FIFA | Dembeles hat-trick; France beats Norway to seal knockout spot!
x

 ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಔಸ್ಮಾನೆ ಡೆಂಬೆಲೆ

FIFA | ಡೆಂಬೆಲೆ ಹ್ಯಾಟ್ರಿಕ್ ಅಬ್ಬರ; ನಾರ್ವೆ ಮಣಿಸಿ ನಾಕೌಟ್‌ಗೆ ಲಗ್ಗೆ ಇಟ್ಟ ಫ್ರಾನ್ಸ್!

ಪಂದ್ಯದ ಮೊದಲಾರ್ಧದಲ್ಲೇ ಅಬ್ಬರಿಸಿದ ಡೆಂಬೆಲೆ ಆಕರ್ಷಕ ಹ್ಯಾಟ್ರಿಕ್ ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಪಂದ್ಯದ 7ನೇ, 20ನೇ ಮತ್ತು 32ನೇ ನಿಮಿಷಗಳಲ್ಲಿ ಡೆಂಬೆಲೆ ನಾರ್ವೆ ರಕ್ಷಣಾ ಕೋಟೆಯನ್ನು ಭೇದಿಸಿದರು.


Click the Play button to hear this message in audio format

ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಔಸ್ಮಾನೆ ಡೆಂಬೆಲೆ ಅಬ್ಬರಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ನಾರ್ವೆ ವಿರುದ್ಧ 4-1 ಗೋಲುಗಳ ಭರ್ಜರಿ ಜಯ ಸಾಧಿಸಿದ ಫ್ರಾನ್ಸ್, ನಾಕೌಟ್ ಹಂತಕ್ಕೆ ಸುಭದ್ರ ಹೆಜ್ಜೆ ಇಟ್ಟಿದೆ. ಈ ಪಂದ್ಯದ ಮೂಲಕ ಡೆಂಬೆಲೆ ಪ್ರಸಕ್ತ ವಿಶ್ವಕಪ್‌ನ 'ಗೋಲ್ಡನ್ ಬೂಟ್' ರೇಸ್‌ಗೆ ಅಧಿಕೃತವಾಗಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲೇ ಅಬ್ಬರಿಸಿದ ಡೆಂಬೆಲೆ ಆಕರ್ಷಕ ಹ್ಯಾಟ್ರಿಕ್ ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಪಂದ್ಯದ 7ನೇ, 20ನೇ ಮತ್ತು 32ನೇ ನಿಮಿಷಗಳಲ್ಲಿ ಡೆಂಬೆಲೆ ನಾರ್ವೆ ರಕ್ಷಣಾ ಕೋಟೆಯನ್ನು ಭೇದಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಇದರಲ್ಲಿ ಒಂದು ಗೋಲಿಗೆ ಮತ್ತೊಬ್ಬ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಪಾಸ್ (ಫೀಡ್) ನೀಡುವ ಮೂಲಕ ನೆರವಾದರು.

32 ವರ್ಷಗಳ ನಂತರ ಅಪರೂಪದ ದಾಖಲೆ

ವಿಶ್ವಕಪ್ ಇತಿಹಾಸದಲ್ಲಿ ಮೊದಲಾರ್ಧದಲ್ಲೇ ಹ್ಯಾಟ್ರಿಕ್ ಗೋಲು ದಾಖಲಾದ ಅಪರೂಪದ ಕ್ಷಣಕ್ಕೆ ಈ ಪಂದ್ಯ ಸಾಕ್ಷಿಯಾಯಿತು. 1994ರ ಯುಎಸ್ ವಿಶ್ವಕಪ್‌ನಲ್ಲಿ ರಷ್ಯಾದ ಫಾರ್ವರ್ಡ್ ಆಟಗಾರ ಓಲೆಗ್ ಸಲೆಂಕೊ, ಕ್ಯಾಮರೂನ್ ವಿರುದ್ಧದ ಪಂದ್ಯದ ಮೊದಲ 45 ನಿಮಿಷಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದೀಗ 32 ವರ್ಷಗಳ ನಂತರ ಡೆಂಬೆಲೆ ಆ ಸಾಧನೆಯನ್ನು ಪುನರಾವರ್ತಿಸಿದ್ದಾರೆ.

