Ronaldo sets world record in FIFA World Cup; only player to score in 6 consecutive editions!
x

 ಕ್ರಿಸ್ಟಿಯಾನೊ ರೊನಾಲ್ಡೊ

ಫಿಫಾ ವಿಶ್ವಕಪ್‌ನಲ್ಲಿ ರೊನಾಲ್ಡೊ ವಿಶ್ವ ದಾಖಲೆ; ಸತತ 6 ಆವೃತ್ತಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ!

ಕಾಂಗೋ ವಿರುದ್ಧದ ಹಿಂದಿನ ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸದೇ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ರೊನಾಲ್ಡೊ, ಇದೀಗ ಒಂದೇ ಮ್ಯಾಚ್‌ನಲ್ಲಿ ಎರಡು ಅದ್ಭುತ ಗೋಲುಗಳನ್ನು ಬಾರಿಸುವ ಮೂಲಕ ಮೈದಾನದಲ್ಲೇ ತಕ್ಕ ಉತ್ತರ ನೀಡಿದ್ದಾರೆ.


Click the Play button to hear this message in audio format

ಫುಟ್‌ಬಾಲ್ ಸಾಮ್ರಾಜ್ಯದ ಅಧಿಪತಿ, ದಾಖಲೆಗಳ ಸರದಾರ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲಿ ಮತ್ತೊಮ್ಮೆ ತಮ್ಮ ವಿಶ್ವವಿಖ್ಯಾತ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೂಸ್ಟನ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನ 45ನೇ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ ಪೋರ್ಚುಗಲ್ ಪಡೆ 5-0 ಗೋಲುಗಳ ಭರ್ಜರಿ ಏಕಪಕ್ಷೀಯ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರೊನಾಲ್ಡೊ ಅವರು ವಿಶ್ವಕಪ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಅಪರೂಪದ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟೀಕಾಕಾರರ ಬಾಯಿ ಮುಚ್ಚಿಸಿದ ರೊನಾಲ್ಡೊ

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ವಿರುದ್ಧದ ಹಿಂದಿನ ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸದೇ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ರೊನಾಲ್ಡೊ, ಇದೀಗ ಒಂದೇ ಮ್ಯಾಚ್‌ನಲ್ಲಿ ಎರಡು ಅದ್ಭುತ ಗೋಲುಗಳನ್ನು ಬಾರಿಸುವ ಮೂಲಕ ಮೈದಾನದಲ್ಲೇ ತಕ್ಕ ಉತ್ತರ ನೀಡಿದ್ದಾರೆ.

ಹೂಸ್ಟನ್‌ನ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ನಡೆದ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದ 6ನೇ ನಿಮಿಷದಲ್ಲೇ ರೊನಾಲ್ಡೊ ತಮ್ಮ ಮೊದಲ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಪಂದ್ಯದ 39ನೇ ನಿಮಿಷದಲ್ಲಿ ಸಹ ಆಟಗಾರ ಬ್ರೂನೋ ಫೆರ್ನಾಂಡಿಸ್ ನೀಡಿದ ನಿಖರವಾದ ಪಾಸ್ ಅನ್ನು ಅದ್ಭುತ ಸ್ಲೈಡ್ ಶಾಟ್ ಆಗಿ ಪರಿವರ್ತಿಸಿದ ರೊನಾಲ್ಡೊ, ತಂಡದ ಪರ ತಮ್ಮ ಎರಡನೇ ಗೋಲು ದಾಖಲಿಸಿದರು.

ಪೋರ್ಚುಗಲ್ ಪರ ಗರಿಷ್ಠ ಗೋಲುಗಳ ಸರದಾರ

ಉಜ್ಬೇಕಿಸ್ತಾನ್ ವಿರುದ್ಧದ ಈ ಎರಡು ಸ್ಮರಣೀಯ ಗೋಲುಗಳೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಪರ ಒಟ್ಟು 10 ಗೋಲುಗಳನ್ನು ಪೂರೈಸಿದ್ದಾರೆ. ಈ ಮೂಲಕ ಅವರು ಪೋರ್ಚುಗಲ್ ದೇಶದ ಪರ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೆಸ್ಸಿಗೂ ಸಾಧ್ಯವಾಗದ ʼದಾಖಲೆ’ ರೊನಾಲ್ಡೊ ವಶ!

ಪ್ರಸ್ತುತ ಯುಎಸ್​ಎ-ಮೆಕ್ಸಿಕೋ-ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಫಿಫಾ ವಿಶ್ವಕಪ್‌ನಲ್ಲಿ ಗೋಲು ಗಳಿಸುವ ಮೂಲಕ ರೊನಾಲ್ಡೊ, ವಿಶ್ವಕಪ್ ಇತಿಹಾಸದಲ್ಲೇ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ಜಗತ್ತಿನ ಏಕೈಕ ಕಾಲ್ಚೆಂಡು ಚತುರ ಎನಿಸಿಕೊಂಡಿದ್ದಾರೆ. ರೊನಾಲ್ಡೊ ಅವರ ಸಾಂಪ್ರದಾಯಿಕ ಎದುರಾಳಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಈವರೆಗೆ 6 ಫಿಫಾ ವಿಶ್ವಕಪ್ ಆಡಿದ್ದರೂ, 2010ರ ವಿಶ್ವಕಪ್‌ನಲ್ಲಿ ಯಾವುದೇ ಗೋಲು ದಾಖಲಿಸಿರಲಿಲ್ಲ. ಹೀಗಾಗಿ ಮೆಸ್ಸಿಗೂ ಸಾಧ್ಯವಾಗದ ಈ ಅಪರೂಪದ ದಾಖಲೆಯನ್ನು ರೊನಾಲ್ಡೊ ತಮ್ಮದಾಗಿಸಿಕೊಂಡಿದ್ದಾರೆ.

ಸತತ 6 ವಿಶ್ವಕಪ್ ಆವೃತ್ತಿಗಳು

2006ರಲ್ಲಿ ಜರ್ಮನಿ, 2010ರಲ್ಲಿ ಸೌತ್ ಆಫ್ರಿಕಾ, 2014ರಲ್ಲಿ ಬ್ರೆಜಿಲ್‌, 2018ರಲ್ಲಿ ರಷ್ಯಾ, 2022ರಲ್ಲಿ ಕತಾರ್‌ ಹಾಗೂ ಪ್ರಸ್ತುತ ಯುಎಸ್​ಎ-ಮೆಕ್ಸಿಕೋ-ಕೆನಡಾ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಈ ಜಗದೇಕ ವೀರ, ಸತತ 6 ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿ ಫುಟ್‌ಬಾಲ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ.

Read More
Next Story