ಐಪಿಎಲ್ 2026: ಸನ್‌ರೈಸರ್ಸ್ ಬೌಲರ್‌ಗಳನ್ನು ಬೆಂಡೆತ್ತಿದ ಆರ್ಸಿಬಿಗೆ ಭರ್ಜರಿ ಜಯ
x

ಐಪಿಎಲ್ 2026: ಸನ್‌ರೈಸರ್ಸ್ ಬೌಲರ್‌ಗಳನ್ನು ಬೆಂಡೆತ್ತಿದ ಆರ್'ಸಿಬಿಗೆ ಭರ್ಜರಿ ಜಯ

ಕೊಹ್ಲಿ 38 ಎಸೆತಗಳಲ್ಲಿ 5 ಸಿಕ್ಸರ್​, 5 ಫೋರ್​ಗಳ ಮೂಲಕ 69 ರನ್ ಬಾರಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.


Click the Play button to hear this message in audio format

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್'ಸಿಬಿ) ತಂಡವು ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಅದ್ಧೂರಿಯಾಗಿ ಆರಂಭಿಸಿದೆ.

ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್'ಸಿಬಿ ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿ ಬೀಗಿತು. ಕೊಹ್ಲಿ 38 ಎಸೆತಗಳಲ್ಲಿ 5 ಸಿಕ್ಸರ್​, 5 ಫೋರ್​ಗಳ ಮೂಲಕ 69 ರನ್ ಬಾರಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕಳೆದ ವರ್ಷ ತವರಿನಲ್ಲಿ ಸತತ ಮೂರು ಸೋಲುಗಳೊಂದಿಗೆ ಟೂರ್ನಿ ಆರಂಭಿಸಿದ್ದ ಆರ್'ಸಿಬಿ, ಈ ಬಾರಿ ಆ ತಪ್ಪು ಮರುಕಳಿಸದಂತೆ ಎಚ್ಚರವಹಿಸಿದೆ. ಗುರಿ ಬೆನ್ನಟ್ಟಿದ ಬೆಂಗಳೂರು ಪಡೆಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಸ್ಪೋಟಕ ಆರಂಭ ಒದಗಿಸಿದರು. ದೇಶಿ ಟೂರ್ನಿಗಳಲ್ಲಿನ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ ಪಡಿಕ್ಕಲ್, ಕೇವಲ 26 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಗಳ ನೆರವಿನಿಂದ 61 ರನ್ ಸಿಡಿಸಿದರು. ನಾಯಕ ರಜತ್ ಪಾಟಿದಾರ್ ಕೇವಲ 12 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು.

ಡಫಿ ಮಾರಕ ದಾಳಿ ಹಾಗೂ ಕಿಶನ್ ಹೋರಾಟ

ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಿದ ಇಶಾನ್ ಕಿಶನ್ ಅವರ 80 ರನ್‌ಗಳ ಏಕಾಂಗಿ ಹೋರಾಟ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಆರಂಭದಲ್ಲೇ ಆರ್'ಸಿಬಿಯ ಪ್ರಮುಖ ಬೌಲರ್ ಜಾಕೋಬ್ ಡಫಿ ಅವರ ಮಾರಕ ದಾಳಿಗೆ ನಲುಗಿದ ಹೈದರಾಬಾದ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಕೇವಲ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದ ಕಿಶನ್, ಅಂತಿಮವಾಗಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್‌ಗಳಿಗೆ ತಂದು ನಿಲ್ಲಿಸಿದರು. ಆದರೆ, ಬೌಲಿಂಗ್ ವಿಭಾಗದಲ್ಲಿ ಹೈದರಾಬಾದ್ ಸಂಪೂರ್ಣ ಮಂಕಾಗಿತ್ತು.

ಕೊಹ್ಲಿ ಫಿನಿಶಿಂಗ್ ಟಚ್

ಆರಂಭದಲ್ಲಿ ಪಡಿಕ್ಕಲ್ ಮತ್ತು ಪಾಟಿದಾರ್ ಅವರ ಅಬ್ಬರಕ್ಕೆ ಸಾಥ್ ನೀಡಿದ ವಿರಾಟ್ ಕೊಹ್ಲಿ, ನಂತರ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರೂ ತಮ್ಮ ಹಳೆಯ ಖದರ್ ಕಳೆದುಕೊಳ್ಳದ ಕೊಹ್ಲಿ, 38 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ಹರ್ಷಲ್ ಪಟೇಲ್ ಎಸೆದ 16ನೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯಕ್ಕೆ ವಿಜಯದ ಸ್ಪರ್ಶ ನೀಡಿದರು. ಈ ಗೆಲುವಿನೊಂದಿಗೆ ಆರ್'ಸಿಬಿ ಉತ್ತಮ ನೆಟ್ ರನ್ ರೇಟ್ ಸಂಪಾದಿಸಿದ್ದು, ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ.

Read More
Next Story