ಭಾರತಕ್ಕೆ ಆಗಮಿಸಿದ ಮೆಸ್ಸಿಗೆ ಭರ್ಜರಿ ಸ್ವಾಗತ; ಸೆಲ್ಫಿಗೆ 9.95ಲಕ್ಷ ರೂ. ನಿಗದಿ
x
ಲಿಯೋನೆಲ್‌ ಮೆಸ್ಸಿ

ಭಾರತಕ್ಕೆ ಆಗಮಿಸಿದ ಮೆಸ್ಸಿಗೆ ಭರ್ಜರಿ ಸ್ವಾಗತ; ಸೆಲ್ಫಿಗೆ 9.95ಲಕ್ಷ ರೂ. ನಿಗದಿ

ಕೋಲ್ಕತ್ತಾಕ್ಕೆ ಇಂದು ಬೆಳಗಿನ ಜಾವ 2.26 ಕ್ಕೆ ಆಗಮಿಸಿದ ಮೆಸ್ಸಿಯನ್ನು ಸ್ವಾಗತಿಸಲು ಕೊರೆವ ಚಳಿಯಲ್ಲೂ ಸಾವಿರಾರು ಜನ ಮಧ್ಯರಾತ್ರಿವರೆಗೂ ಕಾದು ಕುಳಿತಿದ್ದರು.


ಫುಟ್‌ಬಾಲ್‌ ದಂತಕಥೆ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಕೋಲ್ಕತ್ತಾಕ್ಕೆ ಇಂದು ಬೆಳಗಿನ ಜಾವ 2.26 ಕ್ಕೆ ಆಗಮಿಸಿದ ಮೆಸ್ಸಿಯನ್ನು ಸ್ವಾಗತಿಸಲು ಕೊರೆವ ಚಳಿಯಲ್ಲೂ ಸಾವಿರಾರು ಜನ ಮಧ್ಯರಾತ್ರಿವರೆಗೂ ಕಾದು ಕುಳಿತಿದ್ದರು. ಮೆಸ್ಸಿಯನ್ನು ಕಾಣುತ್ತಿದ್ದಂತೆ ಜನರ ಹರ್ಷೋದ್ಗಾರ ಜೋರಾಗಿಯೇ ಕೇಳಿ ಬಂದಿತ್ತು.

‘ಗೋಟ್ ಇಂಡಿಯಾ ಟೂರ್ 2025’ (GOAT India Tour) ಅಡಿಯಲ್ಲಿ ಅವರು ಪ್ರವಾಸ ಕೈಗೊಳ್ಳುತ್ತಿದ್ದು, ಅವರ ಪ್ರವಾಸ ಕೋಲ್ಕತ್ತಾದಲ್ಲಿ ಶನಿವಾರ ಪ್ರಾರಂಭವಾಗಿ ಸೋಮವಾರ ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಈ ಪ್ರವಾಸದಲ್ಲಿ ಮೆಸ್ಸಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಅದರ ಕುರಿತ ಪ್ರಚಾರ ಮತ್ತು ವಾಣಿಜ್ಯ ಉದ್ದೇಶದಿಂದ ಮೆಸ್ಸಿ ಭಾರತಕ್ಕೆ ಆಗಮಿಸಿದ್ದಾರೆ. ಇನ್ನು ಅವರು ಈ ಮೂರು ದಿನಗಳ ಪ್ರವಾಸದ ವೇಳೆ ನಾಲ್ಕು ನಗರಗಳಿಗೆ ಭೇಟಿ ನೀಡಲಿದ್ದಾರೆ.

ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಬಂದಿಳಿದ ಮೆಸ್ಸಿಯನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾನಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಕೊನೆಗೆ ಭಾರೀ ಬೆಂಗಾವಲು ಪಡೆಯ ಜೊತೆಗೆ ಅವರನ್ನು ಹೊಟೇಲ್‌ಗೆ ಕರೆದೊಯ್ಯಲಾಯಿತು. ಅಲ್ಲಿ ತಲುಪಿದಾಗ ಅಲ್ಲಿ ಮತ್ತೊಂದು ದೊಡ್ಡ ಜನಸಮೂಹ ಕಾಯುತ್ತಿತ್ತು.

