ಕರಾವಳಿಯ ಅಮ್ಮೆಂಬಳದಲ್ಲಿ ಮಹಿಳಾ ಕ್ರಿಕೆಟ್ ತಂಡದ ಸಿಡಿಲಮರಿ ಜೆಮಿಮಾ ರೊಡ್ರಿಗಸ್ ಕುಟುಂಬದ ಬೇರು
x
ಕುಟುಂಬದೊಂದಿಗೆ ಕ್ರಿಕೆಟ್‌ ಆಟಗಾರ್ತಿ ಜೆಮಿಮಾ ರೊಡ್ರಿಗ್ಸ್‌

ಕರಾವಳಿಯ 'ಅಮ್ಮೆಂಬಳ'ದಲ್ಲಿ ಮಹಿಳಾ ಕ್ರಿಕೆಟ್ ತಂಡದ ಸಿಡಿಲಮರಿ ಜೆಮಿಮಾ ರೊಡ್ರಿಗಸ್ ಕುಟುಂಬದ ಬೇರು

ಕುಟುಂಬದ ಮೂಲ ಮಂಗಳೂರು ಆದರೂ ಹುಟ್ಟಿ ಬೆಳೆದಿದ್ದು ಮುಂಬೈನ ಭಾಂಡೂಪ್‌ನಲ್ಲಿ. ಮುಂಬೈನಲ್ಲಿ ಬೆಳೆದು ಕ್ರೀಡಾ ಜಗತ್ತಿನಲ್ಲಿ ಅದ್ವಿತೀಯ ಸಾಧನೆ ಮಾಡಿದರೂ ಜೆಮಿಮಾ ಅವರು ಕುಟುಂಬದ ಮೂಲವಾಗಿರುವ ಅಮ್ಮೆಂಬಳ ಗ್ರಾಮವನ್ನು ಮರೆತಿಲ್ಲ.


ಮಹಿಳಾ ವಿಶ್ವಕಪ್ ಪಂದ್ಯದ ಸೆಮಿಫೈನಲ್‌ನಲ್ಲಿ ಅಜೇಯ ಶತಕ ಸಿಡಿಸಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಜೆಮಿಮಾ ರೊಡ್ರಿಗಸ್ ಕುಟುಂಬದ ಬೇರು ಕರಾವಳಿ ಜಿಲ್ಲೆ ಮಂಗಳೂರಿನ ಅಮ್ಮೆಂಬಳದಲ್ಲಿದೆ.

ತಮ್ಮ ಕಠಿಣ ಪರಿಶ್ರಮದ ಮೂಲಕ ಮಹಳಾ ಕ್ರಿಕೆಟ್ ನಲ್ಲಿ ಹೆಮ್ಮೆಯ ಆಟಗಾರ್ತಿಯ ಮಿನುಗುತ್ತಿರುವ ಜೆಮಿಮಾ ರೊಡ್ರಿಗಸ್‌, ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ಹೆಮ್ಮೆಯ ಕುವರಿಯಾಗಿದ್ದಾರೆ.

ಕುಟುಂಬದ ಮೂಲ ಮಂಗಳೂರು ಆದರೂ ಹುಟ್ಟಿ ಬೆಳೆದಿದ್ದು ಮುಂಬೈನ ಭಾಂಡೂಪ್‌ನಲ್ಲಿ. ಮುಂಬೈನಲ್ಲಿ ಬೆಳೆದು ಕ್ರೀಡಾ ಜಗತ್ತಿನಲ್ಲಿ ಅದ್ವಿತೀಯ ಸಾಧನೆ ಮಾಡಿದರೂ ಜೆಮಿಮಾ ಅವರು ಕುಟುಂಬದ ಮೂಲವಾಗಿರುವ ಅಮ್ಮೆಂಬಳ ಗ್ರಾಮವನ್ನು ಮರೆತಿಲ್ಲ. ಆಕೆಯ ಹೃದಯದ ಕವಾಟು ಕರಾವಳಿಯ ಅಮ್ಮೆಂಬಳ ಗ್ರಾಮದವದವರೆಗೂ ಬೇರೂರಿಕೊಂಡಿದೆ.

ಜೆಮಿಮಾ ಅವರ ಅಜ್ಜಿ ಜೋಸೆಫೆನ್ ರೊಡ್ರಿಗಸ್ ಇನ್ನೂ ಅಮ್ಮೆಂಬಳ ಗ್ರಾಮದಲ್ಲೇ ವಾಸವಿದೆ. ತಮ್ಮ ಮೊಮ್ಮಗಳ ಅದ್ಭುತ ಸಾಧನೆಗೆ ಅಜ್ಜಿ ಜೋಸೆಫೆನ್ ಅವರು ಆನಂದ ಬಾಷ್ಪ ಸುರಿಸಿದ್ದಾರೆ. ಜೆಮಿಯಾ ಸಾಧನೆಯಲ್ಲಿ ಕುಟುಂಬವೂ ಸಂಭ್ರಮಿಸುತ್ತಿದೆ.

ಸೆಮಿಫೈನಲ್‌ ಪಂದ್ಯದಲ್ಲಿ 134 ಎಸೆತಗಳಲ್ಲಿ ಅಜೇಯ 127 ರನ್‌ಗಳನ್ನು ಕಲೆಹಾಕಿದ ಜೆಮಿಮಾ, ಭಾರತದ ಇತಿಹಾಸದಲ್ಲೇ ಮರೆಯದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ಕ್ರೀಸ್‌ನಲ್ಲಿ ತೋರಿಸಿದ ಧೈರ್ಯ, ಖಚಿತವಾದ ಹೊಡೆತ ಮತ್ತು ಆಕರ್ಷಕ ಬ್ಯಾಟಿಂಗ್ ಶೈಲಿಯ ನೆನಪು ಅಭಿಮಾನಿಗಳಲ್ಲಿ ಚಿರಕಾಲ ಉಳಿಯುವಂತೆ ಮಾಡಿದೆ.

