
ಎಂ.ಎಸ್. ಧೋನಿ ಅವರು ಟೂರ್ನಿಯ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
MS Dhoni: ಮುಂಬರುವ ಐಪಿಎಲ್‌ನಿಂದ ಎಂ.ಎಸ್. ಧೋನಿ ಔಟ್! ಸಿಎಸ್‌ಕೆಗೆ ಮತ್ತೊಂದು ಆಘಾತ
ಧೋನಿ ಅನುಪಸ್ಥಿತಿಯಿಂದಾಗಿ ಸಿಎಸ್‌ಕೆ ತಂಡದಲ್ಲಿ ವಿಕೆಟ್ ಕೀಪಿಂಗ್ ಹೊಣೆಯನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಇತ್ತೀಚೆಗಷ್ಟೇ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಗೊಂಡಿರುವ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಈ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ದಟ್ಟವಾಗಿದೆ.
2026ರ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದ್ದು, ತಂಡದ ಮಾಜಿ ನಾಯಕ ಹಾಗೂ ಪ್ರಮುಖ ವಿಕೆಟ್ ಕೀಪರ್ ಎಂ.ಎಸ್. ಧೋನಿ ಅವರು ಟೂರ್ನಿಯ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕಾಲಿನ ಸ್ನಾಯು ಸೆಳೆತಕ್ಕೆ ತುತ್ತಾಗಿರುವ ಧೋನಿ ಪ್ರಸ್ತುತ ಪುನರ್ವಸತಿಗೆ ಒಳಗಾಗಿದ್ದು, ಮುಂದಿನ ಎರಡು ವಾರಗಳ ಕಾಲ ಐಪಿಎಲ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಕ್ರೀಡಾ ಪತ್ರಕರ್ತ ಮುಫದ್ದಲ್ ವೋಹ್ರಾ ಅವರು ಮೊದಲು ಈ ಸುದ್ದಿಯನ್ನು ಹಂಚಿಕೊಂಡಿದ್ದರು, ನಂತರ ಸಿಎಸ್‌ಕೆ ಆಡಳಿತ ಮಂಡಳಿ ಇದನ್ನು ದೃಢಪಡಿಸಿದ್ದು "ಶೀಘ್ರ ಗುಣಮುಖರಾಗಿ ಬನ್ನಿ" ಎಂದು ಹಾರೈಸಿದೆ. ಈ ಸುದ್ದಿಯು ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಒಲಿಯಲಿದೆಯೇ ವಿಕೆಟ್ ಕೀಪಿಂಗ್ ಜವಾಬ್ದಾರಿ?
ಧೋನಿ ಅನುಪಸ್ಥಿತಿಯಿಂದಾಗಿ ಸಿಎಸ್‌ಕೆ ತಂಡದಲ್ಲಿ ವಿಕೆಟ್ ಕೀಪಿಂಗ್ ಹೊಣೆಯನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಇತ್ತೀಚೆಗಷ್ಟೇ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಗೊಂಡಿರುವ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಈ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ದಟ್ಟವಾಗಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು ಯುವ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದು, ಸಂಜು ಸ್ಯಾಮ್ಸನ್ ಅವರ ಆಗಮನವು ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಹೆಚ್ಚಿನ ಬಲ ನೀಡಲಿದೆ. ಕಳೆದ 2023ರ ಐಪಿಎಲ್ ಟೂರ್ನಿಯ ವೇಳೆ ಮಂಡಿ ನೋವಿನಿಂದ ಬಳಲುತ್ತಿದ್ದ ಧೋನಿ ಬಳಿಕ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಮತ್ತೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ತಂಡದ ಮುಂದಿನ ಪಯಣದ ಬಗ್ಗೆ ಸವಾಲುಗಳನ್ನು ಸೃಷ್ಟಿಸಿದೆ.
ಬೌಲಿಂಗ್ ವಿಭಾಗದಲ್ಲೂ ಹಿನ್ನಡೆ
ಧೋನಿ ಅಲಭ್ಯತೆಯ ಜೊತೆಗೆ ಸಿಎಸ್‌ಕೆ ತಂಡವು ಬೌಲಿಂಗ್ ವಿಭಾಗದಲ್ಲಿಯೂ ಸಂಕಷ್ಟ ಎದುರಿಸುತ್ತಿದೆ. ತಂಡದ ಪ್ರಮುಖ ಆಸ್ಟ್ರೇಲಿಯನ್ ವೇಗಿ ನಾಥನ್ ಎಲ್ಲಿಸ್ ಅವರು ಮಂಡಿರಜ್ಜು ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮ್ಯಾಥ್ಯೂ ಶಾರ್ಟ್ ಸಹ ಬೆರಳಿನ ಗಾಯದಿಂದಾಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಈ ಸರಣಿ ಆಘಾತಗಳಿಂದಾಗಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತಂಡವು ಐಪಿಎಲ್‌ನ ಮೊದಲ ಭಾಗದಲ್ಲಿ ತನ್ನ ಲಯವನ್ನು ಕಂಡುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

