ರಾಜ್ಯ ಟೆನ್‌ಪಿನ್ ಬೌಲಿಂಗ್: ಆಕಾಶ್ ಅಶೋಕ್ ಕುಮಾರ್‌ಗೆ ಸತತ ಮೂರನೇ ಪ್ರಶಸ್ತಿ
x

ರಾಜ್ಯ ಟೆನ್‌ಪಿನ್ ಬೌಲಿಂಗ್: ಆಕಾಶ್ ಅಶೋಕ್ ಕುಮಾರ್‌ಗೆ ಸತತ ಮೂರನೇ ಪ್ರಶಸ್ತಿ

ಪ್ರಶಸ್ತಿ ಸುತ್ತಿನ ಅಂತಿಮ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್ ಅಶೋಕ್ ಕುಮಾರ್ ಅವರು ಮೂರನೇ ಶ್ರೇಯಾಂಕಿತ ಕಿಶನ್ ಆರ್ ವಿರುದ್ಧ 42 ಪಿನ್‌ಗಳ ಅಂತರದ ಗೆಲುವು ಸಾಧಿಸಿದರು. ಎರಡು ಗೇಮ್‌ಗಳ ಒಟ್ಟು ಮೊತ್ತದಲ್ಲಿ ಆಕಾಶ್ 409 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದರೆ, 367 ಅಂಕಗಳಿಸಿದ ಕಿಶನ್ ದ್ವಿತೀಯ ಸ್ಥಾನಕ್ಕೆ (ರನ್ನರ್ ಅಪ್) ತೃಪ್ತಿಪಟ್ಟರು.


ಬೆಂಗಳೂರಿನ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ಮುಕ್ತಾಯಗೊಂಡ 3ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಆಕಾಶ್ ಅಶೋಕ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ ಅವರು ಸತತ ಮೂರನೇ ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಸುತ್ತಿನ ಅಂತಿಮ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್ ಅಶೋಕ್ ಕುಮಾರ್ ಅವರು ಮೂರನೇ ಶ್ರೇಯಾಂಕಿತ ಕಿಶನ್ ಆರ್ ವಿರುದ್ಧ 42 ಪಿನ್‌ಗಳ ಅಂತರದ ಗೆಲುವು ಸಾಧಿಸಿದರು. ಎರಡು ಗೇಮ್‌ಗಳ ಒಟ್ಟು ಮೊತ್ತದಲ್ಲಿ ಆಕಾಶ್ 409 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದರೆ, 367 ಅಂಕಗಳಿಸಿದ ಕಿಶನ್ ದ್ವಿತೀಯ ಸ್ಥಾನಕ್ಕೆ (ರನ್ನರ್ ಅಪ್) ತೃಪ್ತಿಪಟ್ಟರು. ಪಂದ್ಯದ ಆರಂಭದಿಂದಲೇ ನಿಖರ ಆಟವಾಡಿದ ಆಕಾಶ್, ಮೊದಲ ಗೇಮ್‌ನಲ್ಲಿ ಸತತ ಐದು ಸ್ಟ್ರೈಕ್‌ಗಳನ್ನು ದಾಖಲಿಸುವ ಮೂಲಕ 205 ಅಂಕಗಳನ್ನು ಕಲೆಹಾಕಿ, ಕಿಶನ್ (181 ಅಂಕ) ವಿರುದ್ಧ ಸ್ಪಷ್ಟ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿಯೂ ಇದೇ ಲಯ ಕಾಯ್ದುಕೊಂಡ ಆಕಾಶ್ 193 ಅಂಕಗಳನ್ನು ಗಳಿಸಿದರೆ, ಕಿಶನ್ 186 ಅಂಕ ಕಲೆಹಾಕಿದರು.

ನಾಕೌಟ್ ಹಂತದ ಪಂದ್ಯಗಳ ವಿವರ

ಫೈನಲ್ ಪ್ರವೇಶಕ್ಕೂ ಮುನ್ನ ನಡೆದ ಮೊದಲ ನಾಕೌಟ್ ಪಂದ್ಯದಲ್ಲಿ ಆಕಾಶ್ ಅವರು ನಾಲ್ಕನೇ ಶ್ರೇಯಾಂಕಿತ ಸತೀಶ್ ಎ.ವಿ. ವಿರುದ್ಧ 70 ಪಿನ್‌ಗಳ ಅಂತರದ ಜಯ ದಾಖಲಿಸಿದ್ದರು. ಈ ಪಂದ್ಯದಲ್ಲಿ ಆಕಾಶ್ 441 ಅಂಕ ಮತ್ತು ಸತೀಶ್ 371 ಅಂಕಗಳನ್ನು ಗಳಿಸಿದ್ದರು. ಎರಡನೇ ನಾಕೌಟ್ ಪಂದ್ಯದಲ್ಲಿ ಕಿಶನ್ ಆರ್ ಅವರು ವಿಜಯ್ ಪಂಜಾಬಿ ಅವರನ್ನು 73 ಪಿನ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರು. ಈ ಪಂದ್ಯದಲ್ಲಿ ಕಿಶನ್ 439 ಅಂಕ ಹಾಗೂ ವಿಜಯ್ 366 ಅಂಕ ಪಡೆದರು. ಟೂರ್ನಿಯ ಅಂತಿಮ ಫಲಿತಾಂಶದ ಪ್ರಕಾರ ಸತೀಶ್ ತೃತೀಯ ಸ್ಥಾನ ಹಾಗೂ ವಿಜಯ್ ಪಂಜಾಬಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಶೇಷ ಪ್ರಶಸ್ತಿಗಳು ಹಾಗೂ ದಾಖಲೆಗಳು

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಕಾಶ್ ಅಶೋಕ್ ಕುಮಾರ್ ಅವರು 6 ಗೇಮ್‌ಗಳ ಬ್ಲಾಕ್‌ನಲ್ಲಿ 215.19 ಹಾಗೂ 18 ಗೇಮ್‌ಗಳಲ್ಲಿ 204.67 ಅತ್ಯಧಿಕ ಸರಾಸರಿ ಕಲೆಹಾಕುವ ಮೂಲಕ ಗಮನ ಸೆಳೆದರು. ಅಲ್ಲದೆ, ಟೂರ್ನಿಯಲ್ಲಿ ಮೂರು ಬಾರಿ 225ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ದಾಖಲೆಯನ್ನೂ ನಿರ್ಮಿಸಿದರು. ಮಹಿಳಾ ವಿಭಾಗದಲ್ಲಿ 12 ಗೇಮ್‌ಗಳಲ್ಲಿ 169.67 ಅತ್ಯಧಿಕ ಸರಾಸರಿ ದಾಖಲಿಸಿದ ಹಿತಾಶಾ ಸಿಸೋಡಿಯಾ ಅವರು ವಿಶೇಷ ಪ್ರಶಸ್ತಿ ಪಡೆದುಕೊಂಡರು.

Read More
Next Story