T20 World cup 2026 : ಸತತ 2ನೇ ಬಾರಿಗೆ ಚಾಂಪಿಯನ್, 3ನೇ ಟ್ರೋಫಿ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ ಶ್ರೇಷ್ಠ ತಂಡವೇ?
x

T20 World cup 2026 : ಸತತ 2ನೇ ಬಾರಿಗೆ ಚಾಂಪಿಯನ್, 3ನೇ ಟ್ರೋಫಿ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ ಶ್ರೇಷ್ಠ ತಂಡವೇ?

ಆಡಿದ ಒಂಬತ್ತು ಪಂದ್ಯಗಳಲ್ಲಿ ಬರೋಬ್ಬರಿ 106 ಸಿಕ್ಸರ್‌ಗಳನ್ನು ಸಿಡಿಸಿದ ಟೀಮ್ ಇಂಡಿಯಾ, ಒಂದೇ ಟಿ20 ಟೂರ್ನಿಯಲ್ಲಿ 100 ಸಿಕ್ಸರ್ ಬಾರಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿದೆ.


Click the Play button to hear this message in audio format

ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ಪಾರುಪತ್ಯ ಸಾಧಿಸುವುದು ಅತ್ಯಂತ ವಿರಳ. ಆದರೆ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಈ ಮಾತನ್ನು ಸುಳ್ಳು ಮಾಡಿದೆ. ಯಾವುದೇ ಪುರುಷರ ತಂಡ ಈ ಹಿಂದೆ ಮಾಡದ ಸಾಧನೆಯನ್ನು ಭಾರತ ಮಾಡಿದ್ದು, ತವರಿನಲ್ಲಿಯೇ ಸತತ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಉಳಿಸಿಕೊಳ್ಳುವ ಮೂಲಕ ಮೂರನೇ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಭಾರತ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿತು.

ನಿರೀಕ್ಷೆ ಮೀರಿದ ಪ್ರೆದರ್ಶನ

ತವರಿನಲ್ಲಿ ಆಡುವ ಒತ್ತಡ ಹಾಗೂ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತದ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಆರಂಭದಲ್ಲಿ ಶುಭ್‌ಮನ್ ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವ ದಿಟ್ಟ ನಿರ್ಧಾರವನ್ನು ತಂಡ ತೆಗೆದುಕೊಂಡಿತು. ಟೂರ್ನಿಯ ಮಧ್ಯದಲ್ಲಿ ಇಶಾನ್ ಕಿಶನ್ ಫಾರ್ಮ್ ಹಾಗೂ ಇತರ ಬದಲಾವಣೆಗಳ ನಡುವೆಯೂ ತಂಡ ತನ್ನ ಲಯವನ್ನು ಕಳೆದುಕೊಳ್ಳದೆ ಮುನ್ನುಗ್ಗಿತು. ನಾಕೌಟ್ ಹಂತದಲ್ಲಿ ಸಂಜು ಸ್ಯಾಮ್ಸನ್ ಅವರ ಅತ್ಯುತ್ತಮ ಆಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಪುರುಷರ ತಂಡವು ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿರಲಿಲ್ಲ. ಆದರೆ ಭಾರತ ಈ ಇತಿಹಾಸವನ್ನು ಬದಲಾಯಿಸಿದ್ದು, 2007 ಮತ್ತು 2024ರ ಬಳಿಕ ಇದೀಗ 2026ರಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಲಾ ಒಂದು ಬಾರಿ ಟ್ರೋಫಿ ಎತ್ತಿಹಿಡಿದಿವೆ. ಆದರೆ ಮೂರು ಬಾರಿ ಪ್ರಶಸ್ತಿ ಗೆದ್ದ, ತವರಿನಲ್ಲಿ ಟ್ರೋಫಿ ಉಳಿಸಿಕೊಂಡ ಮೊದಲ ಮತ್ತು ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ಅಂತಿಮ ಕ್ಯಾಚ್ ಹಿಡಿಯುತ್ತಿದ್ದಂತೆ ಇಡೀ ಕ್ರೀಡಾಂಗಣ 'ವಂದೇ ಮಾತರಂ' ಘೋಷಣೆಗಳೊಂದಿಗೆ ಸಂಭ್ರಮದಲ್ಲಿ ತೇಲಾಡಿತು.

