
ಚದುರಂಗದ ಅಂಗಳದಲ್ಲಿ ಶತಕ: 100ನೇ ಗ್ರ್ಯಾಂಡ್ಮಾಸ್ಟರ್ ಆಗಿ ಅನುಜ್ ಶ್ರೀವಾತ್ರಿ
ರಷ್ಯಾ, ಅಮೆರಿಕ ಮತ್ತು ಜರ್ಮನಿಯ ನಂತರ ವಿಶ್ವದಲ್ಲೇ 100 ಗ್ರ್ಯಾಂಡ್ಮಾಸ್ಟರ್ಗಳನ್ನು ಹೊಂದಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಫಿಡೆ ಈ ಬಿರುದನ್ನು ನೀಡುತ್ತದೆ.
ಫಿಲಿಪೈನ್ಸ್ನಲ್ಲಿ ನಡೆದ 7ನೇ ಏಸಿಯಾನ್ ಪ್ಲಸ್ ಓಪನ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಮಧ್ಯಪ್ರದೇಶದ 22 ವರ್ಷದ ಯುವ ಆಟಗಾರ ಅನುಜ್ ಶ್ರೀವಾತ್ರಿ ಜಯಭೇರಿ ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ ಅನುಜ್ ಭಾರತದ 100ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ರಷ್ಯಾ, ಅಮೆರಿಕ ಮತ್ತು ಜರ್ಮನಿಯ ನಂತರ ವಿಶ್ವದಲ್ಲೇ 100 ಗ್ರ್ಯಾಂಡ್ಮಾಸ್ಟರ್ಗಳನ್ನು ಹೊಂದಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಗ್ರ್ಯಾಂಡ್ಮಾಸ್ಟರ್ ಎಂಬುದು ಒಬ್ಬ ಚೆಸ್ ಆಟಗಾರ ಜಾಗತಿಕ ಮಟ್ಟದಲ್ಲಿ ಪಡೆಯಬಹುದಾದ ಅತ್ಯುನ್ನತ ಮತ್ತು ಜೀವಮಾನದ ಗೌರವಾನ್ವಿತ ಪ್ರಶಸ್ತಿಯಾಗಿದೆ. ವಿಶ್ವ ಚೆಸ್ ಸಂಸ್ಥೆಯಾದ ಫಿಡೆ ಈ ಬಿರುದನ್ನು ನೀಡುತ್ತದೆ. ಕ್ರಿಕೆಟ್ನಲ್ಲಿ ಹೇಗೆ ಅತ್ಯುತ್ತಮ ಸಾಧನೆ ಮಾಡಿದವರನ್ನು ಶ್ರೇಷ್ಠ ಆಟಗಾರರೆಂದು ಪರಿಗಣಿಸುತ್ತಾರೋ, ಹಾಗೆಯೇ ಚೆಸ್ ಲೋಕದ ಅತ್ಯುನ್ನತ ಪದವಿ ಅಥವಾ ಹೆಮ್ಮೆಯ ಶಿಖರವೇ ಈ ಗ್ರ್ಯಾಂಡ್ಮಾಸ್ಟರ್ ಪಟ್ಟ. ಒಮ್ಮೆ ಈ ಪ್ರಶಸ್ತಿ ಒಲಿದರೆ, ಅದು ಆಟಗಾರನ ಹೆಸರಿನೊಂದಿಗೆ ಜೀವಿತಾವಧಿಯ ಕೊನೆಯವರೆಗೂ ಉಳಿಯುತ್ತದೆ.
