Paris Olympics 2024: 117 ಕ್ರೀಡಾಪಟುಗಳು,140 ಸಹಾಯಕ ಸಿಬ್ಬಂದಿಗೆ ಅವಕಾಶ
x

Paris Olympics 2024: 117 ಕ್ರೀಡಾಪಟುಗಳು,140 ಸಹಾಯಕ ಸಿಬ್ಬಂದಿಗೆ ಅವಕಾಶ


ಕ್ರೀಡಾ ಸಚಿವಾಲಯವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 117 ಕ್ರೀಡಾಪಟುಗಳು ಹಾಗೂ 140 ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒಳಗೊಂಡ ತುಕಡಿಯನ್ನು ಅಂತಿಮಗೊಳಿಸಿದೆ. ಇವರಲ್ಲಿ 72 ಮಂದಿ ಸರ್ಕಾರದ ವೆಚ್ಚದಲ್ಲಿ ಪ್ರವಾಸಿ ಕ್ರೀಡಾಪಟುಗಳು ಎಂದು ಸೇರ್ಪಡೆಯಾದವರು ಇದ್ದಾರೆ.

ಪಟ್ಟಿಯಲ್ಲಿ ಕಾಣೆಯಾಗಿರುವ ಏಕೈಕ ಅರ್ಹ ಅಥ್ಲೀಟ್ ಶಾಟ್-ಪುಟ್‌ ಎಸೆತಗಾರ್ತಿ ಅಭಾ ಖತುವಾ. ಕ್ರೀಡಾಕೂಟ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ವಿಶ್ವ ಶ್ರೇಯಾಂಕದ ಖತುವಾ ಅವರನ್ನು ಯಾವುದೇ ವಿವರಣೆ ನೀಡದೆ ಕೈಬಿಡಲಾಗಿದೆ. ಗಾಯ, ಮತ್ತಕಾರಕಗಳ ಸೇವನೆ ನಿಯಮ ಉಲ್ಲಂಘನೆ ಅಥವಾ ಇನ್ನಾವುದೇ ತಾಂತ್ರಿಕ ಸಮಸ್ಯೆಯಿಂದ ಆಕೆಯ ಹೆಸರನ್ನು ತೆಗೆದುಹಾಕಲಾಗಿದೆಯೇ ಎಂಬ ಕುರಿತು ವಿವರ ಲಭ್ಯವಾಗಿಲ್ಲ.

ಗಗನ್ ನಾರಂಗ್ ನೇತೃತ್ವ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ, ಮಾಜಿ ಶೂಟರ್ ಗಗನ್ ನಾರಂಗ್ ಅವರು ತಂಡದ ನೇತೃತ್ವ ವಹಿಸಲಿದ್ದಾರೆ. ನಾರಂಗ್ ಅವರು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯ ಉಪಾಧ್ಯಕ್ಷರೂ ಹೌದು.

ʻ2024 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಂಘಟನಾ ಸಮಿತಿಯ ಮಾನದಂಡಗಳ ಪ್ರಕಾರ, ಕ್ರೀಡಾ ಗ್ರಾಮದಲ್ಲಿ ಐವರು ವೈದ್ಯಕೀಯ ತಂಡದ ಸದಸ್ಯರು ಸೇರಿ 67 ಮಂದಿ ಬೆಂಬಲಿಗ ಸಿಬ್ಬಂದಿ ಉಳಿಯಲು ಅನುಮತಿಯಿದೆ ಎಂದು ಸಚಿವಾಲಯ ತಿಳಿಸಿದೆ.

ʻಕ್ರೀಡಾಪಟುಗಳ ಅಗತ್ಯಗಳನ್ನು ಪೂರೈಸಲು 72 ಮಂದಿ ಹೆಚ್ಚುವರಿ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಸರ್ಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದೆ. ಅವರ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿದೆ,ʼ ಎಂದು ಸಚಿವಾಲಯ ಹೇಳಿದೆ.

ಅಥ್ಲೆಟಿಕ್ಸ್ ದೊಡ್ಡ ಗುಂಪು: ಅಥ್ಲೆಟಿಕ್ಸ್ ತಂಡದಲ್ಲಿ 29 (11 ಮಹಿಳೆಯರು ಮತ್ತು 18 ಪುರುಷರು) ಮಂದಿ ಇದ್ದು, ಶೂಟಿಂಗ್ (21), ಹಾಕಿ (19), ಟೇಬಲ್ ಟೆನಿಸ್ 8 ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಸೇರಿದಂತೆ 7 ಸ್ಪರ್ಧಿಗಳು ಇದ್ದಾರೆ.