ಅಮ್ಮೆಂಬಳದಲ್ಲಿ ಭಾವುಕ ಕ್ಷಣ

ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ಅವರ ಒಂದೊಂದು ಹೊಡೆತವು ಅಮ್ಮೆಂಬಳದಲ್ಲಿ ಸಂಭ್ರಮದ ಜತೆಗೆ ಭಾವುಕ ಕ್ಷಣಗಳನ್ನು ಸೃಷ್ಟಿಸಿತ್ತು.

ಅಮ್ಮೆಂಬಳದ ಅಜ್ಜಿಯ ಮನೆಯಂಗಳ ದೊಡ್ಡ ಟಿವಿ ಪರದೆಯಲ್ಲಿ ಇಡೀ ಗ್ರಾಮವೇ ಜೋಸೆಫೆನ್ ಮೊಮ್ಮಗಳ ಆಟ ಕಣ್ತುಂಬಿಕೊಂಡಿತ್ತು.

ಪ್ರತಿಯೊಂದು ಬೌಂಡರಿ, ಸಿಕ್ಸರ್ ಸಿಡಿಸುವಾಗ ಇಡೀ ಮನೆಯಲ್ಲಿ ಸಂಭ್ರಮ ಪುಟಿಯುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾ ಅಭಿಮಾನಿಗಳು ಜೆಮಿಮಾ ರೊಡ್ರಿಗಸ್ ಜತೆಗೆ ಅವರ ಅಜ್ಜಿಯ ಪೋಟೋ ಹಂಚಿಕೊಂಡು, ಮನೆ ಮಗಳಂತೆ ಶುಭಾಶಯಗಳ ಸಂದೇಶ ಹೇಳಿದ್ದರು. ಕರಾವಳಿಯಲ್ಲಿ ಬೇರೂರಿರುವ ಜೆಮಿಮಾ ಕುಟುಂಬದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದರು.

ಜೆಮಿಮಾ ಸಾಧನೆ ಕ್ರಿಕೆಟ್ ಗೆ ಸೀಮಿತವಲ್ಲ

ಜೆಮಿಮಾ ರೊಡ್ರಿಗ್ಸ್ ಕೇವಲ ಕ್ರಿಕೆಟ್ ಅಷ್ಟೇ ಅಲ್ಲ, ಹಾಕಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.

17 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮುಂಬೈ ಹಾಕಿ ತಂಡವನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡಿದ್ದಾರೆ. ಕ್ರಿಕೆಟ್ ತಂಡದಲ್ಲಿ ಸೂಕ್ತ ಅವಕಾಶ ಸಿಗದೇ ಅಪಮಾನಿತರಾಗಿದ್ದ ಜೆಮಿಮಾ ರೊಡ್ರಿಗ್ಸ್ ಕೊನೆಗೆ ಅವಮಾನಿಸಿದವರಿಂದಲೇ ಅಭಿನಂದನೆ ಪಡೆದು ಸಾಧನೆ ಮಾಡಿದ್ದಾರೆ. ಮುಂಬೈ ನಲ್ಲಿ ತಂದೆಗಾದ ಅವಮಾನ, ಕಳಂಕವನ್ನು ಅದೇ ನೆಲದಲ್ಲಿ ತೊಡೆದು ಹಾಕಿ ಕುಟುಂಬ ಹಾಗೂ ತಾಯ್ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

ಅಮ್ಮೆಂಬಳ ಮತ್ತು ಸುತ್ತಮುತ್ತಲಿನ ಜನರನ್ನು ಜೆಮಿಮಾ ರೊಡ್ರಿಗ್ಸ್ ಸಿಡಿಲಬ್ಬರದ ಶತಕವು ಭಾವುಕಗೊಳಿಸಿದೆ. ಅವರ ಪ್ರದರ್ಶನ ಕೇವಲ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದಿಲ್ಲ, ಅದು ಕರಾವಳಿಯ ಮಣ್ಣಿನ ಹೆಮ್ಮೆ ಉತ್ತುಂಗಕ್ಕೆ ಕೊಂಡೊಯ್ದಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಇಡೀ ಭಾರತವು ಜೆಮಿಮಾ ರೊಡ್ರಿಗಸ್ ಅವರನ್ನು ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಆಟಗಾರ್ತಿ ಎಂದು ಭಾವಿಸುತ್ತಿದ್ದರೆ, ಮಂಗಳೂರು ಮಾತ್ರ ಜೆಮಿಯಾ ಅವರ ಹೆಸರಲ್ಲೇ ಹೆಮ್ಮೆ ಪಡುತ್ತಿದೆ.

ಅಮ್ಮೆಂಬಳದ ಚಿಕ್ಕ ಮನೆಯಲ್ಲಿ ತಮ್ಮ ಮೊಮ್ಮಗಳ ಪರಾಕ್ರಮ ನೋಡುತ್ತ ಕುಳಿತಿರುವ ಅಜ್ಜಿ ಜೋಸೆಫೆನ್ ಅವರು, ಮೊಮ್ಮಗಳ ಉಜ್ವಲ ಭವಿಷ್ಯ, ಇನ್ನಷ್ಟು ಸಾಧನೆಗಾಗಿ ಪ್ರಾರ್ಥಿಸುತ್ತಿದ್ದಾರೆ.

Read More
Next Story