
ಚೊಚ್ಚಲ ಟೆಸ್ಟ್ನಲ್ಲಿ ಆರು ವಿಕೆಟ್ ಪಡೆದ ಮಾನವ್ ಸುತಾರ್
ಚೊಚ್ಚಲ ಟೆಸ್ಟ್ನಲ್ಲಿ ಮಾನವ್ ಸುತಾರ್ ಕಮಾಲ್; ಅಫ್ಘಾನ್ ವಿರುದ್ಧ ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ!
ಪಂದ್ಯ ಆರಂಭಕ್ಕೂ ಮುನ್ನ ಹಿರಿಯ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಂದ ಭಾರತದ 319ನೇ ಟೆಸ್ಟ್ ಕ್ಯಾಪ್ ಪಡೆದ ಮಾನವ್ ಸುತಾರ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು.
ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರ ಕನಸಿನ ಬೌಲಿಂಗ್ (33ಕ್ಕೆ 6 ವಿಕೆಟ್) ನೆರವಿನಿಂದ ಭಾರತ ತಂಡವು ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 300 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಸೋಮವಾರ ಮುಕ್ತಾಯಗೊಂಡ ಈ ಪಂದ್ಯದಲ್ಲಿ ಕೇವಲ 23 ವರ್ಷದ ರಾಜಸ್ಥಾನ ಮೂಲದ ಆಲ್ರೌಂಡರ್ ಸುತಾರ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಜಾಗತಿಕ ಕ್ರಿಕೆಟ್ನ ಗಮನ ಸೆಳೆದಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಗಣ್ಯರ ಪಟ್ಟಿಗೆ ಸೇರಿದ ಸುತಾರ್
ಪಂದ್ಯ ಆರಂಭಕ್ಕೂ ಮುನ್ನ ಹಿರಿಯ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಂದ ಭಾರತದ 319ನೇ ಟೆಸ್ಟ್ ಕ್ಯಾಪ್ ಪಡೆದ ಮಾನವ್ ಸುತಾರ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು. ಅಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಸುತಾರ್, 22 ಓವರ್ಗಳಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿದರು.
ಈ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲೇ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ 10ನೇ ಬೌಲರ್ ಹಾಗೂ ದೇಶದ 7ನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲದೆ, 1988 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರ್ವಾನಿ (61ಕ್ಕೆ 8 ವಿಕೆಟ್) ಅವರ ಪ್ರದರ್ಶನದ ನಂತರ, ಚೊಚ್ಚಲ ಪಂದ್ಯದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಎರಡನೇ ಭಾರತೀಯ ಎಂಬ ಕೀರ್ತಿಯೂ ಇವರ ಪಾಲಾಯಿತು.
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿದ ಸುತಾರ್, ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 41 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 28 ರನ್ ಕೊಡುಗೆ ನೀಡಿದರು. ಇವರ ಆಲ್ರೌಂಡ್ ಪ್ರದರ್ಶನದಿಂದಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 412 ರನ್ಗಳ ಬೃಹತ್ ಮುನ್ನಡೆ ಸಾಧಿಸಲು ಸಾಧ್ಯವಾಯಿತು.
ಶ್ರೀ ಗಂಗಾನಗರದಿಂದ ಟೀಮ್ ಇಂಡಿಯಾವರೆಗಿನ ಪಯಣ
ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಜನಿಸಿದ ಮಾನವ್ ಸುತಾರ್ ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. 2022-23ರ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಪರ ಕೇವಲ 6 ಪಂದ್ಯಗಳಿಂದ 39 ವಿಕೆಟ್ ಕಿತ್ತು ಬಿಸಿಸಿಐ ಆಯ್ಕೆಗಾರರ ಕಣ್ಣಿಗೆ ಬಿದ್ದಿದ್ದರು. ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ ಅವರು 29 ಪ್ರಥಮ ದರ್ಜೆ ಪಂದ್ಯಗಳಿಂದ 25.76 ರ ಸರಾಸರಿಯಲ್ಲಿ 129 ವಿಕೆಟ್ ಕಬಳಿಸಿದ್ದರು. ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ 1,026 ರನ್ ಗಳಿಸಿ ತಾವೊಬ್ಬ ಪರಿಪೂರ್ಣ ಆಲ್ರೌಂಡರ್ ಎಂಬುದನ್ನು ಸಾಬೀತುಪಡಿಸಿದ್ದರು. ಇತ್ತೀಚಿನ ರಣಜಿ ಋತುವಿನಲ್ಲೂ ಛತ್ತೀಸ್ಗಢ ವಿರುದ್ಧ 8 ವಿಕೆಟ್ ಹಾಗೂ ಹಿಮಾಚಲ ಪ್ರದೇಶ ವಿರುದ್ಧ ಶತಕ ಮತ್ತು 7 ವಿಕೆಟ್ ಪಡೆದು ಅಬ್ಬರಿಸಿದ್ದರು.
ಭರ್ಜರಿ ಜಯಗಳಿಸಿದ ಭಾರತ ಟೆಸ್ಟ್ ತಂಡ (ಚಿತ್ರ ಕೃಪೆ: ಬಿಸಿಸಿಐ)
ರಾಹುಲ್ ದ್ರಾವಿಡ್ ಸಲಹೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿರುವ ಮಾನವ್ ಸುತಾರ್ ಅವರನ್ನು 2025ರ ಮೆಗಾ ಹರಾಜಿನಲ್ಲಿ ತಂಡವು 30 ಲಕ್ಷ ರೂ.ಗೆ ಖರೀದಿಸಿತ್ತು. 2024ರಲ್ಲೇ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಇವರು 4 ಪಂದ್ಯಗಳನ್ನು ಆಡಿದ್ದಾರೆ. "ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಮಾನವ್ ಅವರ ಪ್ರತಿಭೆಯನ್ನು ಮೊದಲೇ ಗುರುತಿಸಿದ್ದರು. ಅವರ ಎಡಗೈ ಸ್ಪಿನ್ ಬೌಲಿಂಗ್ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ತಂದುಕೊಡಬಲ್ಲದು, ಆದ್ದರಿಂದ ಬೌಲಿಂಗ್ ಕಡೆಗೆ ಹೆಚ್ಚು ಗಮನ ಹರಿಸುವಂತೆ ದ್ರಾವಿಡ್ ಸಲಹೆ ನೀಡಿದ್ದರು," ಎಂದು ಮಾನವ್ ಅವರ ಕೋಚ್ ಧೀರಜ್ ಶರ್ಮಾ ನೆನಪಿಸಿಕೊಂಡಿದ್ದಾರೆ.
ಭಾರತ ತಂಡವು ಮುಂದಿನ ಪೀಳಿಗೆಯ ಟೆಸ್ಟ್ ಬೌಲರ್ಗಳ ಹುಡುಕಾಟದಲ್ಲಿರುವ ಬೆನ್ನಲ್ಲೇ, ಮಾನವ್ ಸುತಾರ್ ತಮ್ಮ ಮೊದಲ ಪಂದ್ಯದಲ್ಲೇ ನೀಡಿರುವ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನವು ಭಾರತೀಯ ಕ್ರಿಕೆಟ್ನಲ್ಲಿ ಅವರ ಸುದೀರ್ಘ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.

