Koneru Humpy : ಎರಡನೇ ಬಾರಿ ರಾಪಿಡ್ ಚೆಸ್ ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದ ಕೊನೆರು ಹಂಪಿ
Koneru Humpy : ನ್ಯೂಯಾರ್ಕ್‌ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿದ ಕೊನೇರು ಹಂಪಿ ಪ್ರಶಸ್ತಿ ಗೆದ್ದರು. ಹಂಪಿ 2019 ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲಿ ಇದೇ ಪ್ರಶಸ್ತಿ ಗೆದ್ದಿದ್ದರು.
ಭಾರತದ ಮಹಿಳಾ ಚೆಸ್ ಪಟು ಕೊನೆರು ಹಂಪಿ ಐತಿಹಾಸಿಕ ಸಾಧನೆ ಮಾಡಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ವರ್ಲ್ಡ್ ರ್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಅವರು ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಚೆಸ್ ಪಟು ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ, 2024 ಭಾರತದ ಚೆಸ್ ಕ್ಷೇತ್ರಕ್ಕೆ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ವರ್ಷವನ್ನಾಗಿಸಿದ್ದಾರೆ. ಕೆಲವೇ ವಾರಗಳ ಹಿಂದೆ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದು ಹೆಮ್ಮೆ ತಂದಿದ್ದರು.
ನ್ಯೂಯಾರ್ಕನ್‌ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿದ ಕೊನೇರು ಹಂಪಿ ಪ್ರಶಸ್ತಿ ಗೆದ್ದರು. ಹಂಪಿ 2019 ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲಿ ಇದೇ ಪ್ರಶಸ್ತಿ ಗೆದ್ದಿದ್ದರು.ಈ ಮೂಲಕ ಚೀನಾದ ಜು ವೆಂಜುನ್ ನಂತರ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಪಟು ಎಂಬ ಖ್ಯಾತಿ ಗಳಿಸಿದ್ದಾರೆ.
37 ವರ್ಷದ ಹಂಪಿ 11 ಅಂಕಗಳಲ್ಲಿ 8.5 ಅಂಕಗಳನ್ನು ಗಳಿಸುವ ಮೂಲಕ ಟೂರ್ನಿಯನ್ನು ಮುಗಿಸಿ ಪ್ರಶಸ್ತಿ ಗೆದ್ದರು. ಕಪ್ಪು ಕಾಯಿಗಳೊಂದಿಗೆ ಆಡಿದ್ದ ಕೊನೆರು ಚಾಂಪಿನ್‌ಶಿಪ್ ಕಿರೀಟ ಗೆದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ʼʼಈ ಪ್ರಶಸ್ತಿಯೊಂದಿಗೆ ನಾನು ಉತ್ಸುಕನಾಗಿದ್ದೇನೆ. ವಾಸ್ತವವಾಗಿ ನನಗೆ ಇದು ಟೈ ಬ್ರೇಕರ್ ರೀತಿಯಲ್ಲಿ ಭಾಸವಾಗಿತ್ತು. ಇದು ಕಠಿಣ ದಿನವಾಗಲಿದೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ನಾನು ಆಟವನ್ನು ಮುಗಿಸಿದಾಗ ಬಳಿಕ ನನ್ನ ಜತೆಗೆ ಇರುವವರು ಮಾಹಿತಿ ನೀಡಿದಾಗಲೇ ಚಾಂಪಿಯನ್‌ಷಿಪ್ ಪಟ್ಟ ಗೆದ್ದಿರುವುದು ಗೊತ್ತಾಯಿತು. ಇದು ಭಾವನಾತ್ಮಕ ಕ್ಷಣ" ಎಂದು ಹಂಪಿ ಹೇಳಿದ್ದಾರೆ.
" ಇದು ಅನಿರೀಕ್ಷಿತ. ಇಡೀ ವರ್ಷ ನಾನು ಸಾಕಷ್ಟು ಹೆಣಗಾಡಿದ್ದೆ. ನಾನು ತುಂಬಾ ಕೆಟ್ಟ ಫಲಿತಾಂಶಗಳನ್ನು ಕಂಡಿದ್ದೆ " ಎಂದು ಅವರು ಹೇಳಿದರು.