ಈ ಅತ್ಯುನ್ನತ ಸ್ಥಾನವನ್ನು ತಲುಪಲು ಆಟಗಾರರು ಕಠಿಣವಾದ ಎರಡು ನಿಯಮಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ತಮ್ಮ ಜಾಗತಿಕ ರೇಟಿಂಗ್ ಅಂಕಗಳನ್ನು ಕನಿಷ್ಠ 2500ಕ್ಕೆ ಹೆಚ್ಚಿಸಿಕೊಳ್ಳಬೇಕು. ಎರಡನೆಯದಾಗಿ, ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ವಿದೇಶಿ ಗ್ರ್ಯಾಂಡ್ಮಾಸ್ಟರ್ಗಳ ವಿರುದ್ಧವೇ ಅದ್ಭುತವಾಗಿ ಆಡಿ, ಮೂರು ಬಾರಿ ‘ಜಿಎಂ ನಾರ್ಮ್ಸ್’ (ಸಾಧನೆಯ ಪ್ರಮಾಣಪತ್ರ) ಗಳಿಸಬೇಕು. ಈ ಕಠಿಣ ಹಂತಗಳನ್ನು ದಾಟಿದಾಗ ಮಾತ್ರ ಒಬ್ಬ ಆಟಗಾರ ಅಧಿಕೃತವಾಗಿ ಜಗತ್ತಿನ ಶ್ರೇಷ್ಠ ಗ್ರ್ಯಾಂಡ್ಮಾಸ್ಟರ್ ಎನಿಸಿಕೊಳ್ಳುತ್ತಾನೆ. ಇದೀಗ ಭಾರತವು ಚೆಸ್ ಲೋಕದಲ್ಲಿ 100 ಗ್ರ್ಯಾಂಡ್ಮಾಸ್ಟರ್ಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಈ ಮೂಲಕ ಈ ಅಪೂರ್ವ ಮೈಲಿಗಲ್ಲು ತಲುಪಿದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಯನ್ನು ನಮ್ಮ ಚೆಸ್ ಚತುರರು ಭಾರತಕ್ಕೆ ತಂದುಕೊಟ್ಟಿದ್ದಾರೆ. ಭಾರತದ ಪ್ರಪ್ರಥಮ ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಅಂದು ತಾವು ಒಬ್ಬಂಟಿಯಾಗಿ ಆರಂಭಿಸಿದ ಪಯಣ ಇಂದು ಜಾಗತಿಕ ಸೂಪರ್ ಪವರ್ ಆಗಿ ಬೆಳೆದು ನಿಂತಿದೆ.
ಒಂಟಿ ಸೈನಿಕನ ಕಠಿಣ ದಿನಗಳು
1988ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಆದಾಗ ದೇಶದಲ್ಲಿ ಚೆಸ್ ಆಟಕ್ಕೆ ಇವತ್ತಿನ ಸೌಲಭ್ಯಗಳಾಗಲಿ ಅಥವಾ ಮಾರ್ಗದರ್ಶನವಾಗಲಿ ಇರಲಿಲ್ಲ. ಇಂಟರ್ನ್ಯಾಷನಲ್ ಮಾಸ್ಟರ್ ಆದ ನಂತರ ಆನಂದ್ ಜಿಎಂ ನಾರ್ಮ್ಸ್ ಪಡೆಯಲು ಸುಮಾರು ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಪಡಬೇಕಾಯಿತು. ವಿಶ್ವನಾಥನ್ ಆನಂದ್ ಅವರು ಜಿಎಂ ಆದ ನಂತರ ಮುಂದಿನ ಮೂರು ವರ್ಷಗಳ ಕಾಲ ಭಾರತದಲ್ಲಿ ಬೇರೆ ಯಾರೂ ಈ ಸಾಧನೆ ಮಾಡಿರಲಿಲ್ಲ. ಇದಾದ ಬಳಿಕ 1991ರಲ್ಲಿ ದೀಬ್ಯೇಂದು ಬರುವಾ ಭಾರತದ 2ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದರು. 1990 ರಲ್ಲಿ ಗ್ರ್ಯಾಂಡ್ಮಾಸ್ಟರ್ ಪಟ್ಟದ ಓಪನಿಂಗ್ ನಡೆದರೂ, 2000 ರವರೆಗೆ ಭಾರತದಲ್ಲಿದ್ದ ಒಟ್ಟು ಗ್ರ್ಯಾಂಡ್ಮಾಸ್ಟರ್ಗಳ ಸಂಖ್ಯೆ ಕೇವಲ 6 ಮಾತ್ರ ಎಂದರೆ ನಂಬಲೇಬೇಕು.
