ಭಾರತ-ಪಾಕ್ ಪಂದ್ಯ ನಿಶ್ಚಿತ? ಪಟ್ಟು ಸಡಿಲಿಸುವಂತೆ ಪಾಕಿಸ್ತಾನಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮನವಿ; ಯು ಟರ್ನ್ ಸಾಧ್ಯತೆ!
x

ಪಾಕಿಸ್ತಾನ ಕ್ರಿಕೆಟ್‌ ತಂಡ

ಭಾರತ-ಪಾಕ್ ಪಂದ್ಯ ನಿಶ್ಚಿತ? ಪಟ್ಟು ಸಡಿಲಿಸುವಂತೆ ಪಾಕಿಸ್ತಾನಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮನವಿ; 'ಯು ಟರ್ನ್' ಸಾಧ್ಯತೆ!

ಈಗಾಗಲೇ ಪಾಕಿಸ್ತಾನ ಸರ್ಕಾರವು ತನ್ನ ರಾಷ್ಟ್ರೀಯ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರೂ, ಭಾರತದ ವಿರುದ್ಧದ ಪಂದ್ಯವನ್ನು ಆಡದಂತೆ ತಡೆಹಿಡಿದಿತ್ತು.


Click the Play button to hear this message in audio format

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವ ಬಗ್ಗೆ ಇದ್ದ ಕಾರ್ಮೋಡ ಇನ್ನೂ ಸಂಪೂರ್ಣವಾಗಿ ಸರಿದಿಲ್ಲವಾದರೂ, ಸಣ್ಣ ಆಶಾವಾದವೊಂದು ಚಿಗುರೊಡೆದಿದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮಹತ್ವದ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ನಿರ್ಧಾರ ಬದಲಿಸುವ ಸಾಧ್ಯತೆಗಳಿದ್ದು, ಮತ್ತೊಮ್ಮೆ ಸರ್ಕಾರದ ಸಲಹೆ ಪಡೆಯಲು ಪಿಸಿಬಿ ಮುಂದಾಗಿದೆ.

ಈಗಾಗಲೇ ಪಾಕಿಸ್ತಾನ ಸರ್ಕಾರವು ತನ್ನ ರಾಷ್ಟ್ರೀಯ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರೂ, ಭಾರತದ ವಿರುದ್ಧದ ಪಂದ್ಯವನ್ನು ಆಡದಂತೆ ತಡೆಹಿಡಿದಿತ್ತು. ವಾಣಿಜ್ಯಿಕವಾಗಿ ಐಸಿಸಿ ಮತ್ತು ಪ್ರಸಾರಕರಿಗೆ ಅತಿ ದೊಡ್ಡ ಆದಾಯ ತಂದುಕೊಡುವ ಈ ಪಂದ್ಯ ರದ್ದಾದರೆ ಉಂಟಾಗುವ ಪರಿಣಾಮಗಳ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಳವಳ ವ್ಯಕ್ತಪಡಿಸಿದೆ.

ಆರ್ಥಿಕ ನಷ್ಟದ ಭೀತಿಯಲ್ಲಿ ಶ್ರೀಲಂಕಾ

ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಕೇವಲ ರಾಜಕೀಯ ವಿಷಯವಲ್ಲ, ಇದು ಟೂರ್ನಿಯ ಸಹ-ಆತಿಥ್ಯ ವಹಿಸಿರುವ ಶ್ರೀಲಂಕಾಕ್ಕೆ ಆರ್ಥಿಕವಾಗಿ ಭಾರಿ ಹೊಡೆತ ನೀಡಲಿದೆ ಎಂದು ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯದಿದ್ದರೆ ಗೇಟ್ ಕಲೆಕ್ಷನ್ (ಟಿಕೆಟ್ ದರ), ಹಾಸ್ಪಿಟಾಲಿಟಿ ಸೇಲ್ಸ್ ಮತ್ತು ಪ್ರಾಯೋಜಕತ್ವದ ಮೂಲಕ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬರಬೇಕಾದ ದೊಡ್ಡ ಮೊತ್ತದ ಆದಾಯ ಕೈತಪ್ಪಲಿದೆ. ಅಷ್ಟೇ ಅಲ್ಲದೆ, ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಟೂರ್ನಿಯ ವರ್ಚಸ್ಸಿಗೂ ಇದರಿಂದ ಧಕ್ಕೆಯಾಗಲಿದೆ ಎಂಬ ಅಂಶವನ್ನು ಶ್ರೀಲಂಕಾ ಪ್ರಬಲವಾಗಿ ಪ್ರತಿಪಾದಿಸಿದೆ.

