
ಸಂಭ್ರಮಾಚರಣೆಯ ವೇಳೆ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ನೃತ್ಯ ಮಾಡಿದ್ದು ಮತ್ತು ಅದೇ ಸ್ಥಿತಿಯಲ್ಲಿ ವೇದಿಕೆಯ ಮೇಲೆ ಮಲಗಿರುವುದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಶ್ವಕಪ್ ವಿಜಯೋತ್ಸವದಲ್ಲಿ ತ್ರಿವರ್ಣ ಧ್ವಜಕ್ಕೆ ಅಗೌರವ; ಹಾರ್ದಿಕ್ ಪಾಂಡ್ಯ ವಿರುದ್ಧ ದೂರು
ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಬೆನ್ನಲ್ಲೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಾಗಿದೆ. ವಕೀಲ ವಾಜಿದ್ ಖಾನ್ ಬಿದ್ಕರ್ ಅವರು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಈ ದೂರು ನೀಡಿದ್ದು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ನಂತರದ ಸಂಭ್ರಮಾಚರಣೆಯಲ್ಲಿ ಪಾಂಡ್ಯ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯೋತ್ಸವದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂಭ್ರಮಾಚರಣೆಯ ವೇಳೆ ಕ್ರಿಕೆಟಿಗ ಧ್ವಜವನ್ನು ಸುತ್ತಿಕೊಂಡು ನೃತ್ಯ ಮಾಡುತ್ತಿರುವುದು ಮತ್ತು ನಂತರ ವೇದಿಕೆಯ ಮೇಲೆ ಧ್ವಜದೊಂದಿಗೆ ಮಲಗಿರುವುದು ಕಂಡುಬಂದಿದೆ ಎಂದು ದೂರುದಾರರು ದೂರಿದ್ದಾರೆ. ಪಾಂಡ್ಯ ಅವರ ಈ ವರ್ತನೆಯು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವಾಗಿದ್ದು, ಇದು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಖಾನ್ ವಾದಿಸಿದ್ದಾರೆ.
ಈ ಕುರಿತು ಮಾತನಾಡಿರುವ ದೂರುದಾರರು, ಟಿ20 ವಿಶ್ವಕಪ್ ಸಂಭ್ರಮಾಚರಣೆಯ ವೇಳೆ ಹಾರ್ದಿಕ್ ಪಾಂಡ್ಯ ಜಯದ ಅಮಲಿನಲ್ಲಿ ರಾಷ್ಟ್ರಧ್ವಜದ ಘನತೆಯನ್ನು ಮರೆತಿದ್ದಾರೆ. 1971ರ ಕಾಯ್ದೆಯ ಸೆಕ್ಷನ್ 2ರ ಪ್ರಕಾರ ನಾವು ರಾಷ್ಟ್ರಧ್ವಜಕ್ಕೆ ಗೌರವ ನೀಡಬೇಕು, ಆದರೆ ಪಾಂಡ್ಯ ಅವರು ಧ್ವಜವನ್ನು ಧರಿಸಿಕೊಂಡೇ ಅಸಭ್ಯವಾಗಿ ವರ್ತಿಸಿರುವುದು ದೇಶದ ಹೆಮ್ಮೆಗೆ ತಂದ ಚ್ಯುತಿಯಾಗಿದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಈ ಘಟನೆಯು ಅಹಮದಾಬಾದ್‌ನಲ್ಲಿ ನಡೆದಿರುವುದರಿಂದ ವ್ಯಾಪ್ತಿಯ ವಿಷಯವಾಗಿ ಪೊಲೀಸರು ಪ್ರಶ್ನೆ ಮಾಡಿದ್ದರು. ಆದರೆ ರಾಷ್ಟ್ರಧ್ವಜವು ಇಡೀ ದೇಶದ ಸಂಕೇತವಾಗಿರುವುದರಿಂದ ಎಲ್ಲಿ ಬೇಕಾದರೂ ದೂರು ನೀಡಬಹುದು ಎಂದು ಪಟ್ಟು ಹಿಡಿದ ನಂತರ ಪೊಲೀಸರು ದೂರನ್ನು ಸ್ವೀಕರಿಸಿ ಪ್ರತಿಯನ್ನು ನೀಡಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸಲ್ಲಿಕೆಯಾಗಿರುವುದನ್ನು ಖಚಿತಪಡಿಸಿದ್ದು, ಮುಂದಿನ ಕ್ರಮದ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡ ಐತಿಹಾಸಿಕ ಕ್ಷಣದಲ್ಲಿ ಈ ವಿವಾದ ಉಂಟಾಗಿದೆ. ಭಾರತವು ಸತತವಾಗಿ ಎರಡನೇ ಬಾರಿಗೆ ಮತ್ತು ಒಟ್ಟಾರೆಯಾಗಿ ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬರೋಬ್ಬರಿ 96 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಗೆಲುವಿನೊಂದಿಗೆ ಭಾರತ ಒಟ್ಟು ಮೂರು ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿದ್ದ ಭಾರತ, ಇತ್ತೀಚೆಗೆ 2024ರಲ್ಲಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಕಪ್ ಎತ್ತಿ ಹಿಡಿದಿತ್ತು. ಇದೀಗ 2026ರಲ್ಲಿ ಮೂರನೇ ಟ್ರೋಫಿ ಜಯಿಸುವ ಮೂಲಕ, ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿದೆ.

