Paris Olympics 2024 | ಸಾತ್ವಿಕ್-ಚಿರಾಗ್, ಸಿಂಧುಗೆ ಸೋಲು; ಲಕ್ಷ್ಯ ಸೇನ್‌ ಗೆ ಜಯ
x
ಸಾತ್ವಿಕ್-ಚಿರಾಗ್‌ ಜೋಡಿ

Paris Olympics 2024 | ಸಾತ್ವಿಕ್-ಚಿರಾಗ್, ಸಿಂಧುಗೆ ಸೋಲು; ಲಕ್ಷ್ಯ ಸೇನ್‌ ಗೆ ಜಯ


ಪ್ಯಾರಿಸ್, ಆ.1: ಭಾರತದ ಬ್ಯಾಡ್ಮಿಂಟನ್ ಅಭಿಯಾನವು ಖ್ಯಾತ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಅವರ ಆಘಾತಕಾರಿ ಕ್ವಾರ್ಟರ್‌ಫೈನಲ್‌ ನಿರ್ಗಮನ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಪಿ.ವಿ. ಸಿಂಧು ಅವರ ಸೋಲಿನಿಂದ ಕುಸಿತಕ್ಕೆ ಒಳಗಾಗಿದೆ.

ದೊಡ್ಡ ಪದಕದ ನಿರೀಕ್ಷೆಯಿದ್ದ ಮೂರನೇ ಶ್ರೇಯಾಂಕದ ಚಿರಾಗ್ ಮತ್ತು ಸಾತ್ವಿಕ್‌, ಅಂತಿಮ ಸೆಟ್‌ ನಲ್ಲಿ 14-11 ಮುನ್ನಡೆ ಸಾಧಿಸಿದರು. ಆದರೆ, ವಿಶ್ವದ ಮೂರನೇ ಶ್ರೇಯಾಂಕದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರ ವಿರುದ್ಧ ಒತ್ತಡದಿಂದ ಹಲವು ತಪ್ಪುಗಳನ್ನು ಮಾಡಿದರು. ಮಲೇಷಿಯಾದ ಪ್ರತಿಸ್ಪರ್ಧಿಗಳ ವಿರುದ್ಧ ಸತತ ಮೂರು ಗೆಲುವಿನೊಂದಿಗೆ ಕಣಕ್ಕೆ ಇಳಿದಿದ್ದಸಾತ್ವಿಕ್ ಮತ್ತು ಚಿರಾಗ್, 21-13 14-21 16-21 ರಿಂದ ಸೋತರು.

ʻಕೊನೆಯಲ್ಲಿ, ನಾವು ಕೆಲವು ಸುಲಭ ಅಂಕಗಳನ್ನು ನೀಡಿದೆವು. ಅದರಲ್ಲಿ ಕೆಲವು ಅದೃಷ್ಟದ ಅಂಕಗಳೂ ಇದ್ದವು. ನಾವು ಆ ಸರ್ವ್‌ಗಳನ್ನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ. ಅವರು ನಮ್ಮನ್ನು ನಿರಂತರವಾಗಿ ಕಾಡಿದರು. ಕೊನೆಯಲ್ಲಿ ಒಂದೆರಡು ಹೊಡೆತಗಳು ನೆಟ್ಟಿನ ಹಗ್ಗಕ್ಕೆ ಹೊಡೆದವು. ಒಂದೆರಡು ತಪ್ಪು ಮಾಡಿದೆ,ʼ ಎಂದು ಚಿರಾಗ್ ಹೇಳಿದರು.

ಆರನ್ ಮತ್ತು ಚಿಯಾ ಜೋಡಿ ಈಮೊದಲು ಸಾತ್ವಿಕ್ ಮತ್ತು ಚಿರಾಗ್ ಅವರನ್ನು ಎಂಟು ಬಾರಿ ಸೋಲಿಸಿದ್ದರು. ಆದರೆ, ಪ್ಯಾರಿಸ್ಸಿನ ಸೋಲಿಗಿಂತ ಬೇರಾವುದೂ ಹೆಚ್ಚು ನೋಯಿಸಿರಲಿಲ್ಲ.

ಸಿಂಧು ಸೋಲು: ಮೂರನೇ ಒಲಿಪಿಕ್ ಪದಕಕ್ಕೆ ಆಡುತ್ತಿದ್ದ ಸಿಂಧು, 19-21 14-21 ರಲ್ಲಿ ಚೀನಾದ ವಿಶ್ವದ 9 ನೇ ಶ್ರೇಯಾಂಕಿತ ಆಟಗಾರ್ತಿ ಬಿಂಗ್ ಜಿಯಾವೊ ವಿರುದ್ಧ ಸೋತರು. ಭಾರತೀಯ ಆಟಗಾರ್ತಿ ಕೆಲವು ಕ್ಷಣಗಳಲ್ಲಿ ಮಾತ್ರ ಉತ್ತಮವಾಗಿ ಆಡಿದರು. ಆದರೆ, ಬಿಂಗ್ ಜಿಯಾವೊ ತನ್ನ ಸ್ಥಿರ ದಾಳಿಯಿಂದ ಪಂದ್ಯದ ಮೇಲೆ ಬಿಗಿ ಹಿಡಿತ ಕಾಯ್ದುಕೊಂಡರು. ನಿರಂತರ ತಪ್ಪುಗಳು ಸಿಂಧು ಅವರಿಗೆ ದುಬಾರಿಯಾದವು.

