Paris Olympics| ಲಾಸ್‌ ಏಂಜಲೀಸ್‌ ನಲ್ಲಿ ಮುಂದಿನ ಒಲಿಂಪಿಕ್ಸ್‌ : ಭಾರತಕ್ಕೆ ಒಟ್ಟು 6 ಪದಕ
x
ಪ್ಯಾರಿಸ್‌ನಲ್ಲಿರುವ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಒಲಿಂಪಿಕ್ಸ್‌ನ ಮುಕ್ತಾಯ ಸಮಾರಂಭದಲ್ಲಿ ಭಾನುವಾರ ಫೀನಿಕ್ಸ್‌ ಬ್ಯಾಂಡ್ ಪ್ರದರ್ಶನ ನೀಡುತ್ತಿರುವುದು

Paris Olympics| ಲಾಸ್‌ ಏಂಜಲೀಸ್‌ ನಲ್ಲಿ ಮುಂದಿನ ಒಲಿಂಪಿಕ್ಸ್‌ : ಭಾರತಕ್ಕೆ ಒಟ್ಟು 6 ಪದಕ


ಪ್ಯಾರಿಸ್: ದೈತ್ಯಾಕಾರದ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣವು ಹದಿನೈದು ದಿನಗಳ ಸಂಭ್ರಮಾಚರಣೆಗೆ ಸನ್ನದ್ಧಗೊಂಡಿತ್ತು. ಸಮಾರೋಪ ಸಮಾರಂಭದ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದ್ದು, ಮುಂದಿನ ಆವೃತ್ತಿ ಲಾಸ್‌ ಏಂಜಲೀಸ್‌ ನಲ್ಲಿ ನಡೆಯಲಿದೆ.

ಸೀನ್ ನದಿಯಲ್ಲಿ ನಡೆದ ಸುಮಾರು ನಾಲ್ಕು ಗಂಟೆ ಕಾಲ ನಡೆದ ಉದ್ಘಾಟನೆ ಸಮಾರಂಭವು ನಗರದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಿತ್ತು. ಆದರೆ, ಸಮಾರೋಪ ಸಮಾರಂಭ ಹರಿಯುತ್ತಿರುವ ಸಂಜೆಯಂತೆ ಅನಾವರಣಗೊಂಡಿತು. ಮೆಗಾ ಸ್ಟಾರ್ ಟಾಮ್ ಕ್ರೂಸ್ ಸೇರಿದಂತೆ ಹಾಲಿವುಡ್‌ನ ತಾರೆಯರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಹೇಳಿದರು: ʻಇದು ಆರಂಭದಿಂದ ಅಂತ್ಯದವರೆಗೆ ಸಂವೇದನಾಶೀಲವಾಗಿದ್ದ ಒಲಿಂಪಿಕ್ ಕ್ರೀಡಾಕೂಟ. ಮಾನವರು ಎಂತಹ ಶ್ರೇಷ್ಠತೆಯನ್ನು ಹೊಂದಿದ್ದಾರೆ ಎಂಬುದನ್ನು ಈ ಕ್ರೀಡಾಕೂಟ ತೋರಿಸಿದೆ. ದೇಶಗಳು ವಿಭಜನೆಯಾಗಿದ್ದರೂ ಇಲ್ಲವೇ ಯುದ್ಧದಲ್ಲಿ ತೊಡಗಿಕೊಂಡಿದ್ದರೂ, ಪರಸ್ಪರ ಗೌರವಿಸಿದ್ದೀರಿ. ಎಲ್ಲರಿಗೂ ಉತ್ತಮ ಪ್ರಪಂಚವಿದೆ ಎಂಬುದನ್ನು ನಂಬುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಒಲಿಂಪಿಕ್ ಕ್ರೀಡಾಕೂಟವು ಶಾಂತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ; ಆದರೆ, ಅದು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಬಹುದು,ʼ ಎಂದು ಬ್ಯಾಚ್ ಹೇಳಿದರು.

ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಆಗಮಿಸಲಿದ್ದಾರೆ ಎಂಬ ವದಂತಿಯಿತ್ತು. ಅವರು ನಿರಾಶೆಗೊಳಿಸಲಿಲ್ಲ. ಸ್ಟೇಡಿಯಂನ ಮೇಲಿನಿಂದ ʻಮಿಷನ್ ಇಂಪಾಸಿಬಲ್ʼ ಹಾಡಿಗೆ ದನಿಗೂಡಿಸಿದರು; ವೇದಿಕೆಗೆ ತೆರಳುತ್ತಿದ್ದ ಕ್ರೀಡಾಪಟುಗಳಿಗೆ ಹಸ್ತಲಾಘವ ನೀಡಿದರು. ಸ್ಟಾರ್ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರಿಂದ ಧ್ವಜ‌ವನ್ನು ಸ್ವೀಕರಿಸಿ, ಲಾಸ್ ಏಂಜಲೀಸ್‌ಗೆ ಹೊರಡಲು ಸಿದ್ಧವಾಗಿದ್ದ ವಿಮಾನಕ್ಕೆ ಪ್ಯಾರಿಸ್ಸಿನ ಬೀದಿಗಳ ಮೂಲಕ ಬೈಕ್‌ನಲ್ಲಿ ಕೊಂಡೊಯ್ದರು.

ಬಳಿಕ ಸೈಕ್ಲಿಸ್ಟ್ ಒಬ್ಬರು ಧ್ವಜವನ್ನು ನಾಲ್ಕು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ಟ್ರ್ಯಾಕ್ ದಂತಕಥೆ ಮೈಕೆಲ್ ಜಾನ್ಸನ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು. ಜಾಕ್ಸನ್‌ ಅವರು ಧ್ವಜವನ್ನು ವೆನಿಸ್ ಬೀಚ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ ದಂತಕಥೆ ಜಾಗರ್ ಈಟನ್‌ಗೆ ಹಸ್ತಾಂತರಿಸಿದರು.

