
ಆಸ್ಪತ್ರೆಯ ಹಾಸಿಗೆಯಿಂದ ಟ್ರ್ಯಾಕ್‌ನವರೆಗೆ...ಅಂತಾರಾಷ್ಟ್ರೀಯ ರೇಸಿಂಗ್‌ನಲ್ಲಿ ಕಿಯಾನ್ ಶಾ ಮಿಂಚು
ಮುಂಬೈನ 15 ವರ್ಷದ ಅಪ್ರತಿಮ ಪ್ರತಿಭೆ, ರಾಯೊ ರೇಸಿಂಗ್ ತಂಡದ ಕಿಯಾನ್ ಶಾ, ಅಂತಾರಾಷ್ಟ್ರೀಯ ರೇಸಿಂಗ್ ಅಖಾಡದ ಹಿರಿಯರ ವಿಭಾಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಮೋಟಾರ್ ಕ್ರೀಡಾ ಲೋಕಕ್ಕೆ ಉದಯೋನ್ಮುಖ ತಾರೆ ಲಗ್ಗೆ ಇಟ್ಟಿದ್ದಾರೆ. ಮುಂಬೈನ 15 ವರ್ಷದ ಅಪ್ರತಿಮ ಪ್ರತಿಭೆ, ರಾಯೊ ರೇಸಿಂಗ್ ತಂಡದ ಕಿಯಾನ್ ಶಾ, ಅಂತಾರಾಷ್ಟ್ರೀಯ ರೇಸಿಂಗ್ ಅಖಾಡದ ಹಿರಿಯರ ವಿಭಾಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕೇವಲ ಭಾಗವಹಿಸುವಿಕೆಗೆ ಸೀಮಿತವಾಗದೆ, ಅನುಭವಿಗಳೇ ಇರುವ ಕಣದಲ್ಲಿ ಪೋಡಿಯಂ ಫಿನಿಶ್ ಮಾಡುವ ಮೂಲಕ ಕಿಯಾನ್, ಭವಿಷ್ಯದ ರೇಸಿಂಗ್ ಚಾಂಪಿಯನ್ ತಾನೆಂದು ಸಾರಿದ್ದಾರೆ. ಐಎಎಂಇ ಏಷ್ಯಾ ಸೀರೀಸ್ ಹಾಗೂ ಐಎಎಂಇ ಥಾಯ್ಲೆಂಡ್ ಸೀರೀಸ್‌ಗಳಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಕಿಯಾನ್ ಅವರ ಈ ಸಾಧನೆ ಕೇವಲ ರೇಸಿಂಗ್ ಟ್ರ್ಯಾಕ್ ಮೇಲೆ ಸಿದ್ಧಿಸಿದ್ದಲ್ಲ. ಬದಲಾಗಿ ಆಸ್ಪತ್ರೆಯ ಹಾಸಿಗೆಯಿಂದ ಟ್ರ್ಯಾಕ್‌ವರೆಗೆ ಅವರು ತೋರಿದ ಛಲದ ಫಲವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಸ್ನೋಬೋರ್ಡಿಂಗ್ ಕ್ರೀಡೆಯಲ್ಲಿ ತೊಡಗಿದ್ದಾಗ ಕಿಯಾನ್ ದುರದೃಷ್ಟವಶಾತ್ ಅಪಘಾತಕ್ಕೀಡಾಗಿ ತಮ್ಮ ಮೊಣಕೈ ಮುರಿದುಕೊಂಡಿದ್ದರು.
ಒಬ್ಬ ರೇಸರ್‌ಗೆ ಮೊಣಕೈ ಗಾಯವು ಅತ್ಯಂತ ಗಂಭೀರವಾದದ್ದು, ಯಾಕೆಂದರೆ ಸ್ಟೀರಿಂಗ್ ನಿಯಂತ್ರಿಸಲು ಮತ್ತು ತೀವ್ರ ವೇಗದ ತಿರುವುಗಳಲ್ಲಿ ದೇಹವನ್ನು ಸಮತೋಲನದಲ್ಲಿಡಲು ಕೈಗಳ ಬಲ ಅತಿ ಮುಖ್ಯ. ಈ ಗಾಯದಿಂದಾಗಿ ಕಿಯಾನ್ ಸುಮಾರು ಎರಡು ತಿಂಗಳ ಕಾಲ ರೇಸಿಂಗ್‌ನಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಯಿತು. ವೈದ್ಯಕೀಯ ಚಿಕಿತ್ಸೆ ಮತ್ತು ವಿಶ್ರಾಂತಿಯ ಅವಧಿಯಲ್ಲಿ ಅವರು ಏಷ್ಯಾ ಸೀರೀಸ್‌ನ ಮೊದಲ ಸುತ್ತನ್ನು ತಪ್ಪಿಸಿಕೊಂಡಿದ್ದರು. ಆದರೆ, ಕಿಯಾನ್ ಅವರ ಮನಸ್ಸಿನಲ್ಲಿ ರೇಸಿಂಗ್ ಹಸಿವು ಕುಂದಿರಲಿಲ್ಲ. ಹಿರಿಯರ ವಿಭಾಗಕ್ಕೆ ಪಾದಾರ್ಪಣೆ ಮಾಡುವ ಹೊತ್ತಿಗೆ ಸಂಪೂರ್ಣ ಫಿಟ್ ಆಗುವುದು ಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅವರ ತರಬೇತುದಾರ ರೋಹನ್ ಅವರ ಕಠಿಣ ಪರಿಶ್ರಮ ಮತ್ತು ಕಿಯಾನ್ ಅವರ ಅಚಲ ಇಚ್ಛಾಶಕ್ತಿಯಿಂದಾಗಿ ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡು ರೇಸ್ ಟ್ರ್ಯಾಕ್‌ಗೆ ಮರಳಿದರು.
