Paris Olympics 2024 | ಟೇಬಲ್‌ ಟೆನಿಸ್ : ಮಣಿಕಾ ನೇತೃತ್ವದ ತಂಡ ಕ್ವಾರ್ಟರ್ ಫೈನಲ್‌ಗೆ
x

Paris Olympics 2024 | ಟೇಬಲ್‌ ಟೆನಿಸ್ : ಮಣಿಕಾ ನೇತೃತ್ವದ ತಂಡ ಕ್ವಾರ್ಟರ್ ಫೈನಲ್‌ಗೆ


ಪ್ಯಾರಿಸ್: ಭಾರತೀಯ ಮಹಿಳಾ ಟೇಬಲ್ ಟೆನಿಸ್ ತಂಡವು ಉನ್ನತ ಶ್ರೇಯಾಂಕದ ರೊಮೇನಿಯಾ ವಿರುದ್ಧ 3-2 ರಿಂದ ಮೇಲುಗೈ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ.

ಮೊದಲು 2-0ಯಲ್ಲಿ ಮುನ್ನಡೆ ಸಾಧಿಸಿದ್ದ ಭಾರತದ ವಿರುದ್ಧ ದಿಟ್ಟ ಹೋರಾಟ ನಡೆಸಿದ ರೊಮೇನಿಯಾ 2-2ರಲ್ಲಿ ಸಮಬಲ ಸಾಧಿಸಿತು. ಆದರೆ, ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ತಂಡವನ್ನು ಕ್ವಾರ್ಟರ್ ಫೈನಲ್‌ ಗೆ ತಲುಪಿಸಿದರು.

ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಅವರು ಡಬಲ್ಸ್ ಪಂದ್ಯದಲ್ಲಿ ಆದಿನಾ ಡಯಾಕೊನು ಮತ್ತು ಎಲಿಜಬೆಟಾ ಸಮರಾ ವಿರುದ್ಧ 11-9 12-10 11-7 ಅಂತರದಲ್ಲಿ ಜಯಗಳಿಸಿದರು.

ಮಣಿಕಾ ಅವರು ಉನ್ನತ ಶ್ರೇಯಾಂಕದ ಬರ್ನಾಡೆಟ್ ಸ್ಜೋಕ್ಸ್ ಅವರನ್ನು 11-5, 11-7, 11-7 ರಲ್ಲಿ ಮಣಿಸಿದರು. 11ನೇ ಶ್ರೇಯಾಂಕಿತ ಭಾರತವು ನಾಲ್ಕನೇ ಶ್ರೇಯಾಂಕದ ಎದುರಾಳಿಗಳ ವಿರುದ್ಧ 2-0 ಮುನ್ನಡೆ ಸಾಧಿಸಿತು.

ಆದರೆ, ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಜಾ ಅವರು ಯುರೋಪಿಯನ್ ಚಾಂಪಿಯನ್ ಸಮರಾ ವಿರುದ್ಧ 2-3 (11-8 4-11 11-7 6-11 8-11) ಸೋಲುಂಡರು.

ಶ್ರೀಜಾ ಅವರ ಸೋಲು ಅರ್ಚನಾ ಮತ್ತು ಬರ್ನಾಡೆಟ್ ನಡುವಿನ ಮುಖಾಮುಖಿಗೆ ದಾರಿ ಮಾಡಿಕೊಟ್ಟಿತು. ಬರ್ನಾಡೆಟ್ ಮೊದಲ ಗೇಮ್ ಅನ್ನು 11-5 ರಿಂದ ಗೆದ್ದರು.‌ ಅರ್ಚನಾ ಎರಡನೇ ಗೇಮ್ 11-8 ಗೆದ್ದರು. ಬರ್ನಾಡೆಟ್ಟೆ ಮುಂದಿನ ಎರಡು ಗೇಮ್‌ಗಳನ್ನು 11-7, 11-9 ರಿಂದ ಗೆದ್ದರು. ಮಣಿಕಾ ಆನಂತರ ಅದೀನಾ ಅವರನ್ನು 3-0 (11-5, 11-9, 11-9) ಅಂತರದಿಂದ ಸೋಲಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಯುಎಸ್‌ಎ ಅಥವಾ ಜರ್ಮನಿ ವಿರುದ್ಧ ಸೆಣಸಲಿದೆ. ಜಪಾನ್, ಪೋಲೆಂಡ್, ಫ್ರಾನ್ಸ್ ಮತ್ತು ಥಾಯ್ಲೆಂಡ್ ಒಂದೇ ಗುಂಪಿನಲ್ಲಿ ಇವೆ.

ಮಣಿಕಾ ಮತ್ತು ಶ್ರೀಜಾ ಕಳೆದ ವಾರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ 16 ರ ಸುತ್ತು ತಲುಪಿದ ಮೊದಲ ಭಾರತೀಯ ಆಟಗಾರರಾಗುವ ಮೂಲಕ ಟೇಬಲ್ ಟೆನ್ನಿಸ್ ಇತಿಹಾಸ ಬರೆದಿದ್ದಾರೆ. ಆದರೆ, ಮುಂದಿನ ಹಂತದಲ್ಲಿ ಉನ್ನತ ಶ್ರೇಣಿಯ ಎದುರಾಳಿಗಳಿಗೆ ಸೋತರು.

Read More
Next Story