ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ, ತಂಡಕ್ಕೆ ನೂತನ ನಾಯಕ
x
ಸಿಎಸ್‌ಕೆ ತಂಡದ ನೂತನ ನಾಯಕ ರುತುರಾಜ್ ಗಾಯಕ್ವಾಡ್

ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ, ತಂಡಕ್ಕೆ ನೂತನ ನಾಯಕ

ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.


Click the Play button to hear this message in audio format

ಮಾರ್ಚ್‌ 22 ರಂದ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ನಾಯಕ ಎಂ ಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ, ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು. ಆದರೆ ಲೀಗ್​ ಆರಂಭಕ್ಕೂ ಮುನ್ನ ಇದೀಗ ನಾಯಕತ್ವವನ್ನು ತ್ಯಜಿಸಿ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಿಲಿದ್ದಾರೆ.

ರುತುರಾಜ್ ಗಾಯಕ್ವಾಡ್ ನೂತನ ನಾಯಕ

ತಂಡದ ಹೊಸ ನಾಯಕನಾಗಿ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಎಲ್ಲಾ 10 ತಂಡದ ನಾಯಕರು ಜೊತೆಯಾಗಿ ತೆಗೆಸಿಕೊಂಡಿದ್ದು, ಎಂಎಸ್ ಧೋನಿ ಬದಲಾಗಿ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ. ರುತುರಾಜ್‌ ಚೆನ್ನೈ ತಂಡದ ನಾಯಕರಾಗಲಿದ್ದಾರೆ ಎಂದು ಐಪಿಎಲ್‌ ಟ್ವಿಟರ್‌ ಖಾತೆ ಅಧಿಕೃತವಾಗಿ ಪ್ರಕಟಿಸಿದೆ.

ಧೋನಿ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್

ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಆಗಿದಲ್ಲದೆ, 2008, 2012, 2013, 2015 ಮತ್ತು 2019 ರಲ್ಲಿ ರನ್ನರ್​ಅಪ್ ಆಗಿತ್ತು.

ಸಿಎಸ್​ಕೆ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದ ರುತುರಾಜ್

ರುತುರಾಜ್ ಗಾಯಕ್ವಾಡ್ 2020 ರಲ್ಲಿ ಸಿಎಸ್​ಕೆ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದು, ಇದುವರೆಗೆ 3 ಸೀಸನ್‌ಗಳನ್ನು ಆಡಿದ್ದಾರೆ. ರುತುರಾಜ್, ಒಂದು ಶತಕ ಮತ್ತು 4 ಅರ್ಧ ಶತಕಗಳ ಆಧಾರದ ಮೇಲೆ 635 ರನ್ ಬಾರಿಸಿದ್ದರು. ಆದರೆ 2022 ರ ಐಪಿಎಲ್​ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಆದರೆ ಕಳೆದ ಸೀಸನ್​​ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಗಾಯಕ್ವಾಡ್ ಆಡಿದ 16 ಪಂದ್ಯಗಳಲ್ಲಿ 590 ರನ್ ಗಳಿಸುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗಾಯಕ್ವಾಡ್ ಐಪಿಎಲ್‌ನಲ್ಲಿ ಇದುವರೆಗೆ 52 ಪಂದ್ಯಗಳನ್ನು ಆಡಿದ್ದು, 39 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1797 ರನ್ ಗಳಿಸಿದ್ದಾರೆ.

ನಾಳೆಯಿಂದ ಐಪಿಎಲ್‌ ಆರಂಭ

ಮಾರ್ಚ್‌ 22 ರಿಂದ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭವಾಗಲಿದ್ದು, ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ( ಮಾರ್ಚ್‌ 22) ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

Read More
Next Story