ಪಾಕಿಸ್ತಾನ ತಂಡವು ಶನಿವಾರ (ಫೆಬ್ರವರಿ 7) ನೆದರ್ಲ್ಯಾಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ತಂಡದ ಎಲ್ಲಾ ಪಂದ್ಯಗಳು ಕೊಲಂಬೊ ಮತ್ತು ಪಲ್ಲೆಕೆಲೆಯಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ಮನವಿಯನ್ನು ಪುರಸ್ಕರಿಸುವಂತೆ ಶ್ರೀಲಂಕಾ ಒತ್ತಡ ಹೇರುತ್ತಿದೆ.

ಭಾರತ - ಪಾಕಿಸ್ತಾನ ಕ್ರಿಕೆಟ್‌ ತಂಡದ ಅಭಿಮಾನಿಗಳು

ಸರ್ಕಾರದೊಂದಿಗೆ ಪಿಸಿಬಿ ಮರು ಸಮಾಲೋಚನೆ

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮನವಿಗೆ ಸ್ಪಂದಿಸಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಈ ವಿಷಯವನ್ನು ತಮ್ಮ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಖ್ವಿ ಅವರು ಸದ್ಯ ದೇಶದಲ್ಲಿ ಇಲ್ಲದ ಕಾರಣ, ಅವರು ಪಾಕಿಸ್ತಾನಕ್ಕೆ ಮರಳಿದ ತಕ್ಷಣ ಪ್ರಧಾನ ಮಂತ್ರಿಯವರೊಂದಿಗೆ ಚರ್ಚಿಸಲಿದ್ದಾರೆ. ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರವನ್ನು ಹಿಂಪಡೆಯುವ ಬಗ್ಗೆ ಸರ್ಕಾರದ ಒಪ್ಪಿಗೆ ಕೋರಲಿದ್ದಾರೆ. ಮೂಲಗಳ ಪ್ರಕಾರ, ಸೋಮವಾರದ ವೇಳೆಗೆ ಈ ಕುರಿತು ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಪಾಕಿಸ್ತಾನ ಈಗಾಗಲೇ ಶ್ರೀಲಂಕಾದ ಮನವಿಯನ್ನು ತಿರಸ್ಕರಿಸಿದೆ ಎಂಬ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದವು ಎಂದು ಪಿಸಿಬಿ ಮೂಲಗಳು ಸ್ಪಷ್ಟಪಡಿಸಿವೆ.

ಶ್ರೀಲಂಕಾ-ಪಾಕ್ ಬಾಂಧವ್ಯದ ಹಿನ್ನೆಲೆ

ಪಾಕಿಸ್ತಾನ ಮತ್ತು ಶ್ರೀಲಂಕಾ ಸರ್ಕಾರ ಹಾಗೂ ಕ್ರಿಕೆಟ್ ಮಂಡಳಿಗಳ ನಡುವೆ ಯಾವಾಗಲೂ ಉತ್ತಮ ಬಾಂಧವ್ಯವಿದೆ. ಈ ಸ್ನೇಹದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಶ್ರೀಲಂಕಾದ ಇಮೇಲ್ ಅನ್ನು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ. ಕಳೆದ ನವೆಂಬರ್‌ನಲ್ಲಿ ಪಾಕಿಸ್ತಾನ ಪ್ರವಾಸದ ವೇಳೆ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲವು ಆಟಗಾರರು ತವರಿಗೆ ಮರಳಲು ಬಯಸಿದ್ದರು. ಆಗ ಶ್ರೀಲಂಕಾ ಸರ್ಕಾರ ಮತ್ತು ಅಲ್ಲಿನ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಪ್ರವಾಸವನ್ನು ಪೂರ್ಣಗೊಳಿಸುವಂತೆ ಆಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಅಂದು ಶ್ರೀಲಂಕಾ ನೀಡಿದ್ದ ಬೆಂಬಲಕ್ಕೆ ಪ್ರತಿಯಾಗಿ, ಇಂದು ಶ್ರೀಲಂಕಾಕ್ಕೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Read More
Next Story