
ಸಾಂದರ್ಭಿಕ ಚಿತ್ರ
IPL | ಕ್ರಿಕೆಟ್ ಅಭಿಮಾನಿಗಳೇ ಎಚ್ಚರ: ಬೆಂಗಳೂರಿನಲ್ಲಿದೆ ನಕಲಿ ಟಿಕೆಟ್ ವಂಚನೆ ಜಾಲ!
ಐಪಿಎಲ್ ಟೂರ್ನಿ ಇದೇ ಮಾ.28 ರಿಂದ ಆರಂಭವಾಗಲಿದೆ. ಇದೇ ಅವಕಾಶಕ್ಕಾಗಿ ಕಾದು ಕುಳಿತಿರುವ ವಂಚಕರ ಜಾಲವು ನಕಲಿ ಟಿಕೆಟ್ ಲಿಂಕ್‌ಗಳ ಮೂಲಕ ಅಭಿಮಾನಿಗಳ ಸುಲಿಗೆಗೆ ಮುಂದಾಗಿದ್ದು, ಎಚ್ಚರ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾ.28 ರಿಂದ ಐಪಿಎಲ್ ಪಂದ್ಯಗಳು ಆರಂಭವಾಗುವ ಹಿನ್ನೆಲೆ ಅಭಿಮಾನಿಗಳು ಟಿಕೆಟ್‌ಗಾಗಿ ಕಾತರದಿಂದ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಅಭಿಮಾನಿಗಳ ಕ್ರೀಡಾ ಪ್ರೇಮವನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ವಂಚಕರ ಜಾಲ, ನಕಲಿ ಲಿಂಕ್‌ಗಳ ಮೂಲಕ ಟಿಕೆಟ್ ಆಸೆ ಹುಟ್ಟಿಸಿ, ಹಣ ಸುಲಿಗೆಗೆ ಇಳಿದಿದೆ.
ನಕಲಿ ಲಿಂಕ್‌ಗಳ ಮೂಲಕ ಟಿಕೆಟ್ ವಂಚಕರ ಜಾಲದ ಮಾಹಿತಿ ಪಡೆದಿರುವ ಬೆಂಗಳೂರು ಪೊಲೀಸರು ಕ್ರಿಕೆಟ್ ಅಭಿಮಾನಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದೆ. ಟಿಕೆಟ್‌ಗಾಗಿ ನಕಲಿ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಂಚಕರ ಮೋಸಕ್ಕೆ ಒಳಗಾಗದಂತೆ ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಪೋಸ್ಟ್ ಮಾಡಿರುವ ಪೊಲೀಸರು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳು ನಡೆಯಲಿವೆ. ಪಂದ್ಯಗಳನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳು ಕೇವಲ ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಟಿಕೆಟ್ ಪಡೆಯಬೇಕು. ಕೆಲ ವಂಚಕರು ಅನ್ಯ ಮಾರ್ಗಗಳ ಮೂಲಕ ಟಿಕೆಟ್ ಖರೀದಿಸುವಂತೆ ಪ್ರೇರೇಪಿಸುತ್ತಾರೆ. ಇಂತಹ ವ್ಯಕ್ತಿಗಳು ಹಾಗೂ ಅನಧಿಕೃತ ವೆಬ್‌ಸೈಟ್‌ಗಳಿಂದ ಕ್ರೀಡಾಭಿಮಾನಿಗಳು ದೂರ ಇರಬೇಕು ಎಂದು ಹೇಳಿದ್ದಾರೆ.
