ಟಿ20 ವಿಶ್ವಕಪ್‌ ಸೆಮಿಫೈನಲ್: ಇಂಗ್ಲೆಂಡ್‌ ಮಣಿಸಿ ಸತತ 2ನೇ ಬಾರಿ ಫೈನಲ್‌ಗೇರಿದ ಟೀಮ್ ಇಂಡಿಯಾ
x

ಟಿ20 ವಿಶ್ವಕಪ್‌ ಸೆಮಿಫೈನಲ್: ಇಂಗ್ಲೆಂಡ್‌ ಮಣಿಸಿ ಸತತ 2ನೇ ಬಾರಿ ಫೈನಲ್‌ಗೇರಿದ ಟೀಮ್ ಇಂಡಿಯಾ

ಬೆಥೆಲ್‌ ಅಬ್ಬರದಿಂದಾಗಿ ಇಂಗ್ಲೆಂಡ್‌ ಒಂದು ಹಂತದಲ್ಲಿ ಗೆಲುವಿನ ಸನಿಹ ಬಂದಿತ್ತಾದರೂ, ಡೆತ್‌ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಕರಾರುವಾಕ್ ದಾಳಿ ಸಂಘಟಿಸಿ ಗೆಲುವು ತಂದುಕೊಟ್ಟರು.


Click the Play button to hear this message in audio format

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಅತ್ಯಂತ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಈ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿದ್ದು, ಆಂಗ್ಲರ ಪರ ಜಾಕೋಬ್‌ ಬೆಥೆಲ್‌ ಸಿಡಿಸಿದ ವಿರೋಚಿತ ಶತಕ ಕೇವಲ ಹೋರಾಟಕ್ಕಷ್ಟೇ ಸೀಮಿತವಾಯಿತು.


ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 253 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ (9) ಬೇಗನೆ ನಿರ್ಗಮಿಸಿದರೂ, ಮತ್ತೊಬ್ಬ ಓಪನರ್ ಸಂಜು ಸ್ಯಾಮ್ಸನ್‌ ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 42 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್‌ ಸಿಡಿಸಿದ ಸಂಜು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಇಶಾನ್‌ ಕಿಶನ್‌ ಕೇವಲ 18 ಎಸೆತಗಳಲ್ಲಿ 39 ರನ್ ಹಾಗೂ ಶಿವಂ ದುಬೆ 25 ಎಸೆತಗಳಲ್ಲಿ 43 ರನ್‌ ಸಿಡಿಸಿ ರನ್‌ ವೇಗ ಹೆಚ್ಚಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ (27 ರನ್) ಹಾಗೂ ತಿಲಕ್‌ ವರ್ಮಾ (21 ರನ್) ಅಬ್ಬರಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಜಾಕೋಬ್‌ ಬೆಥೆಲ್‌ ಏಕಾಂಗಿ ಹೋರಾಟ

254 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌, ಜೋಸ್‌ ಬಟ್ಲರ್‌ (25 ರನ್‌) ಹಾಗೂ ಹ್ಯಾರಿ ಬ್ರೂಕ್‌ ಬೇಗನೆ ವಿಕೆಟ್‌ ಒಪ್ಪಿಸುವ ಮೂಲಕ ಭಾರಿ ನಿರಾಸೆ ಮೂಡಿಸಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜಾಕೋಬ್‌ ಬೆಥೆಲ್, ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಕೇವಲ 48 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 105 ರನ್‌ ಚಚ್ಚಿದ ಬೆಥೆಲ್‌ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು. ಅವರಿಗೆ ವಿಲ್‌ ಜ್ಯಾಕ್ಸ್‌ (35 ರನ್‌) ಉತ್ತಮ ಸಾಥ್ ನೀಡಿದರು.

ಡೆತ್ ಓವರ್‌ಗಳಲ್ಲಿ ಮಿಂಚಿದ ಬೌಲರ್‌ಗಳು

ಬೆಥೆಲ್‌ ಅಬ್ಬರದಿಂದಾಗಿ ಇಂಗ್ಲೆಂಡ್‌ ಒಂದು ಹಂತದಲ್ಲಿ ಗೆಲುವಿನ ಸನಿಹ ಬಂದಿತ್ತಾದರೂ, ಡೆತ್‌ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಕರಾರುವಾಕ್ ದಾಳಿ ಸಂಘಟಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 246 ರನ್‌ ಗಳಿಸಲಷ್ಟೇ ಶಕ್ತವಾಗಿ, ಕೇವಲ 7 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಭಾರತದ ಪರ ಶಿಸ್ತಿನ ದಾಳಿ ನಡೆಸಿದ ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಕಿತ್ತರೆ, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಫೈನಲ್ ಟಿಕೆಟ್ ಖಚಿತಪಡಿಸಿದರು.

Read More
Next Story