IND vs PAK : ಮಳೆ ಆತಂಕದ ನಡುವೆಯೂ ಕೊಲಂಬೊದಲ್ಲಿ ಭಾರತ-ಪಾಕ್ ಪಂದ್ಯದ ಕಾವು; ಅಭಿಮಾನಿಗಳ ಸಂಭ್ರಮ
x

IND vs PAK : ಮಳೆ ಆತಂಕದ ನಡುವೆಯೂ ಕೊಲಂಬೊದಲ್ಲಿ ಭಾರತ-ಪಾಕ್ ಪಂದ್ಯದ ಕಾವು; ಅಭಿಮಾನಿಗಳ ಸಂಭ್ರಮ

ಈ ಪಂದ್ಯವು ಶ್ರೀಲಂಕಾದ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಸ್ಪಿನ್ನರ್‌ಗಳಿಗೆ ನೆರವಾಗುವ ಮತ್ತು ಅನಿಶ್ಚಿತ ಬೌನ್ಸ್‌ಗೆ ಹೆಸರುವಾಸಿಯಾಗಿದೆ.


Click the Play button to hear this message in audio format

ಹಲವಾರು ವಾರಗಳ ವಿವಾದ, ಬಹಿಷ್ಕಾರದ ಕರೆಗಳು ಮತ್ತು ರಾಜಕೀಯ ಚರ್ಚೆಗಳ ನಂತರ, ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವು ಭಾನುವಾರ (ಫೆಬ್ರವರಿ 15) ಕೊಲಂಬೊದಲ್ಲಿ ನಡೆಯಲು ಸಜ್ಜಾಗಿದೆ. ಇದು ಕೇವಲ ಗುಂಪು ಹಂತದ ಪಂದ್ಯವಾಗಿರದೆ, ಇತಿಹಾಸ, ದ್ವೇಷ ಮತ್ತು ಜಾಗತಿಕ ಕುತೂಹಲವನ್ನು ಹೊತ್ತಿರುವ ಮಹಾಕಾದಾಟವಾಗಿದೆ.

"ಕೆಲವು ಕ್ರಿಕೆಟ್ ಪಂದ್ಯಗಳು ಕೌಶಲ್ಯಕ್ಕೆ ಸಂಬಂಧಿಸಿರುತ್ತವೆ, ಕೆಲವು ಒತ್ತಡ ನಿರ್ವಹಣೆಗೆ, ಮತ್ತೆ ಕೆಲವು ಭಾವನೆಗಳನ್ನು ನಿಭಾಯಿಸುವುದಕ್ಕೆ ಸೀಮಿತವಾಗಿರುತ್ತವೆ. ಆದರೆ ಭಾರತ-ಪಾಕಿಸ್ತಾನ ಪಂದ್ಯವೆಂದರೆ ಈ ಮೂರೂ ಅಂಶಗಳು ಮುಂಚೂಣಿಯಲ್ಲಿರುತ್ತವೆ,

ಈ ಪಂದ್ಯವು ಶ್ರೀಲಂಕಾದ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಸ್ಪಿನ್ನರ್‌ಗಳಿಗೆ ನೆರವಾಗುವ ಮತ್ತು ಅನಿಶ್ಚಿತ ಬೌನ್ಸ್‌ಗೆ ಹೆಸರುವಾಸಿಯಾಗಿದೆ.

ನಗರದಲ್ಲಿ ಕ್ರಿಕೆಟ್ ಜ್ವರ

ವಿಶ್ವದಾದ್ಯಂತ ಅಭಿಮಾನಿಗಳು ಆಗಮಿಸುತ್ತಿರುವುದರಿಂದ ಕೊಲಂಬೊದಲ್ಲಿ ಕ್ರಿಕೆಟ್ ಜ್ವರ ಏರಿದೆ. ರಸ್ತೆಗಳಿಂದ ಹಿಡಿದು ಕ್ರೀಡಾಂಗಣದವರೆಗೆ ನಗರವು ನಿರೀಕ್ಷೆಯಲ್ಲಿ ಮುಳುಗಿದೆ.