ಇದಕ್ಕೂ ಮೊದಲು ಥಾಮಸ್ ಜಾಲಿ ರೂಪಿಸಿದ ಎರಡು ಗಂಟೆಗಳ ಪ್ರದರ್ಶನವು ಗೇಮ್ಸ್‌ನ ಆತಿಥೇಯ ನಗರ ಕುರಿತ ಹಾಡಿನೊಂದಿಗೆ ಪ್ರಾರಂಭವಾಯಿತು. ಫ್ರೆಂಚ್ ಗಾಯಕ ಜಹೋ ಡಿ ಸಗಾಜನ್ ಅವರು ಪ್ರಸಿದ್ಧ 'ಸೌಸ್ ಲೆ ಸಿಯೆಲ್ ಡಿ ಪ್ಯಾರಿಸ್' ಹಾಡು ಹಾಡಿದರು; ಅದು ಜಗತ್ತಿಗೆ ಪ್ಯಾರಿಸ್‌ನ ಸಂಕೇತವಾಯಿತು.

205 ನಿಯೋಗಗಳ ಧ್ವಜಧಾರಿಗಳು ಫ್ರಾನ್ಸ್‌ನ ದೈತ್ಯಾಕಾರದ ಸ್ಟೇಡಿಯಂ ಪ್ರವೇಶಿಸಿದರು. ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ವೇದಿಕೆಯಲ್ಲಿ ಕ್ರೀಡಾಪಟುಗಳು ಧ್ವಜಗಳನ್ನು ಬೀಸುತ್ತ ಪರಸ್ಪರ ಬೆರೆತು ಮುನ್ನಡೆದರು.

ಒಲಿಂಪಿಕ್ಸ್ ಎಂದರೆ ಒಳಗೊಳ್ಳುವಿಕೆ ಮತ್ತು ಲಿಂಗ ಸಮಾನತೆ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಮ್ಯಾರಥಾನ್ ಮೂಲಕ ಚತುರ್ವಾರ್ಷಿಕ ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು ಮತ್ತು ಮುಕ್ತಾಯ ಸಮಾರಂಭದ ಮಧ್ಯದಲ್ಲೇ ಪದಕಗಳನ್ನು ನೀಡಲಾಯಿತು.

ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಶ್ರಮಿಸಿದ 45,000ಕ್ಕೂ ಅಧಿಕ ಸ್ವಯಂಸೇವಕರನ್ನು ಸಂಘಟಕರು ಗುರುತಿಸಿ, ಅವರಿಗೆ ಕ್ರೀಡಾಪಟುಗಳ ಜೊತೆಗೆ ಸ್ಥಾನ ನೀಡುವ ಮೂಲಕ ಗೌರವಿಸಿದರು.

ಗಾಯಕ ಜಾಲಿ ತನ್ನ ಮಾಂತ್ರಿಕ ಗಾಯನ ಮತ್ತು ಫ್ರೆಂಚ್ ಸಂಗೀತಗಾರ ಮತ್ತು ಸಂಯೋಜಕ ಕ್ಲೆಮೆಂಟ್ ಮಿರ್ಗುಯೆಟ್ ರೂಪಿಸಿದ ಬ್ಯಾಲೆ ಮೂಲಕ 19 ನೇ ಶತಮಾನದ ಕೊನೆಯಲ್ಲಿ ಒಲಿಂಪಿಕ್ಸ್‌ ನ ಆರಂಭವನ್ನು ಮರುಸೃಷ್ಟಿಸಲಾಯಿತು.

ಒಲಿಂಪಿಕ್ ಗೀತೆಯ ಹಿನ್ನೆಲೆಯಲ್ಲಿ ಧ್ವಜವನ್ನು ಕೆಳಗಿಳಿಸಲಾಯಿತು ಮತ್ತು ಪ್ಯಾರಿಸ್ ಮೇಯರ್ ಆನ್‌ ಹಿಡಾಲ್ಗೊ ಅವರಿಗೆ ಹಸ್ತಾಂತರಿಸಲಾಯಿತು. ಹಿಡಾಲ್ಗೊ ಒಲಿಂಪಿಕ್ ಧ್ವಜವನ್ನು ಐಒಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು ಮತ್ತು ಅವರು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರಿಗೆ ಹಸ್ತಾಂತರಿಸಿದರು. ಎಮ್ಮಿ ಪ್ರಶಸ್ತಿ ವಿಜೇತ ಕಲಾವಿದೆ ಗೇಬ್ರಿಯೆಲಾ ಸರ್ಮಿಯೆಂಟೊ ವಿಲ್ಸನ್(ಎಚ್‌ ಇ ಆರ್‌), ಅಮೆರಿಕದ ರಾಷ್ಟ್ರಗೀತೆಯನ್ನು ಹಾಡಿದರು.

47 ಮಹಿಳೆಯರು ಸೇರಿದಂತೆ 117 ಅಥ್ಲೀಟ್‌ಗಳಿದ್ದ ಭಾರತ ತಂಡವನ್ನು ಪರೇಡಿನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾದ ಪಿ.ಆರ್. ಶ್ರೀಜೇಶ್ (ಹಾಕಿ) ಮತ್ತು ಮನು ಭಾಕರ್ (ಶೂಟಿಂಗ್) ಪ್ರತಿನಿಧಿಸಿದ್ದರು. ಮನು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕ ಗಳಿಸಿದರು. ಭಾರತ ಆರು ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು.

Read More
Next Story