Paris Olympics 2024| ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್‌
x

Paris Olympics 2024| ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್‌


ಪ್ಯಾರಿಸ್- ಶುಕ್ರವಾರ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ರೋಚಕ ಮೂರು ಗೇಮ್‌ಗಳ ಜಯ ಗಳಿಸಿದ ಲಕ್ಷ್ಯ ಸೇನ್‌ ಅವರು ಸೆಮಿಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೊಚ್ಚಲ ಒಲಿಂಪಿಕ್ ಪದಕಕ್ಕೆ ಹತ್ತಿರವಾಗಿದ್ದಾರೆ.

2021 ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತರಾದ ಅಲ್ಮೋರಾ ಮೂಲದ ಸೇನ್‌(22), ನಿಖರವಾದ ವೇಗದಿಂದ, ಪ್ರಮುಖ ಕ್ಷಣಗಳಲ್ಲಿ ತಮ್ಮ ಹಿಡಿತ ಕಾಯ್ದುಕೊಂಡರು. ವಿಶ್ವದ 11 ನೇ ಶ್ರೇಯಾಂಕದ ಮತ್ತು 2022 ರ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ಗಳಿಸಿದ ಚೌ ವಿರುದ್ಧ19-21 21-15 21-12 ರಲ್ಲಿ ಜಯ ಗಳಿಸಿದರು.

ಕಾಮನ್‌ವೆಲ್ತ್ ಕ್ರೀಡಾಕೂಟದ ಹಾಲಿ ಚಾಂಪಿಯನ್ ಸೇನ್ ಅವರು 2021ರ ವಿಶ್ವ ಚಾಂಪಿಯನ್ ಸಿಂಗಾಪುರದ ಲೋ ಕೀನ್ ಯೂ ಮತ್ತು ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ನಡುವಿನ ಪಂದ್ಯದ ವಿಜೇತರನ್ನು ಕೊನೆಯ ನಾಲ್ಕರಲ್ಲಿ ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್ ಆಟಗಾರ್ತಿಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತವನ್ನು ದಾಟಿದ ಭಾರತೀಯರು. ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್ ಮತ್ತು ಕಿಡಂಬಿ ಶ್ರೀಕಾಂತ್ ಕ್ರಮವಾಗಿ 2012ರ ಲಂಡನ್ ಮತ್ತು 2016ರ ರಿಯೋ ಆವೃತ್ತಿಗಳಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

Read More
Next Story