"ಮೊದಲ ಸುತ್ತಿನ ಸೋಲಿನ ನಂತರ ನಾನು ಪ್ರಶಸ್ತಿ ಬಗ್ಗೆ ಎಲ್ಲಿಯೂ ಯೋಚಿಸಲಿಲ್ಲ ಎಂದು ನಾನು ಭಾವಿಸುತ್ತೇನೆ, ಆದರೆ ಎಲ್ಲ ಸಂಗತಿಗಳು ಉತ್ತಮವಾಗಿ ನಡೆದವು, ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವುದು ನನಗೆ ಸಹಾಯ ಮಾಡಿತು" ಎಂದು ಅವರು ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ದೊಡ್ಡ ಸಮಯದ ಅಂತರದಿಂದಾಗಿ ಹಂಪಿ ಮತ್ತು ಇತರ ಸಿಬ್ಬಂದಿ ಕೆಲವು ಸವಾಲುಗಳನ್ನು ಎದುರಿಸಬೇಕಾಯಿತು.
"ಸಮಯದ ವ್ಯತ್ಯಾಸದಿಂದಾಗಿ ಇದು ನನಗೆ ತುಂಬಾ ಕಷ್ಟಕರವಾಗಿತ್ತು. ನನಗೆ ನಿದ್ರೆಯ ಕೊರತೆ ಇತ್ತು. ಅಕ್ಷರಶಃ, ನಾನು ಇಲ್ಲಿಗೆ ಬಂದಾಗಿನಿಂದ ಸರಿಯಾಗಿ ನಿದ್ರೆ ಮಾಡಿಲ್ಲ. ಅವಿಶ್ರಾಂತವಾಗಿ ಆಡುವುದು ಸುಲಭವಲ್ಲ, ಆದಾಗ್ಯೂಗೆಲ್ಲಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ, "ಎಂದು ಅವರು ಹೇಳಿದರು.
2012ರಲ್ಲಿ ಮಾಸ್ಕೋದಲ್ಲಿ ನಡೆದ ಈವೆಂಟ್‌ನಲ್ಲಿ ಹಂಪಿ ಕಂಚಿನ ಪದಕ ಗೆದ್ದಿದ್ದರೆ, ಕಳೆದ ವರ್ಷ ಉಜ್ಬೇಕಿಸ್ತಾನದ ಸಮರ್ಖಂಡ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ತಮ್ಮ ಗೆಲುವು ಈಗ ಭಾರತೀಯ ಪ್ರತಿಭೆಗಳಿಗೆ ಚೆಸ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ ಎಂದು ಹಂಪಿ ಹೇಳಿದ್ದಾರೆ.
"ಭಾರತಕ್ಕೆಇದು ಸೂಕ್ತ ಸಮಯ . ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ನಾನು ರ್ಯಾಪಿಡ್ ಈವೆಂಟ್‌ನಲ್ಲಿ ಎರಡನೇ ವಿಶ್ವ ಪ್ರಶಸ್ತಿ ಪಡೆದಿದ್ದೇನೆ. ಇದು ಬಹಳಷ್ಟುಯುವ ಪ್ರತಿಭೆಗಳಿಗೆ ಚೆಸ್ ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ. ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಕ್ಲಾಸಿಕಲ್ ಫಾರ್ಮ್ಯಾಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಡಿ ಗುಕೇಶ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ಹಂಪಿಯ ಸಾಧನೆ ಭಾರತೀಯ ಚೆಸ್‌ಗೆ ಒಂದು ರೋಚಕ ವರ್ಷವಾಗಿದೆ. ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ಮೊದಲ ಚಿನ್ನದ ಪದಕ ಗೆದ್ದಿತ್ತು.
ಪುರುಷರ ಪ್ರಶಸ್ತಿ ಗೆದ್ದ ಮುರ್ಜಿನ್
ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡಾರ್ ಮುರ್ಜಿನ್ ಪ್ರಶಸ್ತಿ ಗೆದ್ದರು. 17ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದ ನೊಡಿರ್ಬೆಕ್ ಅಬ್ದುಸತ್ತೊರೊವ್ ನಂತರ ಮುರ್ಜಿನ್ ಎರಡನೇ ಕಿರಿಯ ಫಿಡೆ ವಿಶ್ವ ರ್ಯಾಪಿಡ್ ಚಾಂಪಿಯನ್ ಆಗಿದ್ದಾರೆ.