
ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್
"ಇಂಥ ಆಟಗಾರ ಸಿಗಲು 40 ವರ್ಷ ಬೇಕಾಯ್ತು!"- ವೈಭವ್ ಬೆನ್ನುತಟ್ಟಿದ ದ್ರಾವಿಡ್
ನಮ್ಮ ಕರ್ನಾಟಕದ ಹುಡುಗರೂ ಅದ್ಭುತವಾಗಿ ಆಡುತ್ತಾರೆ, ಅವರಿಗೂ ಒಳ್ಳೆಯ ಅವಕಾಶಗಳು ಸಿಗಬೇಕು. ಆದರೆ ವೈಭವ್ ಒಬ್ಬ ಅಸಾಧಾರಣ ಆಟಗಾರ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಲೋಕದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು ವೈಭವ್ ಸೂರ್ಯವಂಶಿ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಈ ಬಾರಿಯ ಐಪಿಎಲ್ (2026) ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟಿಂಗ್ ಅಬ್ಬರ ಸೃಷ್ಟಿಸಿದ್ದ ಈ 15 ವರ್ಷದ ದೈತ್ಯ ಪ್ರತಿಭೆ ಇದೀಗ ಜಾಗತಿಕ ಕ್ರಿಕೆಟ್‌ನ ಗಮನ ಸೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರು ವೈಭವ್ ಸೂರ್ಯವಂಶಿ ಕುರಿತು ಮುಕ್ತವಾಗಿ ಮಾತನಾಡಿದ್ದು, "ಆತ ಅತ್ಯಂತ ವಿಭಿನ್ನ ಹಾಗೂ ಅಪರೂಪದ ಆಟಗಾರ. ಪ್ರತಿಯೊಬ್ಬ ಯುವ ಕ್ರಿಕೆಟಿಗನನ್ನು ಆತನಿಗೆ ಹೋಲಿಸುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ 'ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20' ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸೇರಿ ಟ್ರೋಫಿ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಯುವ ಬ್ಯಾಟಿಂಗ್ ಸೆನ್ಸೇಷನ್‌ನ ಮುಕ್ತಕಂಠದಿಂದ ಶ್ಲಾಘಿಸಿದರು. "ಇಂತಹ ಆಟಗಾರ ಸಿಗಲು 40 ವರ್ಷ ಬೇಕಾಯಿತು!" ಎಂದು ತಿಳಿಸಿದರು.
ಎಲ್ಲರನ್ನೂ ವೈಭವ್‌ಗೆ ಹೋಲಿಕೆ ಬೇಡ
ವೈಭವ್ ಬ್ಯಾಟಿಂಗ್ ಶೈಲಿ ಹಾಗೂ ಸಾಮರ್ಥ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, "ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಸಿ ನೋಡುವುದು ಸರಿಯಲ್ಲ. ಆತ ತೀರಾ ವಿಭಿನ್ನ ಮತ್ತು ಯೂನಿಕ್ ಪ್ಲೇಯರ್. ಸಚಿನ್ ತೆಂಡೂಲ್ಕರ್ ಅವರು 15 ವರ್ಷದವರಿದ್ದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಆರಂಭಿಸಿದ್ದರು. ಅದಾದ ಬಳಿಕ, ಅಂದರೆ ಸುಮಾರು 40 ವರ್ಷಗಳ ಸುದೀರ್ಘ ಅವಧಿಯ ನಂತರ ಈಗ ನಮಗೆ ಮತ್ತೊಬ್ಬ ವೈಭವ್ ಸೂರ್ಯವಂಶಿ ಸಿಕ್ಕಿದ್ದಾನೆ. ಇಂತಹ ಮತ್ತೊಬ್ಬ ಆಟಗಾರ ಬರಲು ಇನ್ನು 40 ವರ್ಷಗಳೇ ಬೇಕಾಗಬಹುದು" ಎಂದರು.
ಉತ್ತಮ ಪ್ರದರ್ಶನ ಮುಂದುವರಿಸಲಿ
"ನಮ್ಮ ಕರ್ನಾಟಕದ ಹುಡುಗರೂ ಅದ್ಭುತವಾಗಿ ಆಡುತ್ತಾರೆ, ಅವರಿಗೂ ಒಳ್ಳೆಯ ಅವಕಾಶಗಳು ಸಿಗಬೇಕು. ಆದರೆ ವೈಭವ್ ಒಬ್ಬ ಅಸಾಧಾರಣ ಆಟಗಾರ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಆತ ಸಖತ್ ಆಗಿ ಆಡುತ್ತಿದ್ದಾನೆ. ಸ್ಪೆಷಲ್ ಟ್ಯಾಲೆಂಟ್. ಮುಂಬರುವ ದಿನಗಳಲ್ಲೂ ಆತ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲಿ ಮತ್ತು ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಲಿ" ಎಂದು ಹಾರೈಸಿದರು.
ಐಪಿಎಲ್‌ನಲ್ಲಿ ಬರೆದ ದಾಖಲೆಗಳು!
ಕೇವಲ 15 ವರ್ಷ 65 ದಿನಗಳ ಪ್ರಾಯದಲ್ಲೇ ರಾಜಸ್ಥಾನ್ ರಾಯಲ್ಸ್ (RR) ತಂಡದ ಪರ ಇನ್ನಿಂಗ್ಸ್ ಆರಂಭಿಸಿದ್ದ ವೈಭವ್ ಸೂರ್ಯವಂಶಿ, ಈ ಬಾರಿಯ ಐಪಿಎಲ್‌ನಲ್ಲಿ ದಾಖಲೆಗಳ ಧೂಳೀಪಟ ಮಾಡಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ. ಈ ಸೀಸನ್‌ನಲ್ಲಿ ವೈಭವ್ ಆರೆಂಜ್ ಕ್ಯಾಪ್, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸಿಕ್ಸರ್ಸ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದಿದ್ದರು.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ (ಕೇವಲ 440 ಎಸೆತಗಳಲ್ಲಿ) 1,000 ರನ್ ಪೂರೈಸಿದ ಆಂಡ್ರೆ ರಸೆಲ್ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ. ಅಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್‌ಪ್ಲೇ ಓವರ್‌ಗಳಲ್ಲಿಯೇ 500ಕ್ಕೂ ಹೆಚ್ಚು ರನ್ ಚಚ್ಚಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಕೀರ್ತಿಗೂ ಈ ಯುವ ಎಡಗೈ ಬ್ಯಾಟರ್ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಅವರನ್ನ ಸ್ಕೌಟ್ ಮಾಡಿ ಕರೆತರುವಲ್ಲಿ ರಾಹುಲ್ ದ್ರಾವಿಡ್ ಅವರ ಪಾತ್ರ ದೊಡ್ಡದಾಗಿತ್ತು.

