IPL 2024| RCB ಅಭಿಮಾನಿಗಳ ಕನಸು ನುಚ್ಚುನೂರು: ರಾಜಸ್ಥಾನಕ್ಕೆ ಪ್ರಯಾಸದ ಗೆಲುವು
ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದರೊಂದಿಗೆ ಆರ್‌ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇಲ್ಲಿಗೆ ಆರ್‌ಸಿಬಿಯ ಕೋಟ್ಯಾಂತರ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲು ಸಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡವು 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ನೀಡಿತು. ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದ್ದ ಆರ್‌ಸಿಬಿ ಪಯಣ ಇಲ್ಲಿಗೆ ಅಂತ್ಯಗೊಂಡಿದೆ.
ಬೆಂಗಳೂರು ಪರ ಪಾಟೀದಾರ್ 34, ಕೊಹ್ಲಿ 32, ಮಹಿಪಾಲ್ 32 ರನ್ ಹೊಡೆದು ಗಮನ ಸೆಳೆದರು. ರಾಜಸ್ಥಾನ ಪರ ಅವೇಶ್ ಖಾನ್ 3, ಅಶ್ವಿನ್ 2 ವಿಕೆಟ್ ಪಡೆದರು.
ಕ್ವಾಲಿಫೈಯರ್-2 ತಲುಪಿರುವ ರಾಜಸ್ಥಾನ ತಂಡ ಇದೀಗ ಮೇ 24 ರಂದು ಮತ್ತೊಂದು ನಾಕೌಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್‌ನಲ್ಲಿ ಆಡಲಿದೆ.
ಬೆಂಗಳೂರಿನ ಆಟಗಾರರು ದಿನೇಶ್ ಕಾರ್ತಿಕ್ ಅವರನ್ನು ಅಪ್ಪಿಕೊಂಡ ರೀತಿ, ಇದು ಐಪಿಎಲ್‌ನಲ್ಲಿ ಕಾರ್ತಿಕ್ ಅವರ ಕೊನೆಯ ಪಂದ್ಯ ಎಂದು ಊಹಿಸಲಾಗುತ್ತಿದೆ. ಸಿಎಸ್‌ಕೆ ವಿರುದ್ಧದ ಪಂದ್ಯವು ತನ್ನ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಕಾರ್ತಿಕ್ ಸಿಎಸ್‌ಕೆಯನ್ನು ಸೋಲಿಸಿದ ನಂತರ ಈ ಹಿಂದೆ ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಾರ್ತಿಕ್ ಅವರ ವೃತ್ತಿಜೀವನ ಮುಗಿದಿದೆ ಎಂದು ಪರಿಗಣಿಸಲಾಗಿದೆ.