ಭಾರತ-ಪಾಕ್ ಪಂದ್ಯದಲ್ಲಿ ಹಸ್ತಲಾಘವ ವಿವಾದ: ಮ್ಯಾಚ್ ರೆಫರಿ ವಜಾಗೊಳಿಸುವಂತೆ ಪಿಸಿಬಿ ಒತ್ತಾಯ
x

ಭಾರತ-ಪಾಕ್ ಪಂದ್ಯದಲ್ಲಿ 'ಹಸ್ತಲಾಘವ' ವಿವಾದ: ಮ್ಯಾಚ್ ರೆಫರಿ ವಜಾಗೊಳಿಸುವಂತೆ ಪಿಸಿಬಿ ಒತ್ತಾಯ

ಇದಕ್ಕೂ ಮುನ್ನ, ಪಿಸಿಬಿ ಈ ವಿಷಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗಮನಕ್ಕೆ ತಂದಿತ್ತು. ಭಾರತೀಯ ಆಟಗಾರರ ನಡವಳಿಕೆಯನ್ನು "ಕ್ರೀಡಾ ಸ್ಫೂರ್ತಿ ಇಲ್ಲದ್ದು" ಎಂದು ಬಣ್ಣಿಸಿತ್ತು.


ದುಬೈನಲ್ಲಿ ನಡೆದ ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದ ನಂತರ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡದ ಘಟನೆಯು ಇದೀಗ ದೊಡ್ಡ ವಿವಾದಕ್ಕೆ ತಿರುಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೋಮವಾರ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್‌ನಿಂದ ತಕ್ಷಣವೇ ವಜಾಗೊಳಿಸುವಂತೆ ಒತ್ತಾಯಿಸಿದೆ.

ಪಂದ್ಯದ ನಂತರ ಭಾರತೀಯ ಆಟಗಾರರು ಪ್ರತಿಸ್ಪರ್ಧಿ ತಂಡದೊಂದಿಗೆ ಹಸ್ತಲಾಘವ ಮಾಡದಿರುವುದು "ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ" ಎಂದು ಪಾಕಿಸ್ತಾನ ಆರೋಪಿಸಿದೆ. ಈ ಸಂಬಂಧ ಪಿಸಿಬಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪೈಕ್ರಾಫ್ಟ್ ವಿರುದ್ಧ ಔಪಚಾರಿಕವಾಗಿ ದೂರು ದಾಖಲಿಸಿದೆ.

"ಮ್ಯಾಚ್ ರೆಫರಿಯು ಐಸಿಸಿ ನೀತಿ ಸಂಹಿತೆ ಮತ್ತು ಎಂಸಿಸಿ ಕಾನೂನುಗಳನ್ನು ಉಲ್ಲಂಘಿಸಿರುವ ಬಗ್ಗೆ ಪಿಸಿಬಿ, ಐಸಿಸಿಗೆ ದೂರು ನೀಡಿದೆ. ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣವೇ ತೆಗೆದುಹಾಕಬೇಕೆಂದು ಪಿಸಿಬಿ ಒತ್ತಾಯಿಸಿದೆ," ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು 'X' (ಹಿಂದಿನ ಟ್ವಿಟರ್) ನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಪಿಸಿಬಿ ಈ ವಿಷಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗಮನಕ್ಕೆ ತಂದಿತ್ತು. ಭಾರತೀಯ ಆಟಗಾರರ ನಡವಳಿಕೆಯನ್ನು "ಕ್ರೀಡಾ ಸ್ಫೂರ್ತಿ ಇಲ್ಲದ್ದು" ಎಂದು ಬಣ್ಣಿಸಿತ್ತು.

"ಭಾರತೀಯ ಆಟಗಾರರು ಹಸ್ತಲಾಘವ ಮಾಡದ ವರ್ತನೆಯ ವಿರುದ್ಧ ತಂಡದ ಮ್ಯಾನೇಜರ್ ನವೀದ್ ಚೀಮಾ ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ. ಇದನ್ನು ಕ್ರೀಡಾ ಮನೋಭಾವಕ್ಕೆ ವಿರುದ್ಧವೆಂದು ಪರಿಗಣಿಸಲಾಗಿದೆ. ಪ್ರತಿಭಟನೆಯಾಗಿ, ನಾವು ನಮ್ಮ ನಾಯಕನನ್ನು ಪಂದ್ಯದ ನಂತರದ ಸಮಾರಂಭಕ್ಕೆ ಕಳುಹಿಸಲಿಲ್ಲ," ಎಂದು ಪಿಸಿಬಿ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತವು ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಡೆಸಿದ "ಆಪರೇಷನ್ ಸಿಂದೂರ್" ನಂತರ, ಉಭಯ ದೇಶಗಳು ಇದೇ ಮೊದಲ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು.

Read More
Next Story