ಮೂರು ದಿನ ನಾಲ್ಕು ನಗರಗಳಿಗೆ ಭೇಟಿ

ಮೆಸ್ಸಿ ಮುಂದಿನ 72 ಗಂಟೆಗಳಲ್ಲಿ, ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸಿ, ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾರ್ಪೊರೇಟ್ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಭವ್ಯ ಕಾರ್ಯಕ್ರಮ ಆಯೋಜನೆ

ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭವ್ಯ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಸಂಘಟಕರು 78,000 ಆಸನಗಳನ್ನು ತೆರೆದಿದ್ದು, ಶನಿವಾರ ಬೆಳಗ್ಗೆ 45 ನಿಮಿಷಗಳ ಪ್ರದರ್ಶನದ ಟಿಕೆಟ್ ಬೆಲೆ 7,000 ರೂಪಾಯಿಗೆ ಏರಿದೆ. ಕೋಲ್ಕತ್ತಾದಿಂದ ನೇರವಾಗಿ ಹೈದರಾಬಾದ್‌ಗೆ ತೆರಳಲಿರುವ ಮೆಸ್ಸಿ ಅಲ್ಲಿ ಭವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಹೈದರಾಬಾದ್‌ನಲ್ಲಿ '7v7 ಪ್ರದರ್ಶನ ಪಂದ್ಯ

ಕೋಲ್ಕತ್ತಾದಿಂದ ನೇರವಾಗಿ ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿರುವ ಮೆಸ್ಸಿ, ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯುವ '7v7 ಪ್ರದರ್ಶನ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವು ಸಾಮಾನ್ಯ ಫುಟ್ಬಾಲ್ ಪಂದ್ಯವಲ್ಲ. ಇದು '7v7 ಪ್ರದರ್ಶನ ಪಂದ್ಯ'ವಾಗಿರುತ್ತದೆ. ಮೆಸ್ಸಿ ಅವರೊಂದಿಗೆ ಅಂತರರಾಷ್ಟ್ರೀಯ ಆಟಗಾರರು ಸೇರಲಿದ್ದಾರೆ. ಇದು ಪೂರ್ಣ 90 ನಿಮಿಷಗಳ ಪಂದ್ಯವಲ್ಲದಿದ್ದರೂ, ಮೆಸ್ಸಿ ತನ್ನದೇ ಆದ ಶೈಲಿಯಲ್ಲಿ ಡ್ರಿಬ್ಲಿಂಗ್, ಪಾಸಿಂಗ್ ಮತ್ತು ಗೋಲ್-ಸ್ಕೋರಿಂಗ್ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ಮೆಸ್ಸಿ ಜೊತೆಗೆ, ಅವರ ದೀರ್ಘಕಾಲದ ಸ್ನೇಹಿತ, ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾದ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಕೂಡ ಈ ಪಂದ್ಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನಾಳೆ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆಯಲಿದೆ. ಈ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಶುಬ್ಮನ್ ಗಿಲ್ರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಮೆಸ್ಸಿ ಜೊತೆ ಸೆಲ್ಫಿಗೆ 9.95 ಲಕ್ಷ ರೂ.

ಇನ್ನು ಮೆಸ್ಸಿ ಜೊತೆ ಸೆಲ್ಫಿ ಬೇಕಿದ್ದಲ್ಲಿ 9.95 ಲಕ್ಷ ರೂ ಕೊಡಬೇಕು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಿ ಗೋಟ್ ಇಂಡಿಯಾ ಟೂರ್‌ನ ಆಯೋಜಕರು ಮೆಸ್ಸಿ ಜೊತೆಗಿನ ಒಂದು ಛಾಯಾಚಿತ್ರಕ್ಕೆ 9.95 ಲಕ್ಷ ರೂಪಾಯಿ ಮತ್ತು ಜಿಎಸ್‌ಟಿ ವೆಚ್ಚವಾಗಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಕೇವಲ 100 ವಿಶೇಷ ಸ್ಲಾಟ್‌ಗಳು ಮಾತ್ರ ಲಭ್ಯವಿದೆ.

Read More
Next Story