಮಾಚಲ ಪ್ರದೇಶ ಸರ್ಕಾರವು ಕುಮಾರ್‌ಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಅವರು 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇದರೊಂದಿಗೆ ಇವರು ಅರ್ಜುನ ಪ್ರಶಸ್ತಿಹಾ ಪುರಸ್ಕೃತರು ಆಗಿದ್ದಾರೆ.