
ಪಾಕಿಸ್ತಾನ ಕ್ರಿಕೆಟ್ ಮಾಜಿ ನಾಯಕ ಇಮ್ರಾನ್ ಖಾನ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುನೀಲ್ ಗವಾಸ್ಕಾರ್ ಹಾಗೂ ಕಪಿಲ್ ದೇವ್
ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ: ಕಪಿಲ್ ದೇವ್, ಗವಾಸ್ಕರ್ ಸೇರಿ ಹಲವು ದಿಗ್ಗಜರಿಂದ ಪಾಕ್ ಪ್ರಧಾನಿಗೆ ಪತ್ರ
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು "ಮಾಜಿ ರಾಷ್ಟ್ರೀಯ ನಾಯಕ ಮತ್ತು ಜಾಗತಿಕ ಕ್ರೀಡಾ ಐಕಾನ್‌ಗೆ ಸೂಕ್ತವಾದ ಘನತೆಯೊಂದಿಗೆ " ನಡೆಸಿಕೊಳ್ಳಬೇಕು ಎಂದು ಪತ್ರದಲ್ಲಿ ಮಾಜಿ ಕ್ರಿಕೆಟಿಗರು ಮನವಿ ಮಾಡಿದ್ದಾರೆ.
ದೇಶಗಳು ಅಥವಾ ವ್ಯಕ್ತಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಹಾಗೂ ದ್ವೇಷವಿದ್ದರೂ ಕ್ರೀಡೆ ಎಲ್ಲರನ್ನು ಒಂದುಗೂಡಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 1990 ರ ದಶಕದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ್ದ ಇಮ್ರಾನ್ ಖಾನ್‌ಗಾಗಿ ವಿವಿಧ ದೇಶಗಳ ಹಿರಿಯ ಆಟಗಾರರು ಒಂದಾಗಿ ಪಾಕಿಸ್ತಾನ ಪ್ರಧಾನಿಗೆ ಪತ್ರ ಬರೆದಿರುವುದು ಎಲ್ಲರನ್ನೂ ಚಕಿತಗೊಳಿದೆ.
ಭಾರತ-ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ರಾಜತಾಂತ್ರಿಕವಾಗಿ ವೈಮನಸ್ಸು, ಹಲವು ಗೊಂದಗಳಿವೆ. ಐಸಿಸಿ ವೇದಿಕೆಗಳಲ್ಲಿ ಬಿಟ್ಟರೆ ದ್ವಿಪಕ್ಷೀಯ ಸರಣಿಗಳಲ್ಲಿ ಇತ್ತೀಚೆಗೆ ಭಾಗವಹಿಸಿಲ್ಲ. ಆದರೆ ಪಾಕ್‌ನ ಕ್ರಿಕೆಟ್ ಧ್ರುವತಾರೆ, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಕಾಳಜಿವಹಿಸಿ ಸುನೀಲ್ ಗವಾಸ್ಕರ್, ಕಪಿಲ್ ದೇವ್ ಸೇರಿದಂತೆ ದಿಗ್ಗಜರು ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಪತ್ರದ ಸಾರಾಂಶವೇನು ?
ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸರಿಯಾದ ವೈದ್ಯಕೀಯ ಆರೈಕೆ ಮತ್ತು ಸುಧಾರಿತ ಸೇವೆಯನ್ನು ನೀಡುವಂತೆ ಟೆಸ್ಟ್ ಆಡುವ ಐದು ರಾಷ್ಟ್ರಗಳ ಹದಿನಾಲ್ಕು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಮಂಗಳವಾರ(ಫೆ.17) ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮನವಿ ಪತ್ರ ತಲುಪಿಸಿದ್ದು, ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಜೈಲು ಶಿಕ್ಷೆಯ ಸಮಯದಲ್ಲಿ ಅವರ ಆರೋಗ್ಯ, ವಿಶೇಷವಾಗಿ ಅವರ ದೃಷ್ಟಿ ಹದಗೆಡುತ್ತಿರುವ ಬಗ್ಗೆ ಗಂಭೀರ ಕಳವಳವಿದೆ ಎಂದು ಮಾಜಿ ಆಟಗಾರರು ಸಹಿ ಮಾಡಿರುವ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಮುಂದುವರೆದು, ಅರ್ಹ ತಜ್ಞರಿಂದ ತಕ್ಷಣದ ಮತ್ತು ನಿರಂತರ ವೈದ್ಯಕೀಯ ಆರೈಕೆಯನ್ನು ಒದಗಿಸಬೇಕು. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾನವೀಯ ಮತ್ತು ಘನತೆಯ ಬಂಧನ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಬೇಕು. ಕುಟುಂಬದ ಸದಸ್ಯರಿಗೆ ನ್ಯಾಯಯುತ ಮತ್ತು ಪಾರದರ್ಶಕ ಪ್ರವೇಶವನ್ನು ನೀಡಬೇಕು ಎಂದು ಹಿರಿಯ ಕ್ರಿಕೆಟಿಗರು ಒತ್ತಾಯಿಸಿದ್ದು, ಖಾನ್ ಅವರನ್ನು "ಮಾಜಿ ರಾಷ್ಟ್ರೀಯ ನಾಯಕ ಮತ್ತು ಜಾಗತಿಕ ಕ್ರೀಡಾ ಐಕಾನ್‌ಗೆ ಸೂಕ್ತವಾದ ಘನತೆಯೊಂದಿಗೆ " ನಡೆಸಿಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅರ್ಜಿಗೆ ಸಹಿ ಹಾಕಿದವರು ಯಾರು ?
