ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ವಿರಾಟ್ ಕೊಹ್ಲಿ ಕಮ್‌ಬ್ಯಾಕ್, ಶತಕವೀರ ಜೈಸ್ವಾಲ್‌ಗೆ ಕೊಕ್
x
ವಿರಾಟ್​ ಕೊಹ್ಲಿ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ವಿರಾಟ್ ಕೊಹ್ಲಿ ಕಮ್‌ಬ್ಯಾಕ್, ಶತಕವೀರ ಜೈಸ್ವಾಲ್‌ಗೆ ಕೊಕ್

ವಿರಾಟ್ ಕೊ ಹ್ಲಿ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಅಂತಿಮವಾಗಿ ಕಣಕ್ಕಿಳಿಯುವುದು ಫಿಟ್‌ನೆಸ್ ಪರೀಕ್ಷೆಯ ವರದಿಯ ಮೇಲೆ ಅವಲಂಬಿತವಾಗಿದೆ.


Click the Play button to hear this message in audio format

ಮುಂಬರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐ ಭಾನುವಾರ ಹದಿನೈದು ಸದಸ್ಯರ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು, ಶ್ರೇಯಸ್ ಅಯ್ಯರ್ ಉಪನಾಯಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ಮುಕ್ತಾಯಗೊಂಡ ಅಫ್ಗಾನಿಸ್ತಾನ ವಿರುದ್ಧದ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದಾರೆ. ಆದರೆ, ಅಫ್ಘಾನಿಸ್ತಾನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗ ವಿರಾಟ್ ಕೊಹ್ಲಿ ಮಂಡಿರಜ್ಜು (Hamstring) ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಅಂತಿಮವಾಗಿ ಕಣಕ್ಕಿಳಿಯುವುದು ಫಿಟ್‌ನೆಸ್ ಪರೀಕ್ಷೆಯ ವರದಿಯ ಮೇಲೆ ಅವಲಂಬಿತವಾಗಿದೆ. ಸೋಮವಾರ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಕೊಹ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ಇವರೊಂದಿಗೆ, ಕೆಲಸದ ಹೊರೆ ನಿರ್ವಹಣೆಗಾಗಿ ಅಫ್ಗಾನ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ಏಕದಿನ ತಂಡಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಭರ್ಜರಿ ಫಾರ್ಮ್‌ನಲ್ಲಿದ್ದರೂ ಜೈಸ್ವಾಲ್‌ಗೆ ನಿರಾಸೆ

ಅಫ್ಗಾನಿಸ್ತಾನ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಡಿದ ಮೂರು ಇನಿಂಗ್ಸ್‌ಗಳಲ್ಲಿ ಎರಡು ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಿದ್ದರೂ, ಬಿಸಿಸಿಐ ಆಯ್ಕೆ ಸಮಿತಿಯು ಅವರನ್ನು ಇಂಗ್ಲೆಂಡ್ ಸರಣಿಯಿಂದ ಕೈಬಿಟ್ಟಿದೆ. ಮೊದಲ ಪ್ರಾಶಸ್ತ್ಯದ ಹಿರಿಯ ಆಟಗಾರರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದಾಗ, ಅವರ ಬದಲಿಗೆ ಅವಕಾಶ ಪಡೆದಿದ್ದ ಕಿರಿಯ ಆಟಗಾರರು ಸ್ಥಾನ ಬಿಟ್ಟುಕೊಡಬೇಕೆಂಬ ಆಯ್ಕೆ ಸಮಿತಿಯ ಅಲಿಖಿತ ನಿಯಮದಂತೆ ಜೈಸ್ವಾಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರೊಂದಿಗೆ, ಯುವ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಹರ್ಷ್ ದುಬೆ ಕೂಡ ಇಂಗ್ಲೆಂಡ್ ಪ್ರವಾಸದ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಜುಲೈ 14ರಿಂದ ಏಕದಿನ ಸರಣಿ ಆರಂಭ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 14ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ. ತದನಂತರ ಜುಲೈ 16ರಂದು ಸೋಫಿಯಾ ಗಾರ್ಡನ್ಸ್‌ನಲ್ಲಿ ಎರಡನೇ ಪಂದ್ಯ ಮತ್ತು ಜುಲೈ 19ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಅಂತಿಮ ಪಂದ್ಯ ಜರುಗಲಿದೆ. ಈ ಪ್ರವಾಸದಲ್ಲಿ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂಡ ಕಣಕ್ಕಿಳಿಯಲಿದ್ದು, ಶುಭಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ವಿಕೆಟ್ ಕೀಪರ್‌ಗಳಾಗಿ ಕೆ.ಎಲ್. ರಾಹುಲ್ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆದಿದ್ದರೆ, ವಾಷಿಂಗ್ಟನ್ ಸುಂದರ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿಭಾಯಿಸಲಿದ್ದಾರೆ.

ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡ

ಶುಭಮನ್ ಗಿಲ್ ಅವರು ನಾಯಕರಾಗಿದ್ದರೆ, ಶ್ರೇಯಸ್ ಅಯ್ಯರ್ ಉಪನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಉಳಿದಂತೆ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಹಾಗೂ ಅರ್ಷದೀಪ್ ಸಿಂಗ್ 15 ಸದಸ್ಯರ ಈ ಬಲಿಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Read More
Next Story