
ಸ್ಮಾರಕಕ್ಕೆ ಡಾ.ಜಿ. ಪರಮೇಶ್ವರ್ ಪುಷ್ಪನಮನ ಸಲ್ಲಿಸಿದರು.
RCB Stampede|ಚಿನ್ನಸ್ವಾಮಿ ಸ್ಟೇಡಿಯಂ: ಕಾಲ್ತುಳಿತದಲ್ಲಿ ಮೃತರಾದ 11 ಅಭಿಮಾನಿಗಳ 'ಸ್ಮಾರಕ' ಅನಾವರಣ!
ಕಾಲ್ತುಳಿತ ದುರಂತಕ್ಕೆ ಒಳಗಾದ ಅಭಿಮಾನಿಗಳ ಹೆಸರಿನಲ್ಲಿ ಪ್ರಮುಖ ಸ್ಟ್ಯಾಂಡ್‌ನಲ್ಲಿರುವ 11 ಆಸನಗಳನ್ನು ಆರ್‌ಸಿಬಿ ಕಾಯ್ದಿರಿಸಿದೆ. ಐಪಿಎಲ್ ಪಂದ್ಯ ನಡೆದಾಗ ಈ ಗೌರವ ಸಲ್ಲಿಸಲಾಗುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬಹುಕಾಲದ ಕನಸಾಗಿದ್ದ ಟ್ರೋಫಿಯನ್ನು ಆರ್‌ಸಿಬಿ ಗೆದ್ದಾಗ ನಡೆದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳ ನೆನಪಿಗಾಗಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕವೊಂದನ್ನು ಅನಾವರಣಗೊಳಿಸಲಾಯಿತು.
ಬುಧವಾರ (ಮಾ.25) ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಆವರಣದಲ್ಲಿ ನಿರ್ಮಿಸಲಾದ ಈ ಸ್ಮಾರಕವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಅನಾವರಣಗೊಳಿಸಿ, ಮೃತ ಅಭಿಮಾನಿಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು.
ಈ ವೇಳೆ ಮಾತನಾಡಿ, "ಕ್ರೀಡೆಯ ಮೇಲಿನ ಅಭಿಮಾನ ಪ್ರಾಣ ಬಲಿ ತೆಗೆದುಕೊಳ್ಳುವಂತಾಗಬಾರದು. ಮೃತಪಟ್ಟ 11 ಯುವಕರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಅವರ ಸವಿನೆನಪಿಗಾಗಿ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಎಚ್ಚರಿಕೆಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ," ಎಂದು ತಿಳಿಸಿದರು.
ಏನಿದು ಘಟನೆ ?
ಕಳೆದ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದಾಗ, ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಾಂತರ ಅಭಿಮಾನಿಗಳು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಭಾರಿ ಜನದಟ್ಟಣೆಯಲ್ಲಿ ಉಂಟಾದ ಆಕಸ್ಮಿಕ ಕಾಲ್ತುಳಿತದಿಂದಾಗಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆ ಇಂದಿಗೂ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆ ಪರಿಶೀಲಿಸಿದರು.
ಸ್ಮಾರಕದ ವಿಶೇಷತೆ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಮುಖ ಪ್ರವೇಶ ದ್ವಾರದ ಬಳಿಯ ಹೊರ ಆವರಣದಲ್ಲಿ ಮೃತ 11 ಅಭಿಮಾನಿಗಳ ಹೆಸರನ್ನು ಸ್ಮಾರಕದ ಮೇಲೆ ಕೆತ್ತಲಾಗಿದ್ದು, ಕ್ರೀಡಾ ಸ್ಫೂರ್ತಿಯ ಸಂಕೇತವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಕ್ರೀಡಾಂಗಣಕ್ಕೆ ಬರುವ ಸಾವಿರಾರು ಅಭಿಮಾನಿಗಳಿಗೆ ಭದ್ರತೆ ಮತ್ತು ಶಿಸ್ತಿನ ಮಹತ್ವವನ್ನು ಸಾರುವ ಉದ್ದೇಶವನ್ನು ಇದು ಹೊಂದಿದೆ.
ಕ್ರೀಡಾಂಗಣದಲ್ಲಿ 11 ಸೀಟು ಮೀಸಲಿರಿಸಿರುವ ಆರ್‌ಸಿಬಿ
ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ತನ್ನ ಹಿಲ್ಸ್‌ಬರೋ ದುರಂತದ ಸಂತ್ರಸ್ತರಿಗೆ ನೀಡುವ ಗೌರವದ ಮಾದರಿಯಲ್ಲೇ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ ಒಳಗಾದ 11 ಅಭಿಮಾನಿಗಳ ಹೆಸರಿನಲ್ಲಿ ಪ್ರಮುಖ ಸ್ಟ್ಯಾಂಡ್‌ನಲ್ಲಿರುವ 11 ಆಸನಗಳನ್ನು ಆರ್‌ಸಿಬಿ ಶಾಶ್ವತವಾಗಿ ಕಾಯ್ದಿರಿಸಿದೆ. ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆದಾಗಲೆಲ್ಲಾ ಈ ಗೌರವ ಸಲ್ಲಿಸಲಾಗುತ್ತದೆ.

