IPL 2024: ಕನ್ನಡಿಗರಿಗೆ ಖುಷ್| ಚೆನ್ನೈ ಪ್ಲೇ ಆಫ್ ಕನಸು ಭಗ್ನಗೊಳಿಸಿ ಮುನ್ನುಗ್ಗಿದ ಆರ್‌ಸಿಬಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್ಕೆ ನಡುವಿನ ರಣರೋಚಕ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಪಡೆಯನ್ನು 27 ರನ್ಗಳಿಂದ ಮಣಿಸಿದ ಫಾಫ್ ಪಡೆ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ
ಲೀಗ್ನಲ್ಲಿ ಸತತ 6 ಪಂದ್ಯಗಳನ್ನು ಸೋತು ಪ್ಲೇಆಫ್ನಿಂದ ಹೊರಗುಳಿಯುವ ಆತಂಕದಲ್ಲಿದ್ದ ಆರ್‌ಸಿಬಿ, ಆ ಬಳಿಕ ಅದ್ಭುತ ಪುನರಾಗಮನ ಮಾಡಿ ಸತತ 6 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದರೊಂದಿಗೆ ಅಧಿಕೃತವಾಗಿ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇದೀಗ ಎಲಿಮಿನೆಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಆರ್‌ಸಿಬಿ ಕಪ್ ಗೆಲ್ಲಲು ಇನ್ನು 2 ಹೆಜ್ಜೆ ಮಾತ್ರವೇ ಬಾಕಿ ಉಳಿದಿದೆ. ಚೆನ್ನೈ ತಂಡದ ವಿರುದ್ಧ ಇಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಮೂಲಕ ಆರ್‌ಸಿಬಿ ತಂಡ ಉಪಾಂತ್ಯ ಪ್ರವೇಶ ಮಾಡಿದ್ದು, ವಿರಾಟ್ ಕೊಹ್ಲಿಯ ಮಾತಿನಂತೆ ಆರ್‌ಸಿಬಿ ಬೆಂಗಳೂರು ತಂಡದಲ್ಲಿ ಈಗ ಹೊಸ ಅಧ್ಯಾಯ ಶುರುವಾಗಿದೆ.
ಟಾಸ್ ಗೆದ್ದ ತಕ್ಷಣ ಚೆನ್ನೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಗೆಲುವಿಗೆ 219 ರನ್ ಹಾಗೂ ಪ್ಲೇಆಫ್ಗೆ ಅರ್ಹತೆ ಪಡೆಯಲು 201 ರನ್ ಗುರಿ ಪಡೆದು ಇನ್ನಿಂಗ್ಸ್ ಆರಂಭಿಸಿದ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.