ನಿಧಾನಗತಿಯ ಸ್ಥಿರ ಬೆಳವಣಿಗೆ
2000ನೇ ಇಸವಿಯಲ್ಲಿ ವಿಶ್ವನಾಥನ್ ಆನಂದ್ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಭಾರತದಲ್ಲಿ ಚೆಸ್ ಕ್ರಾಂತಿ ಆರಂಭವಾಯಿತು. ಇದು ಯುವ ಪೀಳಿಗೆಗೆ ದೊಡ್ಡ ಪ್ರೇರಣೆ ನೀಡಿತು. ದೇಶಾದ್ಯಂತ ಬೇಸಿಗೆ ಶಿಬಿರಗಳು ಮತ್ತು ಚೆಸ್ ಅಕಾಡೆಮಿಗಳು ತಲೆಎತ್ತಿದವು. ಪರಿಣಾಮವಾಗಿ 2010ರ ವೇಳೆಗೆ ಭಾರತದ ಜಿಎಂ ಸಂಖ್ಯೆ 25 ದಾಟಿತು. 2013ರಲ್ಲಿ ಭಾರತ 32 ಜಿಎಂಗಳನ್ನು ಹೊಂದಿತ್ತು. ಇನ್ನು 2017ರಲ್ಲಿ ದೇಶವು 50ನೇ ಗ್ರ್ಯಾಂಡ್ಮಾಸ್ಟರ್ ಮೈಲಿಗಲ್ಲನ್ನು ತಲುಪಿತ್ತು ಎಂಬುದು ವಿಶೇಷ.
ದಾಖಲೆ ಬರೆದ ಯುವ ಚತುರರು
ಭಾರತೀಯ ಚೆಸ್ನ ನಿಜವಾದ ಸುನಾಮಿ ಆರಂಭವಾಗಿದ್ದೇ ಇಲ್ಲಿಂದ. ತಂತ್ರಜ್ಞಾನ, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ವ್ಯವಸ್ಥಿತ ತರಬೇತಿಯಿಂದಾಗಿ ಯುವ ಆಟಗಾರರು ಅತಿ ವೇಗವಾಗಿ ಜಿಎಂ ಪಟ್ಟ ಅಲಂಕರಿಸಲಾರಂಭಿಸಿದರು. ಭಾರತಕ್ಕೆ ಮೊದಲ 50 ಗ್ರ್ಯಾಂಡ್ಮಾಸ್ಟರ್ಗಳನ್ನು ಪಡೆಯಲು ಬರೋಬ್ಬರಿ 29 ವರ್ಷಗಳು ಬೇಕಾಗಿದ್ದವು. ಆದರೆ, ನಂತರದ 50 ಜಿಎಂಗಳು ಕೇವಲ 9 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮೂಡಿಬಂದರು. ಕೇವಲ 2026ರ ಒಂದೇ ವರ್ಷದಲ್ಲಿ 10 ಹೊಸ ಗ್ರ್ಯಾಂಡ್ಮಾಸ್ಟರ್ಗಳು ಮೂಡಿಬಂದರು. ಈ ಯುವ ಅಲೆ ಭಾರತವು 100ರ ಮೈಲಿಗಲ್ಲನ್ನು ವೇಗವಾಗಿ ತಲುಪುವಂತೆ ಮಾಡಿತು.
ಮೊದಲ ಗ್ರ್ಯಾಂಡ್ಮಾಸ್ಟರ್ ಏನಂತಾರೆ?
“ಇಂದಿನ ಯುವ ಆಟಗಾರರಲ್ಲಿ ಯಾವುದೇ ಭಯವಿಲ್ಲ. ಅವರಲ್ಲಿರುವ ಆಳವಾದ ಜ್ಞಾನ ಮತ್ತು ಅಪ್ರತಿಮ ಆತ್ಮವಿಶ್ವಾಸ ಭಾರತೀಯ ಚೆಸ್ನ ನಿಯಮಗಳನ್ನೇ ಬದಲಾಯಿಸಿದೆ” ಎಂದು ಫಿಡೆ ಉಪಾಧ್ಯಕ್ಷ ಹಾಗೂ ಭಾರತದ ಹೆಮ್ಮೆಯ ಮೊದಲ ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಶ್ಲಾಘಿಸಿದ್ದಾರೆ. 1988ರಲ್ಲಿ ಆನಂದ್ ಬಿತ್ತಿದ ಆ ಒಂದು ಒಂಟಿ ಸಣ್ಣ ಬೀಜ, ಇಂದು 100 ಮಹಾವೃಕ್ಷಗಳ ಬೃಹತ್ ಸಾಮ್ರಾಜ್ಯವಾಗಿ ಜಾಗತಿಕ ಚೆಸ್ ಲೋಕವನ್ನೇ ಆಳುತ್ತಿರುವುದು ಭಾರತೀಯ ಕ್ರೀಡಾ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಹಾಗೂ ಸುವರ್ಣ ಸಾಧನೆಯಾಗಿದೆ.
