ಪಾಕ್ ಆಟಗಾರನ ಖರೀದಿಸಿದ ಕಾವ್ಯಾ ಮಾರನ್: ಸನ್‌ರೈಸರ್ಸ್ ಲೀಡ್ಸ್ ಎಕ್ಸ್ ಖಾತೆ ಅಮಾನತು!
x

ಪಾಕ್ ಆಟಗಾರನ ಖರೀದಿಸಿದ ಕಾವ್ಯಾ ಮಾರನ್: ಸನ್‌ರೈಸರ್ಸ್ ಲೀಡ್ಸ್ 'ಎಕ್ಸ್' ಖಾತೆ ಅಮಾನತು!

ಗುರುವಾರ ನಡೆದ 2026ರ 'ದಿ ಹಂಡ್ರೆಡ್' ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅವರನ್ನು 1.90 ಲಕ್ಷ ಪೌಂಡ್‌ಗಳಿಗೆ ಖರೀದಿ ಮಾಡಿತ್ತು.


Click the Play button to hear this message in audio format

ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ಸನ್‌ರೈಸರ್ಸ್ ಲೀಡ್ಸ್ ತಂಡದ ಸಹ-ಮಾಲೀಕಿ ಕಾವ್ಯಾ ಮಾರನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ತಂಡದ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯನ್ನೂ ನಿಯಮ ಉಲ್ಲಂಘನೆಯ ಕಾರಣ ನೀಡಿ ಅಮಾನತುಗೊಳಿಸಲಾಗಿದೆ.


ಗುರುವಾರ ನಡೆದ 2026ರ 'ದಿ ಹಂಡ್ರೆಡ್' ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ (ಚೆನ್ನೈ ಮೂಲದ ಸನ್ ಗ್ರೂಪ್ ಒಡೆತನದ ಫ್ರಾಂಚೈಸಿ) ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅವರನ್ನು 1.90 ಲಕ್ಷ ಪೌಂಡ್‌ಗಳಿಗೆ (ಸುಮಾರು 2.34 ಕೋಟಿ ರೂ.) ಒಪ್ಪಂದ ಮಾಡಿಕೊಂಡಿತು. ಈ ಮೂಲಕ ಈ ಟೂರ್ನಿಯಲ್ಲಿ ಭಾರತೀಯ ಒಡೆತನದ ಫ್ರಾಂಚೈಸಿಯೊಂದರಿಂದ ಖರೀದಿಯಾದ ಮೊದಲ ಪಾಕ್ ಆಟಗಾರ ಎಂಬ ಹೆಗ್ಗಳಿಕೆಗೆ ಅಬ್ರಾರ್ ಪಾತ್ರರಾದರು. ಖುದ್ದಾಗಿ ಹರಾಜಿನಲ್ಲಿ ಪಾಲ್ಗೊಂಡಿದ್ದ ಕಾವ್ಯಾ ಮಾರನ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸನ್ ಗ್ರೂಪ್ ಇತ್ತೀಚೆಗಷ್ಟೇ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವನ್ನು ಸುಮಾರು 100 ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿ ಸನ್‌ರೈಸರ್ಸ್ ಲೀಡ್ಸ್ ಎಂದು ನಾಮಕರಣ ಮಾಡಿತ್ತು.

ಐಪಿಎಲ್ ಬಹಿಷ್ಕಾರಕ್ಕೆ ನೆಟ್ಟಿಗರ ಆಗ್ರಹ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಾಕಿಸ್ತಾನಿ ಆಟಗಾರರಿಗೆ ನಿಷೇಧವಿದೆ. 2009ರಿಂದಲೂ ಭಾರತೀಯ ಫ್ರಾಂಚೈಸಿಗಳು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಗೌರವ ನೀಡಿ ಪಾಕ್ ಆಟಗಾರರಿಂದ ಅಂತರ ಕಾಯ್ದುಕೊಂಡಿದ್ದವು. ಆದರೆ, ವಿದೇಶಿ ಲೀಗ್‌ಗಳಲ್ಲಿ ಅಂತಹ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಇದೀಗ ಸನ್‌ರೈಸರ್ಸ್ ಪಾಕ್ ಆಟಗಾರನಿಗೆ ಮಣೆಹಾಕಿದೆ. ಇದು ನೆಟ್ಟಿಗರ ಕಣ್ಣು ಕೆಂಪಾಗಿಸಿದ್ದು, "ಐಪಿಎಲ್ 2026 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಬಹಿಷ್ಕರಿಸಿ" ಎಂಬ ಅಭಿಯಾನ ಎಕ್ಸ್‌ನಲ್ಲಿ ಶುರುವಾಗಿದೆ.

"ಇದು ದೇಶದ್ರೋಹದ ಕೆಲಸ", "ಲಾಭಕ್ಕಾಗಿ ಇವರು ದೇಶದ ಭಾವನೆಗಳನ್ನು ಕಡೆಗಣಿಸಿದ್ದಾರೆ", "ಕಾವ್ಯಾ ಮಾರನ್ ಡಿಎಂಕೆ ಕುಟುಂಬದ ಹಿನ್ನೆಲೆಯವರು, ಹಣಕ್ಕಾಗಿ ಇವರು ಏನು ಬೇಕಾದರೂ ಮಾಡುತ್ತಾರೆ" ಎಂದು ತೀವ್ರ ಸ್ವರೂಪದ ಟೀಕೆಗಳು ವ್ಯಕ್ತವಾಗಿವೆ.

ಖಾತೆ ಅಮಾನತು ಹಾಗೂ ಟೂರ್ನಿಯ ವಿವರ

ಪಾಕ್ ಆಟಗಾರನ ಖರೀದಿಯಾದ ಕೆಲವೇ ಗಂಟೆಗಳಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡದ ಅಧಿಕೃತ 'ಎಕ್ಸ್' ಖಾತೆ ದಿಢೀರ್ ಅಮಾನತುಗೊಂಡಿದೆ. ಈ ಕುರಿತು ಎಕ್ಸ್ ಸಂಸ್ಥೆ ನಿಯಮಗಳ ಉಲ್ಲಂಘನೆಯ ಕಾರಣ ನೀಡಿದೆ. ಜುಲೈ 21 ರಿಂದ ಆಗಸ್ಟ್ 16 ರವರೆಗೆ 'ದಿ ಹಂಡ್ರೆಡ್' ಲೀಗ್ ನಡೆಯಲಿದೆ. ಅಂದಹಾಗೆ, ಇದೇ ಹರಾಜಿನಲ್ಲಿ ಪಾಕಿಸ್ತಾನದ ಮತ್ತೊಬ್ಬ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡ ಸುಮಾರು 1.72 ಕೋಟಿ ರೂ. ನೀಡಿ ಖರೀದಿಸಿದೆ.

Read More
Next Story