
ಭಾರತ ಹಾಗೂ ಬಾಂಗ್ಲಾ ಆಟಗಾರರು
ಪಾಕ್ ಹಾದಿ ತುಳಿದ ಬಾಂಗ್ಲಾ: ಟಿ20 ವಿಶ್ವಕಪ್ ಪಂದ್ಯಗಳನ್ನು ಲಂಕಾದಲ್ಲಿ ಆಯೋಜಿಸುವಂತೆ ಮನವಿ
ಆಟಗಾರನನ್ನು ಐಪಿಎಲ್‌ನಿಂದ ಕೈಬಿಟ್ಟಿರುವುದು ದೇಶಕ್ಕೆ ಮಾಡಿರುವ ಅವಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ ಎಂದು ಬಾಂಗ್ಲಾ ಕ್ರೀಡಾ ಸಚಿವ ಆಸಿಫ್ ನಜ್ರುಲ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಿಂಸಾಚಾರ ಇದೀಗ ಭಾರತ ಹಾಗೂ ಬಾಂಗ್ಲಾ ನಡುವಿನ ಕ್ರೀಡೆ ಮೇಲೆ ಕಾರ್ಮೋಡ ಆವರಿಸುವಂತೆ ಮಾಡಿದೆ. ಇಷ್ಟು ದಿನ ಕೇವಲ ಪಾಕಿಸ್ತಾನ ಮಾತ್ರ ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು. ಇದೀಗ ಬಾಂಗ್ಲಾದೇಶವೂ ಈ ಸಾಲಿಗ ಸೇರಿದೆ.
ಐಪಿಎಲ್‌ನಲ್ಲಿ ಯಾವುದೇ ಬಾಂಗ್ಲಾ ಆಟಗಾರರು ಆಡಬಾರದು. ಕೊಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡದಲ್ಲಿರುವ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೊಲ್ಕತ್ತದಲ್ಲಿ ಆಡಲು ಬಿಡುವುದಿಲ್ಲ. ಅವರನ್ನು ತಂಡದಿಂದ ಕೈಬಿಡಬೇಕು ಎಂದು ಪಶ್ಚಿಮ ಬಂಗಳಾದ ಬಿಜೆಪಿ ನಾಯಕರು ಸೇರಿದಂತೆ ಹಲವರು ಬಿಸಿಸಿಐಗೆ ಮನವಿ ಮಾಡಿದ್ದರು. ವಿರೋಧ ಹೆಚ್ಚಾಗುತ್ತಿದ್ದಂತೆ ಕೆಕೆಆರ್ ತಂಡದಲ್ಲಿನ ಮುಸ್ತಿಫಿಜುರ್ ರೆಹಮಾನ್ ಕೈಬಿಟ್ಟು ಬೇರೊಬ್ಬ ವಿದೇಶಿ ಆಟಗಾರರನ್ನು ಸೇರ್ಪಡೆಮಾಡಿಕೊಳ್ಳುವಂತೆ ಬಿಸಿಸಿಐ ಕೆಕೆಆರ್‌ಗೆ ಸೂಚಿಸಿತ್ತು.
ಬಾಂಗ್ಲಾ ವೇಗಿ ಮುಸ್ತಿಫಿಜುರ್ ರೆಹಮಾನ್
ಬಾಂಗ್ಲಾ ಆಟಗಾರನನ್ನು ಐಪಿಎಲ್‌ನಿಂದ ಕೈಬಿಟ್ಟಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಾಂಗ್ಲಾ ಕ್ರೀಡಾ ಸಚಿವ ಆಸಿಫ್ ನಜ್ರುಲ್ "ಆಟಗಾರನನ್ನು ಐಪಿಎಲ್‌ನಿಂದ ಕೈಬಿಟ್ಟಿರುವುದು ದೇಶಕ್ಕೆ ಮಾಡಿರುವ ಅವಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಮೊದಲ ಹಂತವಾಗಿ ನಮ್ಮ ದೇಶದಲ್ಲಿ ಐಪಿಎಲ್ ಪ್ರಸಾರ ಮಾಡದಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ. ಮುಂಬರುವ ಟಿ20 ವಿಶ್ವಕಪ್‌ಗೆ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ. ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಲಾಗುವುದು" ಎಂದಿದ್ದಾರೆ.
ಐಪಿಎಲ್ ಟ್ರೋಫಿ
ಪಾಕ್ ಹಾದಿ ತುಳಿದ ಬಾಂಗ್ಲಾ
ಭಾರತ ಹಾಗೂ ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಏಷ್ಯಾ ಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಭದ್ರತೆ ಕಾರಣ ನೀಡಿ ಭಾಗವಹಿಸಲು ಭಾರತ ಹಿಂದೇಟು ಹಾಕಿತ್ತು. ಈ ವೇಳೆ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲು ಷರತ್ತುಬದ್ಧ ಒಪ್ಪಿಗೆ ನೀಡಿತ್ತು. 2026ರಲ್ಲಿ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವುದಾಗಿ ಹೇಳಿತ್ತು. ಇದೀಗ ಬಾಂಗ್ಲಾದೇಶ ಕೂಡ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿದೆ.
ದ್ವಿಪಕ್ಷೀಯ ಪಂದ್ಯಗಳು ಅನುಮಾನ ?
ಭಾರತ ತಂಡ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡು ಮೂರು ಏಕದಿನ ಪಂದ್ಯಗಳು ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಇದೀಗ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುವ ಹಾಗೂ ತನ್ನ ದೇಶದಲ್ಲಿ ಐಪಿಎಲ್ ಪ್ರಸಾರ ಮಾಡದಿರುವ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಪಂದ್ಯಗಳ ಮೇಲೂ ಕರಿನೆರಳು ಬೀಳುವ ಸಾಧ್ಯತೆ ಇದೆ.

