ರಚನಾ ಕುಮಾರಿಗೆ 12 ವರ್ಷ ನಿಷೇಧ
x

ರಚನಾ ಕುಮಾರಿಗೆ 12 ವರ್ಷ ನಿಷೇಧ


ಹೊಸದಿಲ್ಲಿ, ಫೆ.13- ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಹ್ಯಾಮರ್‌ ಎಸೆತಗಾರ್ತಿ ರಚನಾ ಕುಮಾರಿ ಅವರಿಗೆ 12 ವರ್ಷ ನಿಷೇಧ ಹೇರಲಾಗಿದೆ. ನಿಷೇಧದಿಂದ ಅವರ ವೃತ್ತಿಜೀವನ ಕೊನೆಗೊಂಡಿದೆ.

ಕಳೆದ ವರ್ಷ ‌ಅಂತಾರಾಷ್ಟ್ರೀಯ ಫೆಡರೇಷನ್ನಿನ ಎಐಯು(ಅಥ್ಲೆಟಿಕ್ಸ್‌ ಇಂಟೆಗ್ರಿಟಿ ಯುನಿಟ್) ಸಂಗ್ರಹಿಸಿದ್ದ ಸ್ಯಾಂಪಲ್‌ ನಲ್ಲಿ ಸ್ಟಾನೋಜೊ ಲಾಲ್‌, ಮೆಟಾನ್ಡಿನೋನ್, ಡೈ ಹೈಡ್ರೋಕ್ಲೋರೋ ಮಿಥೈಲ್‌ ಟೆಸ್ಟೋಸ್ಟೆರಾನ್(ಡಿಎಚ್‌ಸಿಎಂಟಿ), ಕ್ಲೆನ್‌ಬುಟೆರಾಲ್ ಪತ್ತೆಯಾಗಿತ್ತು. ʻಇದು ಡೋಪಿಂಗ್ ವಿರೋಧಿ ನಿಯಮದ ಉಲ್ಲಂಘನೆ. ಅವರು ಯಾವುದೇ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆʼ ಎಂದು ಎಐಯು ಹೇಳಿದೆ.

ಕಳೆದ ಸೆಪ್ಟೆಂಬರ್ 24 ರಂದು ಪಟಿಯಾಲದಲ್ಲಿ ನಡೆದ ಸ್ಪರ್ಧೆ ವೇಳೆ ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ(ವಾಡಾ)ಯ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ, ಈ ಮಾದರಿಗಳನ್ನು ಅನಾಬೋಲಿಕ್ ಮತ್ತು ಆಂಡ್ರೊಜೆನಿಕ್ ಸ್ಟೀರಾಯ್ಡ್‌ಗಳಿಗಾಗಿ ಪರೀಕ್ಷಿಸಲಾಯಿತು. ಇದು ಸಕಾರಾತ್ಮಕ ಫಲಿತಾಂಶ ನೀಡಿದೆ. ರಚನಾ ಕುಮಾರಿ 2015 ರ ಮೊದಲ ಡೋಪಿಂಗ್ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತ್ತು. ಇದು ಎರಡನೇ ಉಲ್ಲಂಘನೆ ಆಗಿರುವುದರಿಂದ, ಹನ್ನೆರಡು ವರ್ಷ ಅಮಾನತು ಮಾಡಲಾಗಿದೆ.

ರಚನಾ ಕುಮಾರಿ ಸೆಪ್ಟೆಂಬರ್ 23, 2023 ರಿಂದ ಅಕ್ಟೋಬರ್ 8 ರವರೆಗೆ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೆಟಿಕ್ಸ್ ತಂಡದ ಭಾಗವಾಗಿ ಸ್ಪರ್ಧಿಸಿದ್ದರು. ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ58.13 ಮೀಟರ್ ಎಸೆದು, ಒಂಬತ್ತನೇ ಸ್ಥಾನ ಗಳಿಸಿದ್ದರು. ಭುವನೇಶ್ವರದಲ್ಲಿ ನಡೆದ ಅಂತಾರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 65.03 ಮೀಟರ್‌ ಎಸೆದು ಚಿನ್ನದ ಪದಕ ಹಾಗೂ ಗೋವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 59.85 ಮೀಟರ್‌ ದೂರ ಎಸೆದು ಕಂಚಿನ ಪದಕ ಗೆದ್ದಿದ್ದರು. ಅವರು ಇದುವರೆಗೆ ಯಾವುದೇ ಅಂತಾರಾಷ್ಟ್ರೀ ಯ ಪದಕ ಗೆದ್ದಿಲ್ಲ.

Read More
Next Story