ಬೆನ್ ಎಂಬ ಕ್ರಿಕೆಟ್ ಅಭಿಮಾನಿಯೊಬ್ಬರು, "ಐತಿಹಾಸಿಕವಾಗಿ ಭಾರತ-ಪಾಕಿಸ್ತಾನದ ನಡುವೆ ದೊಡ್ಡ ಪೈಪೋಟಿ ಇದೆ ನಿಜ. ಆದರೆ ಕ್ರೀಡೆಯು ರಾಜಕೀಯವನ್ನು ಮರೆತು ಅಭಿಮಾನಿಗಳು ಒಂದಾಗಲು ಮತ್ತು ಸಂಭ್ರಮಿಸಲು ಒಂದು ಮಾರ್ಗವಾಗಬಲ್ಲದು," ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ವ್ಯಾಪಾರಗಳ ಮೇಲೂ ಇದರ ಪರಿಣಾಮ ಬೀರಿದೆ. ಆಟೋ ಚಾಲಕ ನಹನಾಯಣ ರೋಹಣ ನಿಶಾಂತ್ ಪ್ರಕಾರ, ಪಂದ್ಯದಿಂದಾಗಿ ಅವರ ಗಳಿಕೆ ಹೆಚ್ಚಿದೆ. "ಈ ಪಂದ್ಯ ಬರುತ್ತಿರುವುದರಿಂದ ನನಗೆ ಸಾಕಷ್ಟು ಬಾಡಿಗೆ ಸಿಗುತ್ತಿದೆ. ಇದು ವ್ಯಾಪಾರಕ್ಕೆ ತುಂಬಾ ಒಳ್ಳೆಯದು," ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಹೋಟೆಲ್ ಮ್ಯಾನೇಜರ್ ರೋಹನ್ ಕ್ರಿಶಾಂತ ಅವರು ಪಂದ್ಯದ ಹಿನ್ನೆಲೆಯಲ್ಲಿ ತಮ್ಮ ಹೋಟೆಲ್‌ನ ಎಲ್ಲಾ 60 ಕೊಠಡಿಗಳು ಸಂಪೂರ್ಣವಾಗಿ ಬುಕ್ ಆಗಿವೆ ಎಂದು ದೃಢಪಡಿಸಿದರು. ಇದೇ ವೇಳೆ ಅವರು ಶ್ರೀಲಂಕಾಗೆ ಭಾರತ ನೀಡುತ್ತಿರುವ ಬೆಂಬಲವನ್ನು ಸ್ಮರಿಸಿದರು. "ಭಾರತ ಯಾವಾಗಲೂ ಶ್ರೀಲಂಕಾಗೆ ಬೆಂಬಲ ನೀಡಿದೆ. ಭಾರತ ನಮ್ಮ ನೆರೆಯ ರಾಷ್ಟ್ರ ಮಾತ್ರವಲ್ಲ, ನಮ್ಮ ತಾಯ್ನಾಡಿನಂತೆ," ಎಂದು ಹೇಳಿದರು.

ಹವಾಮಾನದ ಚಿಂತೆ

ಉತ್ಸಾಹ ಮುಗಿಲುಮುಟ್ಟಿದ್ದರೂ, ಮುಂದಿನ ಕೆಲವು ದಿನಗಳಲ್ಲಿ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಪಂದ್ಯಕ್ಕೆ ಅಡ್ಡಿಯಾಗುವ ಭೀತಿ ಇದೆ.

ಪ್ರೇಮದಾಸ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ನೆರವಾಗುವುದರಿಂದ ತಂಡದ ಸಂಯೋಜನೆ ನಿರ್ಣಾಯಕವಾಗಲಿದೆ. ಪಿಚ್ ನಿಂದ ತಿರುವು (ಟರ್ನ್) ಮತ್ತು ಅನಿಶ್ಚಿತ ಬೌನ್ಸ್ ನಿರೀಕ್ಷಿಸಲಾಗಿದ್ದು, ಇದು ತಂತ್ರಗಾರಿಕೆಯ ಮೇಲೆ ಪ್ರಭಾವ ಬೀರಲಿದೆ. ವಿಶ್ವಕಪ್ ಅಂಕಗಳ ಜೊತೆಗೆ, ಮುಂದಿನ ಹಂತಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿನ ಗೆಲುವು ಮುಖ್ಯವಾಗಿದೆ.

ಟೀಮ್ ಇಂಡಿಯಾದ ಕಳವಳಗಳು

ಭಾರತ ತಂಡವು ಕೆಲವು ಆಯ್ಕೆ ಗೊಂದಲಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಭಿಷೇಕ್ ಶರ್ಮಾ ಹೊಟ್ಟೆಯ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಮೀಬಿಯಾ ವಿರುದ್ಧದ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು.

ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 204 ರನ್ ಗಳಿಸಿತ್ತಾದರೂ, ಕೇವಲ ಐದು ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಮಧ್ಯಮ ಕ್ರಮಾಂಕದ ದೌರ್ಬಲ್ಯವನ್ನು ತೆರೆದಿಟ್ಟಿತ್ತು. ಪಾಕಿಸ್ತಾನದ ವಿರುದ್ಧ ಆರಂಭಿಕ ವಿಕೆಟ್‌ಗಳು ತ್ವರಿತವಾಗಿ ಬಿದ್ದರೆ, ಭಾರತದ ಕೆಳಕ್ರಮಾಂಕ ಮತ್ತೊಮ್ಮೆ ಪರೀಕ್ಷೆಗೊಡ್ಡಲ್ಪಡಬಹುದು.

ತಂಡದ ಸಂಯೋಜನೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ. ರಿಂಕು ಸಿಂಗ್ ಬದಲಿಗೆ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಬಹುದು ಮತ್ತು ಕುಲದೀಪ್ ಯಾದವ್ ಕೂಡ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸ್ಪಿನ್‌ಗೆ ನೆರವಾಗುವ ಪಿಚ್ ಆಗಿರುವುದರಿಂದ ಭಾರತವು ಮೂವರು ವೇಗಿಗಳೊಂದಿಗೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಪಾಕಿಸ್ತಾನದ ಸ್ಪಿನ್ ಅಸ್ತ್ರ

ಮತ್ತೊಂದೆಡೆ, ಪಾಕಿಸ್ತಾನ ತಂಡವು ಈ ಪರಿಸ್ಥಿತಿಗಳಲ್ಲಿ ಹೆಚ್ಚು ಆರಾಮದಾಯಕವಾಗಿರುವ ನಿರೀಕ್ಷೆಯಿದೆ. ಈಗಾಗಲೇ ಕೆಲವು ದಿನಗಳಿಂದ ಕೊಲಂಬೊದಲ್ಲಿ ಬೀಡುಬಿಟ್ಟಿರುವ ಅವರು ಇಲ್ಲಿನ ಸ್ಪಿನ್ ಪಿಚ್‌ಗೆ ಹೊಂದಿಕೊಂಡಿದ್ದಾರೆ. ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚರ್ಚೆಗಳಿದ್ದರೂ, ಅಬ್ರಾರ್ ಅಹ್ಮದ್ ಮತ್ತು ಶಾದಾಬ್ ಖಾನ್ ಅವರಂತಹ ಗುಣಮಟ್ಟದ ಸ್ಪಿನ್ ಆಯ್ಕೆಗಳು ಪಾಕ್ ಬಳಿ ಇವೆ.

ಈ ಪಂದ್ಯವು ಭಾರತದ ಬ್ಯಾಟ್ಸ್‌ಮನ್‌ಗಳು ಮತ್ತು ಪಾಕಿಸ್ತಾನದ ಸ್ಪಿನ್ನರ್‌ಗಳ ನಡುವಿನ ಕಾದಾಟವಾಗುವ ಲಕ್ಷಣಗಳಿವೆ.

ಟಿಕೆಟ್‌ಗಾಗಿ 75 ಅಮೆರಿಕನ್ ಡಾಲರ್ ಪಾವತಿಸಿರುವ ಕ್ರಿಕೆಟ್ ಅಭಿಮಾನಿ ಬಶರತ್ ಅಲಿ, "ನನಗೆ ಟಿಕೆಟ್ ಸಿಗುವುದಷ್ಟೇ ಮುಖ್ಯವಾಗಿತ್ತು. ಫಲಿತಾಂಶ ಬಹುಶಃ ಭಾರತದ ಪರವಾಗಿರಬಹುದು. ಪಾಕಿಸ್ತಾನ ಗೆಲ್ಲುವುದನ್ನು ನೋಡಲು ಇಷ್ಟಪಡುತ್ತೇನಾದರೂ, ನಾವು ಭಾರತದ ವಿರುದ್ಧ ನಿಯಮಿತವಾಗಿ ಸೋತಿದ್ದೇವೆ. ಆದರೂ ಗೆಲ್ಲುವ ಸಣ್ಣ ಅವಕಾಶವಂತೂ ಇದೆ," ಎಂದು ಹೇಳಿದರು.

ಒಟ್ಟಿನಲ್ಲಿ, ಜಗತ್ತೇ ಎದುರು ನೋಡುತ್ತಿರುವ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯವು ತೀವ್ರತೆ, ಭಾವನೆ ಮತ್ತು ರೋಚಕತೆಯಿಂದ ಕೂಡಿರಲಿದೆ.

Read More
Next Story