ಸಿಂಧು ತಮ್ಮ ಲಯವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರಿಂದ, ಎಡಗೈ ಆಟಗಾರ್ತಿ ಜಿಯಾವೊ 8-3ರಿಂದ ಮುನ್ನಡೆದರು. ಸಿಂಧು ಅವರ ಕ್ರಾಸ್ ಕೋರ್ಟ್ ಹೊಡೆತಗಳು ಹಿನ್ನಡೆಯನ್ನು ತಗ್ಗಿಸಿದವಲ್ಲದೆ, ಸ್ಕೋರ್ ಅನ್ನು 12-12 ರಲ್ಲಿ ಸಮಗೊಳಿಸಿದವು. ಆನಂತರ 19-19 ರಿಂದ ಸಮಗೊಳಿಸಿದ ಜಿಯಾವೊ, ಸ್ಮ್ಯಾಶ್ ಮೂಲಕ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲೂ ಜಿಯಾವೊ ಅವರು ಸಿಂಧು ಅವರ ಅನಗತ್ಯ ತಪ್ಪುಗಳಿಂದ 5-2 ಮುನ್ನಡೆ ಸಾಧಿಸಿದರು. ಹಿನ್ನಡೆ ಕ್ರಮೇಣ 5- 11ಕ್ಕೆ ಹೆಚ್ಚಿತು. ಜಿಯಾವೊ ಅವರು ಅಂಕಣದಲ್ಲಿ ವ್ಯಾಪಿಸಿದ ರೀತಿ ನಂಬಲಸಾಧ್ಯವಾಗಿತ್ತು. ಸಮತೋಲನ ಕಳೆದುಕೊಂಡರೂ, ಹಿಂದಿರುಗಿಸಿದರು. 18-11 ರಿಂದ ಮುನ್ನಡೆ ಸಾಧಿಸಿದ ಜಿಯಾವೊ, ಸಿಂಧು ಅವರ ತೀರ್ಪಿನ ದೋಷದಿಂದ ಏಳು ಮ್ಯಾಚ್ ಪಾಯಿಂಟ್‌ ಗಳಿಸಿದರು.

ಪ್ರಣಯ್‌ ಗೆ ಸೋಲು: ಪರುಪಳ್ಳಿ ಕಶ್ಯಪ್ (2012) ಮತ್ತು ಕಿಡಂಬಿ ಶ್ರೀಕಾಂತ್ (2016) ಅವರ ನಂತರ ಸೇನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಮೂರನೇ ಪುರುಷ ಭಾರತೀಯ ಆಟಗಾರರಾದರು.ಸೇನ್‌ ಅವರು ಪ್ರಣಯ್‌ ವಿರುದ್ಧ 21-12,21-6ರಿಂದ ಸುಲಭ ಜಯ ಗಳಿಸಿದರು.

ಪ್ರಣಯ್ ಚಿಕೂನ್‌ಗುನ್ಯಾದಿಂದ ಬಳಲಿದ ಬಳಿಕ ಒಲಿಂಪಿಕ್ಸ್‌ ಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಸಮಯ ಸಿಗಲಿಲ್ಲ. ʻನನಗೆ ತಯಾರಾಗಲು ಕೇವಲ ಒಂದು ವಾರ ಸಮಯ ಸಿಕ್ಕಿತ್ತು. ನಾನು ಸ್ಪರ್ಧಿಸಬೇಕೆಂದು ತಂಡ ನನ್ನನ್ನು ಮುಂದೆ ತಳ್ಳಿತು. ಆಡುವುದು ಕಠಿಣವಾಗಿರುತ್ತದೆ ಎಂದು ನನಗೆ ತಿಳಿದಿತ್ತು,ʼ ಎಂದ ಪ್ರಣಯ್, ಕಣ್ಣೀರಾದರು.

ಸೇನ್ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ʻಚೌ ವಿರುದ್ಧದ ಪಂದ್ಯ ಕ್ಲಿಷ್ಟವಾಗಬಹುದು. ನಾನು ಚೇತರಿಸಿಕೊಂಡು, ಆ ಪಂದ್ಯಕ್ಕೆ ಶೇ.100 ಶ್ರಮ ವಹಿಸಬೇಕಿದೆ,ʼ ಎಂದು ಪಂದ್ಯದ ನಂತರ ಸೇನ್ ಹೇಳಿದರು.

Read More
Next Story