
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಮುಂದಿನ ಗುರಿ ಬಹಿರಂಗಪಡಿಸಿದ ನಾಯಕ ಸೂರ್ಯಕುಮಾರ್
ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಕದನದಲ್ಲಿ ಟೀಮ್ ಇಂಡಿಯಾ 96 ರನ್‌ಗಳ ಬೃಹತ್ ಅಂತರದಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಬಳಿಕ ಸೂರ್ಯಕುಮಾ್ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್, ಭವಿಷ್ಯದ ಬೃಹತ್ ಗುರಿಯೊಂದನ್ನು ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐತಿಹಾಸಿಕ ಫೈನಲ್ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದು ಹಾಗೂ ಅದೇ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವುದು ತಂಡದ ಮುಂದಿನ ಪ್ರಮುಖ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಐತಿಹಾಸಿಕ ಗೆಲುವಿನ ಸಂಭ್ರಮ
ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಕದನದಲ್ಲಿ ಟೀಮ್ ಇಂಡಿಯಾ 96 ರನ್‌ಗಳ ಬೃಹತ್ ಅಂತರದಿಂದ ಮಿಚೆಲ್ ಸ್ಯಾಂಟನರ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 255 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಕಠಿಣ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಕೇವಲ 159 ರನ್‌ಗಳಿಗೆ ಸರ್ವಪತನ ಕಂಡಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಟಿ20 ಇತಿಹಾಸದಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ, ತವರಿನಲ್ಲಿ ಟ್ರೋಫಿ ಎತ್ತಿಹಿಡಿದ ಹಾಗೂ ಸತತ ಎರಡನೇ ಬಾರಿ ಚಾಂಪಿಯನ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಚುಟುಕು ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.
128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್
ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೂಲಕ ಬರೋಬ್ಬರಿ 128 ವರ್ಷಗಳ ಸುದೀರ್ಘ ವಿರಾಮದ ಬಳಿಕ ಕ್ರಿಕೆಟ್ ಕ್ರೀಡೆಯು ಒಲಿಂಪಿಕ್ಸ್‌ಗೆ ಮರಳುತ್ತಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮಾಹಿತಿಯಂತೆ, ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸೆಣಸಾಡಲಿವೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಪ್ರತಿಯೊಂದು ವಿಭಾಗದಲ್ಲೂ ತಲಾ 90 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಸ್ಕ್ವಾಷ್, ಫ್ಲ್ಯಾಗ್ ಫುಟ್ಬಾಲ್, ಬೇಸ್‌ಬಾಲ್/ಸಾಫ್ಟ್‌ಬಾಲ್ ಹಾಗೂ ಲ್ಯಾಕ್ರೋಸ್ ಕ್ರೀಡೆಗಳ ಜೊತೆಗೆ ಕ್ರಿಕೆಟ್ ಕೂಡ ಸೇರ್ಪಡೆಗೊಂಡಿದೆ.
ಕಠಿಣ ಅರ್ಹತಾ ಸುತ್ತಿನ ನಿರೀಕ್ಷೆ
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ತಂಡಗಳ ಅರ್ಹತಾ ಮಾನದಂಡಗಳು ಇನ್ನೂ ಅಂತಿಮಗೊಂಡಿಲ್ಲ. ಟೆಸ್ಟ್ ಹಾಗೂ ಏಕದಿನ ಮಾದರಿಗಳಿಗೆ ಹೋಲಿಸಿದರೆ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ವಿಶ್ವದ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳು ಆಡುವುದರಿಂದ ಅರ್ಹತಾ ಪ್ರಕ್ರಿಯೆಯು ತೀವ್ರ ಪೈಪೋಟಿಯಿಂದ ಕೂಡಿರಲಿದೆ. ಆತಿಥೇಯ ರಾಷ್ಟ್ರವಾಗಿರುವ ಕಾರಣ ಅಮೆರಿಕ ತಂಡವು ಟೂರ್ನಿಗೆ ನೇರ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ 2028ರ ಕ್ರೀಡಾಕೂಟದಲ್ಲಿ ಒಟ್ಟು 351 ಪದಕ ಸ್ಪರ್ಧೆಗಳು ನಡೆಯಲಿದ್ದು, ಈ ಬೃಹತ್ ವೇದಿಕೆಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ಚಿನ್ನದ ಬೇಟೆಯಾಡಲು ಈಗಿನಿಂದಲೇ ಸಜ್ಜಾಗುತ್ತಿದೆ.