ಕಿರಿಯರ ವಿಭಾಗದಿಂದ ಹಿರಿಯರ ಅಖಾಡಕ್ಕೆ
ಸಾಮಾನ್ಯವಾಗಿ ಕಿರಿಯರ ವಿಭಾಗದಿಂದ ಹಿರಿಯರ ವಿಭಾಗಕ್ಕೆ ಬಡ್ತಿ ಪಡೆದಾಗ ರೇಸರ್‌ಗಳು ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಕಿಯಾನ್ ವಿಷಯದಲ್ಲಿ ಇದು ಸುಳ್ಳಾಯಿತು. ಅವರು ಪಾದಾರ್ಪಣೆ ಮಾಡಿದ ಈ ರೇಸ್‌ನಲ್ಲಿ ವಿಶ್ವ ಚಾಂಪಿಯನ್‌ಗಳು, ಏಷ್ಯನ್ ಚಾಂಪಿಯನ್‌ಗಳು ಮತ್ತು ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ದಿಗ್ಗಜ ರೇಸರ್‌ಗಳು ಪಾಲ್ಗೊಂಡಿದ್ದರು. ಇಂತಹ ಅನುಭವಿಗಳ ನಡುವೆ 15 ವರ್ಷದ ಹುಡುಗನೊಬ್ಬ ಸ್ಪರ್ಧಿಸುವುದು ಸುಲಭದ ಮಾತಲ್ಲ. ರೇಸ್‌ನ ಆರಂಭಿಕ ಹಂತದ 'ಹೀಟ್ಸ್'ಗಳಲ್ಲಿ ಕಿಯಾನ್ ಅದ್ಭುತ ಚಾಣಾಕ್ಷತೆ ಪ್ರದರ್ಶಿಸಿದರು. ಆದಾಗ್ಯೂ, ಫೈನಲ್ ರೇಸ್‌ನ ಆರಂಭಿಕ ಗ್ರಿಡ್‌ನಲ್ಲಿ ಅವರಿಗೆ ಸಿಕ್ಕಿದ್ದು 14ನೇ ಸ್ಥಾನ. ಹಿಂದಿನ ಸಾಲಿನಿಂದ ರೇಸ್ ಆರಂಭಿಸುವುದು ಯಾವಾಗಲೂ ಒತ್ತಡದಾಯಕವಾಗಿರುತ್ತದೆ. ಆದರೆ ಹಸಿರು ದೀಪ ಬೆಳಗುತ್ತಿದ್ದಂತೆ ಕಿಯಾನ್ ತಮ್ಮ ಕಾರಿನ ವೇಗವನ್ನು ಹೆಚ್ಚಿಸುತ್ತಾ ಒಂದೊಂದೇ ಸ್ಥಾನಗಳನ್ನು ದಾಟುತ್ತಾ ಮುನ್ನುಗ್ಗಿದರು.
ರೇಸ್ ಮುಕ್ತಾಯದ ಹಂತಕ್ಕೆ ಬರುವಷ್ಟರಲ್ಲಿ ಕಿಯಾನ್ 14ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದರು. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಹಾಂಕಾಂಗ್‌ನ ಯು ಕಾ ಪೋ ಅವರಿಗಿಂತ ಕೇವಲ 1.6 ಸೆಕೆಂಡ್‌ಗಳಷ್ಟು ಮಾತ್ರ ಕಿಯಾನ್ ಹಿಂದೆ ಉಳಿದಿದ್ದರು. ಅಂತಾರಾಷ್ಟ್ರೀಯ ರೇಸಿಂಗ್ ಮಾನದಂಡಗಳ ಪ್ರಕಾರ, ಅಗ್ರ 5 ಸ್ಥಾನಗಳನ್ನು ಗಳಿಸುವ ಚಾಲಕರನ್ನು 'ಪೋಡಿಯಂ ಫಿನಿಶರ್ಸ್' ಎಂದು ಗೌರವಿಸಲಾಗುತ್ತದೆ.