ಕುಸ್ತಿ, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್ ತಲಾ 6, ಗಾಲ್ಫ್ (4), ಟೆನಿಸ್ (3), ಈಜು (2), ಸೇಲಿಂ‌ಗ್(2),ಕುದುರೆ ಸವಾರಿ, ಜೂಡೋ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ಗೆ ತಲಾ ಒಬ್ಬರು ಇದ್ದಾರೆ. ಶೂಟಿಂಗ್ ತಂಡದಲ್ಲಿ 11 ಮಹಿಳೆಯರು ಮತ್ತು 10 ಪುರುಷರು ಹಾಗೂ ಟೇಬಲ್ ಟೆನ್ನಿಸ್ ಎರಡೂ ವಿಭಾಗಗಳಲ್ಲಿ ತಲಾ ನಾಲ್ವರು ಆಟಗಾರರು ಇರಲಿದ್ದಾರೆ. ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು, ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 119 ಸದಸ್ಯರು ಪಾಲ್ಗೊಂಡಿದ್ದರು. ನೀರಜ್ ಚೋಪ್ರಾ ಅವರ ಐತಿಹಾಸಿಕ ಜಾವೆಲಿನ್ ಥ್ರೋ ಚಿನ್ನ ಸೇರಿದಂತೆ ಏಳು ಪದಕ ಗಳಿಸಿತು. ಚೋಪ್ರಾ ಪ್ಯಾರಿಸ್‌ನಲ್ಲಿ ಸ್ಪರ್ಧಿಸುವರು.

ಶೂಟಿಂಗಿಗೆ ಅಧಿಕ ಸಹಾಯಕ ಸಿಬ್ಬಂದಿ: ಶೂಟಿಂಗ್ (18) ಅತ್ಯಧಿಕ ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಹೊಂದಿರಲಿದೆ. ಅಥ್ಲೆಟಿಕ್ಸ್ 17 ಸಹಾಯಕ ಸಿಬ್ಬಂದಿ, ಕುಸ್ತಿ (12), ಬಾಕ್ಸಿಂಗ್ (11), ಹಾಕಿ (10), ಟೇಬಲ್ ಟೆನ್ನಿಸ್ (9), ಬ್ಯಾಡ್ಮಿಂಟನ್ (9), ಗಾಲ್ಫ್ (7), ಈಕ್ವೆಸ್ಟ್ರಿಯನ್ (5), ಬಿಲ್ಲುಗಾರಿಕೆ (4) , ವೇಟ್‌ಲಿಫ್ಟಿಂಗ್ (4) ಟೆನಿಸ್ (3), ಈಜು (2) ಮತ್ತು ಜೂಡೋ (1)‌ ಸಹಾಯಕ ಸಿಬ್ಬಂದಿ ಇರುತ್ತಾರೆ. ಪ್ಯಾರಿಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಏರ್ ಕಮೋಡೋರ್ ಪ್ರಶಾಂತ್ ಆರ್ಯ ಅವರು ಒಲಿಂಪಿಕ್ ಅಟ್ಯಾಚ್ ಆಗಿರುತ್ತಾರೆ.

ಡೋಪಿಂಗ್ ನಿಯಂತ್ರಣ: ಪ್ಯಾರಿಸ್‌ನಲ್ಲಿ ಡೋಪಿಂಗ್ ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಐಒಎ ಮತ್ತು ಸಂಬಂಧಪಟ್ಟ ಫೆಡರೇಶನ್‌ಗಳನ್ನುಸರ್ಕಾರ ಕೇಳಿದೆ. ʻಐಒಎ, ಎಸ್‌ಎಐ , ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಮತ್ತು ಸಂಬಂಧಿತ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಸಾಮರ್ಥ್ಯ ವರ್ಧಕಗಳ ಪರೀಕ್ಷೆ ನಡೆಸಬೇಕು. ಐಒಎ ನಿರ್ಗಮಿಸುವ ಮೊದಲು ತಂಡ/ವೈಯಕ್ತಿಕ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಬೇಕು,ʼ ಎಂದು ಹೇಳಿದೆ.

Read More
Next Story