ವೈಯಕ್ತಿಕ ಮೈಲಿಗಲ್ಲಿಗಿಂತ ಟ್ರೋಫಿಗೆ ಆದ್ಯತೆ

ಭಾರತ ತಂಡದ ಈ ಯಶಸ್ಸಿನ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಕಟ್ಟುನಿಟ್ಟಿನ ನಿರ್ಧಾರಗಳಿವೆ. ತಂಡದಲ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಟ್ರೋಫಿ ಗೆಲ್ಲುವುದೇ ಮುಖ್ಯ ಎಂಬ ಸ್ಪಷ್ಟ ಸಂದೇಶವನ್ನು ಗಂಭೀರ್ ರವಾನಿಸಿದ್ದರು. ಫೈನಲ್ ಪಂದ್ಯದ ನಂತರ ಮಾತನಾಡಿದ ಗಂಭೀರ್, ಭಾರತೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ವೈಯಕ್ತಿಕ ಸಾಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು, ಆದರೆ ತಂಡದ ಕ್ರೀಡೆಯಲ್ಲಿ ಟ್ರೋಫಿ ಗೆಲ್ಲುವುದು ಮಾತ್ರ ಮುಖ್ಯ ಎಂಬ ತಮ್ಮ ತತ್ವವನ್ನು ಒತ್ತಿ ಹೇಳಿದರು. ನಾಯಕ ಸೂರ್ಯಕುಮಾರ್ ಯಾದವ್ ಟ್ರೋಫಿ ಎತ್ತಿಹಿಡಿಯುವಾಗ ಹಿನ್ನೆಲೆಯಲ್ಲಿ ಗಂಭೀರ್ ಅವರ ಮಂದಹಾಸ ಈ ಬದಲಾದ ಸಂಸ್ಕೃತಿಗೆ ಕನ್ನಡಿಯಾಗಿತ್ತು.

ದಾಖಲೆಗಳ ಪಟ್ಟಿ ಬರೆದ ಭಾರತದ ಪ್ರದರ್ಶನ

ಈ ಬಾರಿಯ ಟೂರ್ನಿಯಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಬರೋಬ್ಬರಿ 106 ಸಿಕ್ಸರ್‌ಗಳನ್ನು ಸಿಡಿಸಿದ ಟೀಮ್ ಇಂಡಿಯಾ, ಒಂದೇ ಟಿ20 ಟೂರ್ನಿಯಲ್ಲಿ 100 ಸಿಕ್ಸರ್ ಬಾರಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಆರಂಭದಿಂದಲೂ ಭಾರತ 50 ಬಾರಿ 200ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಅದರಲ್ಲಿ 16 ಬಾರಿ ಕೇವಲ ಕಳೆದ 20 ತಿಂಗಳುಗಳಲ್ಲಿಯೇ ಮೂಡಿಬಂದಿದೆ. ಇದೇ ಅವಧಿಯಲ್ಲಿ ಆರು ಬಾರಿ 250ರ ಗಡಿ ದಾಟಿರುವ ತಂಡ, ತನ್ನ ಸಾರ್ವಕಾಲಿಕ ಗರಿಷ್ಠ ಮೊತ್ತವಾದ 297 ರನ್‌ಗಳನ್ನೂ ದಾಖಲಿಸಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 253 ರನ್ ಗಳಿಸಿದ್ದ ತಂಡ, ಫೈನಲ್‌ನಲ್ಲಿಯೂ 250ಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಸತತ ಎರಡು ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಅಂತರರಾಷ್ಟ್ರೀಯ ತಂಡವಾಗಿ ಹೊರಹೊಮ್ಮಿತು. ಸದ್ಯ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಹೊಂದಿರುವ ಭಾರತ, ಮುಂದಿನ ವರ್ಷದ ಏಕದಿನ ವಿಶ್ವಕಪ್‌ನತ್ತ ಕಣ್ಣಿಟ್ಟಿದ್ದು, ವೈಟ್-ಬಾಲ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ತಂಡವಾಗುವತ್ತ ದಾಪುಗಾಲು ಹಾಕುತ್ತಿದೆ.

Read More
Next Story