ಅಭಿಮಾನಿಗಳಿಗೆ ಕ್ರಿಕೆಟ್ ಜ್ವರ ಹೆಚ್ಚಾಗಿಯೇ ಇರಲಿದೆ. ಈ ವೇಳೆ ನಕಲಿ ಲಿಂಕ್‌ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ. ನೆನಪಿರಲಿ! ನೀವು ಹಣ ಪಾವತಿಸುವ ಮುನ್ನಾ ಒಂದೊಮ್ಮೆ ಪರಿಶೀಲಿಸಿ. ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ, ದೂರು ನೀಡಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಕಲಿ ಟಿಕೆಟ್ ಪ್ರಕರಣಗಳು
ಈ ಹಿಂದೆಯೂ ಐಪಿಎಲ್ ಪಂದ್ಯಗಳಿಗೆ ನಕಲಿ ಟಿಕೆಟ್ ನೀಡಿ ಅಭಿಮಾನಿಗಳಿಗೆ ವಂಚನೆ ಮಾಡಿರುವ ಪ್ರಕರಣಗಳು ನಡೆದಿದ್ದವು. ಕೆಲ ಸಂದರ್ಭಗಳಲ್ಲಿ ಕ್ರೀಡಾಂಗಣದ ಸಿಬ್ಬಂದಿಯೇ ಸಿಕ್ಕಿಬಿದ್ದಿದ್ದರು. 2025ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಕ್ರೀಡಾಂಗಣದ ಸಿಬ್ಬಂದಿ ಮತ್ತು ಕ್ಯಾಂಟೀನ್ ಕೆಲಸಗಾರರು ಸಹ ಭಾಗಿಯಾಗಿದ್ದರು. 1,200 ರೂ. ಮುಖಬೆಲೆಯ ಟಿಕೆಟ್‌ಗಳನ್ನು ಸುಮಾರು 7 ಸಾವಿರದಿಂದ 32 ಸಾವಿರ ರೂ.ವರೆಗೆ ಮಾರಾಟ ಮಾಡಲಾಗಿತ್ತು.
ಆರ್‌ಸಿಬಿ- ಸಿಎಸ್‌ಕೆ ಪಂದ್ಯಕ್ಕೆ ಹೆಚ್ಚು ಭೀತಿ
ಮೇ 2025ರಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಇವರಿಂದ ಸುಮಾರು 41 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮೇ ನಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ಹೈ-ವೋಲ್ಟೇಜ್ ಪಂದ್ಯದ ವೇಳೆ 1,200 ರೂ. ಟಿಕೆಟ್‌ಗಳನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, ಅವರಿಂದ 32 ಟಿಕೆಟ್ ಮತ್ತು 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.
ಬಾರ್‌ಕೋಡ್ ನಕಲು
ಮುಂಬೈನಿಂದ ದೆಹಲಿಗೆ ಬಂದು ಸಾಫ್ಟ್‌ವೇರ್ ಮತ್ತು ಕಲರ್ ಪ್ರಿಂಟರ್ ಬಳಸಿ ಅಸಲಿ ಟಿಕೆಟ್‌ಗಳಂತೆಯೇ ಕಾಣುವ ನಕಲಿ ಟಿಕೆಟ್‌ಗಳನ್ನು ಸಿದ್ಧಪಡಿಸುತ್ತಿದ್ದ ಐವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ದೆಹಲಿ-ಮುಂಬೈ ಪಂದ್ಯದ ಸುಮಾರು 80 ನಕಲಿ ಟಿಕೆಟ್‌ಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿತ್ತು.
ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಟಿಕೆಟ್ ವ್ಯಾಲಿಡೇಟರ್‌ಗಳಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ 2023ರಲ್ಲಿ ಅಕ್ರೆಡಿಟೇಶನ್ ಕಾರ್ಡ್‌ಗಳ ಬಾರ್‌ಕೋಡ್ ನಕಲಿಸಿ 200ಕ್ಕೂ ಹೆಚ್ಚು ನಕಲಿ ಟಿಕೆಟ್ ಸೃಷ್ಟಿಸಿದ್ದರು. ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯದ ವೇಳೆ ಸುಮಾರು 26 ಅಭಿಮಾನಿಗಳು ನಕಲಿ ಟಿಕೆಟ್ ಹಿಡಿದು ಒಳಗೆ ಪ್ರವೇಶಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದರು. ಕ್ರೀಡಾಂಗಣದ ಗೇಟ್‌ನಲ್ಲಿ ಬಾರ್‌ಕೋಡ್ ಸ್ಕ್ಯಾನ್ ಆಗದಿದ್ದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿತ್ತು.

