
ಒಂದು ಕಾಲದಲ್ಲಿ ಟ್ರೋಫಿ ಗೆಲ್ಲಲು ದಶಕಗಳ ಕಾಲ ಕಾಯುತ್ತಿದ್ದ ಆರ್‌ಸಿಬಿ ಫ್ರಾಂಚೈಸಿಯು ಇದೀಗ ಸತತ ಮೂರು ವರ್ಷಗಳಿಂದ ಟ್ರೋಫಿ ಭೇಟೆ ಮುಂದುವರಿಸಿದೆ.
WPL 2026: ಆರ್‌ಸಿಬಿ ವನಿತೆಯರ ಐತಿಹಾಸಿಕ ಗೆಲುವಿಗೆ ಕೊಹ್ಲಿ, ಗಣ್ಯರ ಶ್ಲಾಘನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡದ ಸ್ಥಿರ ಪ್ರದರ್ಶನವನ್ನು ಕೊಂಡಾಡಿದ್ದಾರೆ. "ಮತ್ತೊಮ್ಮೆ ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯುಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವುದು ಸಂತಸ ತಂದಿದೆ ಎಂದು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತೋರಿದ ಅದ್ಭುತ ಪ್ರದರ್ಶನ ಮತ್ತು ಎರಡನೇ ಟ್ರೋಫಿ ಗೆಲುವಿನ ಸಾಧನೆಗೆ ಫ್ರಾಂಚೈಸಿಯ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ
ತಂಡದ ಗೆಲುವಿನ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಆರ್‌ಸಿಬಿ ವನಿತೆಯರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಾವು ಮತ್ತೊಮ್ಮೆ ಚಾಂಪಿಯನ್‌ಗಳಾಗಿದ್ದೇವೆ. ಆರ್‌ಸಿಬಿ ಧ್ವಜವನ್ನು ಎತ್ತರದಲ್ಲಿ ರಾರಾಜಿಸುವಂತೆ ಮಾಡಿರುವ ಈ ಕ್ಷಣ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನೀವು ನಿಸ್ಸಂಶಯವಾಗಿಯೂ ಈ ಗೆಲುವಿಗೆ ಅರ್ಹರಾಗಿದ್ದೀರಿ. ಈ ಸುಂದರ ಕ್ಷಣವನ್ನು ಆನಂದಿಸುತ್ತಾ ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಿ," ಎಂದು ಕೊಹ್ಲಿ ಹಾರೈಸಿದ್ದಾರೆ.
ಆರ್‌ಸಿಬಿ ಪಾಲಿಗೆ ಸುವರ್ಣ ಯುಗ ಮತ್ತು ಎಬಿಡಿ ಹರ್ಷ
ಒಂದು ಕಾಲದಲ್ಲಿ ಟ್ರೋಫಿ ಗೆಲ್ಲಲು ದಶಕಗಳ ಕಾಲ ಕಾಯುತ್ತಿದ್ದ ಆರ್‌ಸಿಬಿ ಫ್ರಾಂಚೈಸಿಯು ಇದೀಗ ಸತತ ಮೂರು ವರ್ಷಗಳಿಂದ ಟ್ರೋಫಿ ಭೇಟೆ ಮುಂದುವರಿಸಿದೆ. 2024ರಲ್ಲಿ ಮಹಿಳಾ ತಂಡವು ಮೊದಲ ಬಾರಿಗೆ ಕಪ್ ಗೆದ್ದರೆ, 18 ವರ್ಷಗಳ ದೀರ್ಘ ಕಾಯುವಿಕೆಯ ನಂತರ 2025ರಲ್ಲಿ ಪುರುಷರ ತಂಡವು ಐಪಿಎಲ್ ಚಾಂಪಿಯನ್ ಆಗಿತ್ತು. ಇದೀಗ 2026ರಲ್ಲಿ ಮಹಿಳೆಯರು ಮತ್ತೆ ಟ್ರೋಫಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ವರ್ಷಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ತಂಡದ ಈ ಯಶಸ್ಸಿನ ಬಗ್ಗೆ ಆರ್‌ಸಿಬಿಯ ಮತ್ತೋರ್ವ ದಿಗ್ಗಜ, 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಎಬಿ ಡಿವಿಲಿಯರ್ಸ್ ಕೂಡ ಹರ್ಷ ವ್ಯಕ್ತಪಡಿಸಿದ್ದು, ಗೆಲುವಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
ರಾಜಕೀಯ ಗಣ್ಯರಿಂದ ಮೆಚ್ಚುಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡದ ಸ್ಥಿರ ಪ್ರದರ್ಶನವನ್ನು ಕೊಂಡಾಡಿದ್ದಾರೆ. "ಮತ್ತೊಮ್ಮೆ ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯುಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವುದು ಸಂತಸ ತಂದಿದೆ. ಇಡೀ ಪಂದ್ಯಾವಳಿಯುದ್ದಕ್ಕೂ ಉತ್ಕೃಷ್ಟ ಪ್ರದರ್ಶನ ನೀಡಿದ ನಮ್ಮ ತಂಡ, ಫೈನಲ್‌ನಲ್ಲಿ ಸಂಘಟಿತ ಹೋರಾಟದ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೊನೆಯವರೆಗೂ ಹೋರಾಡಿದ ಡೆಲ್ಲಿ ತಂಡದ ಆಟವೂ ಶ್ಲಾಘನೀಯ. ಈ ಸಲ ಕಪ್ ನಮ್ದು," ಎಂದು ಸಿಎಂ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ತಂಡಕ್ಕೆ ಶುಭಕೋರಿದ್ದು, "ತಂಡವು ಪ್ರದರ್ಶಿಸಿದ ಆತ್ಮವಿಶ್ವಾಸ, ಶಿಸ್ತು ಮತ್ತು ಒಗ್ಗಟ್ಟು ಮಾದರಿಯಾಗಿದೆ. ಫೈನಲ್‌ನಂತಹ ಒತ್ತಡದ ಸನ್ನಿವೇಶವನ್ನು ಆಟಗಾರ್ತಿಯರು ಸಮರ್ಥವಾಗಿ ನಿಭಾಯಿಸಿದ್ದಾರೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

