End 18-month retirement Dangal queen Vinesh Phogat ready return to the ring
x

ಕುಸ್ತಿಪಟು ವಿನೇಶ್‌ ಪೋಗಟ್‌

18 ತಿಂಗಳ ನಿವೃತ್ತಿ ಅಂತ್ಯ: ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾದ 'ದಂಗಲ್' ರಾಣಿ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಫೈನಲ್‌ಗೆ ಅರ್ಹತೆ ಪಡೆದಿದ್ದ ವಿನೇಶ್, ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಅನರ್ಹಗೊಂಡಿದ್ದರು. ಈ ಆಘಾತದಿಂದ ಮನನೊಂದು ಅವರು ಮರುದಿನವೇ ಕುಸ್ತಿಗೆ ವಿದಾಯ ಘೋಷಿಸಿದ್ದರು.


Click the Play button to hear this message in audio format

ಪ್ಯಾರಿಸ್ ಒಲಿಂಪಿಕ್ಸ್‌ನ ಆಘಾತಕಾರಿ ಘಟನೆಯ ನಂತರ ಕುಸ್ತಿಗೆ ವಿದಾಯ ಹೇಳಿದ್ದ ಭಾರತದ ಖ್ಯಾತ ಕುಸ್ತಿಪಟು ಹಾಗೂ ಹರಿಯಾಣದ ಜುಲಾನಾ ಕ್ಷೇತ್ರದ ಶಾಸಕಿ ವಿನೇಶ್ ಫೋಗಟ್, ಇದೀಗ ತಮ್ಮ ನಿವೃತ್ತಿಯನ್ನು ಹಿಂಪಡೆದು ಮತ್ತೆ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಸುಮಾರು 18 ತಿಂಗಳ ಸುದೀರ್ಘ ಮೌನ ಮುರಿದಿರುವ ಅವರು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಗುರಿಯನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಭಾವುಕ ಪೋಸ್ಟ್ ಹಾಕಿರುವ ಅವರು, "ಪ್ಯಾರಿಸ್ ಒಲಿಂಪಿಕ್ಸ್ ನನ್ನ ವೃತ್ತಿಜೀವನದ ಅಂತ್ಯವೇ ಎಂದು ಜನ ಕೇಳುತ್ತಲೇ ಇದ್ದರು. ಬಹಳ ಕಾಲ ನನ್ನ ಬಳಿ ಉತ್ತರವಿಲ್ಲದಾಗಿತ್ತು. ಆದರೆ, ಆ ಮೌನದಲ್ಲಿ ನನಗೊಂದು ಸತ್ಯ ಅರಿವಾಯಿತು. ನಾನು ಇನ್ನೂ ಈ ಕುಸ್ತಿಯನ್ನು ಪ್ರೀತಿಸುತ್ತೇನೆ ಮತ್ತು ಸ್ಪರ್ಧಿಸಲು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

"ನನ್ನೊಳಗಿನ ಬೆಂಕಿ ಇನ್ನೂ ಆರಿಲ್ಲ. ಅದು ಕೇವಲ ಆಯಾಸ ಮತ್ತು ಗದ್ದಲದ ಅಡಿಯಲ್ಲಿ ಹುದುಗಿತ್ತು. ಈಗ ನಾನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕಡೆಗೆ ಹೆಜ್ಜೆ ಹಾಕುತ್ತಿದ್ದೇನೆ. ಈ ಬಾರಿ ನಾನು ಒಬ್ಬಂಟಿಯಲ್ಲ, ನನ್ನ ಮಗ ನನ್ನ ತಂಡವನ್ನು ಸೇರುತ್ತಿದ್ದಾನೆ. ಅವನೇ ನನ್ನ ಅತಿದೊಡ್ಡ ಪ್ರೇರಣೆ" ಎಂದು ಅವರು ತಮ್ಮ ಭವಿಷ್ಯದ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ನಿವೃತ್ತಿಗೆ ಕಾರಣವಾಗಿದ್ದ ಘಟನೆ

ಆಗಸ್ಟ್ 8, 2024 ರಂದು ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಫೈನಲ್‌ಗೆ ಅರ್ಹತೆ ಪಡೆದಿದ್ದ ವಿನೇಶ್, ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಅನರ್ಹಗೊಂಡಿದ್ದರು. ಈ ಆಘಾತದಿಂದ ಮನನೊಂದು ಅವರು ಮರುದಿನವೇ ಕುಸ್ತಿಗೆ ವಿದಾಯ ಘೋಷಿಸಿದ್ದರು.

ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದಿರುವ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ, ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಅವರ ಮುಡಿಗೇರಿದೆ. ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದ ಶಾಸಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Read More
Next Story