ಪಾಕಿಸ್ತಾನದ ಪ್ರಧಾನಿಗೆ ಬರೆದ ಪತ್ರದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಲ್ಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಸ್ಟೀವ್ ವಾ, ಮೈಕ್ ಅಥರ್ಟನ್, ನಾಸರ್ ಹುಸೇನ್, ಮೈಕ್ ಬ್ರಿಯಾರ್ಲಿ, ಡೇವಿಡ್ ಗೋವರ್, ಕ್ಲೈವ್ ಲಾಯ್ಡ್ ಮತ್ತು ಜಾನ್ ರೈಟ್ ಸಹಿ ಹಾಕಿದ್ದಾರೆ.
ಕೋರ್ಟ್ ನಿರ್ದೇಶನದಂತೆ ವೈದ್ಯಕೀಯ ಸೌಲಭ್ಯ
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲಾಗಿದ್ದು, ಕೋರ್ಟ್ ಅಧಿಕಾರಿಗಳಿಗೆ ವೈದ್ಯಕೀಯ ಮಂಡಳಿಯನ್ನು ರಚಿಸಲು ನಿರ್ದೇಶಿಸಿದ ನಂತರ ಖಾನ್ ಕಣ್ಣಿನ ಕಾಯಿಲೆಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಹಿತಿ ಸಚಿವ ಅತಾವುಲ್ಲಾ ತರಾರ್ ಫೆ. 14 ರಂದು ಹೇಳಿದ್ದರು. ಇದೇ ವೇಳೆ ಪ್ರತಿಕ್ರಿಯಿಸಿದ್ದ ಇಮ್ರಾನ್ ಖಾನ್ ಪರ ವಕೀಲ ಸಲ್ಮಾನ್ ಸಫ್ದರ್, ಮಾಜಿ ಪ್ರಧಾನಿ ಅವರ ಬಲಗಣ್ಣಿನಲ್ಲಿ ಸುಮಾರು ಶೇ. 85 ರಷ್ಟು ದೃಷ್ಟಿ ನಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಕುಟುಂಬದ ಆಕ್ಷೇಪ
ಇಮ್ರಾನ್ ಖಾನ್ ಕುಟುಂಬ ಮತ್ತು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದು, ಕಣ್ಣಿನ ಚಿಕಿತ್ಸೆಗಾಗಿ ಕರೆದೊಯ್ಯವ ಬಗ್ಗೆ ತಮಗೆ ತಿಳಿಸಿಲ್ಲ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ್ದು, ಇಸ್ಲಾಮಾಬಾದ್ ಮತ್ತು ಇತರ ನಗರಗಳಲ್ಲಿ ಇತ್ತೀಚೆಗೆ ಪ್ರತಿಭಟನೆಗಳನ್ನು ನಡೆಸಿತ್ತು.
ಖಾನ್ ಸಹೋದರಿ ಅಲೀಮಾ ಖಾನ್ ಮಾತನಾಡಿ, "ಯಾವುದೇ ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಅವರ ವೈಯಕ್ತಿಕ ವೈದ್ಯರು ಹಾಜರಿರಬೇಕು. ಜೈಲು ನಿಯಮಗಳ ಪ್ರಕಾರ ವೈದ್ಯಕೀಯ ಪರೀಕ್ಷೆಗಳು ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅಧಿಕಾರಿಗಳು ಸಂಬಂಧಿಕರು ಮತ್ತು ವೈದ್ಯರಿಗೆ ತಿಳಿಸಬೇಕು," ಎಂದು ಆಗ್ರಹಿಸಿದ್ದರು.
2018ರಲ್ಲಿ ಪ್ರಧಾನಿ ಪಟ್ಟಕ್ಕೇರಿದ್ದ ಇಮ್ರಾನ್
ಪಾಕಿಸ್ತಾನ ಕ್ರಿಕೆಟ್ ಮಾಜಿ ನಾಯಕ ಇಮ್ರಾನ್ ಖಾನ್ 1992ರ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜಯಕ್ಕೆ ಕಾರಣರಾಗಿದ್ದರು. ನಂತರದ ದಿನಗಳಲ್ಲಿ ಆಟಕ್ಕೆ ವಿದಾಯ ಹೇಳಿದ್ದ ಅವರು, 1996 ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದರು. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಿಸಿ ಹಲವು ರಾಜಕೀಯ ಹೋರಾಟಗಳನ್ನು ಮಾಡಿದ್ದರು.
ಸಾರ್ವತ್ರಿಕ ಚುನಾವಣೆ ಎದುರಿಸಿದ್ದ ಅವರು, 2018 ರಿಂದ ಏಪ್ರಿಲ್ 2022 ರ ವರೆಗೆ ಪ್ರಧಾನಿಯಾಗಿದ್ದರು. ಸಂಸತ್ತಿನ ಅವಿಶ್ವಾಸ ಮತದ ಮೂಲಕ ಅವರನ್ನು ಪದಚ್ಯುತಗೊಳಿಸಲಾಗಿತ್ತು. ನಂತರ ಅವರನ್ನು ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಂಧನಕ್ಕೊಳಪಡಿಸಿ ಆಗಸ್ಟ್ 2023 ರಿಂದ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ.