ಈ ಸ್ಪರ್ಧೆಯು ಏಕಕಾಲದಲ್ಲಿ ಐಎಎಂಇ ಏಷ್ಯಾ ಮತ್ತು ಐಎಎಂಇ ಥಾಯ್ಲೆಂಡ್ ಸೀರೀಸ್ ಎರಡಕ್ಕೂ ಅನ್ವಯವಾಗುತ್ತಿತ್ತು. ಅಗ್ರ 5ರಲ್ಲಿ ಸ್ಥಾನ ಪಡೆದ ಇಬ್ಬರು ರೇಸರ್‌ಗಳು ಥಾಯ್ಲೆಂಡ್ ಸೀರೀಸ್‌ಗೆ ಅಧಿಕೃತವಾಗಿ ನೋಂದಾಯಿಸಿಕೊಳ್ಳದ ಕಾರಣ, ತಾಂತ್ರಿಕವಾಗಿ ಕಿಯಾನ್‌ಗೆ ಥಾಯ್ಲೆಂಡ್ ಸೀರೀಸ್‌ನಲ್ಲಿ 3ನೇ ಸ್ಥಾನ ಲಭಿಸಿತು. ಸಿಂಗಾಪುರದ ರಾಷ್ಟ್ರೀಯ ಚಾಂಪಿಯನ್ ದಿಲ್ಲಾನ್ ಟಾನ್ ಪ್ರಥಮ ಸ್ಥಾನ ಹಾಗೂ 8 ಬಾರಿ ಥಾಯ್ ಚಾಂಪಿಯನ್ ಆಗಿರುವ ಟೋಬಿ ಗೇಲ್ ದ್ವಿತೀಯ ಸ್ಥಾನ ಪಡೆದರು. ಇಂತಹ ಘಟಾನುಘಟಿಗಳ ಪಕ್ಕದಲ್ಲಿ ನಿಂತು ಪೋಡಿಯಂ ಹಂಚಿಕೊಂಡಿದ್ದು ಕಿಯಾನ್ ವೃತ್ತಿಜೀವನದ ದೊಡ್ಡ ಮೈಲಿಗಲ್ಲು.
ತರಬೇತುದಾರರ ಮೆಚ್ಚುಗೆ
ತಮ್ಮ ಈ ಅಮೋಘ ಸಾಧನೆಯ ನಂತರ ಮಾತನಾಡಿದ ಕಿಯಾನ್ ಶಾ, ಕಳೆದ ಮೂರು ತಿಂಗಳುಗಳು ನನ್ನ ಪಾಲಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಕಷ್ಟಕರವಾಗಿದ್ದವು. ಗಾಯದ ನೋವಿನಿಂದ ಚೇತರಿಸಿಕೊಂಡು ಮತ್ತೆ ರೇಸಿಂಗ್ ಸೀಟ್‌ನಲ್ಲಿ ಕುಳಿತುಕೊಳ್ಳುವುದು ಒಂದು ಕನಸಿನಂತಿತ್ತು. ನನಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ವೈದ್ಯರಿಗೆ ಮತ್ತು ನನ್ನನ್ನು ಮತ್ತೆ ದೈಹಿಕವಾಗಿ ಸಿದ್ಧಗೊಳಿಸಿದ ಟ್ರೈನರ್ ರೋಹನ್ ಅವರಿಗೆ ನಾನು ಚಿರಋಣಿ. ಅವರ ಮಾರ್ಗದರ್ಶನವಿಲ್ಲದಿದ್ದರೆ ಹಿರಿಯರ ವಿಭಾಗದ ಈ ಕಠಿಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂದು ಭಾವುಕರಾಗಿ ನುಡಿದರು.
ಕಿಯಾನ್ ಅವರ ಮಾರ್ಗದರ್ಶಕ ರಾಯೊಮಂಡ್ ಬನಾಜಿ ಅವರು ಕಿಯಾನ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಿಯಾನ್ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ ಮೊದಲ ರೇಸ್‌ನಲ್ಲೇ ನಮ್ಮ ನಿರೀಕ್ಷೆಗಿಂತಲೂ ಮೀರಿದ ಪ್ರದರ್ಶನ ನೀಡಿದ್ದಾರೆ. ವಿಶ್ವದರ್ಜೆಯ ರೇಸರ್‌ಗಳ ವಿರುದ್ಧ 14ನೇ ಸ್ಥಾನದಿಂದ ಆರಂಭಿಸಿ 5ನೇ ಸ್ಥಾನಕ್ಕೆ ಏರುವುದು ಸಾಮಾನ್ಯ ಸಾಧನೆಯಲ್ಲ. ಅವರ ವೇಗ ಮತ್ತು ರೇಸ್ ಕೌಶಲ್ಯ ಅದ್ಭುತವಾಗಿದೆ ಎಂದು ತಿಳಿಸಿದರು.

