Paris Olympics 2024| ಮಲೇಷ್ಯಾದ ಲೀ ವಿರುದ್ಧ ಲಕ್ಷ್ಯ ಸೇನ್‌ಗೆ ಸೋಲು
ಮಲೇಷ್ಯಾದ ಲೀ ಝಿ ಜಿಯಾ ಮೊದಲ ಗೇಮ್‌ನಲ್ಲಿ ಸೋತರು. ಆದರೆ, ನಂತರದ ಎರಡು ಗೇಮ್‌ಗಳನ್ನು ಗೆದ್ದು ಕಂಚಿನ ಪದಕವನ್ನು ಗೆದ್ದುಕೊಂಡರು.
ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ ಅವರು ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೋಲು ಅನುಭವಿಸಿದ್ದಾರೆ.
ಆರಂಭದಲ್ಲಿ ಸೇನ್ ಅತ್ಯಂತ ಚೈತನ್ಯಭರಿತರಾಗಿ ಆಟ ಆರಂಭಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಲೀ ಅವರ ಒಂಬತ್ತು ಅಂಕಗಳು ಪಂದ್ಯದ ಸ್ವರೂಪವನ್ನು ಬದಲಿಸಿತು. ವಿಶ್ವದ 7 ನೇ ಶ್ರೇಯಾಂಕದ ಆಟಗಾರ ಲೀ, 71 ನಿಮಿಷದಲ್ಲಿ 13-21 21-16 21-11 ಅಂಕಗಳಿಂದ ಗೆಲುವನ್ನು ದಾಖಲಿಸಿದರು.
ʻಎರಡನೇ ಸೆಟ್‌ನಲ್ಲಿ ಅವಕಾಶಗಳನ್ನು ಹೊಂದಿದ್ದೆ ಮತ್ತು ಖಂಡಿತವಾಗಿಯೂ ಉತ್ತಮವಾಗಿ ಆಡಬಹುದಿತ್ತು. ಆದರೆ, ಲೀ ನಿಜವಾಗಿಯೂ ಉತ್ತಮ ಆಟವಾಡಿದರು,ʼ ಎಂದು ಸೇನ್ ಹೇಳಿದರು.
ʻನಾನು ಈ ಪಂದ್ಯಕ್ಕೆ ಚೆನ್ನಾಗಿ ತಯಾರಾಗಿ ಬಂದಿದ್ದೆ. ಇದು ಒಟ್ಟಾರೆ ಒಂದು ಕಠಿಣ ವಾರ. ಆದರೆ, ಆಯಾಸ ಹೆಚ್ಚುತ್ತ ಹೋಯಿತು,ʼ ಎಂದು ಹೇಳಿದರು. ಗಾಯಗೊಂಡ ಬಲಗೈಗೆ ಹಲವು ಬಾರಿ ವೈದ್ಯಕೀಯ ಆರೈಕೆ ಪಡೆದ ಸೇನ್, ಮೊದಲ 30 ನಿಮಿಷದಲ್ಲಿ ಸೋಲಿಸಲು ಸಾಧ್ಯವೇ ಇಲ್ಲ ಎಂಬಂತೆ ಕಾಣಿಸುತ್ತಿದ್ದರು. ಆದರೆ, ಒಮ್ಮೆ ಲೀ ಒಂದು ಗೇಮ್ ಬಿಟ್ಟುಕೊಟ್ಟು, ಎರಡನೇ ಗೇಮ್ ನಲ್ಲಿ 3-8 ರಿಂದ ಹಿಂದುಳಿದ ನಂತರ ಆಟದ ಗತಿಯನ್ನು ಬದಲಿಸಿದರು. ಭಾರತೀಯರು ಪ್ಲಾನ್ 'ಬಿ' ಅನ್ನು ಹೊಂದಿರಲಿಲ್ಲ.
ಬ್ಯಾಡ್ಮಿಂಟನ್ ಪದಕವಿಲ್ಲ: ಸೇನ್ ಅವರ ಸೋಲಿನಿಂದ ಇದೇ ಮೊದಲ ಬಾರಿಗೆ 12 ವರ್ಷಗಳಲ್ಲಿ ಭಾರತ ಒಲಿಂಪಿಕ್ಸ್‌ನಿಂದ ಬ್ಯಾಡ್ಮಿಂಟನ್ ಪದಕವಿಲ್ಲದೆ ಮರಳಲಿದೆ.
ಸೈನಾ ನೆಹ್ವಾಲ್ (2012) ಮತ್ತು ಪಿ.ವಿ. ಸಿಂಧು (2016, 2021) ಮಾತ್ರ ಒಲಿಂಪಿಕ್ ಪದಕ ಗೆದ್ದಿದ್ದಾರೆ. ಸಿಂಧು ರಿಯೊದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಪದಕ ಗೆಲ್ಲುವ ಆಶಾಭಾವನೆಯಿದ್ದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಬರಿಗೈಯಲ್ಲಿ ಮರಳಿದ್ದಾರೆ. ಬ್ಯಾಡ್ಮಿಂಟನ್ ತಂಡದ ಪ್ರಮುಖ ಸದಸ್ಯ ಮತ್ತು ಥಾಮಸ್ ಕಪ್ ವಿಜೇತ ತಂಡದ ಭಾಗವಾಗಿರುವ ಸೇನ್, ಒಲಿಂಪಿಕ್ ಪದಕ ಗೆದ್ದ ದೇಶದ ಮೊದಲ ಪುರುಷ ಶಟ್ಲರ್ ಆಗಲು ಕಠಿಣ ಶ್ರಮ ವಹಿಸಿದ್ದರು.
ಸೇನ್ ಬ್ಯಾಂಡೇಜ್ ಅನ್ನು ಬದಲಿಸಬೇಕಿದ್ದರಿಂದ, ಪಂದ್ಯವನ್ನು ಮೂರು ಬಾರಿ ನಿಲುಗಡೆ ಮಾಡಬೇಕಾಯಿತು. ಇದು ನನ್ನ ವೇಗದ ಮೇಲೆ ಪರಿಣಾಮ ಬೀರಿತು ಎಂದು ಸೇನ್ ಹೇಳಿದರು. ʻಆಟದ ನಡುವೆ ರಕ್ತ ನೆಲದ ಮೇಲೆ ಬಿದ್ದಿದ್ದರಿಂದ, ಅಂಕಣವನ್ನುಒರೆಸಬೇಕಾಯಿತು. ಕೆಲವೊಮ್ಮೆ ಆಟದಲ್ಲಿ ವೇಗ ಕಳೆದುಕೊಂಡು, ಸ್ವಲ್ಪ ವಿರಾಮದ ಬಳಿಕ ಪಂದ್ಯದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೆ,ʼ ಎಂದು ಹೇಳಿದರು