"ಇದು ನನ್ನ ಜೀವನದ ಅತ್ಯಂತ ವಿಶಿಷ್ಟ ಕ್ಷಣ. ಆದರೆ ವೈಯಕ್ತಿಕ ದಾಖಲೆಗಿಂತ ತಂಡವು ಗ್ರೂಪ್ ಹಂತದಲ್ಲಿ ಮೊದಲ ಸ್ಥಾನ ಪಡೆಯುವುದು ನಮಗೆ ಮುಖ್ಯವಾಗಿತ್ತು. ಈಗ ನಮ್ಮ ಸಂಪೂರ್ಣ ಗಮನ ಮುಂದಿನ 'ರೌಂಡ್ ಆಫ್ 32' ಪಂದ್ಯಗಳ ಮೇಲಿದೆ" ಎಂದು ಫ್ರಾನ್ಸ್‌ ಆಟಗಾರ ಔಸ್ಮಾನ್‌ ಡೆಂಬೆಲೆ ತಿಳಿಸಿದ್ದಾರೆ.

ನಾರ್ವೆ ನೀರಸ ಹೋರಾಟ

ಫ್ರಾನ್ಸ್ ಪರ ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ ಡೆಸೈರೆ ಡೌ ತಂಡದ ಪರ ನಾಲ್ಕನೇ ಹಾಗೂ ಅಂತಿಮ ಗೋಲು ಗಳಿಸಿದರು. ಇತ್ತ ನಾರ್ವೆ ತಂಡದ ಪರ ಥೆಲೋ ಆಸ್ಗಾರ್ಡ್ ಪಂದ್ಯದ 21ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿ ಸಮಾಧಾನ ಪಟ್ಟುಕೊಂಡರು. ಪಂದ್ಯದಲ್ಲಿ ಸೋತರೂ ಸಹ ನಾರ್ವೆ ತಂಡವು ಗ್ರೂಪ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ 'ರೌಂಡ್ ಆಫ್ 32' ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. 2025ರ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರಾಗಿರುವ ಡೆಂಬೆಲೆ, ಪ್ರಸಕ್ತ ವಿಶ್ವಕಪ್‌ನಲ್ಲಿ ಈಗಾಗಲೇ 4 ಗೋಲುಗಳನ್ನು ಬಾರಿಸಿದ್ದಾರೆ.

ವಿಶ್ವಕಪ್ ಅತಿವೇಗದ ಹ್ಯಾಟ್ರಿಕ್ ಇತಿಹಾಸ

1982ರ ಸ್ಪೇನ್ ವಿಶ್ವಕಪ್‌ನಲ್ಲಿ ಹಂಗೇರಿಯ ಸ್ಟ್ರೈಕರ್ ಲಾಸ್ಲೋ ಕಿಸ್, ಎಲ್ ಸಾಲ್ವಡಾರ್ ವಿರುದ್ಧ ಬದಲಿ ಆಟಗಾರನಾಗಿ ಕಣಕ್ಕಿಳಿದು ಕೇವಲ 7 ನಿಮಿಷ 42 ಸೆಕೆಂಡುಗಳಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ್ದರು. 1954ರ ಸ್ವಿಟ್ಜರ್‌ಲ್ಯಾಂಡ್ ವಿಶ್ವಕಪ್‌ನಲ್ಲಿ ಆಸ್ಟ್ರಿಯಾದ ಸ್ಟ್ರೈಕರ್ ಎರಿಕ್ ಪ್ರಾಬ್ಸ್ಟ್, ಜೆಕೊಸ್ಲೊವಾಕಿಯಾ ವಿರುದ್ಧ ಪಂದ್ಯ ಆರಂಭವಾದ 24 ನಿಮಿಷಗಳ ಒಳಗಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

Read More
Next Story