Cabinet Meeting |ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಸಂಪುಟ ಅಸ್ತು
x
ಬೆಂಗಳೂರಿನಲ್ಲಿ ನಡೆದಿದ್ದ ಕಾಲ್ತುಳಿತ ದುರಂತದ ಸಂಗ್ರಹ ಚಿತ್ರ

Cabinet Meeting |ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಸಂಪುಟ ಅಸ್ತು

ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಮುಂದಿನ ತಿಂಗಳಲ್ಲೇ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿದೆ.


ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸಚಿವ ಸಂಪುಟ ಕೆಲ ಷರತ್ತುಗಳೊದಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ‌ ಮಾಡಿತ್ತು. ಈ ಸಂಬಂಧ ಗುರುವಾರ ಬೆಳಿಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಬಿಎ ಅಧಿಕಾರಿಗಳ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಯನ್ನು ಸಂಪುಟ ಸಭೆಗೆ ವಹಿಸಲಾಗಿತ್ತು.

ಸಂಜೆ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಸಮ್ಮತಿ ಸೂಚಿಸಿದೆ. ಮುಂದಿನ ತಿಂಗಳಲ್ಲೇ ಐಪಿಎಲ್ ಪಂದ್ಯಗಳನ್ನು ಆಯೋಜಿಸಬಹುದು. ಆದರೆ, ಪಂದ್ಯಗಳನ್ನು ಆಯೋಜಿಸುವಾಗ ಕೆಲ ಷರತ್ತುಗಳನ್ನು ಪಾಲಿಸಬೇಕು‌ ಎಂದು ಸೂಚಿಸಿದೆ.

ಕ್ರೀಡಾಂಗಣದಲ್ಲಿ ಒಟ್ಟು 35 ಸಾವಿರದೊಳಗೆ ಪ್ರೇಕ್ಷಕರ ಉಪಸ್ಥಿತಿ‌ ಇರಬೇಕು. ಪ್ರೇಕ್ಷಕರ ಸುರಕ್ಷತೆಗೆ ಆದ್ಯತೆ ನೀಡಿ ಪಂದ್ಯ ನಡೆಸಬೇಕು. ಸುರಕ್ಷತೆ ಹಾಗೂ ಭದ್ರತೆ ಜವಾಬ್ದಾರಿಯನ್ನು ಕೆಎಸ್ ಸಿಎ ಹೊರಬೇಕು‌ ಎಂದು ಷರತ್ತು ವಿಧಿಸಿದೆ.

ತಜ್ಞರ ಸಮಿತಿಯಿಂದ ನಿರಂತರ ಪರಿಶೀಲನೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಕುರಿತು ಕಾಲ ಕಾಲಕ್ಕೆ ಪ್ರಗತಿ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಆಸನಗಳ ವ್ಯವಸ್ಥೆಯ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ಅಭಿಮಾನಿಗಳ ಸಂಖ್ಯೆಗೆ ಅನುಗುಣವಾಗಿ ಸ್ಟ್ಯಾಂಡ್ ಗಳಿಗೆ ಅನುಮತಿ ನೀಡುವ ಜತೆಗೆ ಕೆಎಸ್‌ಸಿಎ ನೀಡಿರುವ ಭರವಸೆಗಳನ್ನು ಪಾಲಿಸದಿದ್ದರೆ ಅನುಮತಿ ಬಗ್ಗೆ ಪುನರ್ ಪರಿಶೀಲನೆ ನಡೆಸಲಿದೆ. ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೇ ಫೇಸ್ 1, ಫೇಸ್ 2 ಕಾಮಗಾರಿಗಳನ್ನು ಕೆಎಸ್‌ಸಿಎ ಮುಂದುವರಿಸಬೇಕು ಎಂದು ಸಮಿತಿ ಸೂಚಿಸಿದ್ದು, ಸಮಿತಿಯ ವರದಿ ಆಧರಿಸಿ ಪಂದ್ಯಗಳ ಆಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಈಗಾಗಲೇ ನ್ಯಾ. ಕುನ್ಹಾ ವರದಿಯ ಶಿಫಾರಸು ಜಾರಿಗೊಳಿಸಲು ಕೆಎಸ್‌ಸಿಎ ಮುಂದಾಗಿದೆ. ಹಾಗಾಗಿ, ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಬಹುದು ಎಂದು ಸಮಿತಿ ವರದಿ ನೀಡಿತ್ತು.

ಇನ್ನು ಗುರುವಾರ ಬೆಳಿಗ್ಗೆ ಗೃಹ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸುವ ಬಗ್ಗೆ ಚರ್ಚೆಯಾಗಿದೆ. ಸರ್ಕಾರ ನಮ್ಮ ಜತೆ ಚರ್ಚೆ ಮಾಡಿದೆ. ಸಂಜೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ ಎಂದು ತಿಳಿಸಿದ್ದರು.

ಪ್ರೇಕ್ಷಕರ ಸುರಕ್ಷತೆಗೆ KSCA ಆದ್ಯತೆ ನೀಡಲಿದೆ. ನ್ಯಾ. ಮೈಕೆಲ್ ಡಿ.‌ಕುನ್ಹಾ ನೀಡಿರುವ ವರದಿ ಅನುಷ್ಠಾನ ಬಗ್ಗೆ ಚರ್ಚೆಯಾಗಿದೆ. ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನ ಹಂತ ಹಂತವಾಗಿ ಮಾಡಲಾಗುವುದು ಎಂದು ಹೇಳಿದ್ದೇವೆ ಎಂದು ಪ್ರಸಾದ್ ಹೇಳಿದ್ದರು